ಕಳೆದೊಂದು ವರ್ಷದಿಂದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ, ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ (63) ಇಂದು ನಿಧನರಾದರು.
ಪರಿಕ್ಕರ್ ಅವರ ಆರೋಗ್ಯವು ಶನಿವಾರದಿಂದ ತೀವ್ರ ಹದಗೆಟ್ಟಿದ್ದು ಯಾವುದೇ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ಇಂದು ಸಂಜೆ 7 ಗಂಟೆಗೆ ಪರಿಸ್ಥಿತಿ ಕೈ ಮೀರುತ್ತಿದ್ದ ಸಂದರ್ಭದಲ್ಲಿ ಈ ‘ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ, ವೈದ್ಯರು ಸಾಧ್ಯವಾದ ಪ್ರಯತ್ನ ನಡೆಸುತ್ತಿದ್ದಾರೆ’ ಎಂಬ ಸಂದೇಶವನ್ನು ಟ್ವಿಟರ್ ಮೂಲಕ ಗೋವಾ ಸರ್ಕಾರ ಹಂಚಿಕೊಂಡಿತ್ತು. ಇದಾದ ಕೆಲ ಸಮಯದಲ್ಲಿ ಅವರು ನಿಧನರಾಗಿರುವ ಸುದ್ದಿ ಬಂದಿದೆ.
Chief Minister @manoharparrikar's health condition is extremely critical. Doctors are trying their best.
— CMO Goa (@goacm) March 17, 2019
ಸುದ್ದಿ ತಿಳಿಯುತ್ತಿದ್ದಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
Extremely sorry to hear of the passing of Shri Manohar Parrikar, Chief Minister of Goa, after an illness borne with fortitude and dignity. An epitome of integrity and dedication in public life, his service to the people of Goa and of India will not be forgotten #PresidentKovind
— President of India (@rashtrapatibhvn) March 17, 2019
ಮನೋಹರ್ ಪರಿಕ್ಕರ್- ಕಿರು ಪರಿಚಯ
ಮನೋಹರ ಗೋಪಾಲಕೃಷ್ಣ ಪ್ರಭು ಪರಿಕ್ಕರ್ ಎಂಬ ಪೂರ್ಣ ಹೆಸರಿನ ಮನೋಹರ್ ಪರಿಕ್ಕರ್ (ಡಿ.13, 1955- ಮಾ.17,2019) ಗೋವಾ ರಾಜ್ಯದ ಮಪುಸಾದಲ್ಲಿ ಜನಿಸಿ ಮರಗೋವಾದ ಲೋಯಲಾ ಹೈಸ್ಕೂಲ್ನಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದರು. ಮರಾಠಿಯಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದ ಅವರು 1978ರಲ್ಲಿ ಐಐಟಿ, ಬಾಂಬೆಯಲ್ಲಿ ಮೆಟಲರ್ಜಿಕಲ್ ಎಂಜಿನಿಯರಿಂಗ್ ಪದವಿ ಗಳಿಸಿದ್ದರು. ಐಐಟಿಯಲ್ಲಿ ಓದಿ ಶಾಸಕರಾಗಿ ಸೇವೆ ಸಲ್ಲಿಸಿದ ಮೊದಲ ರಾಜಕಾರಣಿ ಮನೋಹರ್ ಪರಿಕ್ಕರ್.
ಮನೋಹರ್ ಪರಿಕ್ಕರ್ ಅವರ ರಾಜಕೀಯವು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪ್ರಾರಂಭಗೊಂಡಿತ್ತು.
1994ರಲ್ಲಿ ಗೋವಾ ವಿಧಾನ ಸಭೆಗೆ ಆಯ್ಕೆಗೊಂಡಿದ್ದ ಪರಿಕ್ಕರ್ 199ರಲ್ಲಿ ಪ್ರತಿಪಕ್ಷ ನಾಯಕರಾಗಿ ಹೊರಹೊಮ್ಮಿದ್ದರು. 2000ನೇ ಇಸವಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾಗಿದ್ದರಾದರೂ ಕೇವಲ ನಾಲ್ಕೇ ತಿಂಗಳಲ್ಲಿ ಸ್ಥಾನದಿಂದ ಕೆಳಕ್ಕಿಳಿಯಬೇಕಾಯಿತು. ಮತ್ತೆ 2002ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ 2005ರಲ್ಲಿ ಹಲವು ಬಿಜೆಪಿ ಶಾಸಕರ ರಾಜೀನಾಮೆಯಿಂದಾಗಿ ಮತ್ತೆ ಅಧಿಕಾರದಿಂದ ಕೆಳಕ್ಕಿಳಿಯಬೇಕಾಯಿತು.
2014ರಲ್ಲಿ ಬಿಜೆಪಿಯಿಂದ ನರೇಂದ್ರ ಮೋದಿಯನ್ನು ಪ್ರಧಾನಿ ಹುದ್ದೆಗೆ ಪ್ರಸ್ತಾಪಿಸಿದ ಮೊದಲಿಗರು ಮನೋಹರ್ ಪರಿಕ್ಕರ್. ಮೋದಿ ಪ್ರಧಾನಿಯಾದ ನಂತರ ಮನೋಹರ್ ಪರಿಕ್ಕರ್ ಅವರನ್ನು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಲು ಮನವೊಲಿಸಿದ ನರೇಂದ್ರ ಮೋದಿ 2014ರ ನವೆಂಬರಿನಲ್ಲಿ ಅವರನ್ನು ರಕ್ಷಣಾ ಸಚಿವರನ್ನಾಗಿ ಮಾಡಿದ್ದರು. ಉತ್ತರ ಪ್ರದೇಶದ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡುವ ಮೂಲಕ ಪರಿಕ್ಕರ್ ಅವರನ್ನು ಸಂಸತ್ತಿಗೆ ಪ್ರವೇಶಿಸುವಂತೆ ಮಾಡಲಾಗಿತ್ತು.
2017ರಲ್ಲಿ ಗೋವಾದಲ್ಲಿ ನಡೆದ ವಿಧಾನ ಸಭಾ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಕೈಜೋಡಿಸಿದ್ದ ಗೋವಾ ಫಾರ್ವರ್ಡ್ ಪಕ್ಷದ ಶರತ್ತುಬದ್ಧ ಬೆಂಬಲದ ಮೇರೆಗೆ ಮನೋಹರ್ ಪರಿಕ್ಕರ್ ಕೇಂದ್ರ ಸರ್ಕಾರ ತ್ಯಜಿಸಿ ಪುನಃ ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ವಿವಾದಗಳು
ಮನೋಹರ್ ಪರಿಕ್ಕರ್ ಹಲವು ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದರು. 2001ರಲ್ಲಿ ಗೋವಾ ಸರ್ಕಾರವು ತನ್ನ 51 ಪ್ರಾಥಮಿಕ ಶಾಲೆಗಳನ್ನು ಆರೆಸ್ಸೆಸ್ಸಿನ ವಿದ್ಯಾಭಾರತಿ ಸಂಸ್ಥೆಗೆ ವಹಿಸಿಕೊಟ್ಟಿದ್ದು ಶಿಕ್ಷಣ ತಜ್ಞರಿಂದ ಟೀಕೆಗೊಳಗಾಗಿತ್ತು. 2014ರಲ್ಲಿ ಬ್ರೆಜಿಲ್ ನಲ್ಲಿ ನಡೆಯುವ ಫೀಫಾ ವಿಶ್ವಕಪ್ ಪಂದ್ಯಾವಳಿ ವೀಕ್ಷಿಸಲು ಬಿಜೆಪಿ ಪಕ್ಷದ ಆರು ಶಾಸಕರಿಗೆ ಸಾರ್ವಜನಿಕ ಬೊಕ್ಕಸದಿಂದ 89 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿದ್ದು ಪ್ರತಿಪಕ್ಷದಿಂದ ಜನರ ಹಣವನ್ನು “ಪೋಲು”ಮಾಡುತ್ತಿರುವ ಟೀಕೆಗೆ ಪರಿಕ್ಕರ್ ಒಳಗಾಗಿದ್ದರು. ರಾಫೇಲ್ ಹಗರಣದಲ್ಲಿಯೂ ಪರಿಕ್ಕರ್ ಹೆಸರು ಕೇಳಿ ಬಂದಿತ್ತು.
ಅನಾರೋಗ್ಯ-ಕ್ಯಾನ್ಸರ್
2018ರ ಜೂನ್ ತಿಂಗಳಿನಲ್ಲಿ ಪರಿಕ್ಕರ್ ಪ್ಯಾಂಕ್ರಿಯಾಟೈಟಿಸ್ (ಮೆದೋಜೀರಕ ಗ್ರಂಥಿಗೆ ಸಂಬಂಧಿಸಿದ) ಖಾಯಿಲೆಗೆ ತುತ್ತಾಗಿದ್ದರು. ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ್ದರು. ಮತ್ತೆ ಸೆಪ್ಟೆಂಬರ್ ತಿಂಗಳಿನಲ್ಲಿ ಎಐಐಎಂಎಸ್ನಲ್ಲಿ ದಾಖಲಾಗಿದ್ದರು. ಅಕ್ಟೋಬರ್ 27, 2018ರಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ಮನೋಹರ್ ಪರಿಕ್ಕರ್ ಅವರು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ನಿಂದ ನರಳುತ್ತಿದುದನ್ನು ದೃಢಪಡಿಸಿದ್ದರು.
ಪರಿಕ್ಕರ್ ಅವರ ಪತ್ನಿ 2001ರಲ್ಲಿ ನಿಧನ ಹೊಂದಿದ್ದು, ಪರಿಕ್ಕರ್ ದಂಪತಿಗಳು ಇಬ್ಬರು ಪುತ್ರರನ್ನು- ಉತ್ಪಲ್ ಮತ್ತು ಅಭಿಜಾತ್ – ಅಗಲಿದ್ದಾರೆ.