ಶಿವಸುಂದರ್ ನಾಡಿನ ಪ್ರಖರ ಚಿಂತಕರಲ್ಲೊಬ್ಬರು. ಇಂದು ಉಡುಪಿಯಲ್ಲಿ ನಡೆದ ಸರ್ವಜನೋತ್ಸವ ಕಾರ್ಯಕ್ರಮದಲ್ಲಿ ಸಮಕಾಲೀನ ಭಾರತೀಯ ಸಮಾಜದ ಬಿಕ್ಕಟ್ಟುಗಳ ಕುರಿತು ಮನೋಜ್ಞವಾಗಿ ಮಾತನಾಡಿದರು. ಅವರ ಭಾಷಣದ ಪೂರ್ಣಪಾಠವು ತುಸು ದೀರ್ಘವಾಗಿದ್ದರೂ ಸಹ ಶಿವಸುಂದರ್ ಅವರು ಆಡಿದ ಮಾತುಗಳಲ್ಲಿ ಅನೇಕ ಮೌಲಿಕ ಸಂಗತಿಗಳಿರುವ ಕಾರಣದಿಂದ ಇಡೀ ಭಾಷಣದ ಬರೆಹರೂಪವನ್ನು ಟ್ರೂಥ್ ಇಂಡಿಯಾ ಕನ್ನಡ ಒಂದೇ ಕಂತಿನಲ್ಲಿ ಪ್ರಕಟಿಸುತ್ತಿದೆ.
ಸಭೆಯ ಅಧ್ಯಕ್ಷರೇ, ವೇದಿಕೆಯಲ್ಲಿರುವ ಎಲ್ಲಾ ಗಣ್ಯರೇ, ಎಲ್ಲಾ ಸಂವಿಧಾನ ಪರ ಬಂಧುಗಳೇ, ಈ ಕಾರ್ಯಕ್ರಮ ಪ್ರಾರಂಭಿಸುವ ಮೊದಲು ಬಹಳ ಅತ್ಯಗತ್ಯವಾಗಿದ್ದ ಕ್ರಿಯೆಯನ್ನು ನಾವು ನಡೆಸಿದೆವು. ಹೊರಗಿನ ಭಯೋತ್ಪಾದನೆಗೆ ತುತ್ತಾಗಿ ಈ ದೇಶದ ಗಡಿಗಳನ್ನು ಕಾಯುತ್ತಿದ್ದ ಸೈನಿಕರಿಗೆ ನಾವು ಶ್ರದ್ಧಾಂಜಲಿ ಅರ್ಪಿಸಿದೆವು. ಅದು ನಾವು ಮಾಡಲೇಬೇಕಿದ್ದ ಕಾರ್ಯಕ್ರಮ. ಆದರೆ ಅದು ಅರ್ಧಕ್ಕೇ ನಿಂತುಹೋಯಿತು ಎಂದು ನನಗನ್ನಿಸಿದೆ. ದೇಶದ ಗಡಿಗಳನ್ನು ಕಾಯುತ್ತಿರುವ ಹಾಗೆಯೇ ಈ ದೇಶದ ಒಳಗಿರುವ ಜನರ ಬದುಕನ್ನು, ಅವರ ಸ್ವಾತಂತ್ರ್ಯ, ಸಮಾನತೆಯನ್ನು ಕಾಯುವ ಹಲವಾರು ಸೈನಿಕರಿದ್ದಾರೆ. ಆ ಸೈನಿಕರನ್ನು ಆಂತರಿಕ ಭಯೋತ್ಪಾದನೆ ಬಲಿ ತೆಗೆದುಕೊಂಡಿದೆ. ಈಗಾಗಲೇ ಸ್ವಾಮೀಜಿಗಳು ಹೇಳಿರುವಂತೆ ಗೌರಿ ಲಂಕೇಶ್, ಕಲ್ಬುರ್ಗಿ, ಪನ್ಸಾರೆ, ದಾಬೋಲ್ಕರ್ ಅಂತಹ ಹಲಾವರು ಜನ. ಹಾಗೆಯೇ ಈ ದೇಶದಲ್ಲಿ ಕಳೆದ 25 ವರ್ಷಗಳಿಂದ, ಅದರಲ್ಲೂ ವಿಶೇಷವಾಗಿ ಕಳೆದ 5 ವರ್ಷಗಳಿಂದ ಆರ್ಥಿಕ ಭಯೋತ್ಪಾದನೆಗೆ ತುತ್ತಾಗಿ ಪ್ರಾಣವನ್ನು ಕಳೆದುಕೊಂಡ ಹಲವಾರು ನಮ್ಮ ಅಪ್ಪ,ಅಮ್ಮಂದಿರಿದ್ದಾರೆ. ಅವರನ್ನು ರೈತರು ಎಂದು ಕರೆಯುತ್ತಾರೆ. ಕಾರ್ಮಿಕರು ಎಂದು ಕರೆಯುತ್ತಾರೆ. ಇವರೆಲ್ಲರಿಗೂ ಒಂದು ನಿಮಿಷ ಶ್ರದ್ಧಾಂಜಲಿ ಅರ್ಪಿಸಿ ನನ್ನ ಭಾಷಣ ಆರಂಭಿಸಬೇಕು ಎಂದು ಅಂದುಕೊಳ್ಳುತ್ತಿದ್ದೇನೆ. ಅಷ್ಟು ಮಾತ್ರ ಅಲ್ಲ ಕಳೆದ ನಾಲ್ಕು ವರ್ಷಗಳಲ್ಲಿ ಹೊರಗಿನ ಭಯೋತ್ಪಾದನೆಗೆ ತುತ್ತಾಗಿ ಬಲಿಯಾದ ಸೈನಿಕರ ಸಂಖ್ಯೆ 111 ಇದ್ದರೆ ಒಳಗಿನ ತಾರತಮ್ಯಕ್ಕೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿರುವ ಪ್ಯಾರಾಮಿಲಿಟರಿ ಸೈನಿಕರ ಸಂಖ್ಯೆ 150. ಅವರರಿಗೂ ನಾವು ಶ್ರದ್ಧಾಂಜಲಿ ಸಲ್ಲಿಸಬೇಕು. ಪುಲ್ವಾಮಾ ದಾಳಿಗೆ ಕಾರಣ ಯಾರು, ಏನು ಎಂದು ಹೇಗೆ ಹುಡುಕುತ್ತಿದ್ದೇವೋ ಹಾಗೆಯೇ ಈ ಆಂತರಿಕ ಭಯೋತ್ಪಾದನೆಗೆ ಕಾರಣ ಏನು ಎಂದು ಕಾರಣ ಹುಡುಕಬೇಕಾಗಿದೆ. ಆದ್ದರಿಂದ ನಿಮ್ಮೆಲ್ಲರ ಅನುಮತಿ ಕೋರಿ ನಾನು ಆ ಎಲ್ಲಾ ಸೈನಿಕರಿಗೆ –ಸಾಂಸ್ಕೃತಿಕ ಸೈನಿಕರಿಗೆ, ಸಾಮಾಜಿಕ ಸೈನಿಕರಿಗೆ, ಈ ದೇಶದ ಆತ್ಮವನ್ನು ಕಾಯುತ್ತಲೇ ಹುತಾತ್ಮರಾದ ಎಲ್ಲಾ ಸೈನಿಕರಿಗೆ ಒಂದು ನಿಮಿಷ ಮೌನ ಆಚರಿಸಿ, ಶ್ರದ್ಧಾಂಜಲಿಯನ್ನು ಒಂದು ನಿಮಿಷ ಮುಂದುವರೆಸಿ ನನ್ನ ಭಾಷಣ ಮುಂದುವರೆಸುತ್ತೇನೆ.
(ಎಲ್ಲರೂ ಎದ್ದು ನಿಂತು ಮೌನ)
ಸ್ನೇಹಿತರೇ ಈ ದೇಶದಲ್ಲಿ ಒಂದು ಸಂವಿಧಾನವಿದೆ. ಆ ಸಂವಿಧಾನದ ಪರಿಚ್ಛೇದ 4ರಲ್ಲಿ 51ಎ ವಿಧಿ ದೇಶದ ಎಲ್ಲಾ ನಾಗರಿಕರಿಗೂ ಕರ್ತವ್ಯಗಳನ್ನು ವಿಧಿಸುತ್ತದೆ. ಹಕ್ಕುಗಳನ್ನು ನೀವು ಚಲಾಯಿಸದಿದ್ದರೂ ಪರವಾಗಿಲ್ಲ. ಆದರೆ ಕರ್ತವ್ಯವನ್ನು ನಿಭಾಯಿಸಬೇಕಿರುತ್ತದೆ. ಆ ಕರ್ತವ್ಯ ಏನು ಹೇಳುತ್ತದೆ ಎಂದರೆ ಈ ದೇಶದ ಸಂಕರ ಸಂಸ್ಕೃತಿಯನ್ನು, ಬಹುತ್ವ ಸಂಸ್ಕೃತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ಈ ದೇಶದ ಸ್ವಾತಂತ್ರ್ಯ ಹೋರಾಟದ ಆಶಯಗಳನ್ನು ಮುಂದುವರೆಸಿಕೊಂಡು ಬರುವುದು ಆರ್ಟಿಕಲ್ 51ಎ/ಎಫ್ ಪ್ರಕಾರ ನಮ್ಮ ಕರ್ತವ್ಯ. ಅದೇ ರೀತಿ Spirit of inquiry and reform- ವೈಜ್ಞಾನಿಕವಾಗಿ ಪ್ರಶ್ನಿಸುವ ಮನೋಭಾವ ಮತ್ತು ಆ ಪ್ರಶ್ನೆಗೆ ಪಡೆದುಕೊಂಡ ಉತ್ತರದ ಅನುಸಾರವಾಗಿ ಈ ದೇಶವನ್ನು ಬದಲಿಸುವುದು ನಮ್ಮ ಕರ್ತವ್ಯದ ಭಾಗ. ಆ ಕರ್ತವ್ಯ ನಮಗೆ ಸಂವಿಧಾನ ಬದ್ಧವಾಗಿ ದಕ್ಕಿದೆ. ಚುನಾವಣಾ ಆಯೋಗವಾಗಲೀ ಪ್ರಧಾನ ಮಂತ್ರಿಯಾಗಲೀ ಅದನ್ನು ಕಿತ್ತುಕೊಳ್ಳಲು ಬರುವುದಿಲ್ಲ
ಚುನಾವಣೆ ಅಂದರೆ ಹಬ್ಬ ಅಂತಾರೆ. ಆದರೆ ನನ್ನ ಪ್ರಕಾರ ಚುನಾವಣೆ ಹಬ್ಬ ಅಲ್ಲ. ಚುನಾವಣೆ ಎಂದರೆ ಜನರು ಸರ್ಕಾರದ ಬಗ್ಗೆ ತೆಗೆಯಬೇಕಾದ ಜಮಾಬಂದಿ. ಸರ್ಕಾರ ಜನರ ಸೇವಕ. ಸಂವಿಧಾನದ ಮೊದಲ ವಾಕ್ಯ ಹೇಳುತ್ತದೆ-ನಾವು ಈ ದೇಶದ ಜನ ಎಂದು. ನಾವು ಈ ದೇಶವನ್ನು ಸ್ವತಂತ್ರ, ಸಾರ್ವಭೌಮೀ, ಸಮಾನತೆಯ ಆಶಯಗಳುಳ್ಳ ಗಣರಾಜ್ಯವನ್ನಾಗಿ ಮಾಡಲು ಪಣತೊಟ್ಟು ನಿಂತಿದ್ದೇವೆ. ಅದಕ್ಕಾಗಿ ನಾವು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳನ್ನು ಕಟ್ಟಿಕೊಂಡಿದ್ದೇವೆ. ಇದರ ಹಕ್ಕುದಾರರು ನಾವು. ಪ್ರತಿ ಐದು ವರ್ಷಕ್ಕೊಮ್ಮೆ ನಿಮಗೆ ಬಿಟ್ಟು ಕೊಡುತ್ತೇವೆ. ನೀವು ಸರಿಯಾಗಿ ಮಾಡಲಿಲ್ಲ ಎಂದರೆ ನಾವು ಜಮಾಬಂದಿ ಮಾಡುತ್ತವೆ. ಅದನ್ನು ಮಾಡುವಂತದ್ದು ಕೇವಲ ಹಬ್ಬದ ಕೆಲಸವಲ್ಲ. ನಮ್ಮ ಹಕ್ಕಿನ ಮತ್ತು ಕರ್ತವ್ಯದ ಕೆಲಸ. ಹೀಗಾಗಿ ಆರ್ಟಿಕಲ್ 51 ಎ ನೀಡುವಂತಹ ಸಾಂವಿಧಾನಿಕ ಕರ್ತವ್ಯವನ್ನು ನಾನು ಈ ಭಾಷಣದ ಮೂಲಕ ನಿಭಾಯಿಸುತ್ತಿದ್ದೇನೆ.
51 ಎ ವಿಧಿ- spirit of inquiry –ಪ್ರತಿಯೊಂದನ್ನು ಪ್ರಶ್ನಿಸಿ ನಂಬು ಎನ್ನುತ್ತದೆ. ಪ್ರಧಾನ ಸೇವಕರು ಹೇಳುತ್ತಾರೆ.- ಪ್ರಶ್ನಿಸದೇ ನಂಬು. ಅವರು ನಮಗೆ ಪ್ರಶ್ನಿಸಬೇಡ ಎನ್ನುತ್ತಾರೆ. ಪ್ರಶ್ನಿಸದೇ ಇದುವರೆಗೆ ಬಂದಿದ್ದರಿಂದಲೇ, ಕರ್ಮಣ್ಯೇವಾದಿಕಾರಸ್ತೇ ಮಾಫಲೇಶು ಕದಾಚನಾ ಎಂದು ಕೃಷ್ಣ ಹೇಳಿದ್ದನ್ನು ಮಠಗಳು ಹೇಳಿಕೊಂಡು ಬಂದಿದ್ದಕ್ಕೇನೇ ನಾವು ಈ ಬರಬಾದಿ ಪರಿಸ್ಥಿತಿಯಲ್ಲಿ ಕುಳಿತಿದ್ದೇವೆ. ನಾವಿವತ್ತು ಕೇಳಬೇಕಾಗಿದೆ; ನನ್ನ ಮನೆ ಸಾವಿನ ಮನೆಯಾಗಿದೆ. ನನ್ನ ತಂಗಿ ಆಸಿಫಾ 8 ವರ್ಷದ ಚಿಕ್ಕ ಹುಡುಗಿ, ಕಾಶ್ಮೀರದಲ್ಲಿ ಸತತವಾಗಿ ಬಲಾತ್ಕಾರಕ್ಕೊಳಗಾಗಿ ಸತ್ತಿದ್ದಾಳೆ; ಉನ್ನಾವದಲ್ಲಿ ನನ್ನಕ್ಕ ಇದೇ ರೀತಿ ಅತ್ಯಾಚಾರಕ್ಕೆ ಗುರಿಯಾಗಿದ್ದಾಳೆ. ಪ್ರತಿವರ್ಷ ಈ ದೇಶದ 17,000 ರೈತರು – ನನ್ನ ಅಪ್ಪಂದಿರು, ಚಿಕ್ಕಪ್ಪಂದಿರು ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸ್ವಾತಂತ್ರ್ಯವನ್ಉ ಕಾಪಾಡಲು ಅಪೇಕ್ಷಿಸಿದ ಗೌರಿ ಲಂಕೇಶ್, ಕಲ್ಬುರ್ಗಿ ಹತ್ಯೆಗೀಡಾಗುತ್ತಿದ್ದಾರೆ. ನನ್ನ ಮನೆ* ಈ ಸಾವಿಗೆ ಕಾರಣರು ಯಾರು? ದರೋಡೆ ಮಾಡುವುದು ರಾಜಕೀಯ ಅಲ್ಲ ಎನ್ನುವುದಾದರೆ, ಕೊಲೆ ಮಾಡುವುದು ರಾಜಕೀಯ ಅಲ್ಲ ಎನ್ನುವುದಾದರೆ ಕೊಲಗಾರ ಯಾರು ಎಂದು ಕೇಳುವುದೂ ರಾಜಕೀಯ ಆಗುವುದಿಲ್ಲ. ದರೋಡೆ ಮಾಡುವುದು ಶಾಸನ ಬದ್ಧ ರಾಜಕೀಯ ಎನ್ನುವುದಾದರೆ ಕೊಲೆಗಾರ ಯಾರು ಎಂದು ಕೇಳುವುದೂ ರಾಜಕೀಯವಾಗುತ್ತದೆ, ನನ್ನ ಹಕ್ಕಾಗುತ್ತದೆ. ನಾನಿವತ್ತು ಕೇಳುತ್ತಿದ್ದೇನೆ- ನನ್ನ ರೈತನನ್ನು ಕೊಂದವರಾರು? ಕಾರ್ಮಿಕರನ್ನು ಬೀದಿಪಾಲು ಮಾಡಿದವರು ಯಾರು? ದಿಕ್ಕಾಪಾಲು ಮಾಡಿದವರು ಯಾರು?
ನಾವು ಮಹರ್ಷಿ ಎಂದು ಕರೆಯುವ ರವೀಂದ್ರನಾಥ್ ಟಾಗೂರ್ ಒಂದು ಪ್ರಾರ್ಥನೆ ಮಾಡಿದ್ದರು- Where the mind is without fear, and the head is held high and knowledge is free- ನಮಗೆಂತಹ ಸ್ವಾತಂತ್ರ್ಯ, ಎಂತಹ ಸಮಾಜ ಬೇಕೆಂದರೆ, ಭಯವಿಲ್ಲದ ಬದುಕು, ನಿಯಂತ್ರಣವಿಲ್ಲದ ಜ್ಞಾನ. ನಿರಂಕುಶತ್ವ- ನಿರಂಕುಶಮತಿಗಳಾಗಿ ಎಂದು ಅದನ್ನೇ ಕುವೆಂಪು ಹೇಳಿದ್ದರು. ಅದೇ ನಿಜವಾದ ಸ್ವಾತಂತ್ರ್ಯ. ಕಳೆದ ಐದು ವರ್ಷಗಳಿಂದ ಭಯದಲ್ಲಿ ಬದುಕುತ್ತಿದ್ದೇವೆ. ನಿರಂತರ ಭಯದಲ್ಲಿ ದೇಶದ ನಾಗರಿಕರು ಬದುಕುತ್ತಿದ್ದೇವೆ. ಇಂದು ಈ ಸಭೆ ನಡೆಸುವಾಗಲೂ ಭಯದಿಂದ ಬದುಕುತ್ತಿದ್ದೇವೆ. ನಾವು ಕನಸಿದ ಭಾರತ ಇದಲ್ಲವೇ ಅಲ್ಲ.
ನಾವು ಕನಸು ಕಂಡ ಭಾರತ ಇದಲ್ಲ ಎನ್ನಲು ಕೇವಲ ಒಂದು ಪಕ್ಷ ಕಾರಣವಲ್ಲ, ಕಳೆದ ಐದು ವರ್ಚ ಮಾತ್ರ ಕಾರಣವಲ್ಲ. ಕಳೆದ ಐದು ವರ್ಚದಲ್ಲಿ ಪರಿಸ್ಥಿತಿ ನಮ್ಮ ಕೈಮೀರುತ್ತದೆ ಎಂಬ ವಾತಾವರಣದಲ್ಲಿ ಇಲ್ಲಿ ಕುಳಿತಿದ್ದೇವೆ.
ಒಂದೆರಡು ಉದಾರಹಣೆಗಳನ್ನು ಹೇಳುತ್ತೇನೆ . 2014ರ ಸಂದರ್ಭದಲ್ಲಿ ಭಾರತದ ಮಾಧ್ಯಮ ಸ್ವಾತಂತ್ರ್ಯ ಎಷ್ಟಿತ್ತೆಂದರೆ, 180 ದೇಶಗಳ ಪಟ್ಟಿಯಲ್ಲಿ 134ನೆಯದಾಗಿತ್ತು. . ಪ್ಯಾಲೆಸ್ತೀನಿಗಿಂತ, ಪಾಕಿಸ್ತಾನಕ್ಕಿಂತ ಉತ್ತಮವಾಗಿತ್ತು. ಕಳೆದ ವರ್ಷ ನಮ್ಮ ಸ್ಥಾನ 138ನೆಯದಾಗಿದೆ. ಪ್ಯಾಲೆಸ್ತೇನಿಗಿಂತ, ಪಾಕಿಸ್ತಾನ, ಶ್ರೀಲಂಕಾಗಿಂತಲೂ ಭಾರತದ ಸ್ಥಾನ ಕುಸಿದಿದೆ. ಹ್ಯಾಪಿನೆಸ್ ಇಂಡೆಕ್ಸ್ ಎಂದು ವಿಶ್ವಸಂಸ್ಥೆ ತಯಾರಿಸುತ್ತದೆ. ಇದರಲ್ಲಿ ನಮ್ಮ ಸ್ಥಾನ ಎಂದು ನೋಡಿದರೆ ಕಳೆದ 5 ವರ್ಷಗಳಲ್ಲಿ ನಮ್ಮ ಸಂತೋಷದ ಸೂಚ್ಯಂಕ ಹತ್ತು ಅಂಶ ಕೆಳಕ್ಕಿಳಿದಿದೆ. ಯಾವತ್ತೂ ಹೀಗಾಗಿರಲಿಲ್ಲ.
ಇನ್ನು ನೀವೇ ಹೇಳುತ್ತೀರಿ. ದೇಶದ ಅಭಿವೃದ್ಧಿ 8.2 ಇತ್ತು. ಇದನ್ನು ಸೂಚಿಸಲು ಜಿಡಿಪಿ ಎಂಬ ಪದ ಬಳಸುತ್ತಾರೆ, Gross Domestic Produce- ಅದು 8.2 ಇದ್ದದ್ದು ಏಕಾ ಏಕಿ 7.1 ಹಾಗೂ 6.5ಕ್ಕಿಳಿದಿದೆ ಎಂದು ಆರ್ಥಿಕ ತಜ್ಷರು ಹೇಳುತ್ತಿದ್ದಾರೆ. ಅಂಕಿ ಅಂಶದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇದರ ಅರ಼್ ಇಷ್ಟೇ, ನಾವೆಲ್ಲರೂ ಒಟ್ಟು ಸೇರಿ ಉತ್ಪಾದನೆ ಮಾಡುತ್ತಿದ್ದ ಸುಮಾರು 3ರಿಂದ 4 ಲಕ್ಷ ಕೋಟಿ ರೂಪಾಯಿ, ನನಗೆ, ನಿಮಗೆ, ರೈತರಿಗೆ, ಕಾರ್ಮಿಕರಿಗೆ ಸೇರಬೇಕಾಗಿದ್ದ ಆ ಪ್ರಮಾಣದ ಮೊತ್ತವನ್ನು ನಮ್ಮಿಂದ ಕಸಿಯಲಾಗಿದೆ ಎಂದು ಅರ್ಥ.
ನಿರುದ್ಯೋಗದ ಪ್ರಮಾಣದ ಬಗ್ಗೆ ಸರ್ಕಾರವೇ ಹೇಳುತ್ತದೆ. ಅತ್ತ ಪ್ರಧಾನ ಮಂತ್ರಿ ನನ್ನನ್ನು ನಂಬು ಎಂದು ಹೇಳುತ್ತಿರಬೇಕಾದರೆ ಪ್ರಧಾನ ಮಂತ್ರಿಗಳ ಕೈಕೆಳಗೆ ಕೆಲಸ ಮಾಡುವ ಕಾರ್ಯಾಲಯಗಳು ಹೇಳುತ್ತವೆ- ಕಳೆದ 45 ವರ್ಷಗಳಲ್ಲೇ ದಾಖಲಾಗದಿದ್ದಂತಹ ನಿರುದ್ಯೋಗ 2018ರಲ್ಲಿ ದಾಖಲಾಗಿದೆ ಎಂದು. ನಿರುದ್ಯೋಗದ ಪ್ರಮಾಣ 2.1 ಎಂದು ರಾಜಕೀಯ ಪಕ್ಷ ಹೇಳಿದರೆ ಸರ್ಕಾರದ ಸಂಸ್ಥೆ 7.5 ಎಂದು ಹೇಳುತ್ತಿವೆ. ಯಾರನ್ನು ನಂಬಬೇಕು?
ಕಳೆದ 5 ವರ್ಷಗಳಲ್ಲಿ ಈ ದೇಶದಲ್ಲಿ ಎಲ್ಲವೂ ಚೆನ್ನಾಗಿಲ್ಲ ಎಂದು ಹೇಳಿದ ಸರ್ಕಾರದ ಅಂಕಿ ಅಂಶಗಳನ್ನೇ ಸರ್ಕಾರ ಬಂದ್ ಮಾಡಿ, ಹೇಳಬೇಡಿ ಎಂದು ಹೇಳಿದ್ದಕ್ಕೆ ಆಯಾ ಸಂಸ್ಥೆಗಳ ಸದಸ್ಯರು, ಹಂಗಾಮಿ ಅಧ್ಯಕ್ಷರು ರಾಜೀನಾಮೆ ಕೊಟ್ಟು ಹೊರಬರುತ್ತಿದ್ದಾರೆ. ಸತ್ಯವನ್ನು ನಮ್ಮಿಂದ ಮರೆಮಾಚಲಾಗುತ್ತಿದೆ.
ಈ ಹಿಂದೆ ನಿರುದ್ಯೋಗ ಇರಲಿಲ್ಲ ಎಂದು ನಾನು ಹೇಳುತ್ತಿಲ್ಲ. ಈ ಹಿಂದೆ ಸುವರ್ಣಯುಗದಲ್ಲಿ ಬದುಕುತ್ತಿದ್ದೆವು ಎಂದು ನಾನು ಹೇಳುತ್ತಿಲ್ಲ. ಆದರೆ, ಈ ಹಿಂದೆ ಶತ್ರು ಯಾರು ಎಂದು ಗೊತ್ತಿತ್ತು. ಜಬಲ್ಪುರ್ ಪ್ರಕರಣದಲ್ಲಿ ಇಂದಿರಾಗಾಂಧಿಯವರಿಗೆ ಶಿಕ್ಷೆ ಆಗಬೇಕಾಗಿ ಬಂದಾಗ ಬೇರೆ ಇಬ್ಬರು ನ್ಯಾಯಾಧೀಶರು ಅವರ ಪರವಾಗಿ ತೀರ್ಮಾನ ನೀಡಿದ್ದರೆ ಎಚ್.ಆರ್. ಖನ್ನಾ ಎಂಬ ನ್ಯಾಯಾಧೀಶರು ಇಂದಿರಾಗಾಂಧಿಯವರ ವಿರುದ್ಧ ತೀರ್ಮಾನ ಕೊಟ್ಟರು. ಹಾಗೆ ವಿರುದ್ಧವಾಗಿ ತೀರ್ಮಾನ ಕೊಟ್ಟು 1999ರ ವರೆಗೂ ಅವರು ಬದುಕಿದ್ದರು.” ಗುಲಾಬಿಯ ರಸ್ತೆಯೂ ಅಲ್ಲ.. ಮುಳ್ಳಿನ ರಸ್ತೆಯೂ ಅಲ್ಲ” ಎಂಬ ಪುಸ್ತಕವನ್ನೂ ಅವರು ಬರೆದರು. ಆದರೆ ಅಮಿತ್ ಶಾ ವಿರುದ್ಧ ತನಿಖೆ ನಡೆಸುತ್ತಿದ್ದ ಲೋಯಾ ಎಂಬ ನ್ಯಾಯಾಧೀಶರು ಹತ್ಯೆಯೇ ಆಗಿಬಿಟ್ಟರು. ಹಿಂದೆ ಜಡ್ಜುಗಳು ಸರ್ಕಾರದ ಮಾತು ಕೇಳುತ್ತಿರಲಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಕನಿಷ್ಟ ಬದುಕುತ್ತಿದ್ದರು. ಈಗ ಜಡ್ಜುಗಳು ರಾತ್ರೋರಾತ್ರಿ ಆತ್ಮಹತ್ಯೆ ಮಾಡಿಕೊಂಡು ಬಿಡುತ್ತಾರೆ! ಅವರ ಪರವಾಗಿದ್ದ ವಕೀಲರು ಸಾಕ್ಷಿಯಾಗಿದ್ದವರು – ಈ ವಿಷಯದಲ್ಲಿ ವಕೀಲಿಕೆ ಮಾಡುತ್ತಿದ್ದ ಒಬ್ಬ ಮನುಷ್ಯ ರೈಲಿನಲ್ಲಿ ಬರುವಾಗ ಮೇಲ್ಗಡೆ ಬರ್ತಿನಲ್ಲಿದ್ದವನು ಕೆಳಗೆ ಬಿದ್ದು ಸತ್ತು ಹೋದನಂತೆ. ಈ ರೀತಿಯ ಭೀತಿಯ ವಾತಾವರಣ ನಾವ್ಯಾರೂ ಈ ಹಿಂದೆ ಕಂಡಿರಲಿಲ್ಲ.
ಅದೇ ಸಮಯದಲ್ಲ ಈ ದೇಶ ಸುಭಿಕ್ಷವಾಗಿಲ್ಲ ಎಂದೇನೂ ತಿಳಿದುಕೊಳ್ಳಬೇಡಿ. ಕಳೆದ ವರ್ಷ ಒಂದು ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚುವರಿ ನಾವು ಉತ್ಪಾದನೆ ಮಾಡಿದ್ದರೆ ಅದರ 28,000 ಕೋಟಿ ರೂಪಾಯಿಯಷ್ಟು ಅಂಬಾನಿ ಒಬ್ಬರಿಗೇ ತಲುಪಿದೆ. ಒಬ್ಬ ಅಂಬಾನಿಗೆ ಅಷ್ಟು ಮೊತ್ತ ತಲುಪಿದರೆ ಉಳಿದ 126 ಕೋಟಿ ಜನ ನಾವೆಲ್ಲಾ ಸೇರಿ ಹಂಚಿಕೊಂಡಿರುವುದು ಕೇವಲ 65,000 ಕೋಟಿ ಮಾತ್ರ. ಇದು ಫ್ಯಾಸಿಸಂ
ಫ್ಯಾಸಿಸಂ ಅಂದರೆ ಏನು? ಕೆಲವರು ಹೇಳುತ್ತಿರುತ್ತಾರೆ, ನೀವು ಲೆಫ್ಟಿಸ್ಟುಗಳು ಬಾಯಿಗೆ ಬಂದರೆ ಫ್ಯಾಸಿಸಂ ಅಂತೀರಿ. ಫ್ಯಾಸಿಸಂ ಅಂದರೆ ಇಷ್ಟೇ. ಹಿಂದೆಯೂ ರಾಜಕೀಯ ಇತ್ತು, ಹಿಂದೆಯೂ ಆರ್ಥಿಕತೆ ಇತ್ತು, ಹಿಂದೆಯೂ ಮಾಧ್ಯಮಗಳಿದ್ದವು. ಆದರೆ ರಾಜಕೀಯದ ಮೋದೀಕರಣ, ಆರ್ಥಿಕತೆಯ ಅಂಬಾನೀಕರಣ ಹಾಗೂ ಮಾಧ್ಯಮದ ಅರ್ನಬ್ ಗೋಸ್ವಾಮೀಕರಣ- ಇದೇ ಫ್ಯಾಸಿಸಂ. ಇದೆಲ್ಲದಕ್ಕೂ ಒಂದಕ್ಕೊಂದು ಸಂಬಂಧವಿದೆ. ಇದೆಲ್ಲದರ ಫಲಾನುಭವಿಗಳು ಕೇವಲ 120 ಕುಟುಂಬಗಳು. ಸಾಲಾಮನ್ನಾದ ಬಗ್ಗೆ ಮಧ್ಯಾಹ್ನ ಮಾತಾಡುತ್ತಿದ್ದೆವು. ಇಡೀ ದೇಶದ ಎಲ್ಲಾ ರೈತರು ಸರ್ಕಾರಿ ಸಂಸ್ಥೆಗಳಿಂದ ಪಡೆದುಕೊಂಡಿರುವ ಸಾಲ, ಕೊಅಪರೇಟಿವ್ ಸಂಸ್ಥೆಗಳಿಂದ ಪಡೆದ ಸಾಲ, ಅಸಂಘಟಿತ ವಲಯದ ಬಡ್ಡಿ ಸಾಲ- ಈ ಎಲ್ಲಾ ಸಾಲ ಕೂಡಿದರೂ ಕೇವಲ ನಾಲ್ಕೂವರೆ ಲಕ್ಷ ಕೋಟಿ ರೂಪಾಯಿ ಮಾತ್ರ ಆಗುತ್ತದೆ ಎಂಬ ಒಂದು ಅಂದಾಜಿದೆ. ರಿಸರ್ವ್ ಬ್ಯಾಂಕ್ ಮೊನ್ನೆ ಹೇಳಿದೆ- ಕೇವಲ 102 ಉದ್ಯಮಿಗಳ ಕುಟುಂಬಕ್ಕೆ ಕೊಟ್ಟಿರುವ 7.5 ಲಕ್ಷ ಕೋಟಿ ರೂಪಾಯಿ ವಾಪಾಸು ಬರುವುದಿಲ್ಲವಂತೆ. 102 ಕುಟುಂಬಗಳಿಗೆ! ಯಾವತ್ತೂ ಹೀಗಾಗಿರಲಿಲ್ಲ.
ಅಂಬೇಡ್ಕರ್ ಹೇಳುವುದು ಇದನ್ನೇ. ನನ್ನ ಬಡತನ ಅವರ ಶ್ರೀಮಂತಿಕೆಯಲ್ಲಿದೆಯೇ ಹೊರತು ನನ್ನ ಕರ್ಮದಿಂದ ಬಡತನ ಬಂದಿರುವುದಲ್ಲ. ನನ್ನ ತಟ್ಟೆ ಅನ್ನ ಕಸಿಯುತ್ತಿರುವವರಾರು? ಈ ಹಿಂದೆಯೂ ಕಸಿಯುತ್ತಿದ್ದರು, ಅದಕ್ಕಾಗಿಯೇ ಸರ್ಕಾರಗಳು ಬದಲಾಗುತ್ತಿದ್ದವು. ಆಗ ತಟ್ಟೆಯಲ್ಲಿದ್ದ ಅನ್ನ ಕಸಿಯುತ್ತಿದ್ದರಷ್ಟೇ. ಈಗ ನಮ್ಮ ತಟ್ಟೆಯಲ್ಲಿರುವ ಅನ್ನಕ್ಕೆ ವಿಷ ಹಾಕುತ್ತಿದ್ದಾರೆ. ಇದು ವ್ಯತ್ಯಾಸ. ಅನ್ನ ಕದ್ದವರು ಯಾರು ಎಂದು ಗೊತ್ತಾಗುತ್ತದೆ, ಹೋರಾಡವನ್ನೂ ಮಾಡಬಹುದಾಗಿರುತ್ತದೆ. ಆದರೆ ಅನ್ನಕ್ಕೆ ನಮಗೆ ಗೊತ್ತಿಲ್ಲದೇ ವಿಷ ಹಾಕುತ್ತಿರುವ ಸಂದರ್ಭ ಇದು. ನಾನು, ನೀವು ಒಟ್ಟಾಗಿ ನಮ್ಮ ಶತ್ರು ಯಾರು ಎಂದು ನೋಡಿ ಹೋರಾಟ ಮಾಡಬೇಕು ಎಂದಿದ್ದರೆ ಪಕ್ಕದಲ್ಲಿರುವ ಬಡವನನ್ನ ತೋರಿಸಿ ಇವನೇ ನಿನ್ನ ಶತ್ರು ಎಂದು ತಾವು ಆರಾಮಾವಾಗಿ ಇರುವ ಪದ್ಧತಿ ಇದೇ.. ದೊಡ್ಡ ನಾವೆದುರಿಸುತ್ತಿರುವ ದೊಡ್ಡ ಆತಂಕ.
ಸ್ನೇಹಿತರೇ, ಇನ್ನು ಎರಡು ಮೂರು ಪ್ರಶ್ನೆಗಳನ್ನು ನಾನಿಲ್ಲಿ ಕೇಳಬೇಕಾಗಿದೆ.
ನೋಟು ನಿಷೇದ ಎಂದು ಮಾಡಿದಿರಿ. ನೋಟು ನಿಷೇಧಕ್ಕೆ ಮೂರು ಗುರಿಗಳಿವೆ ಎಂದಿರಿ. ಮೊದಲನೆಯದು ಭಯೋತ್ಪಾದನೆ ಹತ್ತಿಕ್ಕಬೇಕು,- ಪಾಕಿಸ್ತಾನ ದುಡ್ಡು ಹಂಚಿ ನಮ್ಮ ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸುತ್ತಿದೆ. ನಮ್ಮ ದೇಶದ ಯುವಕರು ಬಾಡಿಗೆಗೆ ತಮ್ಮ ಪ್ರಾಣ ಕೊಟ್ಟುಬಿಡುತ್ತಾರೆ ಎಂದು ನಾವು ನಂಬುವುದಾದರೆ ಕಾಶ್ಮೀರದಲ್ಲಿ ಜನರು ದುಡ್ಡಿಗಾಗಿ ಎಲ್ಲಾ ಮಾಡುತ್ತಿದ್ದಾರೆ. ಹೀಗಾಗಿ ಬಾಡಿಗೆ ದುಡ್ಡು ತೆಗೆದುಕೊಂಡು ಕಾಶ್ಮೀರಿಗಳು ಹೋರಾಟ ಮಾಡ್ತಿದಾರೆ ಎನ್ನುವ ಕಾರಣಕ್ಕೆ ನಾವು ನೋಟು ನಿಷೇಧ ಮಾಡುತ್ತೇವೆ ಎಂಬ ವಾದ ಅವರದಾಗಿತ್ತು. ನೋಟು ನಿಶೇಧ ಮಾಡಿದರೆ ಕಾಶ್ಮೀರದಲ್ಲಿ ಭಯೋತ್ಪಾದನೆ ನಿಂತು ಹೋಗುತ್ತದೆ ಎಂದಿದ್ರು. 2016ಕ್ಕೆ ನವೆಂಬರ್ 8ಕ್ಕೆ ಡಿಮಾನೆಟೈಸೇಶನ್ ಮಾಡುವಾಗ ಅವರು ಈ ಮಾತು ಹೇಳಿದ್ದರು, ಆದರೆ ನವೆಂಬರ್ 20ಕ್ಕೆ ಶೋಪಿಯಾನ್ನಲ್ಲಿ ನಡೆದ ದೊಡ್ಡ ಎನ್ಕೌಂಟರ್ನಲ್ಲಿ ನಮ್ಮ 20 ಸೈನಿಕರು ಭಯೋತ್ಪಾದಕರಿಂದ ಹತ್ಯೆಯಾದರು. ನವೆಂಬರ್ 30ರಂದು ಪೊಲೀಸರು ಬಂಧಿಸಿದ ಭಯೋತ್ಪಾದಕರ ಜೇಬುಗಳಲ್ಲಿ ಹೊಸ 2000 ರೂಪಾಯಿಯ ನೋಟುಗಳಿರುತ್ತವೆ.
2014ರಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಗೆ ಸ್ಥಳೀಯ ಕಾಶ್ಮೀರಿ ರೆಕ್ರೂಟ್ ಗಳಿದ್ದದ್ದು ಕೇವಲ ನಾಲ್ಕು ಜನ. ಇವರು ಬಂದು ಸಂಪೂರ್ಣ ಭಯೋತ್ಪಾದನೆ ಕಿತ್ತು ಹಾಕುತ್ತೇವೆ ಎಂದರು. ಕಾಶ್ಮೀರದಲ್ಲಿ ಅಪರೇಶನ್ ಕ್ಲೀನ್ ಎಂದು ನಡೆಸಿದರು. ಅದನ್ನು ಶುರು ಮಾಡಿದ ಮೇಲೆ ಕಾಶ್ಮೀರದ 200 ಯುವಕರು ಉಗ್ರಗಾಮಿಗಳಾದರು. ಯಾಕಾದರು? ಪುಲ್ವಾಮಾದಲ್ಲಿ ಬಾಂಬ್ ಹಾಕಿದ, ತನ್ನನ್ನು ‘ಫಿದಾಯಿನ್’ ಎಂದುಕೊಂಡ ಉಗ್ರನಿಗೆ 19 ವರ್ಷ. 2016ರಲ್ಲಿ ಅವನು ಧೋನಿಯ ಅಭಿಮಾನಿ. ಕ್ರಿಕೆಟ್ ಪಂದ್ಯ ನಡೆಯುವಾಗ ಯಾರಾದರೂ ಪಾಕಿಸ್ತಾನ ಗೆಲ್ಲುತ್ತದೆ ಅಂದರೆ ಧೋನಿ ಬಾರತ ಗೆಲ್ಲಿಸುತ್ತಾನೆ ಎಂದು ಬೆಟ್ ಕಟ್ಟುತ್ತಿದ್ದ ಹುಡುಗ, ಧೋನಿ ಸರಿಯಾಗಿ ಬ್ಯಾಟಿಂಗ್ ಮಾಡಲಿಲ್ಲ ಎಂದರೆ ಮನೆಗೆ ಹೋಗಿ ಅಳುತ್ತಾ ಕೂರುತ್ತಿದ್ದನಂತೆ. 2016ರಲ್ಲಿ ಒಬ್ಬ ಧೋನಿ ಭಕ್ತನಾಗಿದ್ದ ಕಾಶ್ಮೀರಿ ಯುವಕ ಒಬ್ಬ ಉಗ್ರ ‘ಫಿದಾಯಿನ್’ ಹೇಗಾದ? ಕೇವಲ 4ರ ಸಂಖ್ಯೆಯಲ್ಲಿದ್ದ ಕಾಶ್ಮೀರಿ ಯುವಕರು ಎರಡು ಮೂರು ವರ್ಷಗಳಲ್ಲಿ 200ರ ಸಂಖ್ಯೆಯಲ್ಲಿ ಯಾಕೆ ಉಗ್ರಗಾಮಿಗಳಾದರು? ಯಾಕೆ 250 ಮಂದಿ ನಮ್ಮ ಯೋಧರು ಕಾಶ್ಮೀರದಲ್ಲಿ ಆತ್ಮಹತ್ಯೆ ಮಾಡಿಕೊಂಡರು? ಈ ಪ್ರಶ್ನೆಯನ್ನು ನಾನು ಕೇಳದೇ- ಇನ್ನೂ ಒಂದು ಮಾತು ಹೇಳಬೇಕು.
ದೇಶಕ್ಕಾಗಿ ಪ್ರಾಣ ಕೊಟ್ಟು ಯೋಧರೆಲ್ಲಾ ಹುತಾತ್ಮರು. ಅವರಿಗೆ ನಾವು ಹುತಾತ್ಮರೆಂದೇ ಹೇಳಬೇಕು. ಇವರೆಲ್ಲಾ ಹುತಾತ್ಮರೇ. ಆದರೆ ನಿಮಗೆಲ್ಲಾ ಒಂದು ವಿಷಯ ತಿಳಿದಿರಬೇಕು ಸ್ನೇಹಿತರೆ. ಆಧಿಕೃತ ಪರಿಭಾಷೆಯಲ್ಲಿ ‘ಹುತಾತ್ಮ’ ಎಂಬ ಶಬ್ದ ಸರ್ಕಾರದ ಕಡತಗಳಲ್ಲಿ ಇಲ್ಲ. 2015ರಲ್ಲಿ ಇದರ ಬಗ್ಗೆಯೇ ಅಭಿಶೇಕ್ ಚೌಧುರಿ ಎಂಬುವವರು ಒಂದು ಕೇಸ್ ಹಾಕಿದರು. 2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಸೈನಿಕರ ಹತ್ಯೆ ನಡೆದಾಗ, ದೆಹಲಿ ಹೈಕೋರ್ಟಿನಲ್ಲಿ ಈ ವಿಷಯ ಬಂತು. ಅಲ್ಲಿ ಹತ್ಯೆಯಾದ ಪ್ಯಾರಾಮಿಲಿಟರಿ ಸೈನಿಕರು ಯಾರೆಲ್ಲಾ ಇದ್ದಾರೆ, ಅವರನ್ನು ‘ಹುತಾತ್ಮ’ ಎಂದು ಕರೆದು ಸೈನಿಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಪುಲ್ವಾಮಾದಲ್ಲಿ ಹುತಾತ್ಮರಾದವರಿಗೂ ಕೊಡಿ ಎಂದು ಕೇಳಿದಾಗ ಸರ್ಕಾರ ಏನು ಹೇಳಿದೆ ಗೊತ್ತೇ?
2019ರ ಫೆ 19ರಂದು ( ಅಂದರೆ ಪುಲ್ವಾಮಾ ಘಟನೆ ನಡೆದ ಐದು ದಿನಗಳ ನಂತರ) ಸರ್ಕಾರ- ರಕ್ಷಣಾ ಇಲಾಖೆ, ಗೃಹ ಇಲಾಖೆ, ಎಲ್ಲರೂ ಸೇರಿಕೊಂಡು ಪ್ರಜ್ಞಾಪೂರ್ವಕವಾಗಿ ಒಂದು ಅಫಿಡವಿಟ್ ನ್ನು ನ್ಯಾಯಲಯಕ್ಕೆ ಸಲ್ಲಿಸಿದ್ದರು. ಅದರಲ್ಲಿ ಏನು ಹೇಳಿದ್ದಾರೆ ಎಂದರೆ- ಖಂಡಿತವಾಗಿಯೂ ನಾವು ಈ ಸೈನಿಕರನ್ನು ‘ಹುತಾತ್ಮರು’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇವೆಲ್ಲಾ ಬ್ಯಾಟಲ್ ಕ್ಯಾಸುಅಲ್ಟೀಸ್ ಎನ್ನುತ್ತಾರೆ- ಅಂದರೆ ರಣರಂಗದಲ್ಲಿ ಆಗುವ ಅನಾಹುತಗಳು ಎಂದು ಕರೆಯುತ್ತಾರೆ. ನಿಜ 2011ರಲ್ಲಿ ಕಾಂಗ್ರೆಸ್ ಪ್ಯಾರಾಮಿಲಿಟರಿ ಎಂದಿದ್ದನ್ನು ಪೊಲೀಸ್ ಎಂದು ಮಾಡಿತು. ಆಗ ಮಿಲಿಟರಿ ಎಂದು ಕರೆದಾಗ ಸಿಗುವ ಸೌಲಭ್ಯಗಳು ಪೊಲೀಸ್ ಎಂದು ಕರೆದಾಗ ಸಿಗಲಿಲ್ಲ. ಆದರೆ 2014ರಿಂದ ನೀವಿದ್ದಿರಲ್ಲ ಅಧಿಕಾರದಲ್ಲಿ. ಕಾಂಗ್ರೆಸ್ ನವರನ್ನು ಸೋಲಿಸಿ ಕಳಿಸಿದ್ವಲ್ಲ, ಕಾಂಗ್ರೆಸ್ಗಿಂತ ನೀವು ದೇಶಭಕ್ತರಲ್ಲವೇ? ನೀವೇನು ಮಾಡಿದಿರಿ ಪ್ರಾಣ ಕೊಡುವ ಸೈನಿಕರಿಗಾಗಿ? 2015ರಿಂದ 116 ಸೈನಿಕರು ಹತ್ಯೆಯಾಗಿದ್ದಾರೆ. ಹೋಗಲಿ ಕನಿಷ್ಟ ಪುಲ್ವಾಮಾ ಘಟನೆ ಆದ ಮೇಲಾದರೂ ಹತ್ಯೆಯಾದ ಯೋಧರನ್ನು ‘ಹುತಾತ್ಮರು’ ಎಂದು ಪರಿಗಣಿಸುತ್ತೇವೆ ಎಂದು ನೀವು ಅಫಿಡವಿಟ್ ಕೊಡಲಿಲ್ಲವಲ್ಲ ಯಾಕೆ? ಬದಲಿಗೆ ಹತ್ಯೆಯಾದ ಸೈನಿಕರನ್ನು ಹುತಾತ್ಮ ಎಂದು ಕರೆಯಲು ಸಾಧ್ಯವೇ ಇಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದಿರಿ. ಯಾಕೆ? ಹಾಗೆ ಅವರನ್ನು ‘ಹುತಾತ್ಮ’ ಎಂದು ಪರಿಗಣಿಸಿದರೆ ಸರ್ಕಾರದ ಬೊಕ್ಕಸಕ್ಕೆ 150ರಿಂದ 200 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ರಫೇಲ್ ಅನ್ನುವ ಒಂದು ಹಗರಣದಿಂದ ಅಂಬಾನಿ ಎನ್ನುವ ಒಂದು ಕುಟುಂಬಕ್ಕೆ ಆಗುವ ಲಾಭ 60,000 ಕೋಟಿ ರೂಪಾಯಿ ಎಂದಾದರೆ, ನಮ್ಮನ್ನು ಕಾಯುತ್ತಿರುವ ಸೈನಿಕರ ಸಾವಿನ ನಂತರ ಅವರ ಕುಟುಂಬಕ್ಕೆ ನಿಮಗೆ ಕನಿಷ್ಟ ಮೊತ್ತದಲ್ಲಿ ಖರ್ಚಾಗುವ ಹಣ ಕೊಡಲು ಆಗುವುದಿಲ್ಲ ಎಂದರೆ ಯಾವ ಸರ್ಕಾರ, ಯಾವ ಸೈನ್ಯ? ಯಾವ ವ್ಯವಸ್ಥೆ ಇದು? ಯಾರು ಹುತಾತ್ಮರ ಬಗ್ಗೆ, ಯಾರು ದೇಶಭಕ್ತಿಯ ಬಗ್ಗೆ ಯಾರು ಮಾತಾಡುತ್ತಿದ್ದೀರಿ ದಯವಿಟ್ಟು ಉತ್ತರ ಕೊಡಿ ಈ ಪ್ರಶ್ನೆಗೆ. ನಾನು ಸೇನೆಯ ಪರವಾಗಿದ್ದೇನೆ. ಸೈನಿಕರೆಲ್ಲರೂ ನೀವೇನು ಆದೇಶ ಕೊಡುತ್ತೀರೋ ಅದನ್ನು ಮಾಡುತ್ತಾರೆ. ಪಾಕಿಸ್ತಾನದ ಜೊತೆ ಯುದ್ಧ ಮಾಡಬೇಕೋ ಬಿಡಬೇಕೋ ಎಂಬ ತೀರ್ಮಾನವನ್ನು ದೇಶದ ಗಡಿ ಕಾಯುವ ಒಬ್ಬ ಸೈನಿಕ ಮಾಡಲಾಗುವುದಿಲ್ಲ. ಅದನ್ನು ನೀವು ರಾಜಕಾರಣಿಗಳು ಮಾಡುತ್ತೀರಿ- ಯುದ್ಧ ಸೇನೆಗೆ ಸಂಬಂಧ ಪಟ್ಟಿದ್ದಲ್ಲ, ಯುದ್ಧ ನಿಮ್ಮ ರಾಜಕೀಯ ಉದ್ದೇಶಗಳಿಗೆ ಸಂಬಂಧಿಸಿದ್ದೇ ಆಗಿದೆ. ಹೀಗಾಗಿ ಯುದ್ಧದ ಉತ್ತರ ರಾಜಕೀಯವೇ ಹೊರತು ಯುದ್ಧವಲ್ಲ. ಈ ಪ್ರಶ್ನೆಯನ್ನು ನಾನೀಗ ಕೇಳಬೇಕಾಗಿದೆ. ನನ್ನ ಅಣ್ಣತಮ್ಮಂದಿರು ಗಡಿಕಾಯುವವರು –ಸೈನಿಕರು ಮತ್ತೆ ಸಾಯಬಾರದು.
ಡಿಮಾನೆಟೈಸೇಶನ್ ಎಂದಿರಿ.
ಏನು ಹೇಳಿದ್ರಿ? ಕಪ್ಪು ಹಣ ಇದರಿಂದ ನಿಂತು ಹೋಗುತ್ತದೆ ಎಂದಿದ್ರಿ. ನೆನ್ನೆ ಒಂದು ವರದಿ ಬಂದಿದೆ. ಒಬ್ಬ ಆರ್ ಟಿ ಐ ಕಾರ್ಯಕರ್ತ ಸರ್ಕಾರಕ್ಕೆ ಮಾಹಿತಿ ಹಕ್ಕಿನಲ್ಲಿ ಕೇಳಿದ್ದ. ಎಷ್ಟು ಕಪ್ಪು ಹಣ ನಿಮ್ಮ ಕೈಗೆ ಸಿಕ್ಕಿತು? ಎಂದು ಅವನು ಕೇಳಿದ್ದ. ಅದಕ್ಕೆ ಸರ್ಕಾರದಿಂದ ಬಂದ ಉತ್ತರ “ಸೊನ್ನೆ” ಎಂದಾಗಿದೆ. ಎಷ್ಟು ಜನ ಸತ್ತರು? 120 ಜನ. ಅದರಿಂದ ಎಷ್ಟು ಜನ ಉದ್ಯೋಗ ಕಳೆದುಕೊಂಡರು? ಕನಿಷ್ಟ ಪಕ್ಷ 8ರಿಂದ 10 ಕೋಟಿ ಉದ್ಯೋಗ ಇದರಿಂದ ನಾಶ ಆದವು. ಇದುವರೆಗೂ ನಮ್ಮ ದೇಶದ ಆರ್ಥಿಕತೆ ವಾಪಾಸು ಬಂದಿಲ್ಲ. ಬದಲಿಗೆ ಕಪ್ಪು ಹಣ?
ಕಪ್ಪು ಹಣವನ್ನು ಯಾರೂ ಟ್ರಂಕಿನಲ್ಲಿ, ಹಾಸಿಗೆಯಲ್ಲಿ ಬಚ್ಚಿಟ್ಟುಕೊಂಡಿರುವುದಿಲ್ಲ. ಅದೆಲ್ಲಾ ಹಳೆಯ ಹಿಂದ ಪಿಚ್ಚರ್ ಕತೆ ಅಷ್ಟೇ. ಕಪ್ಪು ಹಣವನ್ನು ಕಂಪ್ಯೂಟರ ಗಳಲ್ಲಿ ವರ್ಗಾವಣೆ ಮಾಡುತ್ತಾರೆ. ಮೊದಲು ಮಾರಿಷಸ್ ನಲ್ಲಿ ಕಳ್ಳತನ ಮಾಡ್ತಿದ್ರು; ಈಗ್ ಕ್ಲೇಮನ್ ಐಲೆಂಡ್. ಒಂದು ಕೀ ಬಟನ್ ಒತ್ತಿದರೆ ಸಾಕು ಕಪ್ಪು ಹಣ ಆಚೆ ಹೋಗುತ್ತದೆ. ನಿಮ್ಮ ನೋಟಿಗೂ, ಇಲ್ಲಿ ಆಗುವ ಕಪ್ಪು ಹಣಕ್ಕೂ ಯಾವ ಸಂಬಂಧವೂ ಇಲ್ಲ.
ನಾಲ್ಕೂವರೆ ಲಕ್ಷ ಕೋಟಿ ರೂಪಾಯಿ ಯಾವ ಕಾರಣಕ್ಕೂ ವಾಪಾಸು ಬರುವುದಿಲ್ಲ. ಡಿಮಾನೆಟೈಸೇಶನ್ ನಿಂದ ಅಷ್ಟು ಕಪ್ಪು ಹಣ ಬರುತ್ತದೆ. ಅದರಿಂದಲೇ ಜನರಿಗೆ ಮನೆ ಕಟ್ಟಿಸ್ತೀವಿ ಅಂದರು. ಇದ್ದಿದ್ದು 16 ಲಕ್ಷ ಕೋಟಿ ರೂಪಾಯಿ ಚಲಾವಣೆಯಲ್ಲಿತ್ತು. ಬರೀ 10, ಲಕ್ಷ ಕೋಟಿ ವಾಪಾಸು ಬರುತ್ತದೆ, ಮಿಕ್ಕ 4 ಲಕ್ಷ ಕೋಟಿಯನ್ನು ಜನರ ಅಭಿವೃದ್ಧಿಗೆ ಬರುತ್ತದೆ ಎಂದರು. ಆದರೆ ಆಗಿದ್ದೇನು? 16 ಲಕ್ಷ ಕೋಟಿಯಲ್ಲಿ 15 ಲಕ್ಷ,80 ಸಾವಿರ ಕೋಟಿ ವಾಪಾಸು ಬಂತು.
ಪ್ರಸನ್ ಜಿತ್ ಘೋಷ್ ಎಂಬ ಕೊಲ್ಕೊತದ ಅಂಕಿ ಅಂಶ ಕಚೇರಿಯ ಮುಖ್ಯಸ್ಥ ಹೇಳುವ ಒಂದು ಅಪಾಯವೇನೆಂದರೆ, 16 ಲಕ್ಷ ಕೋಟಿಗೆ 17 ಲಕ್ಷ ಕೋಟಿ ವಾಪಾಸು ಬಂದುಬಿಡುವ ಛಾನ್ಸ್ ಇದೆ. ಯಾಕೆಂದರೆ ಈ ಇಡೀ ಪ್ರಕ್ರಿಯೆ ಕಪ್ಪು ಹಣವನ್ನು ಬಿಳಿ ಮಾಡುವ ಪ್ರಕ್ರಿಯೆ ಆಗಿಹೋಯ್ತು. ಆಮೇಲೆ ಬೇರೆ ಹೇಳಿದರು. ನಮ್ಮ ಉದ್ದೇಶ ಇದಲ್ಲವೇ ಅಲ್ಲ. ಹಣಕಾಸು ವ್ಯವಹಾರವನ್ನು ಡಿಜಿಟಲೈಸ್ ಮಾಡುವುದು ಎಂದರು.
ನಾವು ಡಿಜಿಟಲ್ ಟ್ರಾನ್ಸಾಕ್ಷನ್ ಮಾಡಲು ಹೊರಟಿದ್ದೇವೆ, ಎಂದು ಅದಕ್ಕಾಗಿ ಭೀಮ್ ಆಪ್ ತಂದರು. ಅಂಬೇಡ್ಕರ್ ಹೆಸರಿಟ್ಟುಕೊಂಡು ಅದನ್ನು ತಂದರು. ನಗದು ವ್ಯವಹಾರದಲ್ಲಿ ಯಾರು ಹಣ ತೆಗೆದುಕೊಂಡರು, ಯಾರು ತೆಗೆದುಕೊಳ್ಳಲಿಲ್ಲ ಎಂಬುದು ಗೊತ್ತಾಗುವುದಿಲ್ಲ. ಹಣ ವ್ಯವಹಾರ ಡಿಜಿಟಲ್ ಮಾಡಿದಾಗ ಅದರ ಟ್ರ್ಯಾಕ್ ಇರುತ್ತದೆ- ಕಳ್ಳತನ ಎಲ್ಲಾಗುತ್ತದೆ ತಿಳಿಯುತ್ತದೆ. ನಗದು ಪ್ರಮಾಣವನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶ ಎಂದರು. ಆದರೆ ನೋಡಿ, ಹೋದವಾರ ಆರ್ ಬಿ ಐ ಒಂದು ಅಂಕಿ ಅಂಶ ನೀಡಿದೆ- 2016ರಲ್ಲಿ ಡಿಮಾನಿಟೈಸೇಶನ್ ಮಾಡುವ ಮೊದಲು 16 ಲಕ್ಷ ಕೋಟಿ ರೂಪಾಯಿ ನಗದು ವ್ಯವಹಾರದಲ್ಲಿದ್ದರೆ ಇಂದು 20 ಲಕ್ಷ ಕೋಟಿ ನಗದು ವ್ಯವಹಾರದಲ್ಲಿದೆ ಎಂದು ಮಾಹಿತಿ ನೀಡಿದೆ. ಸುಳ್ಳು..ಸುಳ್ಳು.. ಎಲ್ಲದರಲ್ಲೂ ಸುಳ್ಳು..ಎಲ್ಲದರಲ್ಲೂ ಮೋಸ
ನಮ್ಮನ್ನು ನಂಬಿ, ನಮ್ಮನ್ನು ನಂಬಿ ಎನ್ನುತ್ತಾರೆ…ಈ ಪ್ರಧಾನ ಸೇವಕ. ನಿಮ್ಮನ್ನು ನಂಬಿಯೇ ನಮ್ಮ ದೇಶದ ಹತ್ತು ಕೋಟಿ ಜನ ತಮ್ಮ ಉದ್ಯೋಗ ಕಳೆದುಕೊಂಡರು. ಯುವಕರು ಉದ್ಯೋಗ ಕೊಡಿ ಎಂದರೆ “ಪಕೋಡ ಮಾರಿ” ಎಂದರು. ಪಕೋಡ ಮಾರುವುದನ್ನು ನೀವು ನಮಗೆ ಕಲಿಸಿಕೊಡಬೇಕಾಗಿಲ್ಲ ಪ್ರಧಾನ ಸೇವಕರೇ, ಅಥವಾ ಯಾವುದೇ ರಾಜಕಾರಣಿಗಳೆ. ಪಕೋಡ ಮಾಡುವುದು ನನಗೆ ಗೊತ್ತಿದೆ. ಆದರೆ ಪಕೋಡಾ ಮಾರಿದರೆ ಪಿಂಚಣಿ ಸಿಗುವುದಿಲ್ಲ. ಪಕೋಡಾ ಮಾರಿದರೆ ನನಗೆ ಸಾಮಾಜಿಕ ಭದ್ರತೆ ಯಾವುದೂ ಇರುವುದಿಲ್ಲ. ಪಕೋಡಾ ಮಾರಿದ ಒಬ್ಬ ವ್ಯಕ್ತಿ ಮುದುಕನಾದರೆ, ಮಕ್ಕಳು ಹೊರಹಾಕಿದರೆ ಯಾರೂ ಬಂದು ನೋಡಿಕೊಳ್ಳುವುದಿಲ್ಲ. ಭದ್ರತೆಯ ಉದ್ಯೋಗ ಕೊಡಿ ಎಂದು ದೇಶದ ಪ್ರಜೆಗಳು ಕೇಳುತ್ತಿದ್ದಾರೆ.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದಿರಿ. ಮೊನ್ನೆ ಸರ್ಕಾರದ ಅಂಕಿಅಂಶ ಹೇಳುತ್ತದೆ- ಅತ್ಯಂತ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಸಣ್ಣ ಮತ್ತು ಅತಿ ಸಣ್ಣ ಸಂಸ್ಥೆಗಳಲ್ಲಿ, ಸಣ್ಣ ಪುಟ್ಟ ಉದ್ಯೋಗಗಳಲ್ಲಿ ಕಳೆದ 4 ವರ್ಷಗಳಲ್ಲಿ ಸೃಷ್ಟಿಯಾಗಿರುವ ಉದ್ಯೋಗಗಳ ಸಂಖ್ಯೆ ಕೇವಲ ಮೂರೂವರೆ ಲಕ್ಷ ಉದ್ಯೋಗಗಳು. ಪ್ರತಿ ವರ್ಷ 2 ಕೋಟಿ ನಿರುದ್ಯೋಗಿಗಳು ಹೊರಗೆ ಬರುತ್ತಿದ್ದಾರೆ. ಇಂತಹ ಸಭೆಗಳಲ್ಲಿ ಎಲ್ಲಿ ಉದ್ಯೋಗ ಎಂದು ಕೇಳಿದರೆ ಬೇರೆಯವರೆಲ್ಲಾ ದೊಣ್ಣೆ ಹಿಡಿದು ಬಂದು ಬಾರಿಸುತ್ತಾರೆ. ಇದು ಇಂದಿನ ವ್ಯತ್ಯಾಸ. ನಿರುದ್ಯೋಗ ದೇಶದಲ್ಲಿ ಮೊದಲಿಂದಲೂ ಇತ್ತು. ಯಾಕೆ ಎಂದು ಕೇಳಿದರೆ ಹೊಡೆದು ಸಾಯಿಸುವ, ಮತ್ತು ಪ್ರಶ್ನಿಸುವುದನ್ನು ದೇಶದ್ರೋಹ ಎಂದು ಕರೆಯುವುದು ಇಂದಾಗುತ್ತಿದೆ.
ಮುಸ್ಲಿಮರ ಮೇಲೆ ಅತ್ಯಾಚಾರ, ದೌರ್ಜನ್ಯ ಹಿಂದೆಯೂ ನಡೆಯುತ್ತಿತ್ತು. ಆದರೆ 8 ವರ್ಷದ ಬಾಲಕಿ ಅಸೀಫಾ ಮೇಲೆ ಅತ್ಯಾಚಾರ ನಡೆದಾಗ ಅದನ್ನು ಬೆಂಬಲಿಸಿ ಮೆರವಣಿಗೆ ಮಾಡಿದ ಘಟನೆ ಇತಿಹಾಸದಲ್ಲಿ ನಡೆದಿರಲಿಲ್ಲ ಸ್ನೇಹಿತರೆ. ರಾಜಾಸ್ತಾನದಲ್ಲಿ ಅಫ್ರಜುಲ್ ಖಾನ್ ಎಂಬ ವ್ಯಕ್ತಿ ಲವ್ ಜಿಹಾದ್ ನಲ್ಲಿ ಮದುವೆಯಾದ ಎಂದು ಆರೋಪಿಸಿ ಅವನನ್ನು ಜೀವಂತ ಸುಟ್ಟು ಹಾಕಿ ಅದನ್ನು ವಿಡಿಯೋದಲ್ಲಿ ಹಂಚಿದವನ ಪರವಾಗಿ ಮೆರವಣಿಗೆ ಹೊರಟಂತಹ ಘಟನೆಯಾಗಲೀ, ಅಂತವನು ಚುನಾವಣೆಗೆ ನಿಂತಂತಹ ಘಟನೆಯಾಗಲೀ ಇತಿಹಾಸದಲ್ಲಿ ನಡೆದಿರಲಿಲ್ಲ. ಜುನೈದ್ ಎನ್ನುವ 17 ವರ್ಷದ ಬಾಲಕ ಸ್ಕಲ್ ಕ್ಯಾಪ್ ಹಾಕಿಕೊಂಡಿದ್ದ ಏಕೈಕ ಕಾರಣಕ್ಕೆ ಹೊಡಿಬಡಿ ಗುಂಪು ಕೊಂದು ಹಾಕುವಾಗ ಬೋಗಿಯಲ್ಲಿದ್ದ 200 ಜನ ಸಹಪ್ರಯಾಣಿಕರು ಮೌನವಾಗಿ ಕುಳಿತಂತಹ ಘಟನೆ ನಡೆದಿರಲಿಲ್ಲ. ಆ 200 ಮಂದಿ ಸಹಪ್ರಯಾಣಿಕರೆಲ್ಲರೂ ಆರೆಸ್ಸೆಸ್, ಸಂಘಪರಿವಾರದವರಾಗಿರಲಿಲ್ಲ. ತಮ್ಮ ಕಣ್ಣೆದುರೇ ನಡೆಯುತ್ತಿದ್ದ ಅನ್ಯಾಯವನ್ನು ಖಂಡಿಸಲು ಆಗದಿದ್ದಂತಹ ಉನ್ಮಾದವನ್ನು, ಧರ್ಮೋನ್ಮಾದವನ್ನು, ನಮ್ಮ ಬೆರಳಿಂದಲೇ ನಮ್ಮ ಕಣ್ಣನ್ನು ಚುಚ್ಚುವ ಕೆಲಸವನ್ನು ಇಂದು ಅವರು ಮಾಡುತ್ತಿರುವುದು ಇಂದಿನ ಆತಂಕ. ಇದನ್ನು ನಾವು ಗೆಲ್ಲಲೇಬೇಕು.
ಸಮಯ ಮುಗಿದಿದೆ. ಇನ್ನೊಂದು ಮುಖ್ಯವಾದ ವಿಷಯ ಪ್ರಸ್ತಾಪಿಸಿ ನನ್ನ ಮಾತು ಮುಗಿಸುತ್ತೇನೆ.
ನಮ್ಮ ಸಂವಿಧಾನದಲ್ಲಿರುವ ಸ್ವಾತಂತ್ರ್ಯ, ಸಮಾನತೆ, ಸಹೋದರತೆ- ಇದು ನಮ್ಮ ಹಕ್ಕು. ಇದನ್ನು ಮಾಡಿಕೊಂಡಿರುವುದು ನಾವೇ. ಸಂವಿಧಾನ ಮಾಡಿಕೊಂಡಿರುವುವು ಜನತೆಯಾದ ನಾವು. ಇದನ್ನು ಸಾಕಾರಗೊಳಿಸುವ ಕೆಲಸವನ್ನು ಯಾರಿಗೆ ವಹಿಸಿದ್ದೇವೋ ಅವರು ಆ ಕೆಲಸ ಮಾಡಲಿಲ್ಲ ಎಂದರೆ ಅದನ್ನು ಬದಲಾಯಿಸಬೇಕಾದದ್ದು ನಾವೇ- ಯಾಕೆಂದರೆ ಪ್ರಧಾನ ಮಾಲೀಕರು ನಾವು. ಪ್ರಧಾನ ಸೇವಕ ಕೆಲಸ ಮಾಡಿಲ್ಲ ಎಂದಾದರೆ ಅವರನ್ನು ಬದಲಾಯಿಸುವುದು ನಮ್ಮ ಕರ್ತವ್ಯ.
ತುಂಬಾ ಮುಖ್ಯವಾದ ಪ್ರಸ್ತಾಪ ಮಾಡಿ ನನ್ನ ಮಾತು ಮುಗಿಸುತ್ತೇನೆ.
ಸಂವಿಧಾನವನ್ನು ಯಾರು ಉಳಿಸುವುದು? ಸಂವಿಧಾನ ಉಳಿಸುವುದು ಎಂದರೆ ಏನು?
ಈ ದೇಶದಲ್ಲಿ ಜೀವಿಸುವ ಎಲ್ಲರೂ ಭದ್ರತೆಯಿಂದ ಬದುಕುವುದು, ಘನತೆಯಿಂದ ಆದಾಯವನ್ನು ಪಡೆದುಕೊಳ್ಳುವುದು, ಎಲ್ಲರ ಮಾನಪ್ರಾಣಗಳ ರಕ್ಷಣೆಯಾಗುವುದು, ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದು ಎಂದಾದರೆ, ನಮ್ಮ ಸಂವಿಧಾನ ಅಪಹರಣ ಆಗುತ್ತಿರುವುದು 1991ರಿಂದ ನಾವು ಬದಲಾಯಿಸಿಕೊಂಡಿರುವ ಆರ್ಥಿಕ ನೀತಿಗಳಲ್ಲಿ. ಇವತ್ತು ಈ ಪಕ್ಷ ಬದಲಾಗಬೇಕು ಎಂಬುದು ನಿಜ. ಅದರ ಬದಲಿಗೆ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದು ಅದೇ ನೀತಿಗಳನ್ನು ಮುಂದುವರೆಸಿದರೆ, ನಾವು ಮತ್ತೊಮ್ಮೆ ಮೋಸ ಹೋಗುತ್ತೇವೆ. ನಮ್ಮ ಜಾಗೃತ ಪ್ರಜ್ಞೆ ಕೆಲಸ ಮಾಡಬೇಕಾಗುತ್ತದೆ. ಇಂದು ಚುನಾವಣೆ ನಡೆಯುತ್ತದೆ. ನಮ್ಮ ಆಶಯದಂತೆ ಆಗಬಹುದು, ಆಗದಿರಬಹುದು. ಆಗಿಹೋಯಿತು ಎಂದಿಟ್ಟುಕೊಳ್ಳೋಣ. ಅದರಿಂದ ನಾವು ಸಂತೋಷದಿಂದ ಮನೆಗೆ ಹೋದರೆ ಆಗ ನಮಗಿಂತ ಮುಠ್ಠಾಳರು ಯಾರೂ ಇರುವುದಿಲ್ಲ. ಎಲ್ಲಿ ಜನರು ಜಾಗೃತರಾಗಿರುವುದಿಲ್ಲವೋ ಅಲ್ಲಿ ಅವರ ಶೋಷಣೆ ನಿರಂತರವಾಗುತ್ತದೆ. ಆಳುವ ವರ್ಗದ ಜನ ನಮ್ಮನ್ನು ಯಾವತ್ತಿಗೂ ಮುಠ್ಠಾಳರಾಗಿರುವಂತೆಯೇ ಬಯಸುತ್ತಾರೆ. ಬ್ಲೂವೇಲ್ ಎಂಬ ಗೇಮ್ ಇತ್ತೀಚೆಗೆ ಪ್ರಚಾರಕ್ಕೆ ಬಂದಿತ್ತು. ಅದನ್ನು ಆಡಿದ ವ್ಯಕ್ತಿ ತಾನಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ತಲುಪುತ್ತಾನೆ ಎನ್ನಲಾಗಿತ್ತು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಾವೆಲ್ಲರೂ ಆ ಬ್ಲೂವೇಲ್ ಗಿರಾಕಿಗಳಾಗಿದ್ದೇವೆ. ಆ ಬ್ಲೂವ್ಹೇಲ್ ಸಿಂಡ್ರೋಮಿನಿಂದ ನಾವು ಹೊರಕ್ಕೆ ಬರಬೇಕು.
ಯಾರೇ ಆದಿಕಾರಕ್ಕೆ ಬಂದರೂ ಅವರನ್ನು ಜಾಗರೂಕರಾಗಿ ಎಚ್ಚರಿಸುವ ಪ್ರಭುಗಳು ನಾವಾಗಬೇಕು. “ಮಗನೇ ಎಲ್ಲಿದ್ದೀಯ” ಎಂದು ನಾವು ಕೇಳುವಂತಾಗಬೇಕೇ ಹೊರತು ಅವರು ಕೇಳುವಂತಾಗಬಾರದು.