‘ಕಾಂಟ್ರೋವರ್ಸಿ ಕ್ವೀನ್’ ಎಂದೇ ಕುಖ್ಯಾತಿ ಗಳಿಸಿರುವ ಕೇಂದ್ರ ಸಚಿವೆ ಹಾಗೂ ಮಾಜಿ ಧಾರಾವಾಹಿ ನಟಿ ಸ್ಮೃತಿ ಇರಾನಿಯ ಭಾರೀ ಭ್ರಷ್ಟಾಚಾರ ಪ್ರಕರಣ ಇದೀಗ ಚುನಾವಣೆಯ ಹೊತ್ತಲ್ಲಿ ಮೇಲೆದ್ದು ಕೂತಿದೆ.
ಹೌದು, ಸ್ಮೃತಿ ಇರಾನಿ ಅವರ ಸಂಸದ ನಿಧಿ ಬಳಕೆಯಲ್ಲಿ ಸುಮಾರು ಆರು ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. 2011ರಲ್ಲಿ ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ವೇಳೆ, ತಮ್ಮ ಸಂಸದರ ನಿಧಿಯನ್ನು ನಿಯಮ ಮೀರಿ ತಮಗೆ ಬೇಕಾದ ಸ್ವಯಂಸೇವಾ ಸಂಸ್ಥೆಯೊಂದಕ್ಕೆ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಮಂಜೂರು ಮಾಡಿದ್ದರು. ಆದರೆ, ಆ ಸಂಸ್ಥೆ ಬಹುತೇಕ ವಾಸ್ತವವಾಗಿ ಯಾವುದೇ ಕಾಮಗಾರಿಯನ್ನೂ ಮಾಡದೇ, ನಕಲಿ ದಾಖಲೆ ಸೃಷ್ಟಿಸಿ ಕಾಮಗಾರಿ ಪೂರ್ಣಗೊಳಿಸಿರುವುದಾಗಿ ವರದಿ ನೀಡಿತ್ತು. ಅಂತಹ ನಕಲಿ ದಾಖಲೆಗಳನ್ನೇ ಮಾನ್ಯ ಮಾಡಿ, ಸಚಿವೆ ತಮ್ಮ ಆಪ್ತರ ಆ ಸ್ವಯಂ ಸೇವಾ ಸಂಸ್ಥೆಗೆ ಸುಮಾರು 5.93 ಕೋಟಿ ಹಣ ಬಿಡುಗಡೆ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರಲ್ಲಿ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ದಾ ಅವರು ಗುಜರಾತ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ(ಪಿಐಎಲ್) ದಾಖಲಿಸಿದ್ದರು. ಇರಾನಿ ಅವರ ಸಂಸದರ ನಿಧಿ ದುರ್ಬಳಕೆ ಕುರಿತು ಸ್ವತಃ ಸಿಎಜಿ ಕೂಡ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಆ ವರದಿಯ ಆಧಾರದ ಮೇಲೆ ಚಾವ್ಡಾ, ಸಚಿವೆ ಸಾರ್ವಜನಿಕ ಹಣ ದುರ್ಬಳಕೆ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ತಮ್ಮ ಪಿಐಎಲ್ ನಲ್ಲಿ ಹೇಳಿದ್ದರು. ಪ್ರಕರಣದ ವಿಚಾರಣೆ ವೇಳೆ, ಆನಂದ್ ಜಿಲ್ಲೆಯ ಜಿಲ್ಲಾಧಿಕಾರಿಗಳು ಕಳೆದ ವರ್ಷದ ಫೆಬ್ರವರಿಯಲ್ಲೇ ದುರ್ಬಳಕೆಯಾಗಿರುವ ಹಣವನ್ನು ಸಂಬಂಧಪಟ್ಟ ಸಂಸ್ಥೆಯಿಂದ ವಸೂಲು ಮಾಡಲು ಆದೇಶಿಸಿದ್ದಾರೆ ಎಂದು ಕೋರ್ಟಿಗೆ ಮಾಹಿತಿ ನೀಡಿದರು. ಆದರೆ, ದುರ್ಬಳಕೆಯಾಗಿರುವ ಹಣವನ್ನು ವಸೂಲು ಮಾಡಿರುವ ಬಗ್ಗೆ ಮಾಹಿತಿ ನೀಡಿ ಎಂದು ಸರ್ಕಾರಕ್ಕೆ ಗುಜರಾತ್ ಹೈಕೋರ್ಟ್ ಗುರುವಾರ ಚಾಟಿ ಬೀಸಿದೆ.
ಈ ನಡುವೆ, ಕಾಂಗ್ರೆಸ್ ನಾಯಕರಾದ ರಾಹುಲ್ ಮತ್ತು ಪ್ರಿಯಾಂಕಾ ವಿರುದ್ಧ ಭೂ ಹಗರಣದ ಆರೋಪ ಮಾಡಿದ್ದ ಸ್ಮೃತಿ ಇರಾನಿ ವಿರುದ್ಧ ಪ್ರತಿದಾಳಿಗೆ ಈ ಹಗರಣ ಕಾಂಗ್ರೆಸ್ಗೆ ಹೊಸ ಅಸ್ತ್ರವಾಗಿ ಒದಗಿ ಬಂದಿದ್ದು, ಸಂಸದರ ನಿಧಿಯ ಭ್ರಷ್ಟಾಚಾರ ಸಾಭೀತಾಗಿರುವ ಹಿನ್ನೆಲೆಯಲ್ಲಿ ಸಚಿವೆ ಸ್ಥಾನದಿಂದ ಅವರನ್ನು ಕಿತ್ತುಹಾಕಿ, ಕೂಡಲೇ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ. ಆ ಮೂಲಕ, ರಾಹುಲ್ ಗಾಂಧಿ ಮತ್ತು ವಾದ್ರಾ ನಡುವೆ ವ್ಯವಹಾರ ಇದೆ. ಇಬ್ಬರೂ ಭ್ರಷ್ಟಾಚಾರದ ಫ್ಯಾಮಿಲಿ ಪ್ಯಾಕೇಜ್ ಎಂದು ಆರೋಪದ ಮಾಡಿದ್ದ ಸ್ಮೃತಿ ಇರಾನಿ ಅವರಿಗೆ ತಿರುಗೇಟು ನೀಡಿದೆ.
2011ರಲ್ಲಿ ಗುಜರಾತಿನ ಆನಂದ್ ಜಿಲ್ಲೆಯನ್ನು ತಮ್ಮ ನೋಡಲ್ ಜಿಲ್ಲೆಯಾಗಿ ಆಯ್ಕೆಮಾಡಿಕೊಂಡಿದ್ದ ಸ್ಮೃತಿ ಅವರು, ತಮ್ಮ ಸಂಸದರ ನಿಧಿ(ವಾರ್ಷಿಕ ಐದು ಕೋಟಿ ರೂ.)ಯಡಿ ಸ್ಮಶಾನ ನಿರ್ಮಾಣವೂ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದರು. ಆದರೆ, ನಿಯಮ ಉಲ್ಲಂಘಿಸಿ ಟೆಂಡರ್ ಕರೆಯದೆ ಕಾಮಗಾರಿ ಅನುಷ್ಠಾನ ಏಜೆನ್ಸಿಯನ್ನು ತಾವೇ ಆಯ್ಕೆ ಮಾಡಿದ್ದರು ಮತ್ತು ಸಂಘಪರಿವಾರದ ವ್ಯಕ್ತಿಗಳಿಗೆ ಸೇರಿದ ಖೇಡಾ ಶ್ರೀ ಶಾರದಾ ಮಜೂರ್ ಕಾಮ್ದಾರ್ ಕೋ ಅಪರೇಟಿವ್ ಸೊಸೈಟಿಗೆ ಸುಮಾರು 5.93 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳನ್ನು ನೀಡಿದ್ದರು. ಆ ಕುರಿತು ದೂರುಗಳ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ್ದ ಸಿಎಜಿ ತನ್ನ ವರದಿಯಲ್ಲಿ, “2015-17ರ ಅವಧಿಯಲ್ಲಿ ಸಂಸದೆ ಸ್ಮೃತಿ ಅವರು ಒಟ್ಟು 8.93 ಕೋಟಿ ರೂ. ಮೌಲ್ಯದ 276 ವಿವಿಧ ಕಾಮಗಾರಿಗಳನ್ನು ಶಿಫಾರಸು ಮಾಡಿದ್ದರು. ಆದರೆ, ಅಂದಾಜು ರೂ.5.93 ಕೋಟಿ ಮೊತ್ತದಲ್ಲಿ ಒಟ್ಟು 232 ಕಾಮಗಾರಿಗಳಿಗೆ ಶ್ರೀ ಶಾರದಾ ಮಜೂರ್ ಕಾಮ್ದಾರ್ ಸೊಸೈಟಿಗೆ ಡಿಪಿಒ ನೀಡಲಾಗಿತ್ತು. ಆದರೆ, ಈ ಎನ್ ಜಿಒಗೆ ಕಾಮಗಾರಿ ನೀಡುವ ಮೂಲಕ ಸಂಸದ ನಿಧಿ ಬಳಕೆ ನಿಯಾಮಾವಳಿ ಹಾಗೂ ಸರ್ಕಾರದ ಟೆಂಡರ್ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ” ಎಂದು ಹೇಳಿತ್ತು.
ಸ್ವಜನ ಪಕ್ಷಪಾತ, ನಿಯಮ ಉಲ್ಲಂಘನೆಯಷ್ಟೇ ಅಲ್ಲದೆ, ಇರಾನಿಯವರ ಆಪ್ತರ ಪರಿವಾರದ ಮಂದಿಯ ಆ ಎನ್ ಜಿಒ, ಕಾಮಗಾರಿ ವಿಷಯದಲ್ಲಿಯೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದೆ ಎಂಬುದನ್ನು ಕೂಡ ಸಿಎಜಿ ಹೇಳಿತ್ತು. “ಜಂಟಿ ಸಮೀಕ್ಷೆಯಲ್ಲಿ ಎನ್ ಜಿಒ ಭಾರೀ ಭ್ರಷ್ಟಾಚಾರ ನಡೆಸಿರುವುದು ಪತ್ತೆಯಾಗಿದೆ. ಎಂಟು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯಾವುದೇ ಕೆಲಸವನ್ನೂ ಮಾಡದೇ ಬಿಲ್ ಮಾಡಿಸಿಕೊಳ್ಳಲಾಗಿದೆ. 2014-17ರ ಅವಧಿಯಲ್ಲಿ ಒಟ್ಟು 232 ಕಾಮಗಾರಿಗಳಿಗೆ ಇದೇ ಎನ್ ಜಿಒಗೆ ಹೀಗೆಯೇ ಒಟ್ಟು 5.93 ಕೋಟಿ ಹಣ ಬಿಡುಗಡೆ ಮಾಡಲಾಗಿದೆ” ಎಂದು ಸಿಎಜಿ ಸ್ಪಷ್ಟವಾಗಿ ಹೇಳಿದೆ.
ಸ್ಮಶಾನದ ಹೆಸರಲ್ಲೂ ನುಂಗಿದರು!
ಹಿಂದೂ ಸಂಸ್ಕೃತಿಯನ್ನು ಗುತ್ತಿಗೆ ಹಿಡಿದವರಂತೆ ವರ್ತಿಸುವ ಸಚಿವೆ ಸ್ಮೃತಿ ಇರಾನಿ ಅವರು ಹಿಂದೂ ಸ್ಮಶಾನಗಳ ಕಾಮಗಾರಿಯ ಹೆಸರಲ್ಲಿಯೂ ಭ್ರಷ್ಟಾಚಾರ ನಡೆಸಿದ್ದಾರೆ ಎಂದರೆ ನೀವು ನಂಬಲೇಬೇಕು. ಏಕೆಂದರೆ, ಸಿಎಜಿ ವರದಿ ಪ್ರಕಾರವೇ, “ಮಂಗ್ರೋಲ್ ಎಂಬಲ್ಲಿ ಪಟೇಲ್ ಮತ್ತು ಕ್ಷತ್ರಿಯಾ ಸಮುದಾಯಗಳ ಸ್ಮಶಾನ ನಿರ್ಮಾಣಕ್ಕಾಗಿ ಕ್ರಮವಾಗಿ 16.67 ಲಕ್ಷ ಹಾಗೂ 54.86 ಲಕ್ಷ ರೂ. ಅನುದಾನವನ್ನು ಇರಾನಿಯವರು ತಮ್ಮ ಆಪ್ತ ಎನ್ ಜಿಒಗೆ ನೀಡಿದ್ದರು. ಆದರೆ, ಶೆಡ್, ಕಾಂಪೌಂಡ್, ಲಾನ್, ಬಾತ್ ರೂಂ, ಪ್ಲಾಂಟೇಶನ್ ನಿರ್ಮಾಣ ಕಾಮಗಾರಿಗಾಗಿ ಪಡೆದ ಈ ಹಣವನ್ನು ನಿಗದಿತ ಉದ್ದೇಶಕ್ಕೆ ಬಳಸಿಯೇ ಇಲ್ಲ. ಯಾವ ಕಾಮಗಾರಿಗಳನ್ನೂ ಮಾಡಿಲ್ಲ. ಇತರೆ ದಾನಿಗಳಿಂದ ನಿರ್ಮಿಸಲಾದ ಶೆಡ್, ಗೋಡೆಗಳ ಚಿತ್ರವನ್ನು ಲಗತ್ತಿಸಿ ಬಿಲ್ ಮಾಡಿಕೊಳ್ಳಲಾಗಿದೆ”.
ವಿಶೇಷವೆಂದರೆ, ಕಟ್ಟಡ ಕಾರ್ಮಿಕರ ಹೆಸರಿನಲ್ಲಿರುವ ಶ್ರೀ ಶಾರದಾ ಮಜೂರ್ ಕಾಮ್ದಾರ್ ಕೋ ಅಪರೇಟಿವ್ ಸೊಸೈಟಿಯಲ್ಲಿ ಇರುವ ಪದಾಧಿಕಾರಿಗಳು, ಸದಸ್ಯರೆಲ್ಲರೂ ಬಿಜೆಪಿ ಸದಸ್ಯರು ಹಾಗೂ ಸಂಘಪರಿವಾರದ ಮಂದಿ ಎಂದು ಕಾಂಗ್ರೆಸ್ ಹೇಳಿದ್ದು, ಸ್ಮಶಾನದ ಹೆಸರಲ್ಲಿಯೂ ಸಾರ್ವಜನಿಕ ಹಣವನ್ನು ಲೂಟಿ ಮಾಡಿರುವ ಸಚಿವೆ ಸ್ಮೃತಿ ಇರಾನಿ ಇದೀಗ ತಮ್ಮ ಇಂತಹ ಭ್ರಷ್ಟಾಚಾರವನ್ನು ಮರೆಮಾಚುವ ಪ್ರಯತ್ನವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಆಧಾರರಹಿತ ಆರೋಪ ಮಾಡಿರುವುದು ನಾಚಿಕೆಗೇಡು ಎಂದು ಹೇಳಿದೆ.
ಈ ನಡುವೆ, 2014ರಲ್ಲಿ ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿದು ಸೋಲುಕಂಡಿದ್ದ ಸ್ಮೃತಿ ಇರಾನಿ, ಈ ಬಾರಿಯೂ ಅಮೇಥಿಯಲ್ಲಿ ಅದೃಷ್ಟಪರೀಕ್ಷೆಗೆ ಸಜ್ಜಾಗಿದ್ದಾರೆ. ಹಾಗಾಗಿ, ಅಮೇಥಿಯ ಕಣದಲ್ಲಿ ಈ ಬಾರಿ ಸ್ಮೃತಿ ಇರಾನಿಯ ಬಹುಕೋಟಿ ಭ್ರಷ್ಟಾಚಾರದ ಸದ್ದು ಜೋರಾಗಲಿದೆ.