ಅತ್ತ ಅಪರೇಷನ್ ಕಮಲದ ಪ್ರತಿಫಲವೋ ಎಂಬಂತೆ ಕಾಂಗ್ರೆಸ್ ಪಾಳಯದಿಂದ ಉಮೇಶ್ ಜಾಧವ್ ಬಿಜೆಪಿ ಸೇರಿದ ಒಂದೆರಡು ವಾರದಲ್ಲಿ ಕಲಬುರಗಿ ಬಿಜೆಪಿಯಲ್ಲಿ ತೀವ್ರ ಅಸಮಧಾನ ಸ್ಫೋಟಗೊಂಡಿದೆ. ಬಿಜೆಪಿ ಹಿರಿಯ ನಾಯಕ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಬಿ.,ಶಾಣಪ್ಪ ತಾವು ಬಿಜೆಪಿ ತೊರೆಯುವುದಾಗಿ ಘೋಷಿಸಿದ್ದಾರೆ.
ಈ ಸಂಬಂಧ ಶನಿವಾರ ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ರಾಜ್ಯ ನಾಯಕರ ವಿರುದ್ಧ ತಮ್ಮ ಅಸಮಧಾನ ಹೊರ ಹಾಕಿದ ಶಾಣಪ್ಪ, ‘ಯಡಿಯೂರಪ್ಪ ಉಮೇಶ್ ಜಾಧವ್ ಅವರನ್ನು ಬಿಜೆಪಿಗೆ ಕರೆತರುವ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನಾವಿಲ್ಲಿ ನಾಮಕಾವಸ್ಥೆ ನಾಯಕರಾಗಿ ಉಳಿಯಬೇಕೇ? ಸಧ್ಯ ಬಿಜೆಪಿಯಿಂದ ಸಂಬಂಧ ಕಡಿದುಕೊಳ್ಳುತ್ತೇನೆ, ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ, ‘ನಾನು ಯಾವ ಪಕ್ಷಕ್ಕೂ ಈಗಲೇ” ಸೇರುವುದಿಲ್ಲ ಎಂದೂ ತಿಳಿಸಿದರು.
“ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ, ಬಿಜೆಪಿ ನಾಯಕರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಯಡಿಯೂರಪ್ಪ ಅವರಿಂದ ಬಿಜೆಪಿ ಪಕ್ಷಕ್ಕೆ ಸಾಕಷ್ಟು ಮುಜುಗರವಾಗಿದೆ. ಅಪರೇಷನ್ ಕಮಲ ಆರೋಪ ಅವರ ಮೇಲೆ ಕೇಳಿ ಬಂದಾಗ ಯಡಿಯೂರಪ್ಪ ದೊಡ್ಡ ಮನುಷ್ಯ, ಇಂತಹ ಕೆಲಸ ಮಾಡುವವರಲ್ಲ ಎಂದು ನಂಬಿದ್ದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಆಡಿಯೋ ಬಿಡುಗಡೆ ಮಾಡಿದಾಗ ದಿಗಿಲಾಯಿತು. ಇದು ನನ್ನ ರಾಜಕೀಯ ಜೀವನದಲ್ಲಿ ಅತ್ಯಂತ ನೋವಿನ ಸಂಗತಿ” ಎಂದು ಬೇಸರದಿಂದ ಹೇಳಿದರು.
ಬಿಜೆಪಿ ಮುಖಂಡರು ದಲಿತ ಮನೆಯಲ್ಲಿ ಭೋಜನ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕುರಿತೂ ಅಸಮಧಾನ ವ್ಯಕ್ತಪಡಿಸಿದ ಶಾಣಪ್ಪ, ‘ಇದರಿಂದ ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿತ್ತು. ಆಂತರಿಕವಾಗಿ ಇದರ ಬಗ್ಗೆ ತಕರಾರು ಎತ್ತಿದರೂ ಪ್ರಯೋಜನವಾಗಲಿಲ್ಲ” ಎಂದು ಹೇಳಿದ್ದಲ್ಲದೇ “ಬಿಜೆಪಿಗೆ ದಲಿತ ಅಭಿವೃದ್ಧಿ ಬೇಕಿಲ್ಲ” ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಮಾಜಿ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಹಿರಿಯ ಮುಖಂಡ ಕೆ.ಬಿ.ಶಾಣಪ್ಪ ಬಿಜೆಪಿಯನ್ನು ತೊರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕೆ.ಬಿ.ಶಾಣಪ್ಪ ಅವರೊಂದಿಗೆ ಬಿಜೆಪಿಯ ಇನ್ನಿಬ್ಬರು ಮುಖಂಡರಾದ ಮಾಜಿ ಸಚಿವ ಬಾಬುರಾವ್ ಚೌಹಾಣ್ ಮತ್ತು ಗುರುಮಠಕಲ್ ಬಿಜೆಪಿ ಮುಖಂಡ ಶ್ಯಾಮರಾವ್ ಪ್ಯಾಟಿ ಸಹ ಬಿಜೆಪಿ ತೊರೆಯಲು ನಿರ್ಧರಿಸಿದ್ದಾರೆ. ಶ್ಯಾಮರಾವ್ ಪ್ಯಾಟಿ ಅವರು ಈ ಹಿಂದೆ ಗುರುಮಠಕಲ್ ಕ್ಷೇತ್ರದಿಂದ ಖರ್ಗೆ ವಿರುದ್ಧ ಸ್ಪರ್ಧಿಸಿದ್ದರು.
ಲೋಕಸಭಾ ಚುನಾವಣೆ ತಿಂಗಳಿರುವಂತೆಯೇ ಕಾಂಗ್ರೆಸ್, ಬಿಜೆಪಿ ಮುಖಂಡರು ಪಕ್ಷ ತೊರೆದು ಮತ್ತೊಂದು ಪಕ್ಷ ಸೇರುವ ಇಲ್ಲವೇ ಅಸಮಧಾನಗೊಳ್ಳುವ ವಿದ್ಯಮಾನ ದಿನದಿಂದ ದಿನಕ್ಕೆ ಬಿರುಸಾಗಿ ನಡೆಯುತ್ತಿರುವುದನ್ನು ಗಮನಿಸಬಹುದು.