‘ಭಾರತೀಯರು ಬಾಸ್ಟರ್ಡ್ಗಳು, ಅವರು ಯುದ್ಧ ಹೂಡಲು ಹೊಂಚುಹಾಕುತ್ತಿದ್ದಾರೆ!’
“ಅಲ್ಲಿ ಅಸಂಖ್ಯಾತ ಹೆಣ್ಣುಮಕ್ಕಳ ಮೇಲೆ ಪೈಶಾಚಿಕವಾಗಿ ಸಾಮೂಹಿಕ ಅತ್ಯಾಚಾರಗಳು ನಡೆಯುತ್ತಿರುವುದನ್ನು ನಾವು ಹೇಗೆ ನೋಡಿಕೊಂಡು ಸುಮ್ಮನೆ ಇರಲು ಸಾಧ್ಯವಿತ್ತು?”
ಹೀಗೆ ಹೇಳಿದವರು ಇಂದಿರಾ ಗಾಂಧಿ. 1972ರಲ್ಲಿ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ಇಂದಿರಾ ಹಾಗೆ ಹೇಳಿದ್ದರು. ಪೂರ್ವ ಪಾಕಿಸ್ತಾನದ ಬಿಕ್ಕಟ್ಟಿನಲ್ಲಿ ಭಾರತ ಮಧ್ಯ ಪ್ರವೇಶಿಸಿದ್ದಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿದ್ದವು. ಸುಮಾರು ಒಂದು ಕೋಟಿಯಷ್ಟು ಬಾಂಗ್ಲಾ ನಿರಾಶ್ರಿತರು ಭಾರತದ ಪೂರ್ವ ಮತ್ತು ಈಶಾನ್ಯ ಗಡಿಭಾಗದ ಪಶ್ಚಿಮ ಬಂಗಾಳ, ತ್ರಿಪುರ, ಬಿಹಾರ ಮತ್ತು ಅಸ್ಸಾಂನಲ್ಲಿ ನೆರೆದಿದ್ದರು. ಅವರನ್ನು ಸಾಕುವುದು ಅಷ್ಟು ಸುಲಭದ ಕಾರ್ಯವಾಗಿರಲಿಲ್ಲ. ಆ ನಿರಾಶ್ರಿತರನ್ನು ಮತ್ತೆ ತಮ್ಮ ತಾಯ್ನಾಡಿಗೆ ಕಳುಹಿಸಬೇಕೆಂದರೆ ಭಾರತ ಯುದ್ಧ ಘೋಷಿಸಲೇಬೇಕಿತ್ತು. ಬಾಂಗ್ಲಾದಲ್ಲಿ ನಡೆಯುತ್ತಿದ್ದ ಭೀಕರ ನರಮೇಧಗಳು ಇಡೀ ಜಗತ್ತಿನ ಗಮನ ಸೆಳೆದಿತ್ತು. ಅದನ್ನು ನಿಲ್ಲಿಸುವುದು ಇಡೀ ಜಗತ್ತಿನ ಹೊಣೆಯಾಗಿತ್ತು, ವಿಶೇಷವಾಗಿ ಅದು ಭಾರತದ ಜವಾಬ್ದಾರಿಯಾಗಿತ್ತು. ಇದೆಲ್ಲದರ ಜತೆ ಇಂದಿರಾ ಗಾಂಧಿ ಒಬ್ಬ ಹೆಣ್ಣುಮಗಳಾಗಿ ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಸಾವಿರಾರು ಹೆಣ್ಣುಮಕ್ಕಳ ಅತ್ಯಾಚಾರಗಳಿಂದ ವಿಚಲಿತರಾಗಿದ್ದರು. ‘ದಿ ನ್ಯೂ ಯಾರ್ಕ್ ಟೈಮ್ಸ್’ ಪತ್ರಿಕೆಗೆ ಸಂದರ್ಶನ ನೀಡಿದ್ದ ಮಹಿಳೆಯರ ಗುಂಪೊಂದು ಭೀಕರ ಅತ್ಯಾಚಾರಗಳ ಕುರಿತು ವಿವರಿಸುತ್ತ “ಪಾಕ್ ಪಡೆಗಳ ಕ್ರೂರ ಅತ್ಯಾಚಾರಗಳಿಂದ ನಾವು ಅರ್ಧ ಸತ್ತು ಹೋಗಿದ್ದೆವು. ಈಗ ನಮ್ಮ ಗಂಡಂದಿರಿಂದ ನಾವು ಪೂರ್ಣ ಸಾಯುತ್ತಿದ್ದೇವೆ.” ಎಂದು ನೋವು ತೋಡಿಕೊಂಡಿದ್ದರು. ಇದಕ್ಕಿಂತ ಭೀಕರತೆ ಇನ್ನೇನಿರಲು ಸಾಧ್ಯವಿತ್ತು?
ಆದರೆ ಸ್ವತಃ ಭಾರತ ಸರ್ಕಾರ ನೇರವಾಗಿ ಯುದ್ಧಕ್ಕೆ ಇಳಿಯುವ ಮುನ್ನ ಹತ್ತಾರು ದೃಷ್ಟಿಕೋನಗಳಿಂದ ಯೋಚಿಸಬೇಕಿತ್ತು. ಅದು ಅಮೆರಿಕ ಮತ್ತು ಸೋವಿಯತ್ ಯೂನಿಯನ್ಗಳ ನಡುವೆ ಶೀತಲ ಸಮರ ತಾರಕಕ್ಕೆ ಏರಿದ ಸಮಯ. ಎರಡು ವಿಶ್ವಯುದ್ಧಗಳ ನಂತರ ಮೂರನೇ ವಿಶ್ವಯುದ್ಧ ಯಾವಾಗ ಬೇಕಾದರೂ ನಡೆಯಬಹುದು ಎಂಬ ಆತಂಕದಲ್ಲೇ ಇಡೀ ವಿಶ್ವ ಚಡಪಡಿಸುತ್ತಿದ್ದ ಕಾಲ. ದೊಡ್ಡ ಯುದ್ಧವೊಂದು ಹೊತ್ತಿಕೊಳ್ಳಲು ಸಣ್ಣ ಕಿಡಿಯೊಂದೇ ಸಾಕಾಗಿತ್ತು. ಅಮೆರಿಕಾ ಭಾರತದ ಪರವಾಗಿರಲಿಲ್ಲ, ಅಷ್ಟು ಮಾತ್ರವಲ್ಲ ಅದು ನೇರವಾಗಿ ಪಾಕಿಸ್ತಾನವನ್ನು ಬೆಂಬಲಿಸುತ್ತಿತ್ತು. ಚೀನಾ ಭಾರತವನ್ನು 1962ರ ಯುದ್ಧದಲ್ಲಿ ಹಣಿದು ಅವಮಾನಿಸಿತ್ತು. ಸೋವಿಯತ್ ಯೂನಿಯನ್ ಒಂದೇ ಭಾರತದ ಬೆಂಬಲಕ್ಕಿತ್ತು. ಮಹಾಯುದ್ಧ ನಡೆದೇ ಹೋದರೆ ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಇನ್ನೊಂದಿಷ್ಟು ರಾಷ್ಟ್ರಗಳು ತುದಿಗಾಲಲ್ಲಿ ನಿಂತಿದ್ದವು. ಒಂದು ಕಡೆ ಭಾರತ, ಸೋವಿಯತ್ ಯೂನಿಯನ್ ಮತ್ತೊಂದು ಕಡೆ ಪಾಕಿಸ್ತಾನ, ಚೀನಾ, ಅಮೆರಿಕ. ಯುದ್ಧ ನಡೆದರೆ ಅದು ಯಾವಾಗ ಪರಮಾಣು ಯುದ್ಧದ ಸ್ವರೂಪ ಪಡೆದುಕೊಳ್ಳುತ್ತದೋ ಹೇಳಲು ಸಾಧ್ಯವಿಲ್ಲ. ಹೀಗಿರುವಾಗ ಭಾರತದ ಪ್ರಧಾನಿ ಇಂದಿರಾಗಾಂಧಿ ತೆಗೆದುಕೊಳ್ಳಬೇಕಾದ ತೀರ್ಮಾನಗಳು ಇಡೀ ಜಗತ್ತನ್ನೇ ಅಲುಗಾಡಿಸಬಹುದಾಗಿದ್ದವು.
ಬಾಂಗ್ಲಾ ವಿಮೋಚನೆಯ ಯುದ್ಧದ ಸಂದರ್ಭದಲ್ಲಿ ಅಮೆರಿಕ ವಹಿಸಿದ ಪಾತ್ರವನ್ನು ಗಮನಿಸಿದರೆ ಇಂದಿರಾಗಾಂಧಿ ಎಂಥ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದರು ಎಂಬುದು ಅರ್ಥವಾಗುತ್ತದೆ. ಅಮೆರಿಕ ಸ್ಟೇಟ್ಸ್ ಇಲಾಖೆಯ ಇತಿಹಾಸಕಾರರ ಕಚೇರಿ 1971ರ ದಕ್ಷಿಣ ಏಷಿಯಾ ಬಿಕ್ಕಟ್ಟಿಗೆ ಸಂಬಂಧಿಸಿದ ಸಂಪುಟಗಳನ್ನು ಪ್ರಕಟಿಸಿದೆ. ಅಲ್ಲಿ ದಾಖಲಾಗಿರುವ ವಿಷಯಗಳು ಅತ್ಯಂತ ರೋಚಕ ಮತ್ತು ಆಘಾತಕಾರಿ.
ಅಮೆರಿಕದಲ್ಲಿ ಆಗ ರಿಚರ್ಡ್ ನಿಕ್ಸನ್ ಅಧ್ಯಕ್ಷರಾಗಿದ್ದರು. ಸರ್ಕಾರದ ಕಾರ್ಯದರ್ಶಿಯಾಗಿದ್ದವರು (ಸೆಕ್ರೆಟರಿ ಆಫ್ ಸ್ಟೇಟ್ಸ್) ಹೆನ್ರಿ ಕಿಸ್ಸಿಂಜರ್. ಇವರಿಬ್ಬರ ಭಾರತ ದ್ವೇಷ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಭೀಕರ ನರಮೇಧವನ್ನು ಗಣನೆಗೆ ತೆಗೆದುಕೊಳ್ಳದಂತೆ ಮಾಡಿತ್ತು. ಪೂರ್ವ ಪಾಕಿಸ್ತಾನದಲ್ಲಿ ಏನಾಗುತ್ತಿದೆ ಎಂಬುದು ಅವರಿಗೆ ಗೊತ್ತಾಗುತ್ತಿರಲಿಲ್ಲವೆಂದೇನಲ್ಲ. ಆದರೆ ಭಾರತದ ಮೇಲಿನ ದ್ವೇಷದಿಂದ ಅವರು ಪಾಕಿಸ್ತಾನದ ಅಂತರ್ಯುದ್ಧದ ವಿಷಯದಲ್ಲಿ ಕುರುಡಾಗೇ ಉಳಿದಿದ್ದರು.
ಢಾಕಾದಲ್ಲಿದ್ದ ಅಮೆರಿಕ ದೂತವಾಸದ ಅಧಿಕಾರಿ ಆರ್ಚರ್ ಬ್ಲಡ್ ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ನರಮೇಧಗಳ ಕುರಿತು ಅಮೆರಿಕ ಆಡಳಿತಕ್ಕೆ ವರದಿ ಮಾಡಿದ್ದರು. ಆರ್ಚರ್ ಬ್ಲಡ್ ಅವರ ಈ ಐತಿಹಾಸಿಕ ವರದಿಯನ್ನು ‘ಬ್ಲಡ್ ಟೆಲಿಗ್ರಾಮ್’ ಎಂದು ಕರೆಯಲಾಗುತ್ತದೆ. ಈ ವರದಿಗೆ ಬ್ಲಡ್ ಅವರದಲ್ಲದೆ ಢಾಕಾದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಮೆರಿಕದ ಅಧಿಕಾರಿಗಳು ಸಹಿ ಮಾಡಿದ್ದರು.

“ನಮ್ಮ ಸರ್ಕಾರ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಈ ಕೃತ್ಯಗಳನ್ನು ತಡೆಯಲು ವಿಫಲವಾಗಿದೆ. ಈ ದೌರ್ಜನ್ಯಗಳನ್ನು ತಡೆಯಲು ವಿಫಲವಾಗಿದೆ. ಅಮಾಯಕ ನಾಗರಿಕರನ್ನು ರಕ್ಷಿಸುವ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಪಶ್ಚಿಮ ಪಾಕಿಸ್ತಾನದ ಸರ್ಕಾರ ಜನರ ಬದುಕನ್ನು ನರಕ ಮಾಡಿದರೂ ನಮ್ಮ ಸರ್ಕಾರ ಏನನ್ನೂ ಮಾಡುತ್ತಿಲ್ಲ. ನಾವು ವೃತ್ತಿಪರ ಅಧಿಕಾರಿಗಳಾಗಿ ನಮ್ಮ (ಅಮೆರಿಕ) ಸರ್ಕಾರದ ಸದ್ಯದ ನೀತಿಯ ಕುರಿತು ಭಿನ್ನಮತ ವ್ಯಕ್ತಪಡಿಸುತ್ತಿದ್ದೇವೆ.”
ಅಮೆರಿಕ ರಾಯಭಾರಿ ಮತ್ತು ಅಧಿಕಾರಿಗಳು ಇಷ್ಟು ಖಾರವಾಗಿ ಬರೆದರೂ ಅಮೆರಿಕ ಅಧ್ಯಕ್ಷ ನಿಕ್ಸನ್ ತಲೆಯಲ್ಲಿ ಬೇರೆ ಏನೋ ಓಡುತ್ತಿತ್ತು. ಪಾಕಿಸ್ತಾನದ ಕುರಿತಾದ ಅವರ ಒಲವು, ವಾಸ್ತವಗಳನ್ನು ಒಪ್ಪಿಕೊಳ್ಳಲು ಬಿಡುತ್ತಿರಲಿಲ್ಲ.
ಭಾರತದ ಕುರಿತು ಅಮೆರಿಕದ ನಿಲುವು ಏನೇ ಇದ್ದರೂ ಇಂದಿರಾಗಾಂಧಿ ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ನಿಕ್ಸನ್ ಅವರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದರು. ಪೂರ್ವ ಪಾಕಿಸ್ತಾನದಿಂದ ಲಕ್ಷಗಟ್ಟಲೆ ನಿರಾಶ್ರಿತರು ಭಾರತ ಗಡಿಯೊಳಗೆ ಪ್ರವೇಶಿಸುತ್ತಿದ್ದು, ಭಾರತಕ್ಕೆ ದೊಡ್ಡ ಹೊರೆಯಾಗುತ್ತಿದೆ ಎಂದು ಹೇಳಿದ್ದರು. ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದ ಎಲ್.ಕೆ.ಝಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪರಿಸ್ಥಿತಿ ಹೀಗೇ ಮುಂದುವರೆದರೆ ನಾವು ನಿರಾಶ್ರಿತರಲ್ಲೇ ಹಲವರನ್ನು ಗೆರಿಲ್ಲಾಗಳನ್ನಾಗಿ ತಯಾರುಮಾಡಿ ಕಳುಹಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದರು. ಅದಕ್ಕೆ ನಿಕ್ಸನ್ ಪ್ರತಿಕ್ರಿಯೆಯೂ ಖಾರವಾಗಿಯೇ ಇತ್ತು. ‘ಹಾಗೇನಾದರೂ ನೀವು ಮಾಡಿದರೆ ಅಮೆರಿಕ ಭಾರತಕ್ಕೆ ನೀಡುತ್ತಿರುವ ಎಲ್ಲ ರೀತಿಯ ಆರ್ಥಿಕ ನೆರವುಗಳನ್ನು ನಿಲ್ಲಿಸಬೇಕಾಗುತ್ತದೆ’ ಎಂದು ನಿಕ್ಸನ್ ಹೇಳಿದರು.
ಭಾರತೀಯರು ಯುದ್ಧವೊಂದಕ್ಕೆ ತಯಾರಾಗುತ್ತಿದ್ದಾರೆ ಎಂದು ನಿಕ್ಸನ್ ಹೇಳಿದರೆ, ಕಿಸ್ಸಿಂಜರ್ ಭಾರತೀಯರು ಜಗತ್ತಿನ ಅತ್ಯಂತ ಆಕ್ರಮಣಕಾರಿಗಳು ಎಂದು ಅಭಿಪ್ರಾಯಪಡುತ್ತಾರೆ.
ಅಮೆರಿಕಕ್ಕೆ ಪಾಕಿಸ್ತಾನ ಅತ್ಯಂತ ಪ್ರಿಯಮಿತ್ರ ರಾಷ್ಟ್ರವಾಗಿತ್ತು. ಅದಕ್ಕೆ ಎರಡು ಪ್ರಮುಖ ಕಾರಣಗಳು ಇದ್ದವು. ಪಾಕಿಸ್ತಾನ ಅಮೆರಿಕದೊಂದಿಗೆ ಸೆಂಟೋ ಮತ್ತು ಸಿಯಾಟೋ (CENTO and SEATO) ಒಪ್ಪಂದಗಳಿಗೆ ಸಹಿ ಹಾಕಿತ್ತು. ಎರಡನೇ ಬಲವಾದ ಕಾರಣ ಸೋವಿಯತ್ ಯೂನಿಯನ್! ಭಾರತ ಅಲಿಪ್ತ ರಾಷ್ಟ್ರವಾಗಿದ್ದರೂ ಸಹ ಅದು ಸೋವಿಯತ್ ಯೂನಿಯನ್ ಪರವಾಗೇ ಇರುತ್ತದೆ ಎಂಬುದು ಅಮೆರಿಕದ ನಂಬುಗೆಯಾಗಿತ್ತು. ಒಂದುವೇಳೆ ಭಾರತ ಈ ಬಿಕ್ಕಟ್ಟನ್ನು ನಿಭಾಯಿಸಿ ಗೆದ್ದುಬಿಟ್ಟರೆ ದಕ್ಷಿಣ ಏಷಿಯಾದಲ್ಲಿ ಸೋವಿಯತ್ ಯೂನಿಯನ್ ಪ್ರಭಾವ ಬೆಳೆಯುತ್ತದೆ ಎಂಬುದು ಅಮೆರಿಕದ ಆತಂಕವಾಗಿತ್ತು.
ಈ ಸಂದರ್ಭದಲ್ಲಿ ಅಮೆರಿಕ ಹೇಗಾದರೂ ಮಾಡಿ ಚೀನಾವನ್ನು ಈ ಬಿಕ್ಕಟ್ಟಿನಲ್ಲಿ ಎಳೆಯುವ ಪ್ರಯತ್ನವೊಂದನ್ನು ಆರಂಭಿಸಿತು. ಅಮೆರಿಕ ಚೀನಾದಿಂದ ಸಹಾಯ ಬಯಸಿತು. ಅಮೆರಿಕ ಮತ್ತು ಚೀನಾ ನಡುವೆ ಪಾಕಿಸ್ತಾನ ಸಂದೇಶವಾಹಕವಾಯಿತು. ಈ ಗುಪ್ತ ಮಾತುಕತೆಗಳಿಂದ ಅಮೆರಿಕ–ಚೀನಾ ಸಂಬಂಧಗಳೂ ಸುಧಾರಿಸಬಹುದು ಎಂಬ ಭಾವಿಸಲಾಗಿತ್ತು.
ಕಿಸ್ಸಿಂಜರ್ 1971ರ ಜುಲೈ ಎರಡನೇ ವಾರದಲ್ಲಿ ಚೀನಾ ರಾಜಧಾನಿ ಬೀಜಿಂಗ್ಗೆ ಬಂದಿಳಿದರು. ಆಗ ಚೀನಾದ ಪ್ರಧಾನಿಯಾಗಿದ್ದ ಚೌ ಎನ್ ಲಾಯ್ ಬಿಕ್ಕಟ್ಟಿನ ಕುರಿತ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದರು. “ನಮ್ಮ ಅಭಿಪ್ರಾಯದಲ್ಲಿ, ಭಾರತ ಒಂದು ವೇಳೆ ವಿಶ್ವಸಮುದಾಯದ ಅಭಿಪ್ರಾಯಗಳನ್ನು ಲೆಕ್ಕಿಸದೆ ಹೀಗೇ ಮುಂದುವರೆದರೆ, ಅದನ್ನು ತಡೆಯಲು ಸಾಧ್ಯವಿಲ್ಲ. ಅದು ನಿರ್ದಯವಾಗಿ ಮುಂದೆ ಸಾಗಲಿದೆ. ಹೀಗಿದ್ದಾಗ್ಯೂ ನಾವು ಪಾಕಿಸ್ತಾನದ ನಿಲುವನ್ನು ಬೆಂಬಲಿಸುತ್ತೇವೆ. ಇದು ಇಡೀ ಜಗತ್ತಿಗೆ ಗೊತ್ತಿದೆ. ಒಂದು ವೇಳೆ ಯುದ್ಧದಂಥ ಸನ್ನಿವೇಶವನ್ನು ನಿರ್ಮಿಸಿದರೆ ನಾವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ”

ಚೀನಾದ ನಿಲುವನ್ನು ಕೇಳಿದ ನಂತರ ಕಿಸ್ಸಿಂಜರ್ ಸಂತುಷ್ಟರಾಗಿದ್ದರು, ಅಲ್ಲದೆ ಪಾಕಿಸ್ತಾನವನ್ನು ಅಮೆರಿಕ ಸಹ ಬೆಂಬಲಿಸುತ್ತದೆ ಎಂದು ಚೀನಾಗೆ ಮಾತು ನೀಡಿದರು.
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅಮೆರಿಕ ಮತ್ತು ಚೀನಾ ಒಂದಾಗಿ ಪಾಕಿಸ್ತಾನವನ್ನು ಬೆಂಬಲಿಸಲು ತೀರ್ಮಾನಿಸಿದ್ದವು. ಇದು ಭಾರತದ ಪಾಲಿಗೆ ಅತ್ಯಂತ ಆಘಾತಕಾರಿ ವಿಷಯವಾಗಿತ್ತು. ದಕ್ಷಿಣ ಏಷಿಯಾದಲ್ಲಿ ಭಾರತದ ಪ್ರಾಬಲ್ಯವನ್ನು ತಡೆಯುವ ಉದ್ದೇಶ ಚೀನಾ ಮತ್ತು ಅಮೆರಿಕ ಎರಡಕ್ಕೂ ಇತ್ತು. ಸಂದರ್ಭ ಹೇಳಿಮಾಡಿಸಿದಂತಿತ್ತು.
ಆದರೆ ಭಾರತ ಪ್ರಧಾನಿ ಇಂದಿರಾಗಾಂಧಿ ಸುಮ್ಮನೆ ಕೂರುವ ಜಾಯಮಾನದವರಾಗಿರಲಿಲ್ಲ. ಪೂರ್ವ ಪಾಕಿಸ್ತಾನದ ಬಿಕ್ಕಟ್ಟಿನ ವಿಷಯವನ್ನು ಅವರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪದೇಪದೇ ಪ್ರಸ್ತಾಪಿಸುವ ಮೂಲಕ ಭಾರತ ಮಧ್ಯ ಪ್ರವೇಶಿಸಲೇಬೇಕಾದ ಅನಿವಾರ್ಯತೆಯನ್ನು ಸ್ಪಷ್ಟಪಡಿಸುತ್ತ ಬಂದರು. ಪಶ್ಚಿಮದ ದೇಶಗಳಿಗೆ ಭೇಟಿ ನೀಡಿದ ಇಂದಿರಾಗಾಂಧಿ, ಬಂಗಾಳಿಗಳ ದಯನೀಯ ಸ್ಥಿತಿಯನ್ನು ವಿವರಿಸಿ ಬೆಂಬಲ ಪಡೆಯುವ ಯತ್ನ ಮಾಡಿದರು. ನವೆಂಬರ್ ೪ ಮತ್ತು ೫ರಂದು ಇಂದಿರಾಗಾಂಧಿ ಅಮೆರಿಕ ಪ್ರವಾಸವನ್ನು ಕೈಗೊಂಡರು. ಅಮೆರಿಕ ಅಧ್ಯಕ್ಷ ನಿಕ್ಸನ್ ಅವರನ್ನು ಭೇಟಿ ಮಾಡಿ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಿದರು. ಆದರೆ ನಿಕ್ಸನ್ ತನ್ನ ನಿಲುವಿಗೆ ಅಂಟಿಕೊಂಡಿದ್ದರು. ಹೀಗಾಗಿ ಇಂದಿರಾಗಾಂಧಿಗೆ ಉಪಖಂಡದಲ್ಲಿ ಮತ್ತೊಂದು ಯುದ್ಧ ನಡೆಯುವುದಕ್ಕೆ ತಮ್ಮ ಒಪ್ಪಿಗೆ ಇಲ್ಲ ಎಂದು ನೇರವಾಗಿಯೇ ಹೇಳಿಬಿಟ್ಟರು.
ಕಿಸ್ಸಿಂಗರ್ ಈ ಸಂದರ್ಭದಲ್ಲಿ ನಿಕ್ಸನ್ಗೆ ಹೇಳಿದ ಮಾತು ‘ಭಾರತೀಯರು ಬಾಸ್ಟರ್ಡ್ಗಳು, ಅವರು ಯುದ್ಧ ಹೂಡಲು ಹೊಂಚುಹಾಕುತ್ತಿದ್ದಾರೆ’ ಕಿಸ್ಸಿಂಜರ್ ಆಡಿದ ಈ ಮಾತು ನಂತರದ ದಿನಗಳಲ್ಲಿ ದೊಡ್ಡ ವಿವಾದದ ಕಿಡಿಗಳನ್ನು ಹೊತ್ತಿಸಿತು
(ಮುಂದುವರೆಯುತ್ತದೆ)
ದಿನೇಶ್ ಕುಮಾರ್ ದಿನೂ
ಬಾಂಗ್ಲಾದೇಶ ವಿಮೋಚನೆಯ ಭಾರತ ಪಾಕಿಸ್ತಾನ ಯುದ್ಧ ಚರಿತ್ರೆ- ಭಾಗ 6 ಓದಲು ಕ್ಲಿಕ್ ಮಾಡಿ
ಬಾಂಗ್ಲಾದೇಶ ವಿಮೋಚನೆಯ ಭಾರತ-ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 5 ಓದಲು ಕ್ಲಿಕ್ ಮಾಡಿ
Disclaimer: The views expressed in the articles are those of the authors and do not necessarily represent or reflect the views of TruthIndia