ಮೂರೂ ಪಕ್ಷಗಳು ಇನ್ನೇನು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಕೊನೆಯ ಹಂತದ ಮಾತುಕತೆಗಳನ್ನು ನಡೆಸುತ್ತಿದ್ದು, ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳ ಚುನಾವಣಾ ಕಣದ ಚಿತ್ರಣ ಇನ್ನೇನು ಒಂದೆರಡು ದಿನದಲ್ಲೇ ಅಂತಿಮ ರೂಪ ಪಡೆಯಲಿದೆ.
ತಮ್ಮದೇ ಆದ ಕಾರಣಗಳಿಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಮೂರೂ ಪಕ್ಷಗಳಿಗೆ ಈ ಬಾರಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸುವುದು ತೀರಾ ‘ಮಾಡು ಇಲ್ಲವೇ ಮಡಿ’ ಹೋರಾಟದ ಪ್ರಶ್ನೆಯಾಗಿದೆ. ಅದರಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಪಕ್ಷಗಳಿಗೆ ಸಂಸತ್ ಮೆಟ್ಟಿಲೇರುವುದಕ್ಕಿಂತ ಮುಖ್ಯವಾಗಿ ಇರುವ ಸರ್ಕಾರವನ್ನು ಉಳಿಸಿಕೊಳ್ಳಲು ಈ ಚುನಾವಣೆಯಲ್ಲಿ ಕನಿಷ್ಠ ಒಟ್ಟಾಗಿಯಾದರೂ ಬಿಜೆಪಿಗಿಂತ ಅಧಿಕ ಸ್ಥಾನ ಗೆಲ್ಲುವುದು ಅನಿವಾರ್ಯ.
ಇನ್ನು ಬಿಜೆಪಿಗೆ, ದಕ್ಷಿಣ ರಾಜ್ಯಗಳ ಪೈಕಿ ಅತಿಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಕೇಸರಿ ಪಡೆಯ ದಕ್ಷಿಣ ಭಾರತದ ಹೆಬ್ಬಾಗಿಲು ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಅದರಲ್ಲೂ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಹೈಕಮಾಂಡ್ ಎದುರು ಸಾಬೀತುಪಡಿಸುವ ಮೂಲಕ, ಮುಂದಿನ ದಿನಗಳಲ್ಲಿ ಆಪರೇಷನ್ ಕಮನಕ್ಕೆ ಮರುಚಾಲನೆ ನೀಡಿ ರಾಜ್ಯದ ಚುಕ್ಕಾಣಿ ಹಿಡಿಯಲು ಅವರ ಹಸಿರು ನಿಶಾನೆ ಪಡೆಯಲಾದರೂ ಈ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಕನಿಷ್ಠ ಒಂದೆರಡು ಸ್ಥಾನವನ್ನಾದರೂ ಹೆಚ್ಚು ಗೆಲ್ಲಿಸಿಕೊಡುವ ಜರೂರು ಇದೆ.
ಇನ್ನು ಮೈತ್ರಿಪಕ್ಷಗಳ ಒಳಗೇ ಪರಸ್ಪರ ಪ್ರತಿಷ್ಠೆ ಕಾಯ್ದುಕೊಳ್ಳಲು ಮತ್ತು ಒಬ್ಬರ ಮೇಲೊಬ್ಬರು ಪರಸ್ಪರ ಸವಾರಿ ಮಾಡುವ ಅಪಾಯದಿಂದ ಪಾರಾಗಲು, ಇರುವ ಸ್ಥಾನಗಳ ಪೈಕಿ ಹೆಚ್ಚು ಗೆಲ್ಲುವ ಇಕ್ಕಟ್ಟಿನ ಸ್ಥಿತಿಯೂ ಇದೆ. ತನ್ನ ಪಾಲಿನ 20 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆದ್ದು, ಜೆಡಿಎಸ್ ತೀರಾ ಅನಿರೀಕ್ಷಿತ ಸೋಲು ಕಂಡರೆ, ಮಿತ್ರಪಕ್ಷದ ಮೇಲೆ ಬಲಿಷ್ಠ ಕಾಂಗ್ರೆಸ್ ಸವಾರಿ ಮಾಡಬಹುದು. ಹಾಗೇ, ಜೆಡಿಎಸ್ ಇರುವ ಎಂಟು ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು, ಕಾಂಗ್ರೆಸ್ ಸಾಕಷ್ಟು ಸ್ಥಾನ ಕಳೆದುಕೊಂಡರೆ, ಜೆಡಿಎಸ್ ಕಾಂಗ್ರೆಸ್ ಮೇಲೆ ಸವಾರಿ ಮಾಡಬಹುದು. ಅಲ್ಲದೆ, ಈ ಸೋಲು-ಗೆಲುವಿನ ಲೆಕ್ಕಾಚಾರಗಳನ್ನೇ ಇಟ್ಟುಕೊಂಡು ದೋಸ್ತಿಪಕ್ಷಗಳು ಪರಸ್ಪರ ಧೋಷಾರೋಪಣೆಯಲ್ಲಿ ಮುಳುಗಬಹುದು. ಹಾಗೇ ಕೇಂದ್ರದಲ್ಲಿ ಬಿಜೆಪಿ ಮತ್ತೆ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ, ಜೆಡಿಎಸ್ ತನ್ನ ಜಾತ್ಯತೀತ ನಿಷ್ಠೆಯನ್ನು ಬದಲಾಯಿಸಿ, ಹಿಂದುತ್ವದ ಶಕ್ತಿಗೆ ಜೈ ಎನ್ನಲೂಬಹುದು. ಹಾಗಾಗಿ, ದೋಸ್ತಿ ಪಡೆಗೆ ಇದು ನಿರ್ಣಾಯಕ ಚುನಾವಣೆ. ದೋಸ್ತಿಯ ಉಳಿವಿಗೂ, ಅಳಿವಿಗೂ!
ಇನ್ನು ಬಿಜೆಪಿ ಪಾಲಿಗೂ ಒಳಸುಳಿಗಳ ಈ ಮೇಲಾಟ ತಪ್ಪಿದ್ದಲ್ಲ. ಒಂದು ವೇಳೆ ಅತಿ ಹೆಚ್ಚು ಸ್ಥಾನ ಗೆಲ್ಲುವಲ್ಲಿ ಸಫಲವಾದರೆ ಯಡಿಯೂರಪ್ಪ ಅವರ ಭವಿಷ್ಯದ ಸಿಎಂ ಪಟ್ಟವಷ್ಟೇ ಅಲ್ಲ, ಸದ್ಯದ ರಾಜ್ಯಾಧ್ಯಕ್ಷರ ಪಟ್ಟವೂ ಭದ್ರ. ಒಂದು ವೇಳೆ, ದೋಸ್ತಿಗಳ ಭರಾಟೆಯಲ್ಲಿ ಕಳೆದ ಬಾರಿಗಿಂತ ಕಡಿಮೆ ಸ್ಥಾನ ಬಂದಲ್ಲಿ; ಮೊದಲ ಬಲಿಯಾಗುವುದೇ ಯಡಿಯೂರಪ್ಪ ಅವರ ರಾಜ್ಯಾಧ್ಯಕ್ಷ ಪಟ್ಟ ಎಂಬ ಮಾತೂ ಇದೆ. ಈಗಾಗಲೇ ಆಪರೇಷನ್ ಕಮಲವೂ ಸೇರಿದಂತೆ ಹಲವು ವಿಷಯಗಳಲ್ಲಿ ಯಡಿಯೂರಪ್ಪ ಅವರ ಇತ್ತೀಚಿನ ವರಸೆಗಳು ಅವರ ವಿರೋಧಿ ಪಾಳೆಯವನ್ನಷ್ಟೇ ಅಲ್ಲ; ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶಾ ಮತ್ತು ಸ್ವತಃ ಮೋದಿಯವರ ಅಸಮಾಧಾನಕ್ಕೆ ಕಾರಣವಾಗಿವೆ. ಹಾಗಾಗಿ, ಒಂದು ವೇಳೆ ಯಡಿಯೂರಪ್ಪ ಅವರೇ ಹೇಳಿದಂತೆ 22 ಸ್ಥಾನ ಗೆಲ್ಲಲಾಗದಿದ್ದರೂ ಕನಿಷ್ಠ ಹಾಲಿ ಇರುವ 16 ಸ್ಥಾನವನ್ನಾದರೂ ಉಳಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ, ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ದುರ್ದಿನಗಳು ಮತ್ತೊಮ್ಮೆ ಆರಂಭವಾಗುವುದು ನಿಶ್ಚಿತ.
ಅದರಲ್ಲೂ ಲಿಂಗಾಯತ ಪ್ರಾಬಲ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಯಡಿಯೂರಪ್ಪ ಪ್ರಭಾವ ಈಗಲೂ ಎಷ್ಟರಮಟ್ಟಿಗೆ ಉಳಿದಿದೆ ಎಂಬುದನ್ನು ಈ ಚುನಾವಣೆ ಒರಗೆ ಹಚ್ಚಲಿದೆ. ಈಗಾಗಲೇ ಕಲಬುರಗಿಯ ಕೆ ಬಿ ಶಾಣಪ್ಪ ಸೇರಿದಂತೆ ಹಲವು ನಾಯಕರು ಯಡಿಯೂರಪ್ಪ ವಿರುದ್ಧ ನೇರ ವಾಗ್ದಾಳಿ ನಡೆಸಿ, ಅವರಿಗೆ ಬಿಜೆಪಿಯನ್ನು ಮುನ್ನಡೆಸುವ ನೈತಿಕತೆ ಇಲ್ಲ ಎಂದೇ ಹೇಳಿ ಪಕ್ಷದಿಂದ ಹೊರನಡೆದಿದ್ದಾರೆ. ಶಾಣಪ್ಪ ಅವರು ಖುದ್ದು ಕಾಂಗ್ರೆಸ್ಗೆ ಸೇರಿಲ್ಲವಾದರೂ, ಅವರ ಪುತ್ರ ಸೇರಿದಂತೆ ಹಲವು ಸ್ಥಳೀಯ ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಅದೇ ಹೊತ್ತಿಗೆ, ವಿಜಯಪುರದಲ್ಲಿಯೂ ಬಿಜೆಪಿ ಪಾಲಿಗೆ ಹಾಲಿ ಸಂಸದ ರಮೇಶ್ ಜಿಗಜಿಣಗಿ ಮತ್ತು ಬಸನಗೌಡ ಪಾಟೀಲ ಯತ್ನಾಳ್ ನಡುವಿನ ರಾಜಕೀಯ ವೈಷಮ್ಯ ಬಿಸಿತುಪ್ಪದಂತಾಗಿದೆ. ಚಿಕ್ಕೋಡಿಯಲ್ಲಿ ಕೂಡ ರಮೇಶ್ ಕತ್ತಿ ಮತ್ತು ಅಪ್ಪಾಸಾಹೇಬ ಜೊಲ್ಲೆ ನಡುವೆ ಸಾಕಷ್ಟು ಪೈಪೋಟಿ ಇದ್ದು, ಯಾರಿಗೇ ಟಿಕೆಟ್ ಸಿಕ್ಕರೂ ಮತ್ತೊಬ್ಬರು ಬಂಡಾಯವೇಳುವ ಸಾಧ್ಯತೆ ಇದ್ದೇಇದೆ.
ಇನ್ನು ರಾಯಚೂರು, ಬಳ್ಳಾರಿಗಳಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿ ಭಾರೀ ಗೊಂದಲಗಳು ತಲೆದೋರಿವೆ. ಕಾಂಗ್ರೆಸ್ ಶಾಸಕರು ಅಥವಾ ಅವರ ಬಂಧುಗಳನ್ನು ಸೆಳೆದು ಟಿಕೆಟ್ ನೀಡುವ ಲೆಕ್ಕಾಚಾರ ಬಿಜೆಪಿಯದ್ದು. ಆದರೆ, ಹಾಗೊಂದು ವೇಳೆ ಆದಲ್ಲಿ ಅದು, ಮೂಲ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಲಿದೆ ಎಂಬ ಆತಂಕ ರಾಜ್ಯ ನಾಯಕರದ್ದು. ಇನ್ನು ಉತ್ತರಕನ್ನಡ ಹಾಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಹಾಲಿ ಸಂಸದರ ವಿರುದ್ಧವೇ ಸ್ವತಃ ಪಕ್ಷದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಬಂಡಾಯ ಸಾರಿದ್ದಾರೆ. ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಿಗೆ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಇನ್ನೂ ಗೊಂದಲ ಬಗೆಹರಿದಿಲ್ಲ.
ಹಾಗಾಗಿ, ಸದ್ಯದ ಸ್ಥಿತಿಯಲ್ಲಿ ದೋಸ್ತಿಪಕ್ಷಗಳಿಗಿಂತ ಹೆಚ್ಚು ಒತ್ತಡಕ್ಕೆ ಸಿಲುಕಿರುವುದು ಬಿಜೆಪಿ. ಕನಿಷ್ಠ ಹಾಲಿ ಇರುವ ಸ್ಥಾನಗಳನ್ನು ಉಳಿಸಿಕೊಳ್ಳುವುದೇ ಸವಾಲು ಎಂಬ ಸ್ಥಿತಿ ಸದ್ಯಕ್ಕಿದೆ.
ದೋಸ್ತಿಪಕ್ಷಗಳ ಪೈಕಿ ಜೆಡಿಎಸ್ ಟಿಕೆಟ್ ಹಂಚಿಕೆಯ ವಿಷಯದಲ್ಲಿ ನಿರಾಳವಾಗಿದೆ. ಆದರೆ, ಕಾಂಗ್ರೆಸ್ ವಿಷಯದಲ್ಲಿ ಆ ಮಾತು ಹೇಳಲಾಗದು. ಬೆಂಗಳೂರು ನಗರ ವ್ಯಾಪ್ತಿಯ ಕ್ಷೇತ್ರಗಳು ಸೇರಿದಂತೆ ಹಲವು ಕಡೆ ಆ ಪಕ್ಷಕ್ಕೆ ಟಿಕೆಟ್ ಆಕಾಂಕ್ಷಿಗಳ ಬಂಡಾಯದ ಭೀತಿ ಇದೆ. ಅದಕ್ಕಿಂತ ಮುಖ್ಯವಾಗಿ ತುಮಕೂರು, ಹಾಸನ ಹಾಗೂ ಉತ್ತರಕನ್ನಡ ಜಿಲ್ಲೆಗಳನ್ನು ಮಿತ್ರಪಕ್ಷ ಜೆಡಿಎಸ್ ಗೆ ಬಿಟ್ಟುಕೊಟ್ಟಿರುವ ಬಗ್ಗೆ ಈಗಾಗಲೇ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಂತೂ ಮಾಜಿ ಸಚಿವ ಎ ಮಂಜು ಅವರೇ ಸಿಡಿದೆದ್ದು ಬಿಜೆಪಿಯ ಕಮಲ ಹಿಡಿದಿದ್ದಾರೆ. ಉತ್ತರಕನ್ನಡದಲ್ಲಿಯೂ ಪರಿಸ್ಥಿತಿ ಬಿಗಡಾಯಿಸಿದೆ. ತುಮಕೂರಿನಲ್ಲಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ ಅವರೇ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ. ಹಾಗಾಗಿ ಕಾಂಗ್ರೆಸ್ ಕೂಡ ಈ ಕ್ಷೇತ್ರಗಳಲ್ಲಿ ಜ್ವಾಲಾಮುಖಿಯ ಮೇಲಿದೆ. ಆದರೆ, ಸ್ಫೋಟದಿಂದ ತತಕ್ಷಣದ ಬಲಿಪಶುವಾಗುವುದು ಆ ಪಕ್ಷದ ಅಭ್ಯರ್ಥಿಯಲ್ಲ ಎಂಬುದು ಅದಕ್ಕೆ ಸಮಾಧಾನಕರವಾಗಿದ್ದರೂ, ಅಂತಿಮವಾಗಿ ಆ ಕ್ಷೇತ್ರಗಳ ಫಲಿತಾಂಶ ಒಟ್ಟಾರೆ ಮೈತ್ರಿ ಮತ್ತು ಮೈತ್ರಿ ಸರ್ಕಾರದ ಭವಿಷ್ಯ ನಿರ್ಧರಿಸಲಿದೆ ಎಂಬುದು ಸುಳ್ಳಲ್ಲ!
ಹಾಗಾಗಿ, ಮೂರೂ ಪಕ್ಷಗಳ ಪಾಲಿಗೆ, ಟಿಕೆಟ್ ಘೋಷಣೆಯ ಮುಂದಿನ ಒಂದೆರಡು ದಿನಗಳು ನಿಜಕ್ಕೂ ಅಗ್ನಿಪರೀಕ್ಷೆಯ ಕಾಲ!