ಅಂತೂ ಇಂತೂ ಸೀಟು ಹಂಚಿಕೆಯ ಹಗ್ಗಜಗ್ಗಾಟ ಮುಗಿದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ 20:8 ರ ಜಂಟಿ ಹೋರಾಟಕ್ಕೆ ಅಣಿಯಾಗಿವೆ. ಹಳೇಮೈಸೂರು ಭಾಗದ ತನ್ನ ಪ್ರಾಬಲ್ಯವನ್ನು ಕಾಯ್ದುಕೊಳ್ಳುವ ಜೆಡಿಎಸ್ ಪಟ್ಟು ಕೊನೆಗೂ ಗೆದ್ದಿದೆ. ಅದೇ ಹೊತ್ತಿಗೆ, ಮೈಸೂರು ಕ್ಷೇತ್ರವನ್ನು ಉಳಿಸಿಕೊಳ್ಳುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹಠ ಕೂಡ ಗೆದ್ದಿದೆ. ಜೊತೆಗೆ, ತುಮಕೂರು ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳನ್ನು ಅಪೇಕ್ಷೆಯಂತೆ ಜೆಡಿಎಸ್ ಪಡೆದುಕೊಂಡಿದೆ. ಹಾಗಾಗಿ ಇದೊಂದು ರೀತಿಯಲ್ಲಿ ದೋಸ್ತಿ ಪಕ್ಷಗಳಿಗೆ ‘ವಿನ್ ವಿನ್’ ಸಂದರ್ಭ.
ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 20 ಕ್ಷೇತ್ರಗಳನ್ನು ಉಳಿಸಿಕೊಂಡು, ಇನ್ನುಳಿದ 8 ಕ್ಷೇತ್ರಗಳನ್ನು ಮಿತ್ರಪಕ್ಷ ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಜೆಡಿಎಸ್ ಆರಂಭದಲ್ಲಿ 12 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದರೂ ಹಲವು ಸುತ್ತಿನ ಮಾತುಕತೆಗಳ ಬಳಿಕ ಕನಿಷ್ಠ 10 ಕ್ಷೇತ್ರ ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿತ್ತು. ಪ್ರಮುಖವಾಗಿ ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡುವಂತೆ ಜೆಡಿಎಸ್ ಪಟ್ಟು ಹಿಡಿದಿತ್ತು. ಆದರೆ, ಹಾಲಿ ತನ್ನ ತೆಕ್ಕೆಯಲ್ಲಿರುವ ಕ್ಷೇತ್ರಗಳನ್ನು ಬಿಟ್ಟುಕೊಡಲಾಗದು ಎಂದು ಕಾಂಗ್ರೆಸ್ ನಾಯಕರು ಹಠಕ್ಕೆ ಬಿದ್ದಿದ್ದರು. ಆದರೆ, ಅಂತಿಮವಾಗಿ ಬುಧವಾರ ಸಂಜೆ ಕೊಚ್ಚಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ನಡುವೆ ನಡೆದ ಅಂತಿಮ ಮಾತುಕತೆಯಲ್ಲಿ 20:8ರ ಸೂತ್ರಕ್ಕೆ ಅಂತಿಮ ಮುದ್ರೆ ಬಿದ್ದಿದೆ.
ಹಾಲಿ ದೇವೇಗೌಡರು ಪ್ರತಿನಿಧಿಸುತ್ತಿರುವ ಹಾಸನ ಹಾಗೂ ಎಲ್ ಆರ್ ಶಿವರಾಮೇಗೌಡ ಪ್ರತಿನಿಧಿಸುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರಗಳೂ ಸೇರಿದಂತೆ, ಕಾಂಗ್ರೆಸ್ ಸಂಸದ ಮುದ್ದುಹನುಮೇಗೌಡ ಪ್ರತಿನಿಧಿಸುತ್ತಿರುವ ತುಮಕೂರು, ಬಿಜೆಪಿಯ ಡಿ ವಿ ಸದಾನಂದ ಗೌಡ ಪ್ರತಿನಿಧಿಸುತ್ತಿರುವ ಬೆಂಗಳೂರು ಉತ್ತರ, ಬಿಜೆಪಿಯ ಶೋಭಾ ಕರಂದ್ಲಾಜೆ ಪ್ರತಿನಿಧಿಸುತ್ತಿರುವ ಉಡುಪಿ–ಚಿಕ್ಕಮಗಳೂರು, ಬಿಜೆಪಿಯ ಬಿ ವೈ ರಾಘವೇಂದ್ರ ಪ್ರತಿನಿಧಿಸುತ್ತಿರುವ ಶಿವಮೊಗ್ಗ, ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಪ್ರತಿನಿಧಿಸುತ್ತಿರುವ ಉತ್ತರಕನ್ನಡ ಹಾಗೂ ಬಿಜೆಪಿಯ ರಮೇಶ್ ಜಿಗಜಿಣಗಿ ಪ್ರತಿನಿಧಿಸುತ್ತಿರುವ ವಿಜಯಪುರ ಲೋಕಸಭಾ ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ. ಇನ್ನುಳಿದಂತೆ ಮೈಸೂರು ಸೇರಿದಂತೆ 20 ಕ್ಷೇತ್ರಗಳನ್ನು ಕಾಂಗ್ರೆಸ್ ಉಳಿಸಿಕೊಂಡಿದೆ.
ಈ ಎಂಟು ಕ್ಷೇತ್ರಗಳ ಪೈಕಿ ಹಾಸನ, ಮಂಡ್ಯ ಹಾಗೂ ಶಿವಮೊಗ್ಗ ಕ್ಷೇತ್ರಗಳಿಗೆ ಈಗಾಗಲೇ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನು ಪಕ್ಷದ ಅಧಿನಾಯಕ ದೇವೇಗೌಡರು, ಈ ಬಾರಿ ಎಲ್ಲಿಂದ ಕಣಕ್ಕಿಳಿಯಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪಕ್ಷದ ತುಮಕೂರು ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳಿಂದ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ ಎಂದು ಈಗಾಗಲೇ ಗೌಡರು ಹೇಳಿರುವುದರಿಂದ, ಬಹುಶಃ ಈ ಎರಡು ಕ್ಷೇತ್ರಗಳ ಪೈಕಿ ಒಂದರಿಂದ ಅವರು ಕಣಕ್ಕಿಳಿಯುವುದು ನಿಶ್ಚಿತ. ಅದರಲ್ಲೂ ಬಹುತೇಕ ಬೆಂಗಳೂರು ಉತ್ತರ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ನಾಯಕರು ಹೇಳುತ್ತಿದ್ದಾರೆ. ಹಾಗಾದಲ್ಲಿ, ಹಾಸನ ಗೌಡರು ಮತ್ತು ಕರಾವಳಿ ಗೌಡರ ನಡುವಿನ ನೇರ ಹಣಾಹಣಿಗೆ ಕ್ಷೇತ್ರ ಸಾಕ್ಷಿಯಾಗಲಿದೆ. ಹಾಗಾಗಿ, ಈ ಬಾರಿ ಬಿಜೆಪಿಯ ಸದಾನಂದ ಗೌಡರಿಗೆ ‘ಮಂಡೆಬಿಸಿ’ಯಾಗುವುದು ನಿಶ್ಚಿತ!
ಇನ್ನು ಚಿಕ್ಕಮಗಳೂರು ಕ್ಷೇತ್ರದಿಂದ ಜೆಡಿಎಸ್ ಹುರಿಯಾಳು ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಇನ್ನೂ ತೆರೆಬಿದ್ದಿಲ್ಲ. ಸದ್ಯ ಬಿಜೆಪಿ ಟಿಕೆಟ್ ಘೋಷಣೆಗೆ ಕಾದು ತಮ್ಮ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಲೆಕ್ಕಾಚಾರ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರದ್ದು. ಬಿಜೆಪಿ ಟಿಕೆಟಿಗಾಗಿ ತೀವ್ರ ಪ್ರಯತ್ನ ನಡೆಸುತ್ತಿರುವ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ಸಿಗದೇ ಇದ್ದಲ್ಲಿ, ಅವರನ್ನು ಸೆಳೆದು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಯೋಚನೆ ಜೆಡಿಎಸ್ ವರಿಷ್ಠರದ್ದು ಎನ್ನಲಾಗುತ್ತಿದೆ. ಜೊತೆಗೆ, ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಈಗಾಗಲೇ ಹೆಗ್ಡೆ ಅವರೊಂದಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ನಡುವೆ, ಕ್ಷೇತ್ರದ ಟಿಕೆಟ್ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೇ ಬಹುತೇಕ ಖಚಿತ ಎಂಬ ಮಾಹಿತಿ ಇದ್ದು, ಹಾಗಾದಲ್ಲಿ, ಜಯಪ್ರಕಾಶ್ ಹೆಗ್ಡೆ ತೆನೆ ಹೊತ್ತ ಮಹಿಳೆಯ ವಾರಸುದಾರರಾಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಹೆಗ್ಡೆ ಅವರೇ ಬಿಜೆಪಿ ಅಭ್ಯರ್ಥಿಯಾದಲ್ಲಿ, ವೈ ಎಸ್ ವಿ ದತ್ತ ಅಥವಾ ಎಸ್ ಎಲ್ ಭೋಜೇಗೌಡ ಪೈಕಿ ಯಾರಾದರೂ ಒಬ್ಬರು ಜೆಡಿಎಸ್ ಅಭ್ಯರ್ಥಿಯಾಗಬಹುದು ಎನ್ನಲಾಗುತ್ತಿದೆ. ಸದ್ಯಕ್ಕಂತೂ ಅಭ್ಯರ್ಥಿ ಯಾರು ಎಂಬ ಬಗ್ಗೆ ಇನ್ನೂ ಅಸ್ಪಷ್ಟತೆ ಇದೆ.
ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಆನಂದ ಅಸ್ನೋಟಿಕರ್ ಕಣಕ್ಕಿಳಿಯಲಿದ್ದಾರೆ ಎಂಬುದು ಜೋರಾಗಿ ಕೇಳಿಬರುತ್ತಿದೆ. ಆದರೆ, ಐದು ಬಾರಿ ಸಂಸದರಾಗಿ ನಿರಂತರವಾಗಿ ಗೆಲುವು ಪಡೆಯುತ್ತಲೇ ಬಂದಿರುವ ಬಿಜೆಪಿಯ ಅನಂತಕುಮಾರ ಹೆಗಡೆ ಅವರ ಕೋಮು ಧ್ರುವೀಕರಣದ ಅಸ್ತ್ರಕ್ಕೆ ಅಸ್ನೋಟಿಕರ್ ಪ್ರಬಲ ಪ್ರತ್ಯಸ್ತ್ರವಾಗುವರೇ ಎಂಬುದನ್ನು ಕಾದುನೋಡಬೇಕಿದೆ. ಜೊತೆಗೆ, ಹೆಗಡೆಯೊಂದಿಗೆ ಆಪ್ತ ನಂಟು ಹೊಂದಿರುವ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ನಾಯಕ ದೇಶಪಾಂಡೆ ಮುಕ್ತ ಮನಸ್ಸಿನಿಂದ ಅಸ್ನೋಟಿಕರ್ ಬೆಂಬಲಕ್ಕೆ ನಿಲ್ಲುವರೆ? ಅಥವಾ ಮತ್ತೆ ತೆರೆಮರೆಯ ಜುಗಲ್ ಬಂಧಿಯೇ ಮರುಕಳಿಸುವುದೇ ಎಂಬುದರ ಮೇಲೆ ಅಂತಿಮ ಹಣಾಹಣಿಯ ಹಣೇಬರ ನಿಂತಿದೆ ಎಂಬುದು ಸುಳ್ಳಲ್ಲ. ಈಗಾಗಲೇ ದೇಶಪಾಂಡೆ ಆಪ್ತರು ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಹಾಗಾಗಿ ದೋಸ್ತಿ ಪಕ್ಷಗಳ ಪಾಲಿಗೆ ಉತ್ತರಕನ್ನಡದಲ್ಲಿ ಎರಡೂ ಪಕ್ಷಗಳ ನಡುವೆ ಸಮನ್ವಯ ತರುವುದು ಸದ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇನ್ನು ತುಮಕೂರು ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಸಂಸದರಿದ್ದರೂ, ಸ್ವತಃ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರ ತವರು ಕ್ಷೇತ್ರವಾಗಿದ್ದರೂ ಅದನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವುದು ಅಲ್ಲಿನ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲೂ ಅಸಮಾಧಾನ ಹುಟ್ಟಿಸಿದೆ. ಆದರೆ, ಕ್ಷೇತ್ರದಲ್ಲಿ ಜೆಡಿಎಸ್ ಸಾಕಷ್ಟು ಪ್ರಾಬಲ್ಯ ಹೊಂದಿರುವುದರಿಂದ ಮತ್ತು ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಜೊತೆ ನಿಂತಲ್ಲಿ ಅನುಕೂಲವಾಗಬಹುದು ಎಂಬ ಲೆಕ್ಕಾಚಾರ ಗೌಡರ ಪಾಳೆಯದ್ದು. ಆದರೆ, ಸ್ವತಃ ದೇವೇಗೌಡರೇ ಅಭ್ಯರ್ಥಿಯಾದಲ್ಲಿ ಮಾತ್ರ ಗೆಲುವು ಸುಲಭವಾಗಬಹುದು. ಇಲ್ಲವಾದಲ್ಲಿ ಯಾರು ಅಭ್ಯರ್ಥಿ ಎಂಬ ಗೊಂದಲ ಇನ್ನೂ ಮುಂದುವರಿದಿದೆ.
ಇನ್ನು ಬಿಜೆಪಿ ಭದ್ರಕೋಟೆ ಎನ್ನಲಾಗುತ್ತಿರುವ ವಿಜಯಪುರದಲ್ಲಿ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರ ಪತ್ನಿ ಸುನೀತಾ ಚವ್ಹಾಣ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಕ್ಷೇತ್ರದ ಪಕ್ಷದ ಪ್ರಾಬಲ್ಯ ಕೂಡ ಸಾಕಷ್ಟಿದೆ. ಕಾಂಗ್ರೆಸ್ ನಾಯಕರು ಕೂಡ ಬಹುತೇಕ ಜೆಡಿಎಸ್ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಇದೆ. ಆದರೆ, ಜಿಗಜಿಣಗಿ ಸತತ ಎರಡು ಬಾರಿ ಗೆಲುವು ಪಡೆದು, ಇದೀಗ ಮೂರನೇ ಬಾರಿಗೆ ಕಣಕ್ಕಿಳಿಯುವುದು ನಿಶ್ಚಿತ. ಆದರೆ, ಬಸವರಾಜ ಪಾಟೀಲ ಯತ್ನಾಳ್ ಈಗಾಗಲೇ ಜಿಣಜಿಣಗಿ ವಿರುದ್ಧ ಅಪಸ್ವರ ಎತ್ತಿದ್ದಾರೆ. ಹಾಗಾಗಿ ಬಿಜೆಪಿಯ ಆಂತರಿಕ ಬಂಡಾಯ ಜೆಡಿಎಸ್ ಗೆ ಅನುಕೂಲವಾಗುವ ಸಾಧ್ಯತೆ ಇದೆ.
ಒಟ್ಟಾರೆ, ಎಂಟು ಕ್ಷೇತ್ರಗಳ ಪೈಕಿ ಸದ್ಯಕ್ಕೆ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ನ ತೆನೆ ಹೊರುವ ಮುಖಗಳು ನಿಚ್ಛಳವಾಗಿವೆ. ಇನ್ನುಳಿದಂತೆ ದೇವೇಗೌಡರು ಯಾವುದಾದರೂ ಒಂದು ಕಡೆ ಕಣಕ್ಕಿಳಿಯುವುದು ಖಚಿತ. ಉಳಿದ ನಾಲ್ಕು ಕ್ಷೇತ್ರಗಳ ಪೈಕಿ ಉತ್ತರಕನ್ನಡ ಹೊರುತುಪಡಿಸಿ ತುಮಕೂರು, ವಿಜಯಪುರ ಹಾಗೂ ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿ ಎಂಬುದು ಇನ್ನೂ ಕುತೂಹಲವಾಗಿಯೇ ಉಳಿದಿದೆ.