‘ನ ಖಾವೂಂಗ ನ ಖಾನೇ ದೂಂಗ’ (ನಾ ತಿನ್ನೋದೂ ಇಲ್ಲ, ತಿನ್ನೋಕೂ ಬಿಡೋದಿಲ್ಲ) ಎಂದು ಘೋಷಿಸಿದ್ದ ನರೇಂದ್ರ ಮೋದಿಯವರು ಮಾಡಿದ್ದೇನು? ಭಾರತದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸುಮಾರು 14,500 ಕೋಟಿ ರೂ.ಗಳಷ್ಟು ಪಂಗನಾಮ ಹಾಕಿದ ಗುಜರಾತಿನ ವಜ್ರ ವ್ಯಾಪಾರಿ ನೀರವ್ ಮೋದಿ ಮತ್ತವನ ಸಂಬಂಧಿಕ ಮೇಹುಲ್ ಚೋಕ್ಸಿ ದೇಶ ಬಿಟ್ಟು ಪರಾರಿಯಾಗಿ ಒಂದು ವರ್ಷವೇ ಕಳೆದಿದೆ. ಈ ವಂಚನೆಯಲ್ಲಿ ಆತನ ಇಡೀ ಕುಟುಂಬವೇ ಭಾಗಿಯಾಗಿದೆ. 48 ವರ್ಷ ಪ್ರಾಯದ ನೀರವ್ ಮೋದಿ ಲಂಡನ್ ನ ಪ್ರತಿಷ್ಠಿತ ಪ್ರದೇಶದಲ್ಲಿ ಬಂಗಲೆಯಂತ 3 ಬೆಡ್ ರೂಮಿನ ಫ್ಲಾಟ್ನಲ್ಲಿ ನಿರಾತಂಕವಾಗಿ ವಾಸಿಸುತ್ತಿದ್ದು ಯಾವುದೇ ರೀತಿಯಲ್ಲೂ ಬಾಧಿತನಾದಂತೆ ಕಾಣುವುದಿಲ್ಲ. ಅಲ್ಲದೆ ಮತ್ತೊಂದು ಹೊಸ ವ್ಯವಹಾರದಲ್ಲಿ ತೊಡಗಿದ್ದಾನೆಂದೂ ಹೇಳಲಾಗಿದೆ. ನೀರವ್ ಮೋದಿ ದೇಶವನ್ನು ತೊರೆದು ಒಂದು ವರ್ಷವಾದರೂ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಮಾತ್ರ ನೀರವ ಮೌನ ಆವರಿಸಿದೆ.
ಕಳೆದ ವಾರ ನೀರವ್ ಮೋದಿ ಲಂಡನ್ ರಸ್ತೆಗಳಲ್ಲಿ ಕಾಣಿಸಿಕೊಂಡಾಗ ‘ದ ಟೆಲಿಗ್ರಾಫ್’ ಪತ್ರಿಕೆಯ ವರದಿಗಾರರು ಆತನನ್ನು ಹಿಂಬಾಲಿಸಿ ಕೆಲವು ಪ್ರಶ್ನೆಗಳ ಮಳೆಸುರಿಸಿದ ವಿಡೀಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
“ನಿಮ್ಮನ್ನು ಭಾರತಕ್ಕೆ ಹಸ್ತಾಂತರ ಮಾಡುವುದರ ಬಗ್ಗೆ ಏನು ಹೇಳುತ್ತೀರಿ?”
ಉತ್ತರ: “ಸಾರಿ, ನೋ ಕಮೆಂಟ್ಸ್” (ಕ್ಷಮಿಸಿ, ಏನೂ ಹೇಳಲಾರೆ).
“ಇನ್ನೆಷ್ಟು ದಿನ ಇಲ್ಲಿ (ಇಂಗ್ಲೆಂಡ್) ಇರುತ್ತೀರಿ?”
ಉತ್ತರ: “ಸಾರಿ, ನೋ ಕಮೆಂಟ್ಸ್”.
“ನಿಮಗೆ ಅವರು… ಗೊತ್ತಾ? ನಿಮ್ಮ ವ್ಯವಹಾರದ ಪಾಲುದಾರರ ಬಗ್ಗೆ ಏನು ಹೇಳುವಿರಿ?”
ಉತ್ತರ: “ಸಾರಿ, ನೋ ಕಮೆಂಟ್ಸ್”.
ಹೀಗೆ ನಿರ್ದಿಷ್ಟ ಉತ್ತರ ನೀಡದೆ ಆತ ಓಡುತ್ತಿದ್ದ. ಆ ಸಂದರ್ಭದಲ್ಲಿ ನೀರವ್ ಮೋದಿಯು ಉಷ್ಟ್ರಪಕ್ಷಿಯ ಚರ್ಮದಿಂದ ತಯಾರಿಸಿರುವ ಸುಮಾರು 10 ಲಕ್ಷ ರೂಪಾಯಿಗಳಷ್ಟು ಬೆಲೆಬಾಳುವ ಜಾಕೆಟ್ ಧರಿಸಿದ್ದನೆಂದು ಅದನ್ನು ಹತ್ತಿರದಿಂದ ನೋಡಿದ ಪತ್ರಕರ್ತ ಹೇಳಿದ್ದ. ಇದಲ್ಲದೆ ಮೇಹುಲ್ ಚೋಕ್ಸಿಯ ಜೊತೆ ಸೇರಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 14,500 ಕೋಟಿ ರೂ.ಗಳಷ್ಟು ವಂಚಿಸಿ ಲಂಡನ್ ನಲ್ಲಿ ವಾಸವಾಗಿರುವ ಆತನ ಮನೆಯ ತಿಂಗಳ ಬಾಡಿಗೆಯೇ 17 ಸಾವಿರ ಪೌಂಡ್ (16 ಲಕ್ಷ ರೂಪಾಯಿ) ಗಳೆಂದು ಅಂದಾಜಿಸಲಾಗಿದೆ.

ಹಸ್ತಾತಂತರಕ್ಕೊಲ್ಲದ ಭಾರತ – ಬ್ರಿಟೀಷ್ ಅಧಿಕಾರಿಗಳ ಆರೋಪ
ಭ್ರಷ್ಟಾಚಾರ ಮತ್ತು ಮನಿ ಲಾಂಡರಿಂಗ್ (ಅಕ್ರಮವಾಗಿ ಗಳಿಸಿದ ಹಣವನ್ನು ವಿದೇಶಗಳ ಬ್ಯಾಂಕುಗಳಲ್ಲಿ ಅಥವಾ ಕಾನೂನುಬಾಹಿರ ವ್ಯವಹಾರಗಳಲ್ಲಿ ಹೂಡುವುದು) ಪ್ರಕರಣಗಳಲ್ಲಿ ಗಂಭೀರ ಆಪಾದನೆಗಳನ್ನು ಎದುರಿಸುತ್ತಿರುವ ನೀರವ್ ಮೋದಿ ಮತ್ತು ಕುಟುಂಬ, ಭಾರತದಿಂದ ಪರಾರಿಯಾದರೂ ಆತನನ್ನು ದೇಶಕ್ಕೆ ವಾಪಸ್ ತರಲು ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪಗಳು ಸದ್ದು ಮಾಡುತ್ತಿವೆ. ಬ್ರಿಟೀಷ್ ಅಧಿಕಾರಿಗಳು ನೀರವ್ ಮೋದಿಯ ಹಸ್ತಾಂತರದ ಬಗ್ಗೆ ಮಾಹಿತಿ ಕಲೆ ಹಾಕಲು ಯತ್ನಿಸಿದ್ದಾದರೂ ಭಾರತದಿಂದ ಯಾವುದೇ ಸ್ಪಂದನೆ ದೊರೆಯಲಿಲ್ಲ ಎಂಬುದಾಗಿ ಎನ್ಡಿಟಿವಿ ವರದಿ ಸೂಚಿಸುತ್ತದೆ. ಮಾರ್ಚ್ 2018ರಲ್ಲೇ ನೀರವ್ ಮೋದಿ ತಮ್ಮ ದೇಶದಲ್ಲಿರುವುದಾಗಿ ಬ್ರಿಟನ್ನಿನ ಸೀರಿಯಸ್ ಫ್ರಾಡ್ಸ್ ಆಫೀಸ್ (SFO- ಗಂಭೀರ ಆರ್ಥಿಕ ಅಪರಾಧಗಳ ಬಗ್ಗೆ ನಿಗಾ ವಹಿಸುವ ಕಚೇರಿ) ಭಾರತ ಸರ್ಕಾರಕ್ಕೆ ಸ್ಪಷ್ಟಪಡಿಸಿತ್ತು. ಅಲ್ಲದೆ 2018ರ ಬೇಸಿಗೆಯಲ್ಲಿ ಹೆಚ್ಚುವರಿ ದಾಖಲಾತಿಗಳನ್ನು ನೀಡಲು ಕೋರಿ ಮೂರು ಬಾರಿ ಭಾರತದ ಅಧಿಕಾರಿಗಳಿಗೆ ಬ್ರಿಟಿಷ್ SFO ವಕೀಲರು ಪತ್ರಗಳನ್ನು ಬರೆದಿದ್ದಾಗಿ ಕಚೇರಿಯ ಮೂಲಗಳು ತಿಳಿಸಿವೆ. ಈ ವಕೀಲರು ತಮ್ಮ ತಂಡದ ಜೊತೆಗೆ ಸಾಕ್ಷ್ಯ ಸಂಗ್ರಹಿಸಲು ಭಾರತಕ್ಕೆ ಭೇಟಿ ನೀಡಲಿಚ್ಛಿಸಿದರೂ ಭಾರತ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲವೆಂದೂ, ಭಾರತ ಸರ್ಕಾರ ಆಸಕ್ತಿ ತೋರದ ಕಾರಣ ಡಿಸೆಂಬರ್ ನಲ್ಲಿ ಈ ಪ್ರಕರಣದತ್ತ ಗಮನ ಹರಿಸುವುದನ್ನು ನಿಲ್ಲಿಸಬೇಕಾಯಿತು ಎಂಬುದು ಬ್ರಿಟಿಷ್ SFO ಕಚೇರಿಯ ಅಧಿಕಾರಿಗಳ ಹೇಳಿಕೆ.
ಬ್ರಿಟೀಷ್ ಅಧಿಕಾರಿಗಳ ಆರೋಪ ತಳ್ಳಿಹಾಕಿದ ED
ಭಾರತದ ತನಿಖಾ ಸಂಸ್ಥೆಗಳಲ್ಲೊಂದಾದ ಜಾರಿ ನಿರ್ದೇಶನಾಲಯವು (ED) ಬ್ರಿಟೀಷ್ ಅಧಿಕಾರಿಗಳ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, 2018ರ ಮಾರ್ಚ್ ತಿಂಗಳಿನಲ್ಲಿ ಅಂತಹ ಯಾವುದೇ ಅಧಿಕೃತ ಮಾಹಿತಿಯೂ ಬ್ರಿಟೀಷ್ ಅಧಿಕಾರಿಗಳಿಂದ ಬಂದಿಲ್ಲವೆಂದು, ನೀರವ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ನಂತರವಷ್ಟೇ ಭಾರತದಿಂದ ಹಸ್ತಾಂತರದ ಕೋರಿಕೆಯನ್ನು ಜುಲೈನಲ್ಲಿ ಬ್ರಿಟನ್ನಿಗೆ ಕಳುಹಿಸಲಾಗಿತ್ತೆಂದು ತಿಳಿಸಿದೆ. ಜೂನ್ ನಲ್ಲಿ ನೀರವ್ ವಿರುದ್ಧ ರೆಡ್ ನೋಟಿಸನ್ನು (ದೇಶಭ್ರಷ್ಟ ಆರೋಪಿಗಳನ್ನು ಹುಡುಕಿ ಬಂಧಿಸಲು ಹೊರಡಿಸುವ ಸೂಚನೆ) ಇಂಟರ್ಪೋಲ್ (ಅಂತರರಾಷ್ಟ್ರೀಯ ಪೊಲೀಸ್ ಸಂಸ್ಥೆ) ಹೊರಡಿಸಿತ್ತೆಂದು ED ಹೇಳಿದೆ. ಅಲ್ಲದೆ ಬ್ರಿಟೀಷ್ ಸರ್ಕಾರವು LR ಅಥವಾ ಪರಸ್ಪರ ಕಾನೂನು ನೆರವು ಒಪ್ಪಂದದ (MLAT) ಮೂಲಕ ಆರೋಪಿಯ ವಿರುದ್ಧ ಜಾಮೀನುರಹಿತ ವಾರಂಟ್ (NBW) ಜಾರಿಗೊಳಿಸಲಾಗದೆಂದು, ಭಾರತದಿಂದ ಹಸ್ತಾಂತರದ ಕೋರಿಕೆ ಬಂದ ನಂತರವಷ್ಟೇ NBW ಜಾರಿ ಮಾಡಲು ಸಾಧ್ಯವೆಂದು ಖಡಾಖಂಡಿತವಾಗಿ ಹೇಳಿದ್ದಾಗಿ, ತನಿಖೆಯ ಅವಧಿಯಲ್ಲಿ ಆರೋಪಿಯ ಹಸ್ತಾಂತರದ ಕೋರಿಕೆಯನ್ನು ಸಲ್ಲಿಸುವುದು ತಮಗೆ ಅಸಾಧ್ಯವಾಗಿತ್ತು ಎಂದೂ ED ಸ್ಪಷ್ಟೀಕರಣ ನೀಡಿದೆ. ನೀರವ್ ಮೋದಿಯ ವಿರುದ್ಧ 2018ರ ಮೇ ತಿಂಗಳಲ್ಲಿ ಆರೋಪಪಟ್ಟಿ ಸಲ್ಲಿಸಿ ಹಸ್ತಾಂತರಕ್ಕಾಗಿ ಕೋರಿಕೆ ಸಲ್ಲಿಸಲಾಗಿತ್ತೆಂದು ED ಹೇಳಿದೆ. ಬ್ರಿಟನ್ನಿನಲ್ಲಿರುವ ಆತನ ಆಸ್ತಿಪಾಸ್ತಿಗಳ ಬಗ್ಗೆ ಮಾಹಿತಿ ಕಲೆಹಾಕಿ ಮುಟ್ಟುಗೋಲು ಹಾಕಿಕೊಳ್ಳಲು ಅಂತರರಾಷ್ಟ್ರೀಯ ಕಾನೂನುಗಳನ್ನು ಗಮನದಲ್ಲಿರಿಸಿಕೊಂಡು ಪ್ರಾಮಾಣಿಕವಾಗಿ ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ED ತಿಳಿಸಿದೆ. ಅಲ್ಲದೆ ಇತ್ತೀಚೆಗಷ್ಟೇ ಬ್ರಿಟೀಷ್ ಗೃಹ ಕಾರ್ಯದರ್ಶಿ ಸಜಿದ್ ಜಾವಿದ್ ಅವರು ನೀರವ್ ಮೋದಿಯ ಪ್ರಕರಣವನ್ನು ಬ್ರಿಟೀಷ್ ನ್ಯಾಯಾಲಯಕ್ಕೆ ಒಯ್ಯುವುದಾಗಿ ಭಾರತಕ್ಕೆ ಅಧಿಕೃತವಾಗಿ ತಿಳಿಸಿದ್ದಾರೆಂದು ED ಒಪ್ಪಿಕೊಂಡಿದೆ.
ವಿದೇಶಾಂಗ ಸಚಿವಾಲಯದ ವಕ್ತಾರರೊಬ್ಬರು ಹೇಳುವಂತೆ, “ನೀರವ್ ಮೋದಿ ಲಂಡನ್ ನಲ್ಲಿ ಕಂಡಾಕ್ಷಣವೇ ಆತನನ್ನು ಭಾರತಕ್ಕೆ ತರಲಾಗುವುದೆಂಬುದು ಅರ್ಥವಲ್ಲ, ನಾವು ಬ್ರಿಟಿನ್ನಿನ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ.”
ನುಂಗಣ್ಣಗಳ ರಕ್ಷಣೆಗೆ ನಿಂತ ಮೋದಿ ಸರ್ಕಾರ
ಬ್ರಿಟನ್-ಭಾರತ ನಡುವಿನ ಆರೋಪ ಪ್ರತ್ಯಾರೋಪಗಳೇನೇ ಇರಲಿ, ಕಾನೂನಾತ್ಮಕ ತೊಡಕುಗಳ ಕುರಿತ ಹೇಳಿಕೆ, ಪ್ರತಿಹೇಳಿಕೆಗಳ ಮಹಾಪೂರದ ಮಧ್ಯೆಯೂ, ಭಾರತದ ಜನಸಾಮಾನ್ಯರ ಬರೋಬ್ಬರಿ 14,500 ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದು, ದೇಶದಿಂದ ಅನಾಯಾಸವಾಗಿ ಓಡಿಹೋದ ವಜ್ರವ್ಯಾಪಾರಿ ನೀರವ್ ಮೋದಿ ನೆಮ್ಮದಿಯಾಗೇ ಜೀವನ ನಡೆಸುತ್ತಿದ್ದಾನೆ ಎಂಬುದು ವಾಸ್ತವ. ಈ ನೆಲದಲ್ಲಲ್ಲ, ಇನ್ನೊಂದು ನಾಡಲ್ಲಷ್ಟೇ! ನಮಗೆ ಅನ್ನವಿಕ್ಕುವ ರೈತರು ಕೃಷಿಗೆಂದು ಪಡೆದ ಹತ್ತಾರು ಸಾವಿರ ರೂಪಾಯಿಗಳ ಸಾಲವನ್ನು ತೀರಿಸಲಾರದೆ ಸಾವಿಗೆ ಶರಣಾಗುತ್ತಿದ್ದಾರೆ, ಅವರ ಸಣ್ಣಪುಟ್ಟ ಮನೆಗಳೂ ಜಪ್ತಿಯಾಗುತ್ತವೆ! ಉಸಿರಾಡುತ್ತಿರುವ ರೈತರ ಬದುಕು ನರಕವಾಗುತ್ತದೆ… ರೈತರ ಸಾಲ ಮನ್ನಾ ಮಾಡುವುದು ನಮ್ಮ ಸರ್ಕಾರದ ನೀತಿ ಅಲ್ಲ ಎಂದು ಹಣಕಾಸು ಸಚಿವ ಅರುಣ್ ಜೈಟ್ಲಿ ಹೇಳುತ್ತಾರೆ. ಸಾರ್ವಜನಿಕರಿಗೆ ಸೇರಿದ ಸಾವಿರಾರು ಕೋಟಿ ರೂಪಾಯಿ ಕಬಳಿಸಿ ಸಾರ್ವಜನಿಕ ಸಂಸ್ಥೆಯನ್ನೇ ನಾಶ ಮಾಡಿದವನನ್ನು ಒಂದು ವರ್ಷವಾದರೂ ಬಂಧಿಸದೆ ಸುರಕ್ಷಿತವಾಗಿರಿಸಲು “ಸುಭದ್ರ” ಕಾನೂನುಗಳ ನೆಪ ಹೇಳುತ್ತಾರೆ, ಸರ್ಕಾರ ಮತ್ತು ಅಧಿಕಾರಿಗಳು! ರೈತರಿಗೆ ಸೇರಿದ ಜಮೀನನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ದಾನ ನೀಡಲು ರಾತ್ರೋರಾತ್ರಿ ಸುಗ್ರೀವಾಜ್ಞೆ ಹೊರಡಿಸಿ ರೈತರ ಪರವಾಗಿದ್ದ ಕಾನೂನಿಗೆ ತಿದ್ದುಪಡಿ ಮಾಡುತ್ತದೆ ಹಾಗೂ ನುಂಗಣ್ಣಗಳನ್ನು ರಕ್ಷಿಸುತ್ತದೆ ಮೋದಿ ಸರ್ಕಾರ.. ಇದರ ಹಿಂದಿರುವ ಕಾರಣವೇನಿರಬಹುದು?
ನೀರವ್ ಮತ್ತು ನರೇಂದ್ರ ಮೋದಿ ಆಪ್ತಮಿತ್ರರು – ಶಿವಸೇನೆ
ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆ ಕಳೆದ ವರ್ಷ ತನ್ನ ಮುಖವಾಣಿ ‘ಸಾಮನಾ’ದಲ್ಲಿ, ನೀರವ್ ಮೋದಿ ಮತ್ತು ನರೇಂದ್ರ ಮೋದಿಯವರ ಸ್ನೇಹದ ಕುರಿತು ಸಂಪಾದಕೀಯ ಬರೆದಿತ್ತು. ಬಿಜೆಪಿಯ ಚುನಾವಣಾ ನಿಧಿಗೆ ಅಧಿಕ ಕೊಡುಗೆ ನೀಡುತ್ತಿದ್ದವನು ನೀರವ್ ಮೋದಿ ಎಂಬ ಅಂಶವನ್ನೂ ಅದರಲ್ಲಿ ತಿಳಿಸಲಾಗಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ನರೇಂದ್ರ ಮೋದಿಯವರಿಗೆ ನೀರವ್ ಮೋದಿ ಅತ್ಯಂತ ಆಪ್ತ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀರವ್ ಮೋದಿಯ ವಿರುದ್ಧ ದೂರು ದಾಖಲಿಸಿದ್ದಾಗ್ಯೂ 2018ರ ಜನವರಿಯಲ್ಲಿ ದಾವೊಸ್ ನಲ್ಲಿ ಇಬ್ಬರು ಮೋದಿಗಳೂ ಒಂದೇ ಫೋಟೊ ಫ್ರೇಮಿನಲ್ಲಿದ್ದದ್ದು ಏಕೆ ಮತ್ತು ಹೇಗೆ ಎಂದು ಸಾಮನಾ ಪ್ರಶ್ನಿಸಿತ್ತು.

ಇದೀಗ ಭಾರತವು ಬ್ರಿಟನ್ ಗೆ ಹಸ್ತಾಂತರ ಕೋರಿಕೆ ಕಳಿಸಬಹುದೆಂದು ನಿರೀಕ್ಷಿಸಿ ನೀರವ್ ಮೋದಿ ವಕೀಲರ ಮೊರೆಹೋಗಿರುವುದಾಗಿ ತಿಳಿದುಬಂದಿದೆ.
ತಿಂದವರನ್ನು ಬಿಟ್ಟುಬಿಟ್ಟಿದ್ದು ಏಕೆ?
‘ನಾ ತಿನ್ನೋದೂ ಇಲ್ಲ, ತಿನ್ನೋಕೂ ಬಿಡೋದಿಲ್ಲ’ ಎಂದಿದ್ದ ನರೇಂದ್ರ ಮೋದಿಯವರು ತಿಂದವರನ್ನು ಭಾರತದಿಂದ ಹೊರಗೆ ಹೋಗಿ ನೆಮ್ಮದಿಯಾಗಿರಿ ಎಂದು ಬಿಟ್ಟುಬಿಟ್ಟರಲ್ಲಾ… ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯಾ, ಮೆಹುಲ್ ಚೋಕ್ಸಿ, ಜತಿನ್ ಮೆಹ್ತಾ, ಈ ವಂಚಕರೆಲ್ಲಾ ದೇಶಭ್ರಷ್ಟರಾಗಿ ಅಚ್ಚೇ ದಿನಗಳನ್ನು ಅನುಭವಿಸುತ್ತಿದ್ದರೆ, ದೇಶದೊಳಗೇ ವಾಸವಿರುವ ಅಂಬಾನಿ-ಅದಾನಿಗಳು ನರೇಂದ್ರ ಮೋದಿಯವರ ಕೃಪಾಕಟಾಕ್ಷವನ್ನು ಸ್ವೀಕರಿಸಿ ಅಚ್ಚೇ ದಿನಗಳ ಫಲಾನುಭವಿಗಳಾಗಿದ್ದಾರೆ. ದೇಶದ ಬ್ಯಾಂಕುಗಳು, ಸಾರ್ವಜನಿಕ ಉದ್ದಿಮೆಗಳು ಸೊರಗಿ ಮುಳುಗುತ್ತಿವೆ, ರೈತ-ಕಾರ್ಮಿಕರ ಬದುಕು ನಾಶವಾಗುತ್ತಿದೆ. ತಿಂದವರು ತೇಗುತ್ತಲೇ ಇದ್ದಾರೆ… ಬಂಧನದ ಭೀತಿ ಲವಲೇಶವೂ ಇಲ್ಲ! ಆದರೂ ಭ್ರಷ್ಟಾಚಾರಿಗಳು ಮತ್ತು ವಂಚಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದರಲ್ಲಿ ನರೇಂದ್ರ ಮೋದಿಯವರ ನೀರವ ಮೌನ ಮುಂದುವರಿದಿದೆ.
(ಚಿತ್ರಕೃಪೆ: ಅಂತರ್ಜಾಲ)
- ಜ್ಯೋತಿ ಎ.
Very bad administration And falls news public sitigans misug in Indian