ಇಂದು ಸಾಮಾಜಿಕ ಮಾಧ್ಯಮದ ಜೊತೆ ಡೋಂಗಿ ಸುದ್ದಿಗಳೂ ಮಿತಿಮೀರಿ ಹೆಚ್ಚುತ್ತಿರುವಾಗಲೇ ಯಾವುದು ಸತ್ಯ, ಯಾವುದು ಮಿಥ್ಯ ಎಂಬುದು ಬಹುತೇಕ ಸಂದರ್ಭಗಳಲ್ಲಿ ಬಲ್ಲವರಿಗೂ ತಿಳಿಯದಂತಾಗಿಬಿಡುತ್ತದೆ. ನಮ್ಮನ್ನು ನಾವೇ ನಂಬದಷ್ಟು ಮಟ್ಟಿಗೆ ಸುಳ್ಳುಸುದ್ದಿಗಳ, ನಕಲಿ ಪ್ರಪಂಚದ ಹಾವಳಿ ಈಗ ಕಾಡುತ್ತಿದೆ. ಚುನಾವಣೆಗಳು ಬಂತೆಂದರಂತೂ ಅವುಗಳದ್ದೇ ಕರಾಳ ರಾಜ್ಯಭಾರ…
ಭಾರತದ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 14,500 ಕೋಟಿ ರೂಪಾಯಿಗಳಷ್ಟು ವಂಚಿಸಿ ದೇಶಭ್ರಷ್ಟನಾಗಿ ಬ್ರಿಟನ್ ಗೆ ಓಡಿಹೋಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಇತ್ತೀಚೆಗೆ ಲಂಡನ್ ರಸ್ತೆಗಳಲ್ಲಿ ರಾಜಾರೋಷವಾಗಿ ಕಾಣಿಸಿಕೊಂಡದ್ದು ಸುದ್ದಿಯಾಯಿತು. ತದನಂತರ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವೊಂದು ಹರಿದಾಡುತ್ತಿದೆ. ಅದರಲ್ಲಿ, ಭಾರತೀಯ ರಿಸರ್ವ್ ಬ್ಯಾಂಕಿನ ನಿವೃತ್ತ ಗವರ್ನರ್ ರಘುರಾಮ್ ರಾಜನ್ ಅವರು ಹೇಳಿದ್ದಾರೆ ಎಂಬಂತೆ ತೋರಿಸುವ ಒಂದು ಹೇಳಿಕೆಯಿದೆ. “ನೀರವ್ ಮೋದಿಯ ವಂಚನೆಯ ಬಗ್ಗೆ ನಾನು ರಾಹುಲ್ ಗಾಂಧಿ ಮತ್ತು ಪಿ.ಚಿದಂಬರಂ ಅವರುಗಳನ್ನು ಎಚ್ಚರಿಸಿದ್ದೆ. ಆದರೆ ಅವರಿಬ್ಬರೂ ಮೌನ ವಹಿಸುವಂತೆ ನನ್ನ ಮೇಲೆ ಒತ್ತಡ ಹೇರಿ, ಮೇ 2014ರ ವರೆಗೂ ಅವನಿಗೆ ಸಾಲಗಳನ್ನು ಅನುಮೋದಿಸುತ್ತಲೇ ಬಂದರು. ಪಂಜಾಬ್ ಬ್ಯಾಂಕ್ ಹಗರಣಕ್ಕೆ ಈಗ ನನ್ನನ್ನು ದೂರುವುದೇಕೆ?” ಎಂದು ಸ್ವತಃ ರಘುರಾಂ ರಾಜನ್ ಹೇಳುವಂತೆ, ಅವರ ಭಾವಚಿತ್ರವನ್ನು ಜೋಡಿಸಲಾಗಿದೆ.
ಆದರೆ ಈ ಚಿತ್ರದ್ದಲ್ಲಿರುವ ಹೇಳಿಕೆಯ ಬೆನ್ನು ಹತ್ತಿ ತನಿಖೆ ನಡೆಸಿದ ಇಂಡಿಯಾ ಟುಡೇ ಘಟಕವು ಈ ಪೋಸ್ಟ್ ನ ಸತ್ಯಾಸತ್ಯತೆಯನ್ನು ಪರಾಮರ್ಶೆಗೊಳಪಡಿಸಿ ನಿಜಾಂಶವನ್ನು ತೆರೆದಿಟ್ಟಿದೆ. ಈ ಚಿತ್ರ ಈಗ ಹರಿದಾಡುತ್ತಿದ್ದರೂ ಬಹಳ ಹಿಂದೆಯೇ ಇದನ್ನು ಸೃಷ್ಟಿಸಲಾಗಿದೆ. ಇದರ ಬಗ್ಗೆ ಈಗಾಗಲೇ ಬೂಮ್ ಮತ್ತು ನ್ಯೂಸ್ 18 ತಾಣಗಳಲ್ಲಿ ಖುದ್ದಾಗಿ ರಘುರಾಮ್ ರಾಜನ್ ಸ್ಪಷ್ಟನೆ ನೀಡಿದ್ದಾರೆ. ಇದು ತಮ್ಮ ಹೇಳಿಕೆ ಅಲ್ಲ, ಯಾರೋ ಬೇಕೇಂದೇ ಇಂತಹ ಸುಳ್ಳು ಹೇಳಿಕೆ ಸೃಷ್ಟಿಸಿದ್ದಾರೆ ಎಂದು ಹೇಳಿರುವ ಅವರು ತಮ್ಮ ಹೆಸರಿನಲ್ಲಿ ಹರಿದಾಡುವ ಡೋಂಗಿ ಸುದ್ದಿಯನ್ನು ನಿರಾಕರಿಸಿದ್ದಾರೆ.
ಒಂದು ವರ್ಷದಿಂದಲೂ ಇದು ಸಾಮಾಜಿಕ ಜಾಲತಾಣಗಳಲ್ಲಿ ಸಂಚರಿಸುತ್ತಲೇ ಇದೆ. ಕೆಲವರು ಢೋಂಗಿ ಸುದ್ದಿಗಳ ಕಾರ್ಖಾನೆಯಾದ ಪೋಸ್ಟ್ ಕಾರ್ಡ್ ನ ಲೋಗೋ ಇರುವ ಇಮೇಜನ್ನು ಹಂಚಿದರೆ, ಇನ್ನು ಕೆಲವರು ಇದನ್ನು ನಿಜವೆಂದೇ ಭಾವಿಸಿದ್ದೂ ಇದೆ ಎಂದು ಬೂಮ್ ಸಂಸ್ಥೆ ಹೇಳುತ್ತದೆ.

ಇದೇ ಸುದ್ದಿಗೆ ಸಂಬಂಧಿಸಿದಂತೆ ಬೂಮ್ 2018ರ ಮಾರ್ಚ್ 10ರಂದು ರಘುರಾಮ್ ರಾಜನ್ ಅವರಿಂದ ಈಮೇಲ್ ಮೂಲಕ ವಿಶೇಷ ಪ್ರತಿಕ್ರಿಯೆ ಪಡೆದು ಪ್ರಕಟಿಸಿ, 2019ರ ಮಾರ್ಚ್ 13ರಂದು ಅಪ್ಡೇಟ್ ಮಾಡಿದೆ. ಮೇಲೆ ಹೇಳಿದ ಪೋಸ್ಟನ್ನು ವಾಟ್ಸಪ್ ನಲ್ಲಿ ಹರಿಬಿಡಲಾಗಿದೆ ಎನ್ನುತ್ತಾ ಹಲವು ಓದುಗರು ಬೂಮ್ ಸುದ್ದಿ ಸಂಸ್ಥೆಗೆ ಕಳುಹಿಸಿದ್ದರೆಂದು ತಿಳಿಸಲಾಗಿದೆ. ಇದರ ಸಂಬಂಧವಾಗಿ ವಿಶೇಷ ಈ-ಮೇಲ್ ಮೂಲಕ ರಘುರಾಮ್ ರಾಜನ್ ಅವರು,
“ಈ ಹೇಳಿಕೆ ತೀರಾ ಅಸಂಬದ್ಧವಾದುದು, ಯಾವುದೋ ಪೂರ್ವಾಗ್ರಹದಿಂದ ಹೀಗೆ ಮಾಡಲಾಗುತ್ತಿದೆ. ಇದನ್ನು ಕೇಳಿಸಿಕೊಳ್ಳಲು ಇಚ್ಛಿಸುವವರಿಗೆ ನಾನು ಹೇಳಿದ್ದೇನೆಂದು ನೀವು ಹೇಳಬಹುದಷ್ಟೇ”
ಎಂದು ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿ ಅದು ತಮ್ಮ ಹೇಳಿಕೆ ಎಂಬುದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
“ಸಾಮಾಜಿಕ ಮಾಧ್ಯಮವು ಎಲ್ಲಾ ಹೊಲಸನ್ನೂ ನನ್ನ ಕಡೆ ಎಸೆಯುವ ಪ್ರವೃತ್ತಿ ಹೊಂದಿದೆ” ಎಂದು ರಘುರಾಮ್ ರಾಜನ್ ಅವರು ಸಾಮಾಜಿಕ ಜಾಲತಾಣಗಳಿಗೆ ಚಾಟಿ ಬೀಸಿರುವ ಸುದ್ದಿ News18.com ನಲ್ಲಿ 2018ರ ಮಾರ್ಚ್ 13ರಂದು ಪ್ರಕಟವಾಗಿದೆ. ಅವರು ಅಂದು ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಾ,
“ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ಬಂಗಾರದ ಯೋಜನೆಯು 2014ರ ಮೇ ಮತ್ತು ನವೆಂಬರ್ ನಡುವೆ ಚಾಲ್ತಿಯಲ್ಲಿದ್ದದ್ದು. (ನೀರವ್ ಮೋದಿಯ ವಿಚಾರದಲ್ಲಿ) ಈಗೀಗ ಬಹಳಷ್ಟು ಆರೋಪ ಹೊರಿಸುವುದು ನಡೆಯುತ್ತಿದೆ, ಆದರೆ ವಂಚನೆ ಏಕೆ ನಡೆಯಿತು ಮತ್ತು ವ್ಯವಸ್ಥೆಯಲ್ಲಿ ಏನು ನ್ಯೂನತೆ ಇದೆ ಎಂಬುದರ ಬಗ್ಗೆ ಗಮನ ಹರಿಸುವುದು ಮುಖ್ಯ. ಏನೇ ಆಗಲಿ, ತನಿಖೆಯು ಈ ಎಲ್ಲಾ ವಿವರಗಳ ಒಳಹೊಕ್ಕುತ್ತದೆ ಮತ್ತು ಎಲ್ಲಾ ಅಂಶಗಳನ್ನೂ ಪರೀಕ್ಷೆಗೊಳಪಡಿಸುತ್ತದೆ ಎಂಬ ವಿಶ್ವಾಸ ನನ್ನಲ್ಲಿದೆ.”
ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ.
ಅಲ್ಲದೆ, ಯುಪಿಎ ಆಡಳಿತಾವಧಿಯಲ್ಲಿ ಸರ್ಕಾರದ ಯಾವುದೇ ಪ್ರಮುಖ ಹುದ್ದೆಯನ್ನೂ ರಾಹುಲ್ ಗಾಂಧಿ ಹೊಂದಿರಲಿಲ್ಲ. ಅವರು ಸಚಿವರಾಗಿರಲಿಲ್ಲ. ರಿಸರ್ವ್ ಬ್ಯಾಂಕಿನ ಗವರ್ನರ್ ಒಬ್ಬರು ಒಂದು ಪಕ್ಷದ ನಾಯಕರಿಗೆ ಬ್ಯಾಂಕ್ ನೊಳಗಿನ ವಂಚನೆಯ ಬಗ್ಗೆ ತಿಳಿಸುವುದೆಂದರೆ ಅದು ಹಾಸ್ಯಾಸ್ಪದವೇ. ಅಕಸ್ಮಾತ್ ಒಂದು ವೇಳೆ ಹಾಗೇನಾದರೂ ಇದ್ದರೂ ಸಹ, ಅದನ್ನು ಸಾರ್ವಜನಿಕವಾಗಿ ಮಾತನಾಡುವುದು ಆತ್ಮಹತ್ಯೆ ಮಾಡಿಕೊಂಡಂತೆಯೇ!
ಈ ಪೋಸ್ಟ್ ನ ಉದ್ದೇಶ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ನೀರವ್ ಮೋದಿಯ ವಂಚನೆ ಪ್ರಕರಣ ಮತ್ತು ಆತ ತಲೆಮರೆಸಿಕೊಂಡು ದೇಶ ಬಿಟ್ಟು ಹೋದ ಸಂಗತಿಯನ್ನು, ಅವನು ಪರಾರಿಯಾಗುವಾಗ ಅಧಿಕಾರದಲ್ಲಿದ್ದು ಅದರ ಹೊಣೆಯಾಗಬೇಕಾದ ನರೇಂದ್ರ ಮೋದಿಯನ್ನು ಬಚಾವು ಮಾಡಿ ರಾಹುಲ್ ಗಾಂಧಿ ಮತ್ತು ಯುಪಿಎ-2 ಸರ್ಕಾರದ ಮೇಲೆ ಎತ್ತಿ ಹಾಕಿಬಿಡುವುದು.. ಚುನಾವಣೆಯ ಸಂದರ್ಭದಲ್ಲಿ ಮತ್ತು ನೀರವ್ ಮೋದಿಯ ವಿಷಯ ಮತ್ತೆ ಮುನ್ನೆಲೆಗೆ ಬಂದೊಡನೆ ಈ ಸುಳ್ಳು ಸುದ್ದಿಯನ್ನು ಹರಡುವುದರಲ್ಲಿ ರಾಜಕೀಯ ಕುತಂತ್ರ ಮತ್ತು ದುರುದ್ದೇಶ ಅಡಗಿವೆ ಎಂಬುದು ದಡ್ಡರಿಗೂ ತಿಳಿಯುತ್ತದೆ.
ರಘುರಾಮ್ ರಾಮ್ ರಾಜನ್ ಅವರೇ ಸ್ವತಃ ಹೇಳಿಕೆಯನ್ನು ನಿರಾಕರಿಸುವ ಅಧಿಕೃತ ಮಾಹಿತಿಯು ಈ ಪೋಸ್ಟ್ ಢೋಂಗಿಯೆಂದು ಮತ್ತೊಮ್ಮೆ ಸಾಬೀತುಪಡಿಸುತ್ತದೆ.
ಅಷ್ಟೇ ಅಲ್ಲ, ರಘುರಾಮ್ ರಾಜನ್ ಅವರು ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಬೂತ್ ಸ್ಕೂಲ್ ಆಫ್ ಬಿಸಿನೆಸ್ ನಲ್ಲಿ ಉಪನ್ಯಾಸಕರಾಗಿ ಚಿಕಾಗೊ ಗೆ ತೆರಳಿದಾಗ, ಅವರನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ನ ಗವರ್ನರ್ ಆಗಿ ಕೂಡ ಭಾರತದ ಸಾಮಾಜಿಕ ಜಾಲತಾಣಗಳು ನೇಮಕ ಮಾಡಿಬಿಟ್ಟವು! ಯಾರಿಗೆ ದಕ್ಕುತ್ತದೆ ಇಂತಹ ಪುಕ್ಸಟ್ಟೆ ಹುದ್ದೆಗಳು ಹೇಳಿ… ಡೋಂಗಿ ಸುದ್ದಿಯ ಈ ಪ್ರಪಂಚದಲ್ಲಿ!