ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ಗಳಲ್ಲಿ ರಾಜಕೀಯ ವಿಷಯಗಳ ಬಗ್ಗೆ ವಾದ ವಿವಾದಗಳನ್ನು ಗಮನಿಸುತ್ತಾ ಬಂದವರಿಗೆ ಧ್ರುವ್ ರಾಥೀ ಚಿರಪರಿಚಿತ ಹೆಸರು. ಕಳೆದ ಕೆಲವು ವರ್ಷಗಳಿಂದ, ನಿರ್ದಿಷ್ಟವಾಗಿ 2014ರಿಂದ ಎನ್ನಬಹುದು, ತನ್ನ ಸಾಮಾಜಿಕ ಮಾಧ್ಯಮ ಕ್ರಿಯಾಶೀಲತೆ, ಆಳುವ ಸರ್ಕಾರದ ಪೊಳ್ಳುತನಗಳನ್ನು ಬಯಲಿಗಳೆಯುವ ಚಟುವಟಿಕೆಯಿಂದಲೇ ದೇಶದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಬೆಂಬಲಿಗರನ್ನು ಪಡೆದಿರುವ ಖ್ಯಾತಿ ಈ ಪೋರ ಧ್ರುವ್ ರಾಥಿಯದ್ದು.
ಹರಿಯಾಣ ರಾಜ್ಯದ ಈ ಕ್ರಿಯಾಶೀಲ ಯುವಕ ವೃತ್ತಿಯಲ್ಲಿ ಮೆಕ್ಯಾನಿಕಲ್ ಡಿಸೈನ್ ಇಂಜಿನಿಯರ್. ಪ್ರವೃತ್ತಿಯಲ್ಲಿ ಸಮಕಾಲೀನ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಪರಿಸರ ವಿಷಯಗಳಿಗೆ ಸಂಬಂಧಿಸಿದಂತೆ ವಿಡಿಯೋಗಳನ್ನು ನಿರ್ಮಿಸಿ, ನಿರಂತರವಾಗಿ ಯೂಟ್ಯೂಬ್, ಫೇಸ್ಬುಕ್, ಟ್ವಿಟರ್ ಗಳ ಮೂಲಕ ಜನರಿಗೆ ಸತ್ಯ ತಿಳಿಸುವ ಕೆಲಸದಲ್ಲಿ ವೃತ್ತಿನಿರತ. ತೆಳುಕಾಯದ, 25ವರ್ಷ ಪ್ರಾಯದ ಧ್ರುವ್ ರಾಥಿ ಭಾರತದಲ್ಲಿ ಶಾಲಾ ಶಿಕ್ಷಣ ಮುಗಿಸಿ ಜರ್ಮನಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾನೆ. ದೃಶ್ಯ ಮಾಧ್ಯಮದ ಮೂಲಕ ಸಮಾಜದಲ್ಲಿ ಅನ್ಯಾಯ, ಸುಳ್ಳು, ಅಪಪ್ರಚಾರಗಳ ವಿರುದ್ಧ ಜಾಗೃತಿ ಮೂಡಿಸುವ ಈತ ತನ್ನನ್ನು ತಾನು ಗುರುತಿಸಿಕೊಳ್ಳುವುದು ಸಾಮಾಜಿಕ-ರಾಜಕೀಯ ಹೋರಾಟಗಾರನೆಂದೇ.
ನಿರಂಕುಶಮತಿ ತರುಣ- ಧ್ರುವ್ ರಾಥಿ
ಇಂಜಿನಿಯರಿಂಗ್ ಪದವಿ ನಂತರ ಕೆಲ ಸಮಯ ಇಂಜಿನಿಯರ್ ಆಗಿ ಕೆಲಸ ಮಾಡಿದ ನಂತರ ತರುಣ ಧ್ರುವ್ ರಾಥಿ 2011-12ರಲ್ಲಿ ಅಣ್ಣಾ ಹಜಾರೆ ಚಳವಳಿಯಿಂದ ಪ್ರಭಾವಿತನಾಗಿ, ಸಾಮಾಜಿಕ ಹೋರಾಟಕ್ಕೆ ಧುಮುಕಿದ್ದ. ದೇಶದಲ್ಲಿ ತದನಂತರ ಉಂಟಾದ ರಾಜಕೀಯ ಬದಲಾವಣೆಗಳು ಈತನ ಮೇಲೆ ಪರಿಣಾಮ ಬೀರುತ್ತವೆ. 2014ರಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡು ಜನವಿರೋಧಿ ನೀತಿಗಳನ್ನು ಅನುಸರಿಸತೊಡಗಿದಾಗ, ಧ್ರುವ್ ರಾಥಿ ತಾನು ಜನರ ಧ್ವನಿಯಾಗಿ ಇರಬೇಕೆಂದು ನಿರ್ಧರಿಸಿಕೊಂಡ. ಇದಕ್ಕಾಗಿ ಅವನು ಪಕ್ಷ ಕಟ್ಟಲಿಲ್ಲ, ಸಂಘಟನೆ ಸೇರಲಿಲ್ಲ. ಈ ಜಮಾನದ ಪರಿಣಾಮಕಾರಿ ವೇದಿಕೆಯಾಧ ಸಾಮಾಜಿಕ ಮಾಧ್ಯಮಗಳನ್ನೇ ವೇದಿಕೆಯಾಗಿಸಿಕೊಂಡ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬರೀ ಸುಳ್ಳುಗಳನ್ನೇ ಹೇಳುತ್ತಿರುವಾಗ ಜನರಿಗೆ ಸತ್ಯ ತಿಳಿಸುವ ದಾರಿ ಸಾಮಾಜಿಕ ಮಾಧ್ಯಮಗಳೇ ಎಂದು ಯೋಚಿಸಿ, ಸರ್ಕಾರ ಹೇಳುವ ಸುಳ್ಳುಗಳ ನಿಜಾಂಶಗಳನ್ನು ಬಯಲುಗೊಳಿಸುವಂತಹ ವಿಡಿಯೋಗಳನ್ನು ನಿರ್ಮಿಸಿ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡುತ್ತಾ ಬಂದ. ಈ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಜನರ ಗಮನ ಸೆಳೆದ ಧ್ರುವ್ ರಾಥಿಯ ವಿಡಿಯೋಗಳು ವ್ಯಾಪಕ ಜನಪ್ರಿಯತೆಯನ್ನೂ ಪಡೆಯುತ್ತಾ ಸಾಗಿದವು. ತಾನು ಯಾವುದೇ ಪಕ್ಷದ ಸದಸ್ಯನೂ ಅಲ್ಲ, ವಕ್ತಾರನೂ ಅಲ್ಲ ಎಂದು ಹೇಳಿಕೊಂಡಿರುವ ಧ್ರುವ್ ರಾಥಿ, ಆಳುವ ಸರ್ಕಾರಗಳ ತಪ್ಪುಒಪ್ಪುಗಳನ್ನು ವಿಮರ್ಶೆಗೊಳಪಡಿಸುವುದು ಪ್ರಜ್ಞಾವಂತ ನಾಗರಿಕನ ಕರ್ತವ್ಯ ಎಂಬ ಅಭಿಪ್ರಾಯ ಇರುವ ಪ್ರಜ್ಞಾವಂತ. ಕುವೆಂಪು ಹೇಳುವ ನಿರಂಕುಶಮತಿ ತರುಣ ಈ ಧ್ರುವ್ ರಾಥಿ.
ಒಂದು ಕಡೆ ಸರ್ಕಾರಗಳ ಸುಳ್ಳು ಮಾತುಗಳು, ವಂಚನೆಗಳು, ಭ್ರಷ್ಟಾಚಾರಗಳು ಮತ್ತೊಂದು ಕಡೆ ತಮ್ಮ ಹೊಣೆಗಾರಿಕೆಯನ್ನೇ ಮರೆತ ಮಾಧ್ಯಮ ರಂಗ. ಸರ್ಕಾರದ ತೊಡೆ ಮೇಲೆರಿ ಕುಳಿತ ನಾಯಿಗಳಾಗಿರುವ ದೊಡ್ಡ ದೊಡ್ಡ ಸುದ್ದಿ ವಾಹಿನಿಗಳು, ಬಿಸ್ಕಿಟ್ ಪತ್ರಕರ್ತರು. ಪ್ರಜಾಪ್ರಭುತ್ವದ ಇಂತಹ ಬಿಕ್ಕಟ್ಟಿನ ಸ್ಥಿತಿಯೇ ಧ್ರುವ್ ರಾಥಿಯಂತಹ ಕ್ರಿಯಾಶೀಲ ತರುಣನೊಬ್ಬನ ವಿಕಾಸಕ್ಕೆ ಕಾರಣವಾದದ್ದು.
ತನ್ನ ಚಟುವಟಿಕೆಯ ಕುರಿತು ಇದನ್ನು ಸ್ವತಃ ಧ್ರುವ್ ರಾಥೀಯೇ ಹೇಳುವುದು ಹೀಗೆ,
ಇಂದಿನ ಮುಖ್ಯವಾಹಿನಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಚಾನೆಲ್ ಗಳು ವಿವಿಧ ರಾಜಕೀಯ ಮತ್ತು ಕಾರ್ಪೊರೇಟ್ ಪ್ರಭಾವಿಗಳಿಗೆ, ಬಲಾಢ್ಯರಿಗೆ ಹಾರಾಜಾಗಿರುವಾಗ, ನೀವು ಟಿವಿಯ ಪರದೆ ಮೇಲೆ ಏನನ್ನು ನೋಡುತ್ತೀರೋ ಅದನ್ನೆಲ್ಲಾ ನಂಬುವುದು ಕಷ್ಟಕರವೇ… ಆದ್ದರಿಂದ ನಾನು ನನ್ನ ಎಲ್ಲಾ ವಿಡಿಯೋ, ಗ್ರಾಫಿಕ್ ಮತ್ತು ಪೋಸ್ಟರ್ ಗಳನ್ನು ಸಾಕ್ಷಿ ಸಮೇತವಾಗಿಯೇ ನಿರ್ಮಿಸುತ್ತೇನೆ. ನಾನು ನನ್ನ ವಿಡಿಯೋಗಳಿಗೆ ಬರುವ ಯಾವುದೇ ಟೀಕೆಯ ಪ್ರತಿಕ್ರಿಯೆಗಳನ್ನೂ, ಅವು ಅಸಭ್ಯ ಭಾಷೆ ಬಳಸದಿದ್ದರೆ, ಅಳಿಸಿಹಾಕುವುದಿಲ್ಲ. ನಾನು ಒದಗಿಸುವ ಮಾಹಿತಿಗಳು ತಪ್ಪಾಗಿದ್ದರೆ ನೀವು ಮುಕ್ತವಾಗಿ ನನಗೆ ತಿಳಿಸಬಹುದು. ಯಾವುದೇ ತಾರ್ಕಿಕ ಚರ್ಚೆಗೂ ನಾನು ಸದಾ ಸಿದ್ಧ.
ಕುರುಡ ಮೋದಿ ಭಕ್ತರಿಗೆ ಧ್ರುವ್ ರಾಥಿ ಎಂದರೆ ಉರಿ ಉರಿ
ಈ ದಿಟ್ಟ ಯುವಕ ‘ಧ್ರುವ್ ರಾಥಿ ಸ್ಕ್ವಾಡ್” ಎಂಬ ಫೇಸ್ಬುಕ್ ಫೇಜ್ ನಿರ್ವಹಿಸುತ್ತಾನೆ. 27458 ಸದಸ್ಯರಿರುವ ಈ ನಿರ್ಬಂಧಿತ ಗುಂಪನ್ನು ಸುಳ್ಳುಸುದ್ದಿಗಳನ್ನು ಮಟ್ಟ ಹಾಕಲೆಂದು ಆರಂಭಿಸಲಾಗಿದೆ. ಈತ ನಡೆಸುವ ‘ಪೀ ನ್ಯೂಸ್’ ಎಂಬ ವಿಡಂಬನಾತ್ಮಕ ಕಾರ್ಯಕ್ರಮ ಅಪಾರ ಜನಮನ್ನಣೆ ಗಳಿಸಿದೆ. ಧ್ರುವ್ ರಾಥಿಯ ಯೂಟ್ಯೂಬ್ ಚಂದಾದಾರರ ಸಂಖ್ಯೆ 17 ಲಕ್ಷ ದಾಟಿದ್ದು ಆತನ ಫೇಸ್ಬುಕ್ ಪೇಜನ್ನು 5 ಲಕ್ಷಕ್ಕೂ ಮೀರಿದ ಫೇಸ್ಬುಕ್ ಸದಸ್ಯರು ಅನುಸರಿಸುತ್ತಾರೆ. ಟ್ವಿಟರ್ ನಲ್ಲಿ 2.2 ಲಕ್ಷ ಜನ ಫಾಲೋ ಮಾಡುತ್ತಾರೆ. ಧ್ರುವ್ ರಾಥಿ ಹಿಂದಿ ಭಾಷೆಯನ್ನು ನಿರ್ಗಗಳವಾಗಿ ಮಾತಾಡುವುದರಿಂದ ಭಾರತದಾದ್ಯಂತ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಿದೆ. ಅಲ್ಲದೆ ತನ್ನ ವಿಚಾರಗಳನ್ನು ಆಧಾರಸಹಿತವಾಗಿ ತಿಳಿಸುವುದರಿಂದ ಸುಳ್ಳುಬುರುಕರು ಈತನ ವಿರುದ್ಧ ಕೂಗಾಡಲು ಸಾಧ್ಯವಾಗದು. ಎಲ್ಲೂ ಕೂಡ ಈತ ಅಸಭ್ಯ ಭಾಷೆ ಬಳಸುವುದಿಲ್ಲ. ಉದ್ವೇಗವಿಲ್ಲದೆ ನೇರವಾಗಿ, ಸ್ಪಷ್ಟವಾಗಿ ವಿಷಯ ತಿಳಿಸುತ್ತಾನೆ.
ಮೋದಿ ಸರ್ಕಾರದ ಹಲವು ಜುಮ್ಲಾಗಳನ್ನು, ನಿರುದ್ಯೋಗ, ನೋಟ್ ಅಮಾನ್ಯೀಕರಣ (ಡಿಮಾನೆಟೈಸೇಷನ್), ಕೃಷಿ ಬಿಕ್ಕಟ್ಟು, ಪಾಕಿಸ್ತಾನದ ಮೇಲಿನ “ದಾಳಿ”, ಫುಲ್ವಾಮಾ ದಾಳಿ, ಬಾಲಾಕೋಟ್ ದಾಳಿ, ಭೂ ಸ್ವಾಧೀನ ಕಾಯಿದೆ, ಅಂಬಾನಿ – ಅದಾನಿ – ಮೋದಿ, ಬ್ಯಾಂಕ್ ಗಳ ಲೂಟಿ, ತೈಲ ಬೆಲೆ ಏರಿಕೆ, ಗೋರಕ್ಷಕರ ಗೂಂಡಾಗಿರಿ, ಇತ್ಯಾದಿ ರಾಜಕೀಯ ಸಂಗತಿಗಳು, ಮೋದಿ ಸರ್ಕಾರ ಹೇಳಿದ ಸುಳ್ಳುಗಳು, ಸಂಘಪರಿವಾರ ಪ್ರಚಾರ ಮಾಡಿದ ಡೋಂಗಿಸುದ್ದಿಗಳು, ಬಿಜೆಪಿ ಐಟಿ ಸೆಲ್, ಹೀಗೆ ಬಹಳಷ್ಟು ವಿಡಿಯೋಗಳನ್ನು ಯಾರೂ ಮರುಪ್ರಶ್ನಿಸಲಾರದಂತೆ ನಿರ್ಮಿಸಿ ನೈಜ ದೇಶಪ್ರೇಮ ಮತ್ತು ಎದೆಗಾರಿಕೆ ತೋರಿರುವ ದೇಶದ ದಿಟ್ಟ ಯುವಕರಲ್ಲಿ ಮುಂಚೂಣಿಯಲ್ಲಿದ್ದಾರೆ.
ಇದೇ ಕಾರಣಕ್ಕೆ ಧ್ರುವ್ ರಾಥಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹೀಯಾಳಿಸುವ, ದೇಶ ದ್ರೋಹಿ, ಟೆರರಿಸ್ಟ್ ಎಂದೆಲ್ಲಾ ನಿಂದಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಆದರೆ ತಾರ್ಕಿಕ ವಾದಕ್ಕೆ ನಿಂತರೆ ಧ್ರುವ್ ರಾಥೀ ಮುಂದೆ ಅವರೆಲ್ಲಾ ನಿಲ್ಲುವುದರಿಲ್ಲ. ಡಿಜಿಟಲ್ ಹೋರಾಟದಲ್ಲಿ ಸಕ್ರಿಯವಾಗಿರುವ ಧ್ರುವ್ ರಾಥಿಗೆ ಮೋದಿ ಭಕ್ತರ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಬೆದರಿಕೆಗೇನೂ ಕಡಿಮೆಯಿಲ್ಲ. 2018ರ ಮೇ ತಿಂಗಳಲ್ಲಿ ಬಿಜೆಪಿ ಐಟಿ ಸೆಲ್ ಕುರಿತು ವಿಡಿಯೋ ನಿರ್ಮಿಸಿದ ನಂತರ ಬಿಜೆಪಿ ಬೆಂಬಲಿಗನೊಬ್ಬ ಪೊಲೀಸ್ ಠಾಣೆಯಲ್ಲಿ ಧ್ರುವ್ ರಾಥಿಯ ವಿರುದ್ಧ ದೂರೊಂದನ್ನು ದಾಖಲಿಸಿದ್ದ. ಆ ದೂರಿನ ಪ್ರಕರಣವೂ ಕೂಡ ಧ್ರುವ್ ರಾಥಿಯ ವಿಡಿಯೋ ಆಗಿ ಹೊರಬಂದಿತ್ತು
ಈಗ ಚುನಾವಣಾ ಸಂದರ್ಭ, ಸ್ವಾಭಾವಿಕವಾಗಿಯೇ ಮೋದಿ, ಬಿಜೆಪಿ ಮತ್ತು ಸಂಘಪರಿವಾರಕ್ಕೆ ಧ್ರುವ್ ರಾಥಿಯಂತಹ ಯುವಕರು ನುಂಗಲಾರದ ತುತ್ತಾಗಿದ್ದಾರೆ. ಕಳೆದ ಚುನಾವಣೆಗಳ ಸಂದರ್ಭದಲ್ಲಿ (2014), ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಐಟಿ ಸೆಲ್ ನ ಸುಳ್ಳುಸುದ್ದಿಗಳದ್ದೇ ಕಾರುಬಾರಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸುಳ್ಳುಸುದ್ದಿಗಳು ಇನ್ನು ಮಾರಾಟವಾಗುತ್ತಿಲ್ಲ, ಅವುಗಳ ಬೆಲೆ ಕುಸಿದಿದೆ. ಅದು ಧ್ರುವ್ ರಾಥಿಯಂತಹ ಪ್ರಜ್ಞಾವಂತ ಯುವಕರ ಪಡೆ ಮತ್ತು ಅವರುಗಳು ರಚಿಸಿಕೊಂಡಿರುವ ಅನೇಕ ಸ್ವಾಯತ್ತ ಆನ್ಲೈನ್ ಸುದ್ದಿಸಂಸ್ಥೆಗಳಿಂದಾಗಿ ಎಂದರೆ ತಪ್ಪಿಲ್ಲ.
ನರೇಂದ್ರಮೋದಿ ಮತ್ತು ಬಿಜೆಪಿಯ ಸುಳ್ಳುಗಳೆಲ್ಲಾ ರಟ್ಟಾಗುತ್ತಿರುವುದರಿಂದ ಚುನಾವಣೆಯಲ್ಲಿ ತೀವ್ರ ಹೊಡೆತ ಬೀಳಲಿದೆ ಎಂಬುದನ್ನು ಮನಗಂಡ ಸಂಘಪರಿವಾರ ಜನರ ಮನಪರಿವರ್ತನೆ ಮಾಡುವಂತಹ ವಿಡಿಯೋ ನಿರ್ಮಿಸುವ ಧ್ರುವ್ ರಾಥಿ ಮೇಲೆ ನಿರ್ಬಂಧ ಹೇರಿಸಲು ಫೇಸ್ಬುಕ್ ಮೂಲಕ ಯತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ!
ಮೊನ್ನೆ ಧ್ರುವ್ ರಾಥಿ ಬರೆದಿದ್ದೇನು ಗೊತ್ತೇ?
ಫೇಸ್ಬುಕ್ಕಿನಲ್ಲಿ ಮೋದಿ ಭಕ್ತರ ಉಗ್ರ ಕೋಪಕ್ಕೆ ಕಾರಣವಾಗಿದ್ದು ಧ್ರುವ್ ರಾಥಿ ಫೇಸ್ಬುಕ್ ನಲ್ಲಿ ಹಾಕಿದ್ದ ಹಿಟ್ಲರ್ ಜೀವನ ಚರಿತ್ರೆಯ ಕೆಳಗಿನ ಸಾಲುಗಳು.
“ಉದ್ಯಮಿಗಳಿಂದ ಹಿಟ್ಲರ್ ಪಡೆದ ಸಹಾಯಧನವು ಅವನ ಪಕ್ಷವನ್ನು ಆರ್ಥಿಕವಾಗಿ ಸುಭದ್ರವಾಗಿರಿಸಿತ್ತು ಹಾಗೂ ಇದರಿಂದಾಗಿ ಅವನಿಗೆ ಕೆಳಮಧ್ಯಮ ವರ್ಗ ಮತ್ತು ನಿರುದ್ಯೋಗಿಗಳನ್ನು ಭಾವನಾತ್ಮಕವಾಗಿ ಪರಿಣಾಮಕಾರಿಯಾಗಿ ತಲುಪಲು ಸಾಧ್ಯವಾಯಿತು.
ಅವನ ವೈಯಕ್ತಿಕ ಮಹತ್ವಾಕಾಂಕ್ಷೆ ಮತ್ತು ಪ್ರಚಾರಗಳು ಪಕ್ಷದ ಇತರ ನಾಯಕರ ಜೊತೆಗಿನ ತಿಕ್ಕಾಟಕ್ಕೆ ಕಾರಣವಾದವು. ಅವರು ಹಿಟ್ಲರ್ ನನ್ನು ತುಳಿಯುವ ಪ್ರಯತ್ನ ಮಾಡಿದಾಗ ಅವನು ರಾಜೀನಾಮೆಯ ಬೆದರಿಕೆಯೊಡ್ಡಿದ.
ಹಿಟ್ಲರನ ವೃತ್ತಿಜೀವನದುದ್ದಕ್ಕೂ ನ್ಯಾಷನಲಿಸ್ಟ್, ಸೋಷಿಯಲಿಸ್ಟ್ ಪಾರ್ಟಿಗಿಂತ ಅವನ ಜನಪ್ರಿಯತೆಯೇ ಜೋರಾಗಿಯೂ ಆಳವಾಗಿಯೂ ಇತ್ತು.
ಅವನು ತನ್ನ ವೃತ್ತಿಜೀವನಕ್ಕೆ ಅಡ್ಡಿಯಾಗುವುದೆಂದು ಭಾವಿಸಿ ಮದುವೆಯ ಕಡೆ ಗಮನ ಕೊಟ್ಟಿರಲಿಲ್ಲ.
ಈ ಹೇಳಿಕೆಗಳನ್ನು ಧ್ರುವ್ ರಾಥಿ ಯಾರಿಗೂ ಹೋಲಿಸಿರಲಿಲ್ಲ, ಸನ್ಮಾನ್ಯ ನರೇಂದ್ರ ಮೋದಿಯವರ ಹೆಸರಂತೂ ಖಂಡಿತಾ ಎಲ್ಲೂ ಪ್ರಸ್ತಾಪಿಸಿರಲಿಲ್ಲ! ಆದರೂ ನಮೋಭಕ್ತರ ಕಂಗಳು ಕೆಂಪಾದವು, ಒಡಲು ಉರಿಯತೊಡಗಿತು. ಧ್ರುವ್ ರಾಥಿಯ ವಿರುದ್ಧ ದೂರಿದರು, ಪೇಜ್ ವರದಿ ಮಾಡಿದರು. ಕೆಲ ಸಮಯದ ನಂತರ ಧ್ರುವ್ ರಾಥಿ ಕೂಡ ಪ್ರತಿ ದೂರು ದಾಖಲಿಸಿದಾಗ ಫೇಸ್ಬುಕ್ ವಿವೇಚನೆಯಿಂದ ಧ್ರುವ್ ರಾಥಿಯ ದೂರನ್ನು ಪರಿಶೀಲಿಸಿ ನಿರ್ಬಂಧವನ್ನು ಹಿಂಪಡೆದು, ಕ್ಷಮೆ ಯಾಚಿಸಿದೆ. ಎಷ್ಟೇ ಆದರೂ ಫೇಸ್ಬುಕ್ ನಮ್ಮ ದೇಶದ ರಿಪಬ್ಲಿಕ್ ಟಿವಿ ಅಲ್ಲ ಎಂದು ತಿಳಿಯಬಹುದಲ್ಲವೇ!
ಧ್ರುವ್ ರಾಥಿಯಂತಹ ನಿರಂಕುಶಮತಿ ತರುಣರ ಸಂಖ್ಯೆ ಹೆಚ್ಚಲಿ ಎಂದು ಹಾರೈಸೋಣ
ಜ್ಯೋತಿ ಎ
5 Comments
God bless u dear brother
Super job.Dont leave continue
Satymevajayathe
ಇವತ್ತೇ ಆತನ ಹೆಸರು ಕೇಳಿದ್ದು
Felling proud.All the best.