ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಸಂಬಂಧ ವಜ್ರ ವ್ಯಾಪಾರಿ ನೀರವ್ ಮೋದಿಗೆ ಲಂಡನ್ ನ್ಯಾಯಾಲಯ ಇಂದು ಬಂಧನ ವಾರಂಟ್ ಜಾರಿ ಮಾಡಿದೆ.
ಭಾರತದಲ್ಲಿ ಅಕ್ರಮವೆಸಗಿ ವಿದೇಶಕ್ಕೆ ಪರಾರಿಯಾಗಿದ್ದ ನೀರವ್ ಮೋದಿಯನ್ನು ಸ್ವದೇಶಕ್ಕೆ ಹಸ್ತಾಂತರಿಸಬೇಕು ಎಂದು ಭಾರತದ ಜಾರಿ ನಿರ್ದೇಶನಾಲಯ ಲಂಡನ್ ಸರ್ಕಾರಕ್ಕೆ ಮಾಡಿದ್ದ ಮನವಿ ಆಧರಿಸಿ ಲಂಡನ್ ಕೋರ್ಟ್ ಈ ಆದೇಶ ಹೊರಡಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 14 ಸಾವಿರ ಕೋಟಿ ವಂಚನೆ ಮಾಡಿದ್ದ ಮೋದಿ, ಇತ್ತೀಚೆಗೆ ಲಂಡನ್ ನಲ್ಲಿ ಕಾಣಿಸಿಕೊಂಡಿದ್ದರು. ಲಂಡನ್ ನ ವೆಸ್ಟ್ ಎಂಡ್ ನಲ್ಲಿರುವ 8 ಮಿಲಿಯನ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿರುವ ಬಗ್ಗೆ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿತ್ತು.
ಇಂದು ನೀರವ್ ಮೋದಿ ಬಂಧನದ ವಾರಂಟ್ ಜಾರಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ‘ಮೋದಿ ಲಂಡನ್ ನಲ್ಲಿ ಪತ್ತೆಯಾದ ತಕ್ಷಣ ಅವರನ್ನು ಭಾರತಕ್ಕೆ ಹಸ್ತಾಂತರಿಸಿದ್ದಾರೆ ಎನ್ನಲಾಗದು. ಈ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ.
ಮೋದಿಯನ್ನು ದೇಶಕ್ಕೆ ಕರೆತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನೀರವ್ ಮೋದಿ ಲಂಡನ್ ನಲ್ಲಿ ಇದ್ದಾರೆ ಎಂಬ ಬಗ್ಗೆ ನಮಗೂ ತಿಳಿದಿದೆ. ಅವರ ಹಸ್ತಾಂತರ ಮನವಿಯು ಲಂಡನ್ ಸರ್ಕಾರದ ಮುಂದಿದೆ ಎಂದು ತಿಳಿಸಿದರು. ಸಿಬಿಐ ಸಹ ಮೋದಿ ಹಸ್ತಾಂತರಕ್ಕೆ ಅಗತ್ಯ ಸಹಕಾರ ನೀಡಿದೆ ಎಂದು ಪಿಟಿಐ ತಿಳಿಸಿದೆ.
ಇತ್ತೀಚೆಗೆ ಲಂಡನ್ ನಗರದ ರಸ್ತೆಯಲ್ಲಿ ನೀರವ್ ಮೋದಿ ಟೆಲಿಗ್ರಾಫ್ ಪತ್ರಕರ್ತರ ಕಣ್ಣಿಗೆ ಕಾಣಿಸಿಕೊಂಡಿದ್ದರು. ಈ ಪ್ರಕರಣದ ನಂತರ ಮೋದಿಯನ್ನು ಕರೆಸಿಕೊಳ್ಳದ ಮೋದಿ ಸರ್ಕಾರದ ಅಸಮರ್ಥತೆ ಕುರಿತು ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದವು