ಅಚ್ಚರಿ ಎನಿಸುವ ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಜೆಡಿಎಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ವಕ್ತಾರ ಡ್ಯಾನಿಶ್ ಆಲಿ (54) ಜೆಡಿಎಸ್ ಪಕ್ಷವನ್ನು ತೊರೆದು ಮಾಯಾವತಿಯವರ ಬಿಎಸ್ಪಿ ಪಕ್ಷ ಸೇರಿದ್ದಾರೆ.
‘ಉತ್ತರ ಪ್ರದೇಶದಲ್ಲಿ ನನ್ನ ಸಾಕಷ್ಟು ಪ್ರಯತ್ನದ ನಡುವೆಯೂ ಜೆಡಿಎಸ್ ಪಕ್ಷವನ್ನು ಬೆಳೆಸಲು ಸಾಧ್ಯವಾಗಿಲ್ಲ. ದೇವೇಗೌಡಾಜೀಯವರ ‘ಆಶೀರ್ವಾದ’ಪಡೆದೇ ನಾನು ಬಿ ಎಸ್ ಪಿ ಸೇರುತ್ತಿದ್ದೇನೆ. ಇಂದು ನಮ್ಮ ಸಂವಿಧಾನವೇ ಅಪಾಯದಲ್ಲಿರುವಾಗ ಬಲವಾದ ನಾಯಕತ್ವದೊಂದಿಗೆ ಸೇರಿ ಹೋರಾಡುವ ಅಗತ್ಯವಿದೆ’ ಎಂದು ಅಲಿ ಎಎನ್ಐ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.
ಡ್ಯಾನಿಶ್ ಅಲಿಯವರು ತಾವು ಬಿಎಸ್ಪಿ ಸೇರಿರುವುದನ್ನು ಘೋಷಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ‘ನನ್ನ ಹಾಗೂ ನಮ್ಮ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಸಮ್ಮತಿಯಿಂದಲೇ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಆಲಿಯವರು ಬಿಎಸ್ಪಿ ಸೇರಿದ್ದಾರೆ. ಇದು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ಪಡೆಯುವ ಉದ್ದೇಶದಿಂದ ಎರಡೂ ಪಕ್ಷಗಳ ನಡುವೆ ನಡೆದಿರುವ ಶುದ್ಧ ರಾಜಕೀಯ ಏರ್ಪಾಡಾಗಿದೆ” ಎಂದು ತಿಳಿಸಿದ್ದಾರೆ.
Danish Ali, the JDS General Secretary, has joined BSP in consent with me and our national president Sri HD Devegowda in a purely political arrangement between the two parties. It is a thoughtful political decision taken by #JDS and BSP to win more seats in the Loksabha elections.
— H D Kumaraswamy (@hd_kumaraswamy) March 16, 2019
ಮೊನ್ನೆಯಷ್ಟೇ ಜೆಡಿಎಸ್-ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಮಾತುಕತೆಯಲ್ಲೂ ಮುಖ್ಯ ಪಾತ್ರ ವಹಿಸಿದ್ದ ಡ್ಯಾನಿಶ್ ಅಲಿ ಕೇರಳದ ಕೊಚ್ಚಿನ್ ನಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ನಂತರದಲ್ಲಿಯೇ ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆಯನ್ನು ಘೋಷಿಸಲಾಗಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸುವಾಗ ಮುಖ್ಯ ಪಾತ್ರ ವಹಿಸಿದವರಲ್ಲಿ ಡ್ಯಾನಿಶ್ ಅಲಿ ಒಬ್ಬರಾಗಿದ್ದರು. ಇದಕ್ಕೆ ಮೊದಲು ಚುನಾವಾಣಾ ಪೂರ್ವದಲ್ಲಿ ಜೆಡಿಎಸ್-ಬಿಎಸ್ಪಿ ನಡುವೆ ಹೊಂದಾಣಿಕೆ ನಡೆದು ಎರಡೂ ಜಂಟಿಯಾಗಿ ಚುನಾವಣೆ ಎದುರಿಸಿದ್ದರಲ್ಲಿಯೂ ಡ್ಯಾನಿಶ್ ಅಲಿಯವರ ಪಾತ್ರ ಮುಖ್ಯವಾಗಿತ್ತು.
ಡ್ಯಾನಿಶ್ ಅಲಿಯವರು ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯನ್ನು ಅವರ ಈ ಪಕ್ಷಾಂತರ ಸೂಚಿಸಿದೆ.
2018ರ ಮೇ 15ರಂದು ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಏರ್ಪಡುವ ದಿನ ಮೊದಲು ರಾಜ್ಯ ಸಭೆಯ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಹಾಗೂ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿಯವರಿಗೂ ನಡುವೆ ಗುಪ್ತ ಮಾತುಕತೆ ನಡೆದಿತ್ತೆನ್ನಲಾಗಿದೆ. ಮೇ 13ರ ಮಧ್ಯ ರಾತ್ರಿ ಗುಲಾಂ ನಬಿ ಆಜಾದ್ ಅವರಿಂದ ಬಂದ ಫೋನ್ ಕರೆಯೇ ಮುಂದೆ ಕಾಂಗ್ರೆಸ್-ಜೆಡಿಎಸ್ ನಡುವ ಮೈತ್ರಿಗೆ ಕಾರಣವಾಯಿತೆನ್ನಲಾಗಿದೆ. ಈ ಮಾತುಕತೆಯ ನಂತರ ಡ್ಯಾನಿಶ್ ಅಲಿಯವರೇ ಮಾನ್ಯ ದೇವೇಗೌಡ ಮತ್ತು ಕುಮಾರಸ್ವಾಮಿಯವರ ಮನವೊಲಿಸುವ ಕೆಲಸ ಮಾಡಿದ್ದರೆನ್ನಲಾಗಿದೆ. ‘ಈ ಮೈತ್ರಿಯು 2019ರ ಲೋಕಸಭಾ ಚುನಾವಣೆಯಲ್ಲಿಯೂ ಉತ್ತಮ ಪರಿಣಾಮ ಬೀರುತ್ತದೆ” ಎಂದು ಮನವರಿಕೆ ಮಾಡುವಲ್ಲಿ ಡ್ಯಾನಿಶ್ ಅಲಿ ಯಶಸ್ವಿಯಾಗಿದ್ದರು. ಅದರಂತೆ ಚುನಾವಣಾ ಫಲಿತಾಂಶ ಹೊರಬರುತ್ತಿದ್ದಂತೆ ಸೋನಿಯಾ ಗಾಂಧಿಯವರು ಜೆ ಡಿ ಎಸ್ ಸರ್ಕಾರ ರಚನೆಗೆ ಬೇಷರತ್ ಬೆಂಬಲ ನೀಡಿದ್ದರಲ್ಲದೇ ಕರ್ನಾಟಕದಲ್ಲಿ ಸರ್ಕಾರವೂ ರಚನೆಯಾಗಿತ್ತು. ಕುಮಾರ ಸ್ವಾಮಿಯವರ ಪ್ರಮಾಣ ವಚನ ಸಮಾರಂಭವರು ಬಿಜೆಪಿ ಹೊರತುಪಡಿಸಿದ ರಾಷ್ಟ್ರನಾಯಕರೆಲ್ಲರ ಸಮಾಗಮಕ್ಕೆ ಒಂದು ವೇದಿಕೆಯಾಗಿತ್ತು.
ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡಿ ರಾಜಕಾರಣ ಪ್ರವೇಶಿಸಿದ್ದ ಉತ್ತರ ಪ್ರದೇಶದ ಡ್ಯಾನಿಶ್ ಅಲಿ 1994ರಲ್ಲಿ ಕರ್ನಾಟದ ರಾಮನಗರದಲ್ಲಿ ದೇವೇಗೌಡರ ಭಾಷಣ ಕೇಳಿ, ಪ್ರಭಾವಿತರಾಗಿ ನಂತರ ಅವರೊಂದಿಗೆ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಲಾರಂಭಿಸಿದ್ದರು. ವಿದ್ಯಾರ್ಥಿ ಜನತಾದಳದ ರಾಷ್ಟ್ರಾಧ್ಯಕ್ಷರಾಗಿ ಕೆಲಸ ಮಾಡಿದ್ದ ಡ್ಯಾನಿಶ್ ಅಲಿ ಅವರಿಗಿರುವ ಹಿಂದಿ ಭಾಷೆಯ ಉತ್ತಮ ಹಿಡಿತ ಅವರನ್ನು ಜನತಾದಳದ ರಾಷ್ಟ್ರಮಟ್ಟದ ಜವಾಬ್ದಾರಿಗಳನ್ನು ಹೊರುವಂತೆ ಮಾಡಿತ್ತು.
ಜನತಾದಳದಲ್ಲಿ 25 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿರುವ ಡ್ಯಾನಿಶ್ ಅಲಿ ಉತ್ತರ ಪ್ರದೇಶದ ಗರ್ಮುಕ್ತೇಶ್ವರ್ ವಿಧಾನಸಭಾ ಕ್ಷೇತ್ರದಿಂದ ಒಮ್ಮೆ ಮಾತ್ರ ಸ್ಪರ್ಧಿಸಿದ್ದರು.

-
ಟ್ರೂಥ್ ಇಂಡಿಯಾ ಕನ್ನಡ