ಮೈಸೂರು: ತನ್ನ ಸಾಧನೆಗಳನ್ನು ಬಣ್ಣಿಸಿರುವ ಪುಸ್ತಿಕೆಯ 50,000 ಪ್ರತಿಗಳನ್ನು ಹಂಚಲು ಅಂಚೆ ಇಲಾಖೆಯನ್ನು ಮೈಸೂರು – ಮಡಿಕೇರಿ ಸಂಸದ ಪ್ರತಾಪ ಸಿಂಹ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಪ್ರತಾಪ ಸಿಂಹ ಹಾಗೂ ಅಂಚೆ ಇಲಾಖೆಯ ಹಿರಿಯ ಸೂಪರಿಂಡೆಂಟ್ ಮೇಲೆ ದೂರು ಸಲ್ಲಿಸುವ ಮೂಲಕ ಹೊಸ ವಿವಾದವೊಂದು ಶುರುವಾಗಿದೆ.
ಕಾಂಗ್ರೆಸ್ ಮುಖಂಡ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾಗಿರುವ ಕೆ.ಎಸ್.ಶಿವರಾಂ ಅವರು ಮೈಸೂರು ಡೆಪ್ಯುಟಿ ಕಮಿಷನರ್ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಅಭಿರಾಮ್ ಜಿ. ಶಂಕರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸುಪರ್ದಿಗೆ ಒಳಪಡುವ ಅಂಚೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರತಾಪ್ ಸಿಂಹ ಮತ್ತು ಅಂಚೆ ಇಲಾಖೆಯ ಹಿರಿಯ ಸೂಪರಿಂಟೆಂಡೆಂಟ್ ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಈ ದೂರನ್ನು ನೀಡಲಾಗಿದೆ. ಈ ದೂರಿನ ಅನ್ವಯ ಚುನಾವಣಾ ಅಧಿಕಾರಿಗಳು ಅಂಚೆ ಇಲಾಖೆಯ ಸೂಪರಿಂಟೆಂಡೆಂಟ್ ಅವರಿಗೆ ನೋಟೀಸ್ ಕಳಿಸಿದ್ದು ಉತ್ತರಕ್ಕಾಗಿ ನಿರೀಕ್ಷಿಸುತ್ತಿದ್ದಾರೆ.
ಮೈಸೂರಿನ 22ಅಂಚೆ ಕಚೇರಿಗಳ ವ್ಯಾಪ್ತಿಯಲ್ಲಿ ಪ್ರತಿಯೊಂದು ಮನೆಗೂ ಸಂಸದ ಪ್ರತಾಪ್ ಸಿಂಹ ಅವರ ‘ಸಾಧನೆ’ ಕುರಿತ ಪುಸ್ತಿಕೆಯನ್ನು ತಲುಪಿಸಲು ಅಂಚೆ ಅಧಿಕಾರಿ ಆದೇಶ ನೀಡಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಂಸದರಾಗಿರುವ ಪ್ರತಾಪ್ ಸಿಂಹ್ ಅವರು ಅಂಚೆ ಕಚೇರಿ ದುರ್ಬಳಕೆ ಮಾಡಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ, ಅಲ್ಲದೇ ಅಂಚೆ ಇಲಾಖೆಯ ಜಿಲ್ಲಾ ಹಿರಿಯ ಸೂಪರಿಂಟೆಂಡೆಂಟ್ ಅವರು ಪ್ರತಾಪ ಸಿಂಹ ಅವರ ಈ ಪುಸ್ತಕಗಳನ್ನು ಕಾಲಮಿತಿಯಲ್ಲಿ ತಪ್ಪದೇ ಮನೆಮನೆಗೆ ವಿತರಿಸಬೇಕು ಎಂದು ಕಟ್ಟಪ್ಪಣೆ ಹೊರಡಿಸುವ ಮೂಲಕ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಿ ಅವರ ಮೇಲೂ ದೂರು ಸಲ್ಲಿಸಲಾಗಿದೆ.
ಈ ದೂರಿನ ಕುರಿತು ಮೈಸೂರು ಚುನಾವಣಾಧಿಕಾರಿಗಳನ್ನು ಸಂಪರ್ಕಿಸಲಾಗಿ,
“ಈ ಸಂಬಂಧ ದೂರನ್ನು ಸ್ವೀಕರಿಸಲಾಗಿದೆ. ಮುಂದಿನ ಕ್ರಮವಾಗಿ ಅಂಚೆ ಇಲಾಖೆಯ ಸೂಪರಿಂಟೆಂಡೆಂಟ್ ಅವರಿಗೆ ನೋಟೀಸ್ ಕಳಿಸಲಾಗಿದೆ. ಅವರಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಡೆಪ್ಯುಟಿ ಕಮಿಶನರ್ ಅಭಿರಾಮ್ ಜಿ ಶಂಕರ್ ಟ್ರೂಥ್ ಇಂಡಿಯಾ ಸುದ್ದಿತಾಣಕ್ಕೆ ತಿಳಿಸಿದರು.
ಪ್ರತಾಪ್ ಸಿಂಹ ಅವರ 50,000 ಪುಸ್ತಕಗಳನ್ನು ಮನೆಮನೆಗೂ ತಲುಪಿಸಲು ಅಂಚೆ ಇಲಾಖೆಯ ಮೈಸೂರು ವಿಭಾಗದ ಹಿರಿಯ ಸೂಪರಿಂಟೆಂಡೆಂಟ್ ಅಪ್ಪಣೆ ಹೊರಡಿಸಿರುವ ಹೊರಡಿಸಿರುವ ಸೂಚನಾ ಪತ್ರದ ಪ್ರತಿಯು ‘ಟ್ರೂಥ್ ಇಂಡಿಯಾ ಕನ್ನಡ’ಕ್ಕೆ ಲಭಿಸಿದ್ದು ಅದರ ಸಾರಾಂಶ ಕೆಳಗಿನಂತಿದೆ.
ಅಂಚೆ ಇಲಾಖೆಯ ಮೈಸೂರು ವಿಭಾಗದ ಹಿರಿಯ ಸೂಪರಿಂಟೆಂಡೆಂಟ್ ಹೊರಡಿಸಿರುವ ಆದೇಶ ಸಂಖ್ಯೆ BDG4/BD/DP dlgd/16-17 ಯ ಆದೇಶವು ದಿನಾಂಕ 11.03.2019ರಂದು ಹೊರಡಿಸಿದ್ದಾಗಿದೆ.
ಮೈಸೂರಿನ SPM ದತ್ತಗಳ್ಳಿ, ಮಾನಸ ಗಂಗೋತ್ರಿ, ಬೋಗಡಿ, ಲಕ್ಷ್ಮೀಪುರಂ, ಮೈಸೂರು ದಕ್ಷಿಣ, ಜೆ.ಪಿ.ನಗರ,ಕುವೆಂಪು ನಗರ,ಶ್ರೀರಾಮ್ ಪುರ ಎರಡನೇ ಹಂತ, ಆರ್.ಕೆ.ನಗರ, ಜಯನಗರ, ಎಸ್,ಎಸ್,ಪುರಂ ಮುಖ್ಯ ಕಚೇರಿ, ವಿಜಯನಗರ 2ನೇ ಹಂತ, ವಿಜಯನಗರ 3ನೇ ಹಂತ, ವಿಜಯನಗರ 4ನೇ ಹಂತ, ಜೆ.ಎಲ್.ಪುರಂ, ಮೇಟಗಳ್ಳಿ, ಇಟ್ಟಿಗೆ ಗೂಡು, ಎನ್ ಎಂ.ನಗರ, ಸಿದ್ದಾರ್ಥ ನಗರ, ಬೆಳವಾಡಿ ಮತ್ತು ಜಿ.ಎಸ್. ಆಶ್ರಮ ಅಂಚೆ ಕಚೇರಿಗಳಿಗೆ ಈ ಆದೇಶವನ್ನು ರವಾನಿಸಲಾಗಿದೆ.
ಶ್ರೀ ಪ್ರತಾಪ ಸಿಂಹ, ಸಂಸದ ಇವರ ನೇರ ಅಂಚೆಯ ಹಂಚಿಕೆಯ ಕುರಿತು ಎಂದು ವಿಷಯದಲ್ಲಿ ತಿಳಿಸಲಾಗಿದೆ.
ಮೈಸೂರು ಮತ್ತು ಮಡಿಕೇರಿ ಸಂಸದ ಪ್ರತಾಪ ಸಿಂಹ ಅವರು ನೇರ ಅಂಚೆ ಅಡಿಯಲ್ಲಿ 50,000 ಕಿರುಪುಸ್ತಿಕೆಗಳನ್ನು ಟೆಂಡರ್ ನೀಡಿದ್ದು ಅವುಗಳನ್ನು ನಿಮ್ಮ ಅಂಚೆ ಕಚೇರಿಯ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ಹಂಚಲು ಸೂಚನೆ ನೀಡಿದ್ದಾರೆ. ಇವುಗಳನ್ನು 16.03.2019ರ ಒಳಗಾಗಿ ವಿತರಣೆಯಾಗಬೇಕು. “ಪ್ರತಿ ಬೀಟ್ ನಲ್ಲಿರುವ ಒಂದೇ ಒಂದು ಮನೆಯನ್ನೂ ಬಿಡುವಂತಿಲ್ಲ.ಈಗಾಗಲೇ ಹಂಚಲಾಗಿದೆ ಎಂಬ ಕಾರಣ ನೀಡಿ ಯಾವುದೇ ಪೋಸ್ಟ್ ಮ್ಯಾನ್ ಪುಸ್ತಿಕೆ ಹಂಚಲು ನಿರಾಕರಿಸಿದ ಸಂದರ್ಭದಲ್ಲಿ ಅದನ್ನು ಲಿಖಿತ ರೂಪದಲ್ಲಿ ಈ ಕಚೇರಿಗೆ ತಿಳಿಸತಕ್ಕದ್ದು. ಇದು ಇಲಾಖೆಗೆ ಬೃಹತ್ ಮೊತ್ತದ ಆದಾಯವನ್ನು ತಂದುಕೊಡುತ್ತದೆಯಾದ್ದರಿಂದ ಸಂಬಂಧ ಪಟ್ಟ ಎಲ್ಲರೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೋರಲಾಗಿದೆ” ಎಂದು ಬರೆಯಲಾಗಿದೆ.
ಅಲ್ಲದೇ, “ಪುಸ್ತಿಕೆಯನ್ನು ಮನೆಗಳಿಗೆ ಹಂಚುವಾಗ ಒಂದು ಮನೆಗೆ ಒಂದೇ ಪುಸ್ತಕ ಹಂಚುವಂತೆ ನೋಡಿಕೊಳ್ಳತಕ್ಕದ್ದು, ವಿಭಾಗೀಯ ಅಧಿಕಾರಿಗಳು, ಪಿ ಆರ್ ಐ (ಪಿ)ಗಳು, ಸಹಾಯಕ ಸೂಪರಿಂಟೆಂಡೆಂಟ್ ಗಳು, ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಹಂಚಿಕೆಯ ಮೇಲ್ವಿಚಾರಣೆ ನಡೆಸುತ್ತಾರೆ. ಹಂಚಿಕೆಯಲ್ಲಿ ದೋಷವಾಗಿರುವ ಕುರಿತು ಯಾವುದೇ ದೂರು ಬಂದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ದಿನಾಂಕ 18,03,2019ರಂದು ದಿನದ ಕೊನೆಯಲ್ಲಿ ಪುಸ್ತಿಕೆ ಹಂಚಿದ ಪೋಸ್ಟ್ ಮ್ಯಾನ್ ಹೆಸರು, ಹಂಚಿದ ಪುಸ್ತಕಗಳ ಸಂಖ್ಯೆ, ಇವುಗಳ ವಿವರಗಳನ್ನು ಈ ಕಚೇರಿಗೆ ಸಲ್ಲಿಸತಕ್ಕದ್ದು”
ಎಂದು ಆದೇಶ ನೀಡಲಾಗಿದೆ.
ಆದೇಶದಲ್ಲಿ ಮೈಸೂರು ವಿಭಾಗದ ಹಿರಿಯ ಸೂಪರಿಂಟೆಂಡೆಂಟ್ ಅವರ ಸಹಿ ಇದೆ.