ಶಿವಮೊಗ್ಗ: ಪಶ್ಚಿಮ ಘಟ್ಟದ ಆಗುಂಬೆ ಘಾಟಿಯ ಕೆಲವು ಪ್ರದೇಶಗಳಲ್ಲಿ ವಿಧಿಸಲಾಗಿದ್ದ ವಾಹನ ಸಂಚಾರ ನಿಷೇಧವನ್ನು ಹಿಂಪಡೆದು, ಇಂದಿನಿಂದ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ
ರಾಷ್ಟ್ರೀಯ ಹೆದ್ದಾರಿ 169ಎ, ಆಗುಂಬೆ ಘಾಟಿಯ ಕೆಲವು ಪ್ರದೇಶಗಳಲ್ಲಿ ಗುಡ್ಡ ಕುಸಿತದಿಂದ ಹಾನಿಗೊಳಗಾಗಿದ್ದ ರಸ್ತೆ ದುರಸ್ತಿಗೊಳಿಸುವ ಸಲುವಾಗಿ ಮಾರ್ಚ್ 19ರಿಂದ 30 ದಿನಗಳ ಕಾಲ ವಾಹನ ಸಂಚಾರ ನಿಷೇಧಿಸಿ ದಿನಾಂಕ 28-02-2019ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಈ ನಿಷೇಧದ ಆದೇಶವನ್ನು ಹಿಂಪಡೆದು, ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ದಂಡಾಧಿಕಾರಿಗಳ ಕಾರ್ಯಾಲಯ 18-03-2019ರಂದು ಪರಿಷ್ಕೃತ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಕೆ. ಎ ದಯಾನಂದ ತಿಳಿಸಿದ್ದಾರೆ
33.70 ಕಿಲೋ ಮೀಟರ್ ಮತ್ತು 37.018 ಕಿಲೋ ಮೀಟರ್ ಪ್ರದೇಶದಲ್ಲಿ ಗುಡ್ಡ ಕುಸಿದಿರುವುದರಿಂದ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಇವರು, ಹೊರಡಿಸಿದ್ದ ಆದೇಶದಲ್ಲಿ ರಕ್ಷಣಾ ತಡೆಗೋಡೆಗಳ ಮರು ನಿರ್ಮಾಣ ಹಾಗೂ ದುರಸ್ತಿ ಕಾರ್ಯ ನಡೆಸುವ ಉದ್ದೇಶದಿಂದ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.
