ಮೀರತ್: ‘ವಾರಣಾಸಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸುತ್ತೇನೆ” ಎಂದು ಗುಡುಗಿದ್ದಾರೆ ಉತ್ತರ ಪ್ರದೇಶದ ಬೆಂಕಿ ಚೆಂಡು, ದಲಿತ ಯುವ ನೇತಾರ, ನ್ಯಾಯವಾದಿ, ಭೀರ್ಮ ಆರ್ಮಿಯ ಮುಖಂಡ 30ರ ಹರೆಯದ ಚಂದ್ರಶೇಖರ್ ಆಜಾದ್ (ರಾವಣ್).
ನೆನ್ನೆ ಯೋಗಿ ಆದಿತ್ಯನಾಥ ಸರ್ಕಾರ ಚಂದ್ರಶೇಖರ್ ರಾವಣ ಅವರನ್ನು ಉತ್ತರ ಪ್ರದೇಶದ ದಿಯೋಬಂದ್ ನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇರೆಗೆ ಬಂಧಿಸಿದ್ದು, ಆರೋಗ್ಯ ಹದಗೆಟ್ಟ ಕಾರಣ ಇಂದು ಮೀರತ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರವು ಭೀಮ್ ಆರ್ಮಿಯ ಚಂದ್ರಶೇಖರ್ ಆಝಾದ್ ಅವರನ್ನು ಒಂದು ವರ್ಷ ಕಾಲ ಜೈಲಿನಲ್ಲಿ ಕೊಳೆಸಿತ್ತು. ಚುನಾವಣೆ ಸಮೀಪಿಸುತ್ತಿದ್ದಂತೆ ಕಳೆದ ತಿಂಗಳಷ್ಟೇ ವಿಚಾರಣೆ ಮುಗಿಯುವ ಮೊದಲೇ ಬಿಡುಗಡೆ ಮಾಡಲಾಗಿತ್ತು. ಇದರ ಹಿಂದೆ ಬಿಜೆಪಿಯ ಲೆಕ್ಕಾಚಾರಗಳೂ ಇವೆ ಎಂಬ ಮಾತು ಕೇಳಿಬರುತ್ತಿದೆ.
ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಬಿಎಸ್ ಪಿ ಮತ್ತು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಗಳ ನಡುವೆ ಹೊಂದಾಣಿಕೆ ಆಗಿದ್ದು ಕಾಂಗ್ರೆಸ್ ನೊಂದಿಗೆ ಮೈತ್ರಿಯ ಸಾಧ್ಯತೆಯನ್ನು ಮಾಯಾವತಿಯವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಕಳೆದ ಒಂದೆರಡು ವರ್ಷಗಳಲ್ಲಿ ಉತ್ತರ ಪ್ರದೇಶದ ದಲಿತ ಯುವಕರ ನಡುವೆ ಗಣನೀಯ ಮಟ್ಟದಲ್ಲಿ ಬೆಂಬಲ ಗಳಿಸಿಕೊಂಡಿರುವ ಭೀಮ್ ಆರ್ಮಿ ಸಂಘಟನೆ ಸಮಾಜವಾದಿ ಪಕ್ಷ ಮೀಸಲಾತಿ ಕುರಿತು ತನ್ನ ಅಭಿಪ್ರಾಯ ಸ್ಪಷ್ಟಪಡಿಸುವ ವರೆಗೂ ತಾನು ಅದನ್ನು ಬೆಂಬಲಿಸಲಾಗುವುದಿಲ್ಲ ಎಂದು ಹೇಳಿಕೆ ನೀಡಿತ್ತು. ಈ ಹೇಳಿಕೆ ನೀಡಿದ ಎರಡು ದಿನಗಳಲ್ಲಿ ಚಂದ್ರಶೇಕರ್ ರಾವಣ್ ಅವರ ಬಂಧನವಾಗಿದೆ.
ಆಸ್ಪತ್ರೆಯಲ್ಲಿ ಆಝಾದ್ರನ್ನು ಭೇಟಿ ಮಾಡಿದ ಪ್ರಿಯಾಂಕಾ ಗಾಂಧಿ
ಇಂದು ಚಂದ್ರಶೇಖರ್ ಆಝಾದ್ ರಾವಣ್ ಅವರನ್ನು ದಾಖಲಿಸಲಾಗಿದ್ದ ಆಸ್ಪತ್ರೆಗೆ ನೂತನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭೇಟಿ ನೀಡಿದ್ದು ಮಹತ್ವ ಪಡೆದುಕೊಂಡಿದೆ. ಈ ಭೇಟಿಗೂ ಮೊದಲು ಭೀಮ್ ಆರ್ಮಿ ಕಾರ್ಯಕರ್ತರು ಪ್ರಿಯಾಂಕಾ ಗಾಂಧಿ ಅವರಿಗೆ ಕೂಡಲೇ ಪ್ರವೇಶಿಸಲು ಬಿಟ್ಟಿರಲಿಲ್ಲ. ತಾವು ಯುವ ನಾಯಕನ ಆರೋಗ್ಯವನ್ನು ವಿಚಾರಿಸಲು ಬಂದಿರುವುದಾಗಿ ಪ್ರಿಯಾಂಕಾ ಗಾಂಧಿ ಅವರಿಗೆ ಮನವರಿಕೆ ಮಾಡಿದ ನಂತರ ಸುಮಾರು 15 ನಿಮಿಷಗಳ ಕಾಲ ಹೊರಕ್ಕೆ ಕಾಯಿಸಿ ನಂತರವೇ ಒಳಕ್ಕೆ ಬಿಟ್ಟರೆನ್ನಲಾಗಿದೆ. ಚಂದ್ರಶೇಖರ್ ಆಝಾದ್ ರನ್ನು ಭೇಟಿ ಮಾಡಿಕೊಂಡು ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, “ನಾನು ಅವರ ಆರೋಗ್ಯ ವಿಚಾರಿಸಲು ಬಂದಿದ್ದೇನೆ. ಅವರೊಬ್ಬ ಯುವ ಮುಂದಾಳು. ಈ ಸರ್ಕಾರ ತೀರಾ ಮೊಂಡುತನ ತೋರುತ್ತಿದೆ. ಇಂತಹ ಯುವ ನಾಯಕನ ಧ್ವನಿಯನ್ನು ಹತ್ತಿಕ್ಕುವ ಕೆಲಸದಲ್ಲಿ ಸರ್ಕಾರ ತೊಡಗಿದೆ. ಅವರನ್ನು ಬಂಧಿಸಿದ್ದು ತಪ್ಪು. ಚಂದ್ರಶೇಖರ್ ಆಜಾದ್ ಅವರಲ್ಲಿರುವ ಸ್ಪೂರ್ತಿಯ ಕುರಿತು ಮೆಚ್ಚುಗೆ ಇದೆ. ಹಾಗಾಗಿಯೇ ನಾನು ಬಂದೆ” ಎಂದು ಹೇಳಿದರಲ್ಲರೆ, “ಇದು ಸೌಹಾರ್ದಯುತ ಭೇಟಿಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಜ್ಯೋತಿರಾಧಿತ್ಯ ಸಿಂದ್ಯ ಅವರೂ ಹಾಜರಿದ್ದರು.
ಮಾಯಾವತಿ-ಅಖಿಲೇಶ್ ಯಾದವ್ ಮೈತ್ರಿಕೂಟದಿಂದ ಚಂದ್ರಶೇಖರ್ ರಾವಣ್ ಅಂತರ ಕಾಯ್ದುಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಪ್ರಭಾವೀ ಭೀಮ್ ಆರ್ಮಿಯೊಂದಿಗೆ ಹೊಂದಾಣಿಕೆಯ ಸಾಧ್ಯತೆಯನ್ನು ನೋಡುತ್ತಿದೆ. ದೇಶದ ರಾಜಕೀಯವನ್ನೇ ಪ್ರಭಾವಿಸುವ ಉತ್ತರ ಪ್ರದೇಶದ 41 ಕ್ಷೇತ್ರಗಳ ಹೊಣೆ ಹೊತ್ತಿರುವ ಪ್ರಿಯಾಂಕಾ ಗಾಂಧಿ ಚಿಕ್ಕಪುಟ್ಟ ಪಕ್ಷ, ಸಂಘಟನೆಗಳನ್ನೂ ಬಿಡದೇ ಬೆಂಬಲ ಪಡೆಯುವ ಪ್ರಯತ್ನದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಭೀಮ್ ಆರ್ಮಿ ಮುಖಂಡನ ಭೇಟಿ ಹೊಸ ಅರ್ಥಗಳನ್ನು ನೀಡುವ ಸಾಧ್ಯತೆ ಇದೆ.
ತದನಂತರ ಎನ್ ಡಿ ಟಿವಿ ಸುದ್ದಿ ವಾಹಿನಿಯು ಆಜಾದ್ ಚಂದ್ರಶೇಕರ್ ರಾವಣ್ ಅವರನ್ನು ಆಸ್ಪತ್ರೆಯ ಒಳಗೆ ಮಾತಾಡಿಸಿದಾಗ, ಚಂದ್ರಶೇಖರ್ ಅವರೂ, “ಸಹೋದರನ ಆರೋಗ್ಯವನ್ನು ಸಹೋದರಿ ವಿಚಾರಿಕೊಂಡು ಹೋಗಿದ್ದಾರಷ್ಟೇ. ಇದರಲ್ಲಿ ಬೇರೇನೂ ಇಲ್ಲ” ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಸಹ ,ಮಾಡಿದ್ದಾರೆ.
बड़ी बहन प्रियंका गांधी वाड्रा आज मानवता के नाते मुझसे मिलने मेरठ के अस्पताल में आईं। मैं उनका धन्यवाद करता हूँ। @priyankagandhi
— Chandra Shekhar Aazad (@BhimArmyChief) March 13, 2019
“ಮೋದಿಯ ವಿರುದ್ಧ ಸ್ಪರ್ಧಿಸುವೆ”
ವಾರಣಾಸಿಯಲ್ಲಿ ಮಾಯಾವತಿ- ಅಖಿಲೇಶ್ ಮೈತ್ರಿ ನರೇಂದ್ರ ಮೋದಿಯ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸಲು ವಿಫಲವಾದರೆ ನಾನೇ ವಾರಣಾಸಿಗೆ ಹೋಗಿ ಪ್ರಧಾಮಿ ಮೋದಿಯ ವಿರುದ್ಧ ಸ್ಪರ್ಧಿಸುತ್ತೇನೆ, ಮೋದಿಯನ್ನು ಸೋಲಿಸುತ್ತೇನೆ” ಎಂದು ಆಝಾದ್ ಘೋಷಿಸಿದ್ದಾರೆ. ಕಾಂಗ್ರೆಸ್ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಆಝಾದ್ “ನಮಗೆ ಯಾವುದೇ ರಾಜಕೀಯ ಪಕ್ಷದ ಬೆಂಬಲ ಬೇಕಿಲ್ಲ. ಬಹುಜನರ ಪ್ರತಿನಿಧಿಯಾಗಿ ನಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಯಾರು ನಮ್ಮನ್ನು ಬೆಂಬಲಿಸುತ್ತಾರೆ ಎಂಬ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.
“ಆದರೆ ಮಾಯಾವತಿ ಮತ್ತು ಅಖಿಲೇಶ್ ನಮ್ಮನ್ನು ಬೆಂಬಲಿಸಬೇಕು” ಎಂದೂ ಹೇಳಿದ್ದಾರೆ.
2014ರಲ್ಲಿ ಸ್ಥಾಪನೆಯಾದ ಭೀಮ್ ಆರ್ಮಿ ಉತ್ತರ ಪ್ರದೇಶದ ದಲಿತ ಸಮುದಾಯಗಳ ಯುವಜನರ ನಡುವೆ ಸಾಕಷ್ಟು ಪ್ರಭಾವ ಹೊಂದಿದೆ. ಮಾಯಾವತಿಯ ಪ್ರಭಾವವನ್ನು ಎದುರಿಸಲು ಬಿಜೆಪಿ ಒಂದು ತಂತ್ರವಾಗಿ ಚುನಾವಣೆಗೆ ಮೊದಲು ಚಂದ್ರಶೇಖರ್ ಅಜಾದ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂಬ ವಾದವೂ ಕೇಳಿ ಬರುತ್ತಿದೆ.
ಚಂದ್ರಶೇಖರ್ ರಾವಣ್ ಅವರ ಭೀಮ್ ಆರ್ಮಿ ಯೋಗಿ-ಮೋದಿಯ ಬಿಜೆಪಿ ಸರ್ಕಾರದ ವಿರುದ್ಧ ನಡೆಸಿದ ಬಿರುಸಿನ ಹೋರಾಟಗಳಿಂದಾಗಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದು ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಬಿಎಸ್ ಪಿ ಬೆಂಬಲಿಗರು ಚಂದ್ರಶೇಖರ್ ರಾವಣ್ ಅವರನ್ನು ಪ್ರತಿಸ್ಪರ್ಧಿಯಾಗಿ ನೋಡುತ್ತಿದ್ದಾರೆ. ಚುನಾವಣೆಯ ಹೊಸ್ತಿಲಿನಲ್ಲಿ ಎರಡೂ ದಲಿತ ಬಣಗಳ: ನಡುವೆ ಸಂಭವಿಸುವ ಯಾವುದೇ ತಿಕ್ಕಾಟಗಳು ನಕಾರಾತ್ಮಕ ಪ್ರಭಾವ ಬೀರುವುದಂತೂ ನಿಶ್ಚಿತವಾಗಿದೆ.