ಫೆಬ್ರವರಿಯಲ್ಲಿ ಫುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ದಾಳಿಗೈದ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮದ್ ಉಗ್ರರ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಮಟ್ಟದ ಉಗ್ರಗಾಮಿ ಎಂದು ಘೋಷಿಸಿ, ಅವನ ವಿರುದ್ಧ ನಿಷೇಧ ಹೇರಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಳೆದ ವಾರ ಭಾರತ ಪ್ರಯತ್ನ ನಡೆಸಿತ್ತು. ಅದಕ್ಕೆ ಚೀನಾ ತಾಂತ್ರಿಕ ತಡೆ ಒಡ್ಡಿದಾಗ ಭಾರತದ ವಿದೇಶಾಂಗ ಸಚಿವಾಲಯವು ಇದು ನಿರಾಶಾದಾಯಕ ಬೆಳವಣಿಗೆ ಎಂದು ಬಣ್ಣಿಸಿದರೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳು ಮತ್ತೆ ಮನೆಮಾಡಿವೆ.
ಭಾರತದ ಪ್ರತಿಪಕ್ಷಗಳು ಮಸೂದ್ ಅಜರ್ ನನ್ನು ಉಗ್ರಗಾಮಿ ಎಂದು ಗುರುತಿಸದೇ ಇರುವುದರಿಂದ ತಾನೂ ಸಹ ವಿಶ್ವಸಂಸ್ಥೆಯಲ್ಲಿ ಅವನನ್ನು ಉಗ್ರಗಾಮಿ ಎಂದು ಗುರುತಿಸಲು ಸಾಧ್ಯವಾಗದು ಎಂದು ಚೀನಾ ಹೇಳಿರುವುದಾಗಿ NAMO ಎಂಬ ಫೇಸ್ ಬುಕ್ ಪೇಜಿನಲ್ಲಿ ಪೋಸ್ಟ್ ಹಾಕಲಾಗಿದೆ.
ನಿನ್ನೆಯ ವರೆಗೂ ಈ ಪೋಸ್ಟನ್ನು ವಿವಿಧೆಡೆ 9000 ಸಲ ಹಂಚಿಕೊಳ್ಳಲಾಗಿದೆ ಎಂದು ‘ದ ಕ್ವಿಂಟ್’ ಪತ್ರಿಕೆ ತಿಳಿಸಿದ್ದು, ಕೆಲವು ಪೋಸ್ಟ್ ಗಳನ್ನು ಈಗಾಗಲೇ ಅಳಿಸಲಾಗಿದೆ.
ಈ ಪೋಸ್ಟ್ ನಲ್ಲಿರುವುದು ನಿಜವೇ? ಭಾರತದ ವಿಪಕ್ಷಗಳ ಬಗ್ಗೆ ಚೀನಾ ಹೇಳಿತ್ತೆ?
‘ದ ಕ್ವಿಂಟ್’ ಇದನ್ನು ಪರೀಕ್ಷೆಗೊಳಪಡಿಸಿದಾಗ, ಚೀನಾ ಅಂತಹ ಹೇಳಿಕೆಯನ್ನು ಎಲ್ಲೂ ನೀಡಿಯೇ ಇಲ್ಲ ಎಂಬುದು ದೃಢಪಟ್ಟಿದೆ. ಮಸೂದ್ ಅಜರ್ ನನ್ನು ನಿಷೇಧಿಸಲು ಚೀನಾ ತಡೆಯೊಡ್ಡಿದ ಕೂಡಲೇ “ಚೀನಾ ಒಡ್ಡಿರುವ ‘ತಾಂತ್ರಿಕ ತಡೆ’ಯ ಕುರಿತು ತನ್ನೆಲ್ಲಾ ಸದಸ್ಯರಿಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿ 1267 ಸಮಿತಿಯ ಕಾರ್ಯದರ್ಶಿ ಮಂಡಳಿ ಬರೆದಿರುವ ಪತ್ರದ ಪ್ರತಿ”ಯನ್ನು ಹಿರಿಯ ಪತ್ರಕರ್ತ ಆದಿತ್ಯ ರಾಜ್ ಕೌಲ್ ಟ್ವೀಟ್ ಮಾಡಿದ್ದರು. ಆದರೆ ಈ ಟ್ವೀಟ್ ಗೂ ಪೋಸ್ಟ್ ಗೂ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ.
#BREAKING: Exclusive copy of the note sent by UNSC 1267 Committee Secretariat to all its members on China placing a ‘technical hold’ on the terror designation of Maulana Masood Azhar at the UNSC. Proposal was introduced by US, UK and France. pic.twitter.com/vGbLje8rfE
— Aditya Raj Kaul (@AdityaRajKaul) March 14, 2019
ಏನಿದು 1267ರ ಸಮಿತಿ?
1999ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಸೇರಿ ತಾಲಿಬಾನ್ ಗೆ ಸಂಬಂಧಿಸಿದ ಅಲ್ ಖೈದಾ ನಿರ್ಬಂಧ ಸಮಿತಿಯನ್ನು ರಚಿಸಿ ಉಗ್ರಗಾಮಿಗಳಿಗೆ ಜಾಗತಿಕ ಮಟ್ಟದಲ್ಲಿ ನಿಷೇಧ ಹೇರುವ ನಿರ್ಣಯವನ್ನು 15ನೇ ಅಕ್ಟೋಬರ್ 1999ರಂದು ಕೈಗೊಳ್ಳುತ್ತದೆ. ಇದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267ನೆಯ ನಿರ್ಣಯವಾಗುತ್ತದೆ ಮತ್ತು ಅಂತಹ ನಿಷೇಧವನ್ನು ಚರ್ಚಿಸಿ ತೀರ್ಮಾನಿಸುವ ಸಮಿತಿ ಕೂಡ ರಚನೆಯಾಗಿ 1267ರ ಸಮಿತಿ ಎಂದು ಹೆಸರಿಸಲಾಗುತ್ತದೆ.
2019ರ ಮಾರ್ಚ್ 14ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, “ಚೀನಾ ಏಕೆ ಅಂತಹ ಕ್ರಮಕ್ಕೆ ಮುಂದಾಯಿತು?” ಎಂದು ಪ್ರಶ್ನಿಸಲಾಗಿ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಕೆಳಕಂಡಂತೆ ಉತ್ತರಿಸಿದರೆಂದು ವರದಿಯಾಗಿದೆ.
ಚೀನಾ ಒಡ್ಡಿದ ತಾಂತ್ರಿಕ ತಡೆಯ ಹಿಂದಿನ ಉದ್ದೇಶವನ್ನು ಈ ಹೇಳಿಕೆ ಸ್ಪಷ್ಟಪಡಿಸುತ್ತದೆ.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ 1267 ಸಮಿತಿಯು ಉಗ್ರಗಾಮಿ ಸಂಘಟನೆಗಳು ಅಥವಾ ವ್ಯಕ್ತಿಗಳನ್ನು ಪಟ್ಟಿ ಮಾಡಲು ಕಾರ್ಯವಿಧಾನಗಳನ್ನು ಸ್ಪಷ್ಟವಾಗಿ ಸೂಚಿಸಿದೆ. ಆಯಾ ದೇಶಗಳು ಮುಂದಿಟ್ಟಿರುವಂತಹ ಪಟ್ಟಿಯ ಕೋರಿಕೆಯನ್ನು ಚೀನಾ ಸಮಗ್ರವಾಗಿ ಮತ್ತು ಆಳವಾಗಿ ಅಧ್ಯಯನ ನಡೆಸುತ್ತಿದೆ. ನಮಗೆ ಇನ್ನೂ ಹೆಚ್ಚಿನ ಕಾಲಾವಕಾಶ ಅಗತ್ಯವಿರುವುದರಿಂದಲೇ ಅದನ್ನು ತಾಂತ್ರಿಕ ತಡೆಯಲ್ಲಿಡಲು ನಾವು ನಿರ್ಧರಿಸಿದ್ದೇವೆ. ನಮ್ಮ ಈ ನಿರ್ಧಾರವು 1267 ಸಮಿತಿಯ ಕಾರ್ಯವಿಧಾನದ ನಿಯಮಾವಳಿಗಳಿಗೆ ಅನುಗುಣವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲರೊಡನೆ ಕ್ರಿಯಾತ್ಮಕವಾಗಿ, ಜವಾಬ್ದಾರಿಯುತವಾಗಿ ಚೀನಾ ತನ್ನ ಸಂವಹನ ಮತ್ತು ಸಮನ್ವಯವನ್ನು ಮುಂದುವರಿಸಲಿದೆ.
-
ಲು ಕಾಂಗ್, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ
ಇದಲ್ಲದೆ ಭಾರತದಲ್ಲಿ ಚೀನಾದ ರಾಯಭಾರಿಯಾಗಿರುವ ಲುವೊ ಜಾವೋಹುಯಿ ಅವರು ಮಸೂದ್ ಅಜರ್ ನ ಮೇಲೆ ನಿಷೇಧ ಹೇರುವ ವಿಚಾರದಲ್ಲಿ ಇಂದು ಎಎನ್ಐ ಸುದ್ದಿ ಸಂಸ್ಥೆಗೆ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಈ ಸಮಸ್ಯೆಯು ಬಗೆಹರಿಯಲಿದೆ. ಇದು ಕೇವಲ ತಾಂತ್ರಿಕ ತಡೆಯಷ್ಟೇ. ಅಂದರೆ ಇನ್ನೂ ಸಮಾಲೋಚನೆಗಳಿಗೆ ಅವಕಾಶವಿದೆ. ನನ್ನ ಮೇಲೆ ವಿಶ್ವಾಸವಿಡಿ, ಈ ಸಮಸ್ಯೆ ಬಗೆಹರಿಯಲಿದೆ. ಭಾರತದ ಆತಂಕ ನಮಗೆ ಅರ್ಥವಾಗುತ್ತದೆ, ಈ ಸಮಸ್ಯೆ ಬಗೆಹರಿಯುವ ಬಗ್ಗೆ ನಮಗೆ ಆಶಾಭಾವನೆ ಇದೆ. ಕಳೆದ ವರ್ಷ ವುಹಾನ್ ಶೃಂಗಸಭೆಯ ನಂತರ ಎರಡೂ ರಾಷ್ಟ್ರಗಳ ನಡುವಿನ ಸಹಕಾರ ಸರಿಯಾದ ಹಾದಿಯಲ್ಲಿದೆ ಮತ್ತು ಕ್ಷಿಪ್ರಗತಿಯಲ್ಲಿ ಸಾಗಿದೆ. ಈ ಸಹಕಾರ ನಮಗೆ ಸಮಾಧಾನ ತಂದಿದೆ, ಭವಿಷ್ಯದ ಬಗ್ಗೆ ಭರವಸೆ ಹೊಂದಿದ್ದೇವೆ.
ಚೀನಾದ ಅಧಿಕೃತ ಹೇಳಿಕೆಗಳು ಮೇಲಿನಂತೆ ಇದ್ದರೂ ಸಹ ಈ ವಿಷಯದಲ್ಲಿ.. ಸುಳ್ಳು ಸುದ್ದಿಗಳು NAMO ಪೇಜಿನಲ್ಲಿ ಹೇಗೆ ಮತ್ತೆ ಏಕೆ ಹುಟ್ಟಿಕೊಳ್ಳುತ್ತಿವೆ ಹಾಗೂ ಹರಡುತ್ತಿವೆ? ಈ ಡೋಂಗಿ ಸುದ್ದಿಗಳಿಗೆ ಮೂಲ ಯಾವುದು? ಈ ಪೇಜಿಗೆ ವಿಷಯ ನೀಡುವುದು ಯಾರು? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ…. NAMO ಮುಖವಾಡ ಕಳಚುತ್ತಾ ಹೋಗುತ್ತದೆ.
ಡೋಂಗಿ NAMO ಪೇಜಿನ ಹಿಂದಿನ ರಾಜಕೀಯ ಕುತಂತ್ರ
ಈ ಚಿತ್ರದಲ್ಲಿ ಕೇವಲ ಚೀನಾದ ವಿರುದ್ಧ ಸುಳ್ಳುಗಳನ್ನು ಪ್ರಚಾರ ಮಾಡಿರುವುದು ಮಾತ್ರವಲ್ಲ, ಬರಲಿರುವ ಚುನಾವಣೆಗಳಲ್ಲಿ ವಿರೋಧ ಪಕ್ಷಗಳಿಗೆ ಮತ ಚಲಾಯಿಸುವ ಮುನ್ನ ಯೋಚಿಸಲೂ ಹೇಳಲಾಗಿದೆ! ಇದೊಂದು ಪಕ್ಕಾ ರಾಜಕೀಯ ಕುತಂತ್ರ ಎಂಬುದು ಯಾರು ಬೇಕಾದರೂ ಗ್ರಹಿಸಬಹುದು. ಇದರಲ್ಲಿ ವಿಕ್ರಮ ಶರ್ಮಾ ಎಂಬುವವನ ಹೆಸರಿದೆ ಮತ್ತು ಅವನನ್ನು ಟ್ಯಾಗ್ ಕೂಡ ಮಾಡಲಾಗಿದೆ. ವಿಕ್ರಮ ಶರ್ಮಾನ ಫೇಸ್ ಬುಕ್ ಪ್ರೊಫೈಲ್ ಗಮನಿಸಿದರೆ ಅವನು NAMO ಪೇಜಿನ ‘ಕೋ-ಅಡ್ಮಿನ್ ಮತ್ತು ಎಡಿಟರ್’ ಎಂದು ತಿಳಿಯುತ್ತದೆ. ಅದೂ ಅಲ್ಲದೆ ಈ ಪುಟವು ಸುಳ್ಳುಸುದ್ದಿಗಳ ಪ್ರಸಾರಕ್ಕೆ ಕುಖ್ಯಾತವಾಗಿದೆ. ಹಳೆಯ ವಿಡೀಯೊ ತುಣುಕುಗಳನ್ನು ಹೊಚ್ಚಹೊಸದೆಂಬಂತೆ ಬಿಂಬಿಸಿ ತನ್ನ ಪುಟದಲ್ಲಿ ತಳ್ಳಿರುವ ನಿದರ್ಶನವಿದೆ. ಆರ್ ಎಸ್ಎಸ್ ಪರಿವಾರದ ಎಬಿವಿಪಿ ಕೇರಳದ ವಿವಿಯೊಂದರಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿತ್ತೆಂಬ ಡೋಂಗಿ ಸುದ್ದಿ ಪ್ರಚಾರ ಮಾಡಿ ಸಿಕ್ಕಿ ಬಿದ್ದಿದ್ದ. ಜಾಲತಾಣಗಳಲ್ಲಿ ವಿಕ್ರಮನ ‘ಪರಾಕ್ರಮ’ ಬರೀ NAMO ಪೇಜಿಗೆ ಸೀಮಿತವಾಗಿಲ್ಲ. ಅವನ ಫೇಸ್ ಬುಕ್ ಪ್ರೊಫೈಲ್ ನಲ್ಲಿ ತನ್ನನ್ನು ತಾನು “PMOIndia-ReportCard ಪೇಜ್ ಗೆ ಸೃಜನಾತ್ಮಕ ಬರಹಗಾರನೆಂದೂ ಮತ್ತು BJP4UP ಪೇಜಿಗೆ ‘ಕೋ-ಅಡ್ಮಿನ್ ಮತ್ತು ಎಡಿಟರ್’ ಎಂದೂ ಗುರುತಿಸಿಕೊಂಡಿದ್ದಾನೆ.
‘ದ ಕ್ವಿಂಟ್’ ಪತ್ರಿಕೆಯ ಜೊತೆ ಮಾತನಾಡಿರುವ ವಿಕ್ರಮ, ತನ್ನ ಪೋಸ್ಟ್ ಗಳಿಗೆ ವಿಷಯಗಳನ್ನು ಬಿಜೆಪಿಯ ಐಟಿ ಸೆಲ್ ನೀಡುವುದಾಗಿ ಹೇಳಿಕೊಂಡಿದ್ದಾನೆ.
ನನ್ನ ಪೋಸ್ಟ್ ಗಳು ಪ್ರತಿ ದಿನವೂ ಒಂದು ಕೋಟಿ ಓದುಗರನ್ನೂ ಮೀರಿ ತಲುಪುತ್ತಿವೆ. ನಾನು 6 ಫೇಸ್ ಬುಕ್ ಪೇಜ್ ಗಳನ್ನು ನಿರ್ವಹಿಸುತ್ತೇನೆ, 30ಕ್ಕೂ ಹೆಚ್ಚು ವಾಟ್ಸಪ್ ಗ್ರೂಪುಗಳಲ್ಲಿ ಹಾಗೂ 10-15 ಫೇಸ್ ಬುಕ್ ಗುಂಪುಗಳಲ್ಲಿ ಸಕ್ರಿಯವಾಗಿದ್ದೇನೆ. ನನ್ನ ಪೋಸ್ಟ್ ಗಳು ಜನರನ್ನು ತಲುಪುವುನ್ನು ಕಂಡು ಎರಡು ತಿಂಗಳ ಹಿಂದೆ ನನ್ನನ್ನು PMOIndia ಪೇಜಿಗೆ ಕಂಟೆಂಟ್ ರೈಟರನ್ನಾಗಿ ಮಾಡಲಾಯಿತು. ಈಗ ಐಟಿ ಸೆಲ್ ನನಗೆ ವಿಷಯಗಳನ್ನು (content) ನೀಡುತ್ತದೆ, ಅವುಗಳನ್ನು ನಾನು ಫೇಸ್ ಬುಕ್ ಮತ್ತು ವಾಟ್ಸಪ್ ಮೂಲಕ ಪ್ರಸಾರ ಮಾಡುತ್ತೇನೆ.
–ವಿಕ್ರಮ ಶರ್ಮಾ
ವಿಕ್ರಮ ತನ್ನ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾನಂತೆ. ಈ ಡೋಂಗಿ ‘ಪರಾಕ್ರಮಿ’ಗೇ ಅವುಗಳು ತಲೆನೋವಾಗಿ ಪರಿಣಮಿಸಿವೆಯಂತೆ! ಅಲ್ಲದೆ ಬಿಜೆಪಿಯ ಸದಸ್ಯತ್ವದಿಂದ ಹೊರಬಂದು ಸಾಮಾಜಿಕ ಮಾಧ್ಯಮದಲ್ಲಿ ಬರಹಗಾರನಾಗಿ ಬೆಳೆಯುತ್ತ, ವಿಷಯಗಳನ್ನು ಸೃಷ್ಟಿಸುವವನಾಗಿ ಪಕ್ಷಕ್ಕಾಗಿ ದುಡಿಯುವತ್ತ ಹೆಚ್ಚು ಒಲವು ಹೊಂದಿದ್ದೇನೆಂದು ಹೇಳಿಕೊಂಡಿದ್ದಾನೆ. ಬಿಜೆಪಿಯ ಪಂಜಾಬ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕಮಲ್ ಶರ್ಮಾ ಹೇಳುವಂತೆ, ಬಿಜೆಪಿಯ ಸಾಮಾಜಿಕ ಮಾಧ್ಯಮದ ಅತ್ಯಂತ ಸಕ್ರಿಯ ಯೋಧರ ಪೈಕಿ ವಿಕ್ರಮ ಒಬ್ಬನಾಗಿದ್ದಾನೆ. ಚುನಾವಣೆ ಸಮೀಪಿಸಿದಂತೆಯೂ, “ಹೃದಯದಿಂದ ಹೇಳು, ಮತ್ತೆ ಮೋದಿಯೆಂದು” ಎನ್ನುತ್ತಾ ನರೇಂದ್ರ ಮೋದಿಯವರನ್ನು ಪುನಃ ಅಧಿಕಾರಕ್ಕೆ ತರುವುದೇ ತನ್ನ ಗುರಿ ಎಂದು ಅವನು ಘೋಷಿಸುತ್ತಾನೆ, ಸಾಮಾಜಿಕ ಜಾಲತಾಣಗಳಲ್ಲಿ ವಿಷಯಗಳನ್ನು ಪ್ರಸಾರ ಮಾಡುತ್ತೇನೆಂದು ನಿರ್ಭೀತಿಯಿಂದ ಹೇಳಿಕೊಳ್ಳುತ್ತಾನೆ.
ಒಂದು ಕಡೆ ತನ್ನ ಐಟಿ ಸೆಲ್ ಮೂಲಕ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಅವುಗಳನ್ನೇ ಪ್ರಚಾರ ಮಾಡುವ ಇಂತಹ ನಕಲಿ ಸುದ್ದಿಗಳ ಪರಾಕ್ರಮಿ ತ್ರಿ‘ವಿಕ್ರಮ’ಗಳನ್ನು ಪೋಷಿಸುತ್ತಿದೆ ಭಾರತೀಯ ಜನತಾ ಪಕ್ಷ. ಇನ್ನೊಂದೆಡೆ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಒಮ್ಮೊಮ್ಮೆ ಸಾರ್ವಜನಿಕವಾಗಿ ಸುಳ್ಳು ಸುದ್ದಿಗಳ ವಿರುದ್ಧ ಹೇಳಿಕೆ ನೀಡುವುದೂ ಎಷ್ಟು ಡೋಂಗಿ ಎನಿಸುವುದಿಲ್ಲವೇ? ಅಂದ ಹಾಗೆ, ಸುಳ್ಳು ಸುದ್ದಿಗಳ ತಾಣವಾಗಿರುವ PMO India-Report Card ನ ಟ್ವಿಟರ್ ಹ್ಯಾಂಡಲ್ಲನ್ನು ಅನುಸರಿಸುತ್ತಿರುವವರ ಪಟ್ಟಿಯಲ್ಲಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಒಬ್ಬರು!
-
ಜ್ಯೋತಿ ಎ