ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮಕೊನೆಯ ಬಜೆಟ್ ನಲ್ಲಿ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ ಘೋಷಿಸಿ ರೈತರ ಖಾತೆಗೆ ದಿನಕ್ಕೆ 17 ರೂಪಾಯಿಯಂತೆ 6 ಸಾವಿರ ರೂಪಾಯಿಗಳನ್ನು ಎರಡೆರಡು ಸಾವಿರದ ಮೂರು ಕಂತುಗಳಲ್ಲಿ ಜಮಾ ಮಾಡುವ ಯೋಜನೆ ಜಾರಿಗೊಳಿಸಿದ್ದರು. ಆದರೆ ಈ ಯೋಜನೆಯನ್ನು ತಿರಸ್ಕರಿಸಿ ರೈತರು ಘೋಷಣೆ ಹೊರಡಿಸಿದ್ದಾರೆ
‘ನಾಲ್ಕು ವರ್ಷಗಳಿಂದ ರೈತರ ಬಗ್ಗೆ ಕಿಂಚಿತ್ತೂ ಯೋಚಿಸದೇ ಲೋಕಸಭಾ ಚುನಾವಣೆಯಲ್ಲಿ ರೈತರ ಮತ ಗಳಿಸಲು ಮಾಡಿರುವ ತಂತ್ರವೇ ಈ ಖಾತೆಗೆ ಹಣ ಹಾಕುವ ತಂತ್ರ, ಇದರಿಂದ ದೇಶದ ರೈತರ ಸಮಸ್ಯೆಗೆ ಎಂದಿಗೂ ಪರಿಹಾರ ಸಿಗದು’ ಎಂದು ಕಿಡಿಕಾರಿದ್ದಾರೆ.
ಸುಮಾರು 40 ರೈತರ ಒಕ್ಕೂಟಗಳು ಸೇರಿ ರೈತರ ಸಮಸ್ಯೆಗಳ ಕುರಿತು ಚರ್ಚಸಿಲು ಎರಡು ದಿನಗಳ ಕಾಲ ರಾಜಧಾನಿ ದೆಹಲಿಯಲ್ಲಿ ನಡೆಸಿದ ರೈತರ ಅಖಿಲ ಭಾರತ ಸಂಯೋಜನಾ ಸಮಿತಿ ಸಭೆಯಲ್ಲಿ ಮೋದಿಯ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ತಿರಸ್ಕರಿಸುವ ನಿರ್ಧಾರವನ್ನು ಕೈಗೊಂಡು ಘೋಷಿಸಿದ್ದಾರೆ.
ಪ್ರಧಾನಿ ಮೋದಿ ಅವರ ಐದು ವರ್ಷದ ಆಡಳಿತದಲ್ಲಿ ರೈತ ಸಮುದಾಯದ ಬಗ್ಗೆ ಕೈಗೊಂಡ ನಿರ್ಧಾರಗಳು ಹಾಗೂ ನೀತಿ, ಯೋಜನೆಗಳು ಬಹಳ ಅಸಮಧಾನವನ್ನುಂಟು ಮಾಡಿದೆ. ಆದ್ದರಿಂದ ಈ ಲೋಕಸಭಾ ಚುನಾವಣೆಯಲ್ಲಿ ರೈತರ ಸಮಸ್ಯೆಗಳನ್ನು ಬಹುದೊಡ್ಡ ವಿಷಯವಾಗಿ ಪರಿಣಮಿಸಬೇಕಿದೆ ಎಂದು ಗುರುವಾರ ಮುಕ್ತಾಯಗೊಂಡ ರೈತ ಒಕ್ಕೂಟಗಳ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಇತ್ತೀಚೆಗೆ ನಡೆದ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಆದ ಮುಖಭಂಗ, ಹಿನ್ನಡೆಯನ್ನು ಗಮನಿಸಿ ಪ್ರಧಾನಿ ಮೋದಿ ಸರ್ಕಾರ ಇದೀಗ ಲೋಕಸಭಾ ಚುನಾವಣೆಯಲ್ಲಿ ಇಂತಹ ಮತ್ತೊಂದು ಹಿನ್ನಡೆಯನ್ನು ತಡೆಯಲು ಚುನಾವಣಾ ತಂತ್ರವಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಇಂತಹ ಷಡ್ಯಂತ್ರಗಳಿಗೆ ರೈತರು ಮರುಳಾಗುವುದಿಲ್ಲ ಎಂದು ಮಹಾರಾಷ್ಟ್ರದ ರೈತ ನಾಯಕ ವಿಜಯ ಜವಂಡಿಯಾ ಜಂಟಿ ಸಮ್ಮೇಳನದಲ್ಲಿ ಹೇಳಿದ್ದಾರೆ.
2020ರವರೆಗೆ ಅನ್ವಯವಾಗುವಂತೆ 12 ಲಕ್ಷ ರೈತರಿಗೆ 75 ಸಾವಿರ ಕೋಟಿಯ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಪ್ರಧಾನಿ ಮೋದಿ ಅವರು ಫೆಬ್ರವರಿ 24ರಂದು ಲಖನೌದಲ್ಲಿ ಚಾಲನೆ ನೀಡಿದ್ದರು.
ದೇಶದಲ್ಲಿ ರೈತರ ಸಮಸ್ಯೆಗಳು ಉಲ್ಬಣಗೊಂಡಿದ್ದರೂ ಮೋದಿ ಸರ್ಕಾರ ರೈತರಿಗೆ ಈವರೆಗೆ ಯಾವುದೇ ಯೋಜನೆಗಳನ್ನು ನೀಡಿರಲಿಲ್ಲ. ಇದರ ಪರಿಣಾಮವಾಗಿ ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ರಾಜಸ್ತಾನದ ವಿಧಾನಸಭಾ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಮೋದಿ ರೈತರ ಕಣ್ಣೀರು ಒರೆಸಲು ಈ ಯೋಜನೆ ಜಾರಿಗೆ ತಂದಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದೆ.
ಕೇಂದ್ರ ಸರ್ಕಾರ ಈವರೆಗೂ ಯೋಜನೆಯಡಿ 2.6ಕೋಟಿ ರೈತರ ಖಾತೆಗೆ 5,215 ಕೋಟಿ ಹಣವನ್ನು ವರ್ಗಾಯಿಸಿದೆ. ಎಷ್ಟೋ ಕಡೆಗಳಲ್ಲಿ ರೈತರ ಖಾತೆಗೆ ಬಂದ ಹಣ ಕ್ಷಣಾರ್ಧದಲ್ಲಿ ವಾಪಾಸು ಹೋಗಿರುವ ಪ್ರಕರಣಗಳೂ ವರದಿಯಾಗಿವೆ.
“ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೂಡಲೇ ರದ್ದು ಮಾಡಲಿ. ಈ- ಯೋಜನೆಯಿಂದ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ, ರೈತರಿಗೂ ಇದು ಬೇಕಿಲ್ಲ. ರೈತರಿಗೆ ಅಗತ್ಯವಿರುವುದು ಅವರ ಬೆಳೆಗೆ ತಕ್ಕ ನ್ಯಾಯಯುತ ಬೆಲೆ ಅಷ್ಟೇ. ಆದರೆ ಸರ್ಕಾರ ಈವರೆಗೂ ನ್ಯಾಯಯುತ ಬೆಲೆಯ ಬಗ್ಗೆ ಪ್ರಸ್ತಾಪವೂ ಮಾಡಿಲ್ಲ, ಭರವಸೆಯೂ ನೀಡಿಲ್ಲ,” – ಯದುವೀರ್ ಸಿಂಗ್ , ಭಾರತೀಯ ಕಿಸಾನ್ ಒಕ್ಕೂಟದ ಮುಖಂಡ
ಪ್ರಸ್ತುತ ಭಾರತ ಇದೀಗ ಚೀನಾ, ಆಸ್ಟ್ರೇಲಿಯಾ ಮತ್ತು ಏಷ್ಯಾ ದೇಶಗಳು ಸೇರಿದಂತೆ 16 ದೇಶಗಳೊಂದಿಗೆ ಮಾಡಿಕೊಳ್ಳಲು ಸಿದ್ಧವಿರುವ ವಾಣಿಜ್ಯ ಒಪ್ಪಂದವಾದ ಪ್ರಾಂತೀಯ ವಿಸ್ತೃತ ಆರ್ಥಿಕ ಸಹಭಾಗಿತ್ವ (ಆರ್ ಸಿಇಪಿ)ವನ್ನು ರೈತರ ಒಕ್ಕೂಟ ನಡೆಸಿದ ಸಭೆ ಸರ್ವಾನುಮತದಿಂದ ನಿರಾಕರಿಸಿದೆ.
ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಒಪ್ಪಂದದಿಂದ ಭಾರತದ ರೈತ ಸಮುದಾಯ ಸಂಪೂರ್ಣವಾಗಿ ವಿನಾಶವಾಗಲಿದೆ ಮತ್ತು ಅತಿ ಕಡಿಮೆ ಬೆಲೆಗೆ ವಿದೇಶದಿಂದ ಆಹಾರ ಪದಾರ್ಥಗಳು ಆಮದು ಮಾಡಿಕೊಳ್ಳಲು ಈ ಒಪ್ಪಂದ ಅನುವು ಮಾಡಿಕೊಡುತ್ತದೆ ಎಂದು ಪಂಜಾಬ್ ನ ರೈತ ನಾಯಕ ಅಜ್ಮರ ಸಿಂಗ್ ಲಖ್ವಾಲ್ ಎಚ್ಚರಿಸಿದ್ದಾರೆ.
ಕರ್ನಾಟಕ ರಾಜ್ಯ ಸಂಘದ ಮುಖಂಡ ಚಾಮರಸ ಮಾಲಿ ಪಾಟೀಲ್, “ಆರ್ ಸಿಇಪಿ ಒಪ್ಪಂದಕ್ಕೆ ಭಾರತದ ಸಹಿ ಹಾಕದಂತೆ ಒತ್ತಡ ತರಲು ಉತ್ತರ ಹಾಗೂ ಭಾರತದ ಎಲ್ಲಾ ರೈತ ಒಕ್ಕೂಟ, ಸಂಘ, ಸಮುದಾಯಗಳು ಕೈಜೋಡಿಸಿದ್ದು, ಲೋಕಸಭಾ ಚುನಾವಣೆಯ ನಂತರ ದೇಶದಲ್ಲಿ ನೂತನ ಸರ್ಕಾರವನ್ನು ಆಡಳಿತಕ್ಕೆ ತರಲು ನಮ್ಮ ಎಲ್ಲಾ ಪ್ರಯತ್ನವನ್ನೂ ಮಾಡುತ್ತೇವೆ ಎಂದಿದ್ದಾರೆ.
ಇದೇ ವೇಳೆ ಸಭೆಯಲ್ಲಿ ರೈತರ ಒಕ್ಕೂಟ, ಕನಿಷ್ಠ ಬೆಂಬಲ ಬೆಲೆ, ಎಲ್ಲಾ ರೈತರ ಸಾಲಮನ್ನಾ, ರೈತರಿಗೆ ಕನಿಷ್ಠ 5ರಿಂಧ 10 ಸಾವಿರ ಮಾಸಿಕ ವೇತನ 18 ಬೇಡಿಕೆಗಳನ್ನು ಮುಂಡಿಟ್ಟಿದ್ದು, ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಈ ಬೇಡಿಕೆಗಳನ್ನು ಸೇರಿಸಲು ಮನವಿ ಮಾಡಿದೆ.