ಪಿರಿಯಾಪಟ್ಟಣ, ಮೈಸೂರು: ಚುನಾವಣೆಯ ಪ್ರಚಾರಕ್ಕೆ ಧಾರ್ಮಿಕ ಜಾತ್ರೆ ಹಬ್ಬಗಳನ್ನೂ ಬಿಡುವುದಿಲ್ಲ ಎನ್ನುತ್ತಿದೆ ಭಾರತೀಯ ಜನತಾ ಪಕ್ಷ. ಇಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆಯುತ್ತಿರುವ ಜಾತ್ರೆಯೊಂದರಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರ ಟೀಕೆಗೊಳಗಾಗಿದೆಯಲ್ಲದೇ ಸೆಕ್ಟರ್ ಮ್ಯಾಜಿಸ್ಟ್ರೇಟರ ಕೆಂಗಣ್ಣಿಗೂ ಗುರಿಯಾದ ಘಟನೆ ಜರುಗಿದೆ.
ಪಿರಿಯಾಪಟ್ಟಣದಲ್ಲಿ ನಡೆಯುತ್ತಿರುವ ಮಸಣಿಕಮ್ಮ ಜಾತ್ರಾ ಮಹೋತ್ಸದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿರುತ್ತಾರೆ. ಈ ಸಂದರ್ಭದಲ್ಲಿ ಬಿಜೆಪಿ ಪರವಾದ ಭಾವೋನ್ಮಾದ ಸೃಷ್ಟಿಸುವ ಉದ್ದೇಶದಿಂದ ಬಿಜೆಪಿಯ ಕೆಲವು ಕಾರ್ಯಕರ್ತರು ಬಿ. ಎಂ ರಸ್ತೆಯಲ್ಲಿ ಮೋದಿ ಪರವಾದ ಫ್ಲೆಕ್ಸ್ ಗಳನ್ನು ಹಾಕಿ, ಪೋಸ್ಟರ್ ಗಳನ್ನು ಹಿಡಿದು ಪ್ರಚಾರ ನಡೆಸಿದರು.
‘ದೇಶಕ್ಕಾಗಿ ಮೋದಿ, ಮೋದಿಗಾಗಿ (ಓಟಿಗಾಗಿ) ನಾವು’ ಎಂಬ ಘೋಷಣೆಗಳನ್ನು ಕೂಗುತ್ತಾ, ಜಾತ್ರೆಯಲ್ಲಿ ನೆರೆದಿದ್ದ ಭಕ್ತರಿಗೆ ತಮ್ಮ ಪ್ರಚಾರವನ್ನು ತಲುಪಿಸುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಭಾರತೀಯ ಸೇನಾ ಸಮವಸ್ತ್ರ ಧರಿಸಿದ್ದ ಮೋದಿಯ ಫ್ಲೆಕ್ಸ್ ಪ್ರದರ್ಶಿಸಿದರು. ಭಾರತೀಯ ಸಶಶ್ತ್ರ ಪಡೆಗಳಿಗೆ ಸಂಬಂಧಿಸಿದ ಯಾವುದನ್ನೂ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಚುನಾವಣಾ ಆಯೋಗವು ಕೆಲ ದಿನಗಳ ಹಿಂದೆ ನಿರ್ದೇಶನ ನೀಡಿದ್ದರೂ ಅದನ್ನು ಬಿಜೆಪಿ ಸ್ಪಷ್ಟವಾಗಿ ಉಲ್ಲಿಂಘಿಸಿದ ಪ್ರಕರಣ ಇದಾಗಿತ್ತು..
ಮೋದಿ ಪರ ಪ್ರಚಾರ ಮಾಡಲು ಮುಂದಾದ ಬಿಜೆಪಿ ಮುಖಂಡರನ್ನು ಅಲ್ಲಿಯೇ ತಡೆದಿದ್ದು ಸೆಕ್ಟರ್ ಮ್ಯಾಜಿಸ್ಟ್ರೇಟ್ ಪುಟ್ಟರಾಜು, ‘ಅನುಮತಿ ಪಡೆಯದೇ ಪ್ರಚಾರ ಮಾಡಬಾರದು, ಕೂಡಲೇ ಇಲ್ಲಿಂದ ಹೊರಡಬೇಕು’ ಎಂದು ಬಿಜೆಪಿ ಪ್ರಚಾರ ಮುಂದುವರೆಸದಂತೆ ನಡೆಸದಂತೆ ಅವರು ತಡೆದರು. “ಜಾತ್ರಾ ಸಂದರ್ಭದಲ್ಲಿ ಈ ರೀತಿ ಪ್ರಚಾರ ಮಾಡುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ” ಎಂದು ಬಿಜೆಪಿ ಕಾರ್ಯಕರ್ತರಿಗೆ ಬುದ್ಧಿವಾದ ಹೇಳಿದರು.
ನೀತಿ ಸಂಹಿತೆ ಉಲ್ಲಂಘಿಸಿದ್ದಲ್ಲದೇ, ದೇವರ ಭಕ್ತಿಭಾವದಲ್ಲಿ ನಡೆಯಬೇಕಿದ್ದ ಜಾತ್ರಾ ಸಂದರ್ಭವನ್ನು ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಬಿಜೆಪಿ ವರ್ತನೆ ಖಂಡಿಸಿ ಭಕ್ತರು ಹಾಗೂ ನಾಗರಿಕರು ಆಕ್ರೋಷ ವ್ಯಕ್ತಪಡಿಸಿದರು.
ಇತ್ತೀಚೆಗೆ ಬಿಜೆಪಿ ನಾಯಕ ಮತ್ತು ದೆಹಲಿ ಶಾಸಕ ಪ್ರಕಾಶ್ ಶರ್ಮಾ ಅವರು, ವಿಂಗ್ ಕಮಾಂಡರ್ ಅಭಿನಂದನ್ ಜತೆಗೆ ಮೋದಿ, ಅಮಿತ್ ಷಾ ಭಾವಚಿತ್ರ ಬಳಸಿ ಬಿಜೆಪಿ ಪರ ಪ್ರಚಾರ ಮಾಡಿರುವುದನ್ನು ಖಂಡಿಸಿ ಚುನಾವಣಾ ಆಯೋಗ ಎಚ್ಚರಿಕೆ ನೀಡದ್ದನ್ನು ಇಲ್ಲಿ ಸ್ಮರಿಸಬಹುದು.
(ಪಿರಿಯಾಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ಈ ಚುನಾವಣಾ ಪ್ರಚಾರದ ದೃಶ್ಯಾವಳಿಗಳನ್ನು ಫೇಸ್ಬುಕ್ ನ ಪಿರಿಯಾಪಟ್ಟಣ ಎಂಬ ಪುಟವು ಪ್ರಕಟಿಸಿದ್ದು ಈ ಲಿಂಕ್ ಮೂಲಕ ವೀಕ್ಷಿಸಬಹುದಾಗಿದೆ)