ನರೇಂದ್ರ ಮೋದಿ ತಾವು ಅಧಿಕಾರಕ್ಕೆ ಬರುವ ಮುನ್ನ ದೇಶದ ಅಭಿವೃದ್ಧಿಯನ್ನು ಎರಡಂಕಿಗೆ ಏರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅವರು ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಎರಡಂಕಿಗೆ ಏರುವುದಿರಲಿ, ಸತತ ಕುಸಿತ ಕಂಡಿದೆ. ಮೋದಿ ಸರ್ಕಾರದ ಆರ್ಥಿಕ ನೀತಿ ಮತ್ತು ವಿದೇಶ ನೀತಿಯಲ್ಲಿನ ನ್ಯೂನ್ಯತೆಗಳೇ ಅಭಿವೃದ್ಧಿ ಕುಂಠಿತವಾಗಲು ಕಾರಣ.
ದೇಶದ ಆರ್ಥಿಕ ಅಭಿವೃದ್ಧಿ ಸಾಧಿಸಲು ದೇಶೀಯ ಉತ್ಪನ್ನಗಳ ರಫ್ತಿಗೆ ಹೆಚ್ಚಿನ ಒತ್ತು ನೀಡಬೇಕು. ಆದರೆ, ಮೋದಿ ಸರ್ಕಾರ ರಫ್ತಿಗೆ ಉತ್ತೇಜನ ನೀಡುವಲ್ಲಿ ವಿಫಲವಾಗಿದೆ. ಮೋದಿ ಅಧಿಕಾರಕ್ಕೆ ಬರುವ ಮುನ್ನ ಅಂದರೆ 2013-14ನೇ ಸಾಲಿನಲ್ಲಿ ದೇಶದ ರಫ್ತು ಪ್ರಮಾಣವು ವಾರ್ಷಿಕ 314.4 ಬಿಲಿಯನ್ ಡಾಲರ್ ಅಂದರೆ 22,00,800 ಕೋಟಿ ರುಪಾಯಿ ರಫ್ತು ಮಾಡಲಾಗಿತ್ತು.
ಮೋದಿ ಅಧಿಕಾರ ಹಿಡಿದ ವರ್ಷದಲ್ಲಿ 2014-15ನೇ ಸಾಲಿನಲ್ಲೇ ದೇಶದ ರಫ್ತು ಪ್ರಮಾಣ 310 ಬಿಲಿಯನ್ ಡಾಲರ್ ಅಂದರೆ 21,70,000 ಕೋಟಿಗೆ ಕುಸಿಯಿತು. ಮೋದಿ ಸರ್ಕಾರ ಜಾರಿಗೆ ತಂದ ಆರ್ಥಿಕ ನೀತಿಗಳು ರಫ್ತು ಉದ್ಯಮಕ್ಕೆ ಉತ್ತೇಜನಕಾರಿಯಾಗಿರಲಿಲ್ಲ. ವಾಸ್ತವವಾಗಿ ರಫ್ತು ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗಬೇಕು. ಅದು ಆರ್ಥಿಕ ಅಭಿವೃದ್ಧಿಯ ಸಂಕೇತ.
ಮೋದಿ ಸರ್ಕಾರದ ಆರ್ಥಿಕ ನೀತಿಗಳಿಂದ ಹೆಚ್ಚಿನ ಹಿನ್ನಡೆಯಾದದ್ದು ರಫ್ತು ಉದ್ಯಮಕ್ಕೆ. 2015-16ನೇ ಸಾಲಿನಲ್ಲಿ ದೇಶದ ರಫ್ತು 262.3 ಬಿಲಿಯನ್ ಡಾಲರ್ ಅಂದರೆ 18,36,100 ಕೋಟಿಗೆ ಕುಸಿಯಿತು. ಒಂದೇ ವರ್ಷದಲ್ಲೇ ಶೇ.20ರಷ್ಟು ರಫ್ತು ಪ್ರಮಾಣ ಇಳಿದು ದಶಕದಲ್ಲೇ ಅತಿ ಗರಿಷ್ಠ ಕುಸಿತವೆಂದು ದಾಖಲೆ ಮಾಡಿತು. 2016-17ನೇ ಸಾಲಿನಲ್ಲಿ 275.8 ಬಿಲಿಯನ್ ಡಾಲರ್ ಅಂದರೆ 19,28,500 ಕೋಟಿಯಷ್ಟಿತ್ತು. 2017-18ನೇ ಸಾಲಿನಲ್ಲಿ ಎಂಜಿನಿಯರಿಂಗ್ ಉತ್ಪನ್ನ, ಸಾಫ್ಟ್ ವೇರ್ ಉತ್ಪನ್ನಗಳ ರಫ್ತು ಪ್ರಮಾಣ ಹೆಚ್ಚಳವಾದ ಪರಿಣಾಮ ರಫ್ತು ಚೇತರಿಸಿಕೊಂಡು 303 ಬಿಲಿಯನ್ ಡಾಲರ್ ಅಂದರೆ 21,21,000 ಕೋಟಿ ಮುಟ್ಟಿತ್ತು. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಅಂದರೆ 2018-19ನೇ ಸಾಲಿನಲ್ಲಿ ಏಪ್ರಿಲ್ –ಫೆಬ್ರವರಿ ಅವಧಿಯಲ್ಲಿ ರಫ್ತು ಪ್ರಮಾಣ 298 ಬಿಲಿಯನ್ ಡಾಲರ್ ಅಂದರೆ 20,86,000 ಕೋಟಿಯಷ್ಟಾಗಿದೆ.
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ- 2 ಅವಧಿಯಲ್ಲಿ ರಫ್ತು ಪ್ರಮಾಣ ವಾರ್ಷಿಕ ಶೇ.15-20ರಷ್ಟು ಏರಿಕೆಯಾಗಿದೆ. ಆ ಲೆಕ್ಕದಲ್ಲಿ ನೋಡಿದರೆ, ನರೇಂದ್ರ ಮೋದಿ ಸರ್ಕಾರವು ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಆಗಿದ್ದ ರಫ್ತು ಪ್ರಮಾಣ ಮುಟ್ಟಲು ಸಾಧ್ಯವಾಗಿಲ್ಲ. ವಾಸ್ತವವಾಗಿ ದೇಶದ ಆರ್ಥಿಕ ಅಭಿವೃದ್ಧಿ ಆದಂತೆ ರಫ್ತು ಪ್ರಮಾಣವೂ ಹೆಚ್ಚಬೇಕು. ಹಾಗೆಯೇ ರಫ್ತು ಪ್ರಮಾಣ ಹೆಚ್ಚಳದಿಂದಲೂ ಒಟ್ಟಾರೆ ಆರ್ಥಿಕ ಅಭಿವೃದ್ಧಿ ದರ ಏರುತ್ತದೆ. ಇವು ಪರಸ್ಪರ ಪೂರಕವಾಗಿರುತ್ತವೆ. ಮೋದಿ ಸರ್ಕಾರ ಜಾರಿಗೆ ತಂದ ಆರ್ಥಿಕ ನೀತಿಗಳಿಂದಾಗಿ ರಫ್ತು ಪ್ರಮಾಣ ಈ ಐದು ವರ್ಷದಲ್ಲಿ ಕುಸಿದು ಹೆಚ್ಚು ಕಮ್ಮಿ ತಟಸ್ಥ ಮಟ್ಟಕ್ಕೆ ಬಂದಿದೆ. ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಾದ ರಫ್ತು ಪ್ರಮಾಣ ಹೆಚ್ಚಳವನ್ನು ಕಾಯ್ದುಕೊಂಡಿದ್ದರೆ, ಭಾರತದ ರಫ್ತು ಪ್ರಮಾಣವು ಈ ಹೊತ್ತಿಗೆ 400 ಬಿಲಿಯನ್ ಡಾಲರ್ ದಾಟಬೇಕಿತ್ತು.
ರಫ್ತು ಪ್ರಮಾಣ ಈ ಅವಧಿಯಲ್ಲಿ ಹೆಚ್ಚಳವಾಗಬೇಕಿದ್ದು ಅತ್ಯಂತ ನಿರ್ಣಾಯಕವಾಗಿತ್ತು. ಏಕೆಂದರೆ ಈ ಐದು ವರ್ಷಗಳಲ್ಲಿ ರಫ್ತು ಪ್ರಮಾಣ ಹೆಚ್ಚಿದ್ದರೆ, ನಮ್ಮ ರಫ್ತು ಮತ್ತು ಆಮದು ಪ್ರಮಾಣದ ನಡುವಿನ ಅಂತರವು ಗಣನೀಯವಾಗಿ ತಗ್ಗುತ್ತಿತ್ತು.
ಯಾವ ದೇಶವು ಹೆಚ್ಚು ಪ್ರಮಾಣದಲ್ಲಿ ರಫ್ತು ಮಾಡಿ ಕಡಮೆ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೋ ಆ ದೇಶದ ಆರ್ಥಿಕ ಪರಿಸ್ಥಿ ಸದೃಢವಾಗಿರುತ್ತದೆ. ಬಹುತೇಕ ಶ್ರೀಮಂತ ರಾಷ್ಟ್ರಗಳ ರಫ್ತು ಪ್ರಮಾಣವು ಆಮದು ಪ್ರಮಾಣಕ್ಕಿಂತ ಹೆಚ್ಚಿರುತ್ತದೆ.
ಕೇಂದ್ರ ವಾಣಿಜ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಏಪ್ರಿಲ್-ಫೆಬ್ರವರಿ ಅವಧಿಯಲ್ಲಿ ಭಾರತದ ಆಮದು ಮಾಡಿಕೊಂಡಿರುವ ಸರಕು ಮತ್ತು ಸೇವೆಗಳ ಮೌಲ್ಯವು 464 ಬಿಲಿಯನ್ ಡಾಲರ್ ಅಂದರೆ 32,48,000 ಕೋಟಿ ರುಪಾಯಿಗಳು. ನಮ್ಮ ರಫ್ತು ಪ್ರಮಾಣಕ್ಕೆ ಹೋಲಿಸಿದರೆ ನಮ್ಮ ಆಮದು ಪ್ರಮಾಣವು ಶೇ.149.67ರಷ್ಟಿದೆ. 2007-08 ಸಾಲಿನಲ್ಲಿ ಭಾರತದ ರಫ್ತು ಪ್ರಮಾಣವು 150 ಬಿಲಿಯನ್ ಡಾಲರ್ ಗಳಷ್ಟಿತ್ತು. 2008ರಲ್ಲಾದ ಜಾಗತಿಕ ಆರ್ಥಿಕ ಕುಸಿತದ ಪರಿಣಾಮ 2008-09ರಲ್ಲಿ ರಫ್ತು ಪ್ರಮಾಣ ಏರಿಕೆಯಾಗಲಿಲ್ಲ. ಆದರೆ, 2009-10ರಿಂದ 2013-14 150- ಬಿಲಿಯನ್ ಡಾಲರ್ ಗಳಿಂದ 314.4 ಬಿಲಿಯನ್ ಡಾಲರ್ ಗಳಿಗೆ ಜಿಗಿಯಿತು. ಐದು ವರ್ಷಗಳಲ್ಲೇ ರಫ್ತು ಪ್ರಮಾಣ ದುಪ್ಪಟ್ಟಾಯಿತು. ಮೋದಿ ಸರ್ಕಾರದ ಅವಧಿಯಲ್ಲಿ ರಫ್ತು ಪ್ರಮಾಣ ತಟಸ್ಥ ಮಟ್ಟದಲ್ಲಿದೆ.
ಒಂದು ವೇಳೆ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ರಫ್ತು ಪ್ರಮಾಣ ಏರಿಕೆಯನ್ನು ಮೋದಿ ಸರ್ಕಾರ ಕಾಯ್ದುಕೊಂಡಿದ್ದರೆ, ನಮ್ಮ ರಫ್ತು 400 ಬಿಲಿಯನ್ ಡಾಲರ್ ದಾಟುತ್ತಿತ್ತು, ಆಮದು ರಫ್ತು ನಡುವಿನ ಅಂತರವು ಕೇವಲ 64 ಬಿಲಿಯನ್ ಡಾಲರ್ ಗಳಷ್ಟಾಗುತ್ತಿತ್ತು. ಈಗ ಆಮದು ರಫ್ತು ನಡುವಿನ ಅಂತರವು 164 ಬಿಲಿಯನ್ ಡಾಲರ್ ಗಳಷ್ಟಿದೆ. ಈ ಅಂತರವನ್ನು ತ್ವರಿತವಾಗಿ ತಗ್ಗಿಸಿಕೊಳ್ಳುವುದು ಅತ್ಯಗತ್ಯ.
ಮೋದಿ ಸರ್ಕಾರದ ಅವಧಿಯಲ್ಲಿ ರಫ್ತು ಪ್ರಮಾಣ ತಗ್ಗಲು ಜಾಗತಿಕ ಪರಿಸ್ಥಿತಿ ಕಾರಣವೆಂದು ಸರ್ಕಾರಿ ಅಧಿಕಾರಿಗಳು ವಾದಿಸುತ್ತಾರೆ. ಆದರೆ, ಮೋದಿ ಸರ್ಕಾರ ಆರಂಭದಲ್ಲಿ ಜಾರಿಗೆ ತಂದ ಆರ್ಥಿಕ ನೀತಿಗಳು ರಫ್ತು ಪ್ರಮಾಣ ಕುಸಿಯಲು ಮುಖ್ಯ ಕಾರಣ. ನಂತರ ಬಂದ ಅಪನಗದೀಕರಣ ಮತ್ತು ಜಿಎಸ್ಟಿ ಮತ್ತಷ್ಟು ಕುಸಿತಕ್ಕೆ ಕಾರಣವಾದವು. ಮೋದಿ ಸರ್ಕಾರ ರಫ್ತು ಮತ್ತು ಆಮದಿನ ಅಂಕಿ ಸಂಖ್ಯೆಗಳನ್ನು ತಿರುಚಲು ಹೋಗಿಲ್ಲ. ಏಕೆಂದರೆ ಈ ಅಂಕಿ ಅಂಶಗಳು ಮೋದಿ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ವಿಶ್ವಬ್ಯಾಂಕ್, ಐಎಂಎಫ್, ಡಬ್ಲ್ಯೂಟಿಒ ಸೇರಿದಂತೆ ಜಾಗತಿಕ ವ್ಯಾಪಾರ ಸಂಘಟನೆಗಳು, ಅಂತಾರಾಷ್ಟ್ರೀಯ ಏಜೆನ್ಸಿಗಳು ಅಂಕಿಅಂಶಗಳ ಮೇಲೆ ನಿಗಾ ಇಟ್ಟಿರುತ್ತವೆ.