ಚೌಕಿದಾರ್ ಚೋರ್ ಹೈ (ಚೌಕಿದಾರ ಕಳ್ಳ) ಎಂಬ ಪ್ರತಿಪಕ್ಷದ ಪ್ರಚಾರ ದಾಳಿಗೆ ರಕ್ಷಣಾತ್ಮಕವಾಗಿ ತಿರುಗೇಟು ನೀಡಬೇಕೆಂಬ ಉದ್ದೇಶದಿಂದ ಬಿಜೆಪಿಯ ಐಟಿಸೆಲ್ ಶನಿವಾರ ನಡೆಸಿದ “ಮೈ ಭೀ ಚೌಕೀದಾರ್” (#MainBhiChowkidar- ನಾನೂ ಕೂಡಾ ಚೌಕಿದಾರ) ಎಂಬ ಟ್ವಿಟರ್ ಪ್ರಚಾರಾಂದೋಲನ ಕೊನೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೇ ತೀರಾ ಮುಜುಗರ ಉಂಟು ಮಾಡುವಲ್ಲಿಗೆ ಪರ್ಯಾವಸಾನಗೊಂಡಿತು!
ಅಲ್ಲಿ ಆಗಿದ್ದಿಷ್ಟು,
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೋದಲ್ಲೆಲ್ಲಾ ‘ಚೌಕೀದಾರ್ ಚೋರ್ ಹೈ” ಎಂಬ ಘೋಷಣೆ ಹೇಳುವುದಕ್ಕೆ ಪ್ರತಿಯಾಗಿ ತನ್ನ ಬೆಂಬಲಿಗರೆಲ್ಲರ ಬಳಿ “ನಾನೂ ಕೂಡಾ ಚೌಕಿದಾರ“ ಎಂದು ಹೇಳಿಸುವ ತಂತ್ರವೊಂದನ್ನು ಬಿಜೆಪಿಯ ಐಟಿಸೆಲ್ ಮಾಡಿತ್ತು. ಅದರಂತೆ ಶನಿವಾರ ಬೆಳಗ್ಗೆಯಿಂದಲೇ ಬಿಜೆಪಿಯ ಐಟಿ ಸೆಲ್ ಟ್ವಿಟರ್ ಮೂಲಕ ಒಂದು ಹ್ಯಾಶ್ಟ್ಯಾಗ್ ಟ್ರೆಂಡ್ ಮಾಡಲು ಶುರವಿಟ್ಟುಕೊಂಡಿತ್ತು. ಮೈ ಭೀ ಚೌಕೀದಾರ್ ಎಂಬ ಹ್ಯಾಶ್ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣದ ಎಲ್ಲಾ ಬಿಜೆಪಿ ಬೆಂಬಲಿಗರೂ ಟ್ವೀಟ್, ರಿ ಟ್ವೀಟ್ ಮಾಡಲು ಆರಂಭಿಸಿದ್ದರು. ಇದಕ್ಕೆ ಸ್ವತಃ ನರೇಂದ್ರ ಮೋದಿಯವರ ಟ್ವಿಟರ್ ಅಕೌಂಟಿನಿಂದಲೇ ಚಾಲನೆ ದೊರೆತಿತ್ತು. ಅದನ್ನು ಅನುಸರಿಸಿ ಅನೇಕ ಬಿಜೆಪಿ ಸಚಿವರು, ಸಂಸದರು ಅದೇ ಹ್ಯಾಶ್ಟ್ಯಾಗ್ ಮೂಲಕ “ನಾನೂ ಚೌಕಿದಾರ” ಎಂದು ಪ್ರಚಾರ ನಡೆಸುತ್ತಿದ್ದರು. ಕರ್ನಾಟಕದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸುರೇಶ್ಕುಮಾರ್, ಹೀಗೆ ಹಲವರು ಈ ಅಭಿಯಾನದಲ್ಲಿ ಸೇರಿದ್ದರು. ಚಿಕ್ಕಮಗಳೂರು ಶಾಸಕ ಸಿಟಿ ರವಿಯಂತೂ ತನ್ನ ಟ್ವಿಟರ್ ಖಾತೆಯ ಹೆಸರನ್ನೇ ‘ಚೌಕೀದಾರ್ ಸಿಟಿ ರವಿ’ ಎಂದು ಬದಲಿಸಿಕೊಂಡಿದ್ದ. ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷದ ಟ್ವಿಟರ್ ಖಾತೆದಾರರು ಚೌಕಿದಾರ್ ಚೋರ್ ಹೇ ಎಂಬ ಹ್ಯಾಶ್ ಟ್ಯಾಗ್ ಪ್ರಚಾರ ನಡೆಸುತ್ತಿದ್ದರು. ಈ ಅಭಿಯಾನ ಶುರುವಾದ ಕೆಲವೇ ಘಂಟೆಗಳಲ್ಲಿ #MainBhiChowkidar ಟಾಪ್ ಟ್ರೆಂಡ್ ಮಟ್ಟಕ್ಕೆ ಹೋಯಿತು.
Your Chowkidar is standing firm & serving the nation.
But, I am not alone.
Everyone who is fighting corruption, dirt, social evils is a Chowkidar.
Everyone working hard for the progress of India is a Chowkidar.
Today, every Indian is saying-#MainBhiChowkidar
— Narendra Modi (@narendramodi) March 16, 2019
ಈ ಟ್ವಿಟರ್ ಪ್ರಚಾರಾಭಿಯಾನಕ್ಕೆ ಸರಿಯಾದ ಟ್ವಿಸ್ಟ್ ಸಿಕ್ಕಿದ್ದೇ ಸಂಜೆಯ ಹೊತ್ತಿಗೆ ನರೇಂದ್ರ ಮೋದಿ ಟ್ವಿಟರ್ ಖಾತೆಯಿಂದ ಮಾಡಿದ್ದ ಒಂದು ಸ್ವಯಂ ಚಾಲಿತ ಟ್ವೀಟ್ನಿಂದ. ಬೆಳಿಗ್ಗೆಯಿಂದ ಟ್ರೆಂಡ್ ಆಗಿದ್ದ “ನಾನೂ ಕೂಡ ಚೌಕಿದಾರ” ಟ್ವಿಟರ್ ಅಭಿಯಾನವನ್ನು ಚುರುಕುಗೊಳಿಸುವ ಉದ್ದೇಶದಿಂದ ಅದುವರೆಗೆ ಯಾರೆಲ್ಲಾ ಆ ಹ್ಯಾಶ್ಟ್ಯಾಗ್ ಬಳಸಿದ್ದರೋ ಅವರಿಗೆಲ್ಲರಿಗೂ ವಂದನೆ ಸಲ್ಲಿಸುವ ಸ್ವಯಂ ಚಾಲಿತ ಸಂದೇಶವೊಂದು ನರೇಂದ್ರ ಮೋದಿ ಅಕೌಂಟಿನಿಂದ ಟ್ವೀಟ್ ಆಗತೊಡಗಿತ್ತು.
ತಮಾಷೆ ನಡೆದಿದ್ದೇ ಆಗ……
ಅದರಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 14,500 ಕೋಟಿ ದೋಖಾ ಮಾಡಿ ದೇಶದಿಂದಲೇ ಪರಾರಿಯಾಗಿ, ಶಿಕ್ಷೆ ತಪ್ಪಿಸಿಕೊಂಡು ಲಂಡನ್ನಲ್ಲಿ ಕುಳಿತಿರುವ ದೇಶಭ್ರಷ್ಟ ವಜ್ರವ್ಯಾಪಾರಿ, ನೀರವ್ ಮೋದಿ ಹೆಸರಿನ ಪರೋಡಿ ಅಕೌಂಟಿಗೂ ಪ್ರಧಾನಿ ಮೋದಿಯವರ ಅಕೌಂಟಿನಿಂದ ವಂದನೆ ಸಲ್ಲಿಸಿದ ಸಂದೇಶವೊಂದು ಕಾಣಿಸಿಕೊಂಡಾಗ. ಇದನ್ನು ಗಮನಿಸಿದ ಹಲವರು ಕೂಡಲೇ ಅದನ್ನು ಉಲ್ಲೇಖಿಸಿ ತಮಾಷೆ ಮಾಡಲಾರಂಭಿಸಿದರು. ಆ ಟ್ವೀಟ್ ಹೀಗೆಂದಿತ್ತು– ನೀರವ್ ಮೋದಿಯವರೇ, ನಿಮ್ಮ ಭಾಗವಹಿಸುವಿಕೆಯಿಂದ “ಮೈ ಭೀ ಚೌಕೀದಾರ್” ಚಳವಳಿ ಬಲ ಪಡೆದುಕೊಂಡಿತು. ನಿಮಗೆ ನನ್ನ ಸಂದೇಶ ಇಲ್ಲಿದೆ– ಪ್ರಿಯ ನೀರವ್, ಮೈ ಭೀ ಚೌಕೀದಾರ್ ಚಳವಳಿಯಲ್ಲಿ ನಿಮ್ಮ ಭಾಗೀದಾರಿಕೆಯು ಸಮೃದ್ಧ ಹಾಗೂ ಸುಭದ್ರ ಭಾರತವನ್ನು ನಿರ್ಮಿಸಲಿದೆ. ನಾವು ಜೊತೆಜೊತೆಯಾಗಿ ಬಡತನ, ಭ್ರಷ್ಟಾಚಾರ, ಕೊಳೆ, ಭಯೋತ್ಪಾದನೆ ಇತ್ಯಾದಿ ಕೇಡುಗಳ ವಿರುದ್ಧ ಹೋರಾಡೋಣ.
ಇಂತಿ ನಿಮ್ಮ
ನರೇಂದ್ರ ಮೋದಿ (ಸಹಿಯೊಂದಿಗೆ)
ಇದನ್ನು ನೋಡಿದವರು, ಆರಂಭದಲ್ಲಿ ಈ ವಂದನೆ ಸಲ್ಲಿಸುವ ಸಂದೇಶವು ಸ್ವಯಂ ಚಾಲಿತವಾಗಿ ಬಂದದ್ದು ಎಂದಾಗಲೀ, ಅದರಲ್ಲಿ ಟ್ಯಾಗ್ ಮಾಡಿದ್ದ ನೀರವ್ ಮೋದಿ ಖಾತೆ ಪರೋಡಿ ಅಕೌಂಟ್ (ತಮಾಷೆಗಾಗಿ ಮಾಡಿರುವ ನಕಲಿ ಅಕೌಂಟ್) ಎಂದಾಗಲೀ ತಿಳಿಯದೇ ನಿಜವಾಗಿಯೂ ನೀರವ್ ಮೋದಿ ಟ್ವಿಟರ್ ಖಾತೆಗೆ ನರೇಂದ್ರ ಮೋದಿಯೇ ವಂದನೆ ತಿಳಿಸಿದ್ದು ಎಂದು ಕೊಂಡರು. ಸಾಲದ್ದಕ್ಕೆ ಮೋದಿಯಿಂದ ವಂದನೆ ಹೇಳಿಸಿಕೊಂಡಿದ್ದ ಆ ನೀರವ್ ಮೋದಿ ಪರೋಡಿ ಖಾತೆಯಲ್ಲಿ- ಸರ್ ಪೂರ್ತಿ ಸಾಲವನ್ನು ಮಾಫಿ ಮಾಡಿ ಎಂಬ ಪ್ರತಿಕ್ರಿಯೆ ಬೇರೆ!
ಇನ್ನು ಕೇಳಬೇಕೇ? ಕ್ಷಣಾರ್ಧದಲ್ಲೇ ಇದರ ಸ್ಕ್ರೀನ್ ಶಾಟ್ಗಳು ಸಾಮಾಜಿಕ ಜಾಲತಾಣದ ತುಂಬೆಲ್ಲಾ ಹರಿದಾಡತೊಡಗಿವು. ಇಡೀ ಟ್ವಿಟರ್ ಲೋಕದಲ್ಲಿ ನಗೆಯುಕ್ಕಿತು. ದೊಡ್ಡ ಖದೀಮ ನೀರವ್ ಮೋದಿಯನ್ನು ದೇಶದಿಂದ ಓಡಿ ಹೋಗಲು ಬಿಟ್ಟಿದ್ದೇ ನರೇಂದ್ರ ಮೋದಿಯ ಸರ್ಕಾರ ಎಂಬ ಆರೋಪವನ್ನು ಪ್ರತಿಪಕ್ಷಗಳು, ದೇಶದ ನಾಗರಿಕರು ಮೋದಿಯ ಮೇಲಿ ಹೊರಿಸುತ್ತಾ ಬಂದಿರುವಾಗ ಸಾಕ್ಷಾತ್ ಮೋದಿಯ ಅಧಿಕೃತ ಟ್ವಿಟರ್ ಖಾತೆಯಿಂದಲೇ ಇಂತಹ ಒಂದು ಸಂದೇಶ ಬಂದರೆ ಏನಾಗಬಹುದು?
ಮೋದಿಯ ಅಕೌಂಟಿನಿಂದ ಬಂದ ಈ ಸಂದೇಶ ಸರಿಯಾಗಿಯೇ ಟ್ರೋಲ್ ಆಗುತ್ತಿದ್ದಂತೆ ಎಚ್ಚೆತ್ತ ಐಟಿ ಸೆಲ್ ಪ್ರಧಾನಿ ಮೋದಿಯ ಅಧಿಕೃತ ಅಕೌಂಟಿನಿಂದ ಬಂದಿದ್ದ ಆ ಟ್ವೀಟನ್ನು ತೆಗೆದು ಹಾಕಿತು. ಆದರೇನಂತೆ, ಅದು ಅಷ್ಟರಲ್ಲಾಗಲೇ ಜಗಜ್ಜಾಹೀರಾಗಿತ್ತು. ಬಿಜೆಪಿ ವಿರೋಧಿ ಟ್ವಿಟರಿಗರು ಇದಕ್ಕೆ ತರಹೇವಾರಿ ಟ್ರೋಲಿಂಗ್ ನಡೆಸಿದರು.
ಮೋದಿ ಮತ್ತು ಬಿಜೆಪಿ ಸರ್ಕಾರದ ಸೋಗಲಾಡಿತನವನ್ನು ಅದ್ಭುತವಾಗಿ ವಿಡಿಯೋ ಕಾರ್ಯಕ್ರಗಳ ಮೂಲಕ ಬಯಲುಗೊಳಿಸುವ ಯುವಕ ಧ್ರುವ್ ರಾಥೀಗೂ ಮೋದಿ ವಂದನೆ ಸಲ್ಲಿಸಿದ್ದು ಕಂಡು ಆಕಾಶ್ ಬ್ಯಾನರ್ಜಿ ಹೇಳಿದ್ದು ಹೀಗೆ!
Dear @narendramodi Ji,
I am feeling shattered today – i can understand that u tweeted out to @niiravmodi – because old friendships mean something to you.#Respect
But why on earth would you tweet to @dhruv_rathee?? He exposes you daily and we troll him hourly!
.#BhaktBanerjee pic.twitter.com/jGgE4uWg9o— Akash Banerjee (@akashbanerjee) March 16, 2019
ನೀರವ್ ಮೋದಿಯ ಪರೋಡಿ ಖಾತೆ ಮಾತ್ರವಲ್ಲದೇ ಇನ್ನೂ ಕೆಲವಾರು ಇಂತಹುದೇ ಖಾತೆಗಳಿಗೂ ಹೀಗೇ ಮೋದಿ ಖಾತೆಯಿಂದ ವಂದನೆ ಸಲ್ಲಿಸಿರುವುದೂ ಕಂಡು ಬಂದು ಅದೂ ಟ್ರೋಲ್ಗೊಳಗಾಯಿತು.
ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಸರಿಯಾದ ಸಂದರ್ಭಗಳಿಗಾಗಿ ಕಾದು ಕುಳಿತುಕೊಳ್ಳುವ ಟ್ರೋಲ್ ಗಳಿರುತ್ತಾರೆ. (ಇವರಲ್ಲಿ ಸೃಜನ ಶೀಲ ಕಿಡಿಗೇಡಿಗಳೂ ಇದ್ದಾರೆ, ವಿಕೃತ ಬಗೆಯ ಕಿಡಿಗೇಡಿಗಳೂ ಇದ್ದಾರೆ) ಇವರ ಕೈಗೆ ಸಿಕ್ಕಿಕೊಂಡರೆ ಮುಖ ಮೂತಿ ನೋಡದೇ ಚಚ್ಚಿಬಿಡುತ್ತಾರೆ. ಇನ್ನೊಂದು ತಿಂಗಳಲ್ಲಿ ಆರಂಭಗೊಳ್ಳಲಿರುವ ಲೋಕಸಭಾ ಚುನಾವಣೆ ಮುಗಿಯುವುದರೊಳಗಾಗಿ ಇನ್ನೂ ಏನೇನು ತಮಾಷೆಗಳು ಈ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯಬೇಕೋ, ಯಾರಿಗೆಲ್ಲಾ ಎಷ್ಟು ಮುಜುಗರವಾಗಬೇಕೋ ಶಿವನೇ ಬಲ್ಲ.