ಚುನಾವಣೆಯ ಸಮಯದಲ್ಲಿ ಸಾಮಾಜಿಕ ಜಾಲತಾಣಗಳು ಹೇಗೆ ದರ್ಬಳಕೆಯಾಗುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆ. ಕೇಂದ್ರ ಕೌಶಲ್ಯ ಅಭಿವೃದ್ಧಿ ಮಂತ್ರಿ ಅನಂತಕುಮಾರ್ ಹೇಳಿರದ ಹೇಳಿಕೆಯೊಂದು ವರ್ಷ ಕಳೆದು ಮತ್ತೆ ವೈರಲ್ ಆಗಿದೆ.
2018ರ ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದರು ಎನ್ನಲಾದ ಹೇಳಿಕೆಯೊಂದ ಸಾಮಾಜಿಕ ಮಾಧ್ಯಮಗಳ ಮೂಲಕ ವೈರಲ್ ಆಗಿತ್ತು. ‘ಬಿಜೆಪಿ ಅಧಿಕಾರಕ್ಕೆ ಬಂದರೆ ಕೆಂಪೇಗೌಡರ ಪ್ರತಿಮೆ ಉರುಳಿಸಿ ಶಿವಾಜಿ ಪ್ರತಿಮೆ ಸ್ಥಾಪಿಸುತ್ತೇವೆ ಎಂದು ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ’ ಎಂಬುದೇ ಆ ಫೇಕ್ ಹೇಳಿಕೆಯಾಗಿತ್ತು.
ಈ ಸುಳ್ಳು ಹೇಳಿಕೆ ಎಷ್ಟರ ಮಟ್ಟಿಗೆ ಪ್ರಚಾರವಾಗಿತ್ತು ಎಂದರೆ ಇದನ್ನು ನಿಜವೇ ಎಂದುಕೊಂಡು ಅನೇಕರು ಸಚಿವ ಅನಂತಕುಮಾರ್ ಹೆಗಡೆಗೆ ಛೀಮಾರಿ ಹಾಕಿದ್ದರು.
ನಂತರದಲ್ಲಿ ಅನಂತ ಕುಮಾರ್ ಹೆಗಡೆಯ ಆಪ್ತ ಕಾರ್ಯದರ್ಶಿ ಸುರೇಶ್ ಎಂಬುದದರು ಈ ಹೇಳಿಕೆಯ ಬಗ್ಗೆ ಶಿರಸಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿತ್ತು.ಗಣಪತಿ ಕಾಮತ್ ಎನ್ನುವದರು ಈ ಕುರಿತು ಫೇಸ್ಬುಕ್ಕಿನಲ್ಲಿ ಬರೆದುಕೊಂಡಿದ್ದರು.
ಈಗ 2019ರ ಲೋಕಸಭಾ ಚುನಾವಣೆ ಸಮೀಪಿಸಿರುವ ಹಿನ್ನೆಲೆಯಲ್ಲಿ ಮತ್ತೆ ಅದೇ ಫೇಕ್ ಹೇಳಿಕೆ ಹರಿದಾಡತೊಡಗಿದೆ. ಮೇಲ್ನೋಟಕ್ಕೇ ಕಾಣುವಂತೆ ಇದು ಯಾರೋ ಬೇಕೆಂದೇ ದುರುದ್ದೇಶದಿಂದಲೇ ಕಳಿಸಿದ್ದು, ಅದನ್ನು ನಿಜ ಎಂದು ತಿಳಿದು ಬಹಳ ಜನರು ಹಿಂದೆ ಮುಂದೆ ನೋಡದೇ ಫಾರ್ವರ್ಡ್ ಮಾಡುತ್ತಿದ್ದಾರೆ.
ಟ್ರೂಥ್ ಇಂಡಿಯಾ ಈ ಹೇಳಿಕೆ ಮತ್ತು ವೈರಲ್ ಆದ ಇಮೇಜಿನ ಕುರಿತು ಪರಿಶೀಲಿಸಿದಾಗ ಇದು ಸತ್ಯಕ್ಕೆ ದೂರವಾದದ್ದು ಎಂದು ತಿಳಿದು ಬಂದಿದೆ.
ದೇಶದಲ್ಲಿ ಫೇಕ್ ನ್ಯೂಸ್ ಅಥವಾ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹುಟ್ಟಿಕೊಂಡಿದ್ದು ನರೇಂದ್ರ ಮೋದಿ ಬೆಂಬಲಿತ ಬಿಜೆಪಿ ಐಟಿ ಸೆಲ್ ನ ಮೂಲಕ. ಬಿಜೆಪಿಯ ಐಟಿ ಸೆಲ್ ಮತ್ತು ಪೋಸ್ಟ್ ಕಾರ್ಡ್ ನಂತಹ ಸುಳ್ಸುದ್ದಿ ಮಾಧ್ಯಮಗಳು ಪ್ರತಿನಿತ್ಯ ಸುಳ್ಸುದ್ದಿ ಹಂಚುವ ಕಾಯಕದಲ್ಲಿ ತೊಡಗಿದ್ದಾಗ ಈ ಕುರಿತು ಯಾವುದೇ ಕ್ರಮವನ್ನು ಸರ್ಕಾರವಾಗಲೀ, ಪೊಲೀಸರಾಗಲೀ ಕೈಗೊಳ್ಳಲಿಲ್ಲ. ಪರಿಣಾಮವಾಗಿ ಸುಳ್ಸುದ್ದಿ ಹರಡುವವರಿಗೆ ಈ ಕೆಲಸ ಸಲೀಸಾಗಿದೆ. ಬಿಜೆಪಿಯವರೇ ವ್ಯಾಪಕವಾಗಿ ನಡೆಸಿದ ಸುಳ್ಸುದ್ದಿ ಉದ್ಯಮ ಆಗಾಗ ಅವರಿಗೇ ತಿರುಗಿ ಹೊಡೆಯುತ್ತಿರುವುದನ್ನೂ ಗಮನಿಸಬಹುದು.
ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಐ ಟಿ ಸೆಲ್ ವ್ಯಕ್ತಿಗಳು ಜಮೀರ್ ಅಹ್ಮದ್ ಅವರ ಮಾತುಗಳನ್ನು ತಿರುಚಿ ಕೋಮು ದ್ವೇಷ ಹರಡುವ ಉದ್ದೇಶದ ಫೇಕ್ ವಿಡಿಯೋ ಒಂದನ್ನು ವೈರಲ್ ಮಾಡಿದ್ದರು. ಅದೇ ರೀತಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಚುನಾವಣೆಯಲ್ಲಿ ಹಣ ಹಂಚಿದ್ದಾರೆ ಎಂಬ ಸುಳ್ಸುದ್ದಿಯೂ ವೈರಲ್ ಆಗಿತ್ತು.
ದುರದೃಷ್ಟವಶಾತ್. ಚುನಾವಣಾ ಆಯೋಗವು ಚುನಾವಣೆಗಳ ಸಮಯದಲ್ಲಿ ಆವೇಗ ಪಡೆದುಕೊಳ್ಳುವ ಈ ಸುಳ್ಸುದ್ದಿ ಉದ್ಯಮದ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಯಂತ್ರಾಂಗ ರೂಪಿಸದಿರುವುದು ವಿಷಾದಕರ