ಚುನಾವಣೆ ಇನ್ನೇನು ಕೆಲವೇ ವಾರಗಳು ಬಾಕಿ ಇರುವಾಗ ಕಾಮಿಡಿಯನ್ ಕುನಾಲ್ ಕಮ್ರಾ ಹೊಸ ಪ್ರಸ್ತಾಪ ದೇಶದ ಮುಂದಿಟ್ಟಿದ್ದಾರೆ. ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಕ್ಕು ನಗಿಸುವ ಅವರ ವಿಶಿಷ್ಟ ಶೈಲಿಯ ಈ ಮಾತುಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂದರೆ ಯೂಟ್ಯೂಬ್ನಲ್ಲಿ ಸುಮಾರು 50 ಲಕ್ಷ ಜನರು ವೀಕ್ಷಿಸಿದ್ದಾರೆ. ಕುನಾಲ್ ಕಾಮ್ರಾ ಮಾತುಗಳ ಬರಹ ರೂಪವನ್ನು ಇಲ್ಲಿ ನೀಡಿದ್ದೇವೆ.
ಸ್ನೇಹಿತ್ರೇ, ಒಂದು ವಿಷ್ಯ ಹೇಳಿ,
ಇದು ನಂಗೂ, ಅಂಬಾನಿಗೂ ಮಧ್ಯೆ ಇರುವ ವಿಷಯ ಆಗಿರೋವಾಗ…. ಇದರಲ್ಲಿ ಮೋದಿಜಿಗೇನು ಕೆಲಸ ಅಲ್ವಾ? ನಾನು ಅಂಬಾನಿಗೇ ಏಕೆ ನೇರವಾಗಿ ವೋಟ್ ಹಾಕಬಾರದು?
ನಮ್ಮಿಬ್ಬರ ಮಧ್ಯೆ ಸಮಸ್ಯೆ ಏನಿಲ್ಲವಲ್ಲಾ… ಹಂಗಿದ್ ಮೇಲೆ ಅಂಬಾನಿಯನ್ನೇ ಪ್ರಧಾನಿ ಮಾಡಿದ್ರಾಯ್ತು ಬಿಡಿ.. ಅಂಬಾನಿಯ ಬಳಿ ಬೇಕಾದ್ದೇಲ್ಲಾ ಸಿಗುತ್ತಲ್ಲಾ.. ಮೆಟ್ರೋ… ಬಟ್ಟೆಬರೆ… ಪೆಟ್ರೋಲ್, ವೈಫೈ… ಎಲ್ಲಾ ಇದೆಯಲ್ಲಾ… ವೈಫೈನಂತೂ ಫ್ರೀಯಾಗೇ ಕೊಟ್ಟುಬಿಟ್ಟಿದ್ದಾನಲ್ಲ… ಇಂತಹ ದಯಾಳು ಮನುಷ್ಯನ್ನ ನಾನೆಂದೂ ನೋಡೇ ಇರಲಿಲ್ಲ ಬಿಡಿ! ಮಗನಿಗೆ ಒಂದು ಕೆಲಸ ಬೇಕಂತ ಕೇಳಿದರೆ, ಇಡೀ ದೇಶಕ್ಕೇ ವೈಫೈ ಕೊಟ್ಟುಬಿಟ್ಟ ನೋಡಿ… ಈಗ ಪೂರಾ ದೇಶವೇ ಒಂದು ಕೈಯಲ್ಲಿ ಫೋನ್ ಹಿಡಿದು ಕುಂತುಬಿಟ್ಟಿದೆ ನೋಡಿ!!!
ಆದ್ದರಿಂದ ಕಾರ್ಪೊರೇಟ್ ಸಂಸ್ಥೆಗಳೇ ಚುನಾವಣೆಗಳಲ್ಲಿ ಮುಖಾಮುಖಿಯಾಗಬೇಕು ಅಂತ ನಾನು ಯೋಚಿಸ್ತೀನಿ ನೋಡ್ರಿ… ಮುಖೇಶ್ ಅಂಬಾನಿ, ರತನ್ ಟಾಟಾ ಇವರಿಬ್ರೂ ಚುನಾವಣೆಲೀ ಎದುರಾದ್ರೆ.. ಆಗ ಅದು ಒಂದು ಒಳ್ಳೇ ಎಲೆಕ್ಷನ್ ಆಗತ್ತೆ… ಅವರಿಬ್ರೂ ಯಾವುದರ ಬಗ್ಗೆ ಮಾತಾಡ್ತಾರೆ ಮಾತಾಡ್ತಾರೆ? ಬರೀ ಅಭಿವೃದ್ಧಿಯ ಬಗ್ಗೆ, ‘ವಿಕಾಸ್’ ಬಗ್ಗೆ ಮಾತಾಡ್ತಾರೆ ನೋಡ್ತಿರಿ.. ಯಾಕಂದ್ರೆ ಅವರಿಗೆ ಬೇರೇನೂ ಗೊತ್ತೇ ಇಲ್ಲ.
ರತನ್ ಟಾಟಾ ಉತ್ತರಪ್ರದೇಶಕ್ಕೂ ಹೋಗೋದಿಲ್ಲ, ಅಲ್ಲಿ ಒಂದು ರೂಮಿನ ತುಂಬಾ ಜನರನ್ನ ನೋಡಿ ಹಾರಾಡೋದೂ ಇಲ್ಲ.. “ಮಂದಿರ ಇಲ್ಲೇ ಕಟ್ತೇವೆ” ಅಂತ ಕೂಗಾಡೋ ಸೀನೂ ಇಲ್ಲ. “ಮಂದಿರ ಇಲ್ಲೇ…” ಎಂದು ಅರಚುವುದು ರತನ್ ಟಾಟಾರಂತಹ ಪಾತ್ರಕ್ಕೆ ಒಗ್ಗದ ಘೋಷಣೆ ಅಲ್ವೇ! ರತನ್ ಟಾಟಾ ಸೂಟಿನಲ್ಲಿ ಹೋಗಿ “ಮಂದಿರವನ್ನ ಇಲ್ಲೇ…” ಎಂದು ರ್ಯಾಲಿಯಲ್ಲಿ ಅರಚುವುದನ್ನ ಕಲ್ಪಿಸಿಕೊಳ್ಳಲೂ ಆಗದು… ಛೇ ಛೇ ಛೇ! ಅದೆಲ್ಲಾ ಆಗೋದೇ ಇಲ್ಲ… ಆಗ ನಾವೇ ಹೇಳಬೇಕಾಗತ್ತೆ… ‘ಅಂಕಲ್, ನೀವು ಸ್ವಲ್ಪ ಹಾಗೇ ಅಲ್ಲೇ ಕುಳಿತುಬಿಡಿ, ಕೂಗುವುದನ್ನ ನಾವು ನೋಡ್ಕೊಳ್ತೀವಿ’ ಅಂತ…
ಉತ್ತರಪ್ರದೇಶಕ್ಕೆ ಯಾವನೇ ಹೋದರೂ, “ಮಂದಿರವನ್ನ ಇಲ್ಲೇ ಕಟ್ತೇವೆ” ಅಂತ ಗಂಟಲು ಹರಿದುಹೋಗುವಂತೆ ಅರಚುತ್ತಾನೆ… ಅದ್ಯಾಕೋ ಯಾರೂ ಅಷ್ಟೇ ಉತ್ಸಾಹವನ್ನ ಅಲ್ಲಿ ಮೆಟ್ರೋ ನಿರ್ಮಾಣಕ್ಕೆ ತೋರುವುದಿಲ್ಲ, ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸಂಗ್ರಹಿಸಿಡಲು ತೋರಿಸುವುದಿಲ್ಲ. ಆದರೆ ಇವರಾರೂ “ಮಂದಿರ ಇಲ್ಲೇ…” ಅಂತ ಅರಚುವುದನ್ನ ಮಾತ್ರ ನಿಲ್ಲಿಸೋದೇ ಇಲ್ಲ! ಉತ್ತರಪ್ರದೇಶದ ಶೇ.40ರಷ್ಟು ಜನರಿಗೆ ಕಕ್ಕಸು ಮನೆ ಇಲ್ಲ. ಇವರು ಇಷ್ಟೊಂದು ಪ್ರಸಾದ ತಿನ್ನಿಸಿಬಿಟ್ಟರೆ ಅದನ್ನು ಹೊರಹಾಕುವುದಾದರೂ ಎಲ್ಲಿ ಸ್ವಾಮಿ!? ಏನಂತೀರಾ?
ಇನ್ನೂ ಹೆಚ್ಚೆಂದರೆ ಯಾವನೋ ಒಬ್ಬ ರತನ್ ಟಾಟಾ ತರ ಕೂಗಾಡಬಹುದು, “ನ್ಯಾನೋ ಘಟಕವನ್ನ ಇಲ್ಲೇ ತರ್ತೀವಿ…” ಅಂತ! ಜನ ಯಾಕೆ ಹೀಗೆ ಭಾವೋದ್ವೇಗಕ್ಕೆ ಒಳಗಾಗುತ್ತಿದ್ದಾರೆ? ಅದಕ್ಕೇನಂತೆ, ತನ್ರಪ್ಪಾ… ಮಂದಿರವನ್ನ ಇನ್ನೂ ಕಟ್ಟಿಲ್ಲವಲ್ಲಾ, ತನ್ನಿ…
ಅಂಬಾನಿಯೇ ನಮ್ಮ ಪ್ರಧಾನಿಯಾಗಿಬಿಟ್ರೆ ಭ್ರಷ್ಟಾಚಾರ ಎಲ್ಲಿಂದ ಬಂತು ನೀವೇ ಹೇಳಿ? ಅಂಬಾನಿ ಪ್ರಧಾನಿ ಆದ್ರೆ ಸೂಟ್ಕೇಸ್ ಅವನ ಮನೆಗೆ ತಗೊಂಡು ಯಾರು ಹೋಗ್ತಾರೆ? “ನಾಲ್ಕು ಕೋಟಿಯ ನನ್ನ ಟೆಂಡರ್ ಬಾಕಿ ಇದೆ, ಸ್ವಲ್ಪ ಈ ಬಗ್ಗೆ ನೋಡಿ ಸಾರ್” ಅಂತ ಯಾವನಾದರೂ ಸೂಟ್ ಕೇಸ್ ಹಿಡಿದು ಅಂಬಾನಿಯ ಬಳಿ ಹೋದ ಅಂತಾನೇ ಇಟ್ಟುಕೊಳ್ಳಿ… ಆಗ ಅಂಬಾನಿ ಅವನನ್ನು ಕರೆದು, “ಮಗನೆ, ಬಾ ಇಲ್ಲಿ. ನೋಡು, 2014ರಿಂದ 4 ಸಾವಿರ ಕೋಟಿ ರೂಪಾಯಿ ನನ್ನಲ್ಲೇ ಇದೆ, ನನ್ನ ಜೇಬಿನಲ್ಲೇ ಇದೆ. ಅಗೋ ಅಲ್ಲಿ, ಸ್ವಿಮ್ಮಿಂಗ್ ಪೂಲ್ ನಲ್ಲಿ ಕಾಣ್ತಿದ್ದಾರಲ್ಲಾ ಅಂಕಲ್, ಸರಿಯಾಗಿ ನೋಡು ಅವರೇ ಮೋದೀಜಿ…” ಅಂತ ಹೇಳ್ತಾನೆ.
ಸ್ನೇಹಿತರೇ,
ಅಂಬಾನಿ ಸೌತ್ ಬಾಂಬೆಯಲ್ಲಿ ಮನೆ ಕಟ್ಟಿದ್ದಾನಲ್ಲಾ, ಆ ಮನೆಯನ್ನ ನೀವು ನೋಡಿದ್ದೀರಾ? ಅದು ಎತ್ತರವಾಗಿ ನೆಟ್ಟಗೆ ನಿಂತಿರುವ ‘ವಿಕಾಸ್’ ಎಂಬುದು ಗೊತ್ತಿದೆಯೇನು? ಆತ ಬಹಳ ತಗ್ಗಿಬಗ್ಗಿ ನಡೆಯೋ ಮನುಷ್ಯನಂತೆ… ಪಾಪ! ಆ ಮನೆಯೊಳಗೆ ಮೊದಲು ಮೂರು ವರ್ಷ ವಾಸ ಮಾಡಲೇ ಇಲ್ಲವಂತೆ! ಏಕೆಂದರೆ ಅದರ ವಾಸ್ತು ಸರಿ ಇರಲಿಲ್ಲವಂತೆ… ಅಯ್ಯೋ! ನೀನು ಅಂಬಾನಿ ಕಣಯ್ಯಾ.. ನಿನಗೆ ವಾಸ್ತು ಗೀಸ್ತು ನಿಂಗೇನ್ ಮಾಡೋಕೆ ಸಾಧ್ಯ ಮಾರಾಯ? ವಾಸ್ತು ಏಜೆಂಟ್ ನಿನ್ನ ಮನೆಯ ಬಾಗಿಲಿಗೆ ಬಂದು ಹೇಳ್ತಾನೆ, “ಸಾರ್, ಕಮೋಡ್ ಈ ಕಡೆ ಹಾಕೋಣ, ನೀವು ಹೂಂ ಅಂದರೆ ನಾನು ಈಗಲೇ, ಈ ಕ್ಷಣದಲ್ಲೇ ಅದನ್ನು ಸರಿಪಡಿಸಿಬಿಡುತ್ತೇನೆ. ಅದನ್ನ ನಾನೇ ಮಾಡಿಕೊಡ್ತೀನಿ ಸಾರ್..” ಅಂತ.
ನನಗನ್ನಿಸತ್ತೆ, ಅಂಬಾನಿ ಪ್ರಧಾನಿಯಾಗಬೇಕು, ಆಗ ನೀತಾ ಅಂಬಾನಿ ದೇಶದ ಮೊದಲ ಮಹಿಳೆಯಾಗ್ತಾಳೆ. ಇದು ಈಗಿನ ಅಮಿತ್ ಶಾ ನನ್ನೂ ದಾಟಿ ಭಾರಿ ಮುಂದೆ ಹೋದಂತಾಗುತ್ತದೆ!!! ನಮ್ಮ ಈಗಿನ ಪ್ರಥಮ ಮಹಿಳೆ ಜೈಲ್ ಗೆ ಹೋಗಿ ಬಂದಿದ್ದಾಳೆ… ನಮ್ಮ ದೇಶದಲ್ಲಿ ಹೀಗೂ ಆಗುತ್ತದೆಯೇ!? (ಮೋದಿ – ಅಮಿತ್ ಶಾ ಕುರಿತ ವ್ಯಂಗ್ಯವಿದು...)
ನಾನು ಹೀಗೆಲ್ಲಾ ಹೇಳುತ್ತಾ ಹೋದರೆ ಜನ ನನ್ನನ್ನು ಧರ್ಮದ್ರೋಹಿ ಅಂತಾರೆ… ಅರೆ! ಸ್ನೇಹಿತರೆ, ಮೋದಿಯ ಕುರಿತು ಹಾಸ್ಯ ಮಾಡಿದರೆ ಅದು ಹೇಗೆ ಧರ್ಮದ್ರೋಹವಾಗುತ್ತದೆ? ಮೋದಿಜಿಯ ಹೆಸರು ಧರ್ಮವೇ? ಮೋದಿ ಈಗ ಅತಿವೇಗವಾಗಿ ಬೆಳೆಯುತ್ತಿರುವ ವ್ಯಕ್ತಿಯಾಗಿಬಿಟ್ಟಿದ್ದಾನೆ ಮಾರಾಯ್ರೆ… ಅವ ಸಿಎಂ ಆಗಿದ್ದ, ನಂತರ ಪಿಎಂ ಆದ, ಈಗ ಧರ್ಮವಾಗಿ ಬೆಳೆದುಬಿಟ್ಟಿದ್ದಾನೆ! ಈ ರೀತಿಯಲ್ಲಿ ರಿಲಾಯೈನ್ಸ್ ಸಂಸ್ಥೆ ಕೂಡ ಬೆಳೆದಿಲ್ಲ!!! ಕೆಲವರು ನನ್ನನ್ನು ಧರ್ಮವಿರೋಧಿ ಎನ್ನುತ್ತಾರೆ… ನಾನು ಧಾರ್ಮಿಕ ಮನುಷ್ಯ ಕಣ್ರೀ… ಅದಕ್ಕೆ ಸಾಕ್ಷಿ ಕೂಡ ಕೊಡಬಹುದು… ಸಣ್ಣ ವಯಸ್ಸಿನವನಾಗಿದ್ದಾಗ ನಾನು ಗಂಟೆ ಬಾರಿಸುತ್ತಿದ್ದೆ. ಅದರ ಫೋಟೋ ಇದೆ, ನಿಜವಾದ್ದು, ಅದು ಮೋದಿಯ ಡಿಗ್ರೀ ತರಹವಲ್ಲ, ನಿಜವಾದ ಫೋಟೋ ಮಾರಾಯ್ರೆ! ಪ್ರತಿ ಸಲ ಆರತಿ ಎತ್ತುವಾಗ ನಾನು ಗಂಟೆ ಬಾರಿಸುತ್ತಿದ್ದೆ.. ನನ್ನ ಅಮ್ಮ ನನಗೆ ಹೇಳುತ್ತಿದ್ದಳು, ಧರ್ಮ ನಿನ್ನನ್ನು ರಕ್ಷಿಸುತ್ತದೆ ಎಂದು. ನಿಜಕ್ಕೂ ಅದು ಒಳ್ಳೆಯ ವಿಚಾರವೇ. ಆದರೆ ನಾನು ಬೆಳೆದಂತೆ ನಾಯಕರು ನನಗೆ ನೀನು ಧರ್ಮವನ್ನು ರಕ್ಷಿಸಬೇಕೆಂದು ಹೇಳಲು ಶುರು ಮಾಡಿದರು! ಅರೆ, ಈ ಬದಲಾವಣೆ ಆಗಿದ್ದಾದರೂ ಯಾವಾಗ ಸ್ವಾಮಿ? ಸಮಯಕ್ಕೆ ಸರಿಯಾಗಿ ನನಗೆ ನನ್ನ ಮೊಬೈಲ್ ಬಿಲ್ ಕಟ್ಟಲಿಕ್ಕೇ ಆಗುತ್ತಿಲ್ಲ… ಇನ್ನು ನಾನು ಈ ಧರ್ಮರಕ್ಷಣೆಯ ಕೆಲಸವನ್ನ ಹೇಗೆ ಮಾಡಲಿ? ಭಗವಂತ ಅಷ್ಟು ಸರ್ವಶಕ್ತನಾದರೆ ಅವನಿಗೇಕೆ ನನ್ನಂತ ಹುಲುಮಾನವನ ಅವಶ್ಯಕತೆಯೋ ನಾ ಕಾಣೆ… ನಮಗೇ ಅಲ್ಲವೇ ಅವನ ಅಗತ್ಯವಿರುವುದು?
ನಮ್ಮ ಭಗವಂತ ಆ ಕಾಲದಲ್ಲೇ ಭಾರತ ಮತ್ತು ಶ್ರೀಲಂಕಾ ಮಧ್ಯೆ ಸೇತುವೆ ಕಟ್ಟಿದ್ದನಂತೆ… ಅದೂ ಎಲ್ & ಟಿ ಕಂಪನಿ ಇಲ್ಲದೆಯೇ!!! ಈಗ ಎಲ್ & ಟಿ ಇದ್ದರೂ ಅವನ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲವೇ??? ಛೇ!
(ಅಂತಿಮ ಭಾಗ ನಾಳೆಗೆ)
ಯೂಟ್ಯೂಬ್ ನಲ್ಲಿ ಕುನಾಲ್ ಕಮ್ರಾ ಕಾಮಿಡಿ ಶೋ ನೋಡಿ
You are doing good work. Congratulations and thanks