ಬೆಂಗಳೂರು: ಅಭಿನವ ಅಕ್ಕಮಹಾದೇವಿ ಎಂದೇ ಜನಜನಿತವಾಗಿರುವ, ಲಿಂಗಾಯತ ಧರ್ಮದ ಪ್ರಥಮ ಮಹಿಳಾ ಜಗದ್ಗುರು, ಕೂಡಲಸಂಗಮದ ಬಸವ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರು ಲಿಂಗೈಕ್ಯರಾಗಿದ್ದಾರೆ. ಈ ಕುರಿತು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ದೃಢೀಕರಿಸಿ ಹೇಳಿಕೆ ನೀಡಿದ್ದಾರೆ. ಶ್ವಾಸಕೋಶದ ಸೋಂಕು ಮತ್ತು ಬಹು ಅಂಗಾಗಗಳ ವೈಫಲ್ಯದಿಂದ ಬಳಲುತ್ತಿದ್ದ ಮಾತೆ ಮಹಾದೇವಿ ಅವರ ಆರೋಗ್ಯ ಕಳೆದ ಒಂದು ವಾರ ತೀವ್ರವಾಗಿ ಶಿಥಿಲಗೊಂಡಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ತೀವ್ರ ನಿಘಾ ಘಟಕದಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ 4.45 ಕ್ಕೆ ಕೊನೆಯುಸಿರೆಳೆದಿದ್ದಾರೆ.
ಮಾತೆಯವರ ಪಾರ್ಥಿವ ಶರೀರವನ್ನು ಅವರ ಅನುಯಾಯಿಗಳ ಹಾಗೂ ಸಾರ್ವಜನರಿಕರ ವೀಕ್ಷಣೆಗಾಗಿ ಕೆಲ ಹೊತ್ತಿನಲ್ಲಿ ರಾಜಾಜಿನಗರದ ಬಸವ ಮಂಟಪದಲ್ಲಿ ಇರಿಸಲಾಗುತ್ತದೆ. ಬೆಳಿಗ್ಗೆ ಕೂಡಲ ಸಂಗಮಕ್ಕೆ ಕೊಂಡೊಯ್ಯಲಾಗುತ್ತದೆ. ನಾಳೆ ಮದ್ಯಾಹ್ನ 3 ಗಂಟೆಗೆ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುವುದು ಎಂದು ಬಸವ ಪೀಠದ ಮೂಲಗಳು ತಿಳಿಸಿವೆ.
ಅಂತಿಮ ದರ್ಶನಕ್ಕಾಗಿ ಆಸ್ಪತ್ರೆಯ ಬಳಿ ಜನಜಂಗುಳಿ ಹೆಚ್ಚುತ್ತಿದ್ದು ವಿವಿಐಪಿಗಳು ಭೇಟಿ ನೀಡುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ರಾಜಾಜಿನಗರದ ಬಸವ ಮಂಟಪದ ಬಳಿಯೂ ಸಾವಿರಾರು ಸಂಖ್ಯೆಯಲ್ಲಿ ಅನುಯಾಯಿಗಳು ಸೇರುತ್ತಿದ್ದಾರೆ.

1946ರ ಮಾರ್ಚ್ 13ರಂದು ಜನಿಸಿದ್ದ ಮಾತೆ ಮಹಾದೇವಿಯವರು ಗುರು ಲಿಂಗಾನಂದರವರಿಂದ ಪ್ರಭಾವಿತರಾಗಿ, ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ, “ಪ್ರಥಮ ಮಹಿಳಾ ಜಗದ್ಗುರು” ಎಂದು ತಮ್ಮ ಭಕ್ತರಿಂದ ಗುರುತಿಸಲ್ಪಟ್ಟು ಉತ್ತಮ ವಾಗ್ಮಿ ಮತ್ತು ಸಾಹಿತಿಗಳಾಗಿದ್ದವರು. . ವರ್ಷದ ಹಿಂದೆ ರಾಜ್ಯದಲ್ಲಿ ತೀವ್ರಗೊಂಡಿದ್ದ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾತೆ ಮಹಾದೇವಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗುವವರೆಗೂ ವಿರಮಿಸುವುದಿಲ್ಲ ಎಂದು ಶಪಥ ತೊಟ್ಟಿದ್ದರು.
ಮಾತೆ ಮಹಾದೇವಿ ಅವರ ನಿಧನ ಲಿಂಗಾಯತ ಚಳುವಳಿಗೆ ತುಂಬಲಾರದ ನಷ್ಟವಾಗಿದೆ.
- ಟ್ರೂಥ್ ಇಂಡಿಯಾ ಕನ್ನಡ