“ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ‘ನಾನು ನಿಮ್ಮ ಚೌಕಿದಾರ’ ಎಂದರು. ಈಗ ಚೌಕಿದಾರನೇ ಕಳ್ಳ ಎಂದು ಇಡೀ ದೇಶಕ್ಕೆ ತಿಳಿಯುತ್ತಿದ್ದಂತೆ ‘ನಾನೊಬ್ಬನೇ ಚೌಕಿದಾರ ಅಲ್ಲ, ನೀವೂ ಚೌಕಿದಾರರೇ’ ಎಂದು ಇಡೀ ದೇಶದ ಜನರನ್ನು ಚೌಕಿದಾರನ್ನಾಗಿ ಮಾಡಲು ಹೊರಟಿದ್ದಾರೆ” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನರೇಂದ್ರ ಮೋದಿಯ “ನಾನೂ ಕೂಡಾ ಚೌಕೀದಾರ್” ಅಭಿಯಾನಕ್ಕೆ ಟಾಂಗ್ ನೀಡಿದರು.
ಲೋಕಸಭಾ ಚುನಾವಣೆ ಘೋಷಣೆಯ ನಂತರ ಎರಡನೇ ಬಾರಿ ಕರ್ನಾಟಕಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ಇಂದು ಕಲಬುರಗಿಯ ಎನ್. ವಿ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಬೃಹತ್ ಪರಿವರ್ತನಾ ರ್ಯಾಲಿ ಉದ್ದೇಶಿಸಿ ಭಾಷಣ ಮಾಡಿದರು.
“ಪ್ರಧಾನಿ ನರೇಂದ್ರ ಮೋದಿ ಯಾರೆಲ್ಲರ ಚೌಕಿದಾರಿಕೆ ನಡೆಸಿದ್ದಾರೆ? ನೀರವ್ ಮೋದಿ, ಅನಿಲ್ ಅಂಬಾನಿ, ಮೆಹೂಲ್ ಚೋಕ್ಸಿ, ಲಲಿತ್ ಮೋದಿ, ವಿಜಯ್ ಮಲ್ಯ ಇಂಥವರಿಗೆ ಚೌಕಿದಾರನಾಗಿದ್ದಾರೆ” ಎಂದು ಮೋದಿಯ ಕುರಿತು ವ್ಯಂಗ್ಯವಾಡಿದರು.
“ಪುಲ್ವಾಮ ದಾಳಿ ದಿನವೇ ಒಂದು ವರದಿ ಬಂದಿತ್ತು, ಅದರಲ್ಲಿ ಅದಾನಿಗೆ ದೇಶದ 6 ವಿಮಾನ ನಿಲ್ದಾಣಗಳನ್ನು ಕೊಡಲಾಗಿದೆ. 526 ಕೋಟಿಗೆ ಆಗಿದ್ದ ರಫೇಲ್ ಒಪ್ಪಂದವನ್ನು ಮೋದಿ ಸಂಪೂರ್ಣ ಬದಲಿಸಿಬಿಟ್ಟರು, ವಿಮಾನ ತಯಾರಿಕೆಯ ಅನುಭವವೇ ಇಲ್ಲದ ಅಂಬಾನಿಗೆ ಈ ಒಪ್ಪಂದವನ್ನು ಕೊಟ್ಟು, ನಮ್ಮ ಎಚ್ ಎ ಎಲ್ ಗೂ ವಂಚಿಸಿ, ಜನರ ಕೆಲಸ ಕಿತ್ತುಕೊಂಡಿದ್ದಾರೆ. ಈ ಹಗರಣವನ್ನು ಸಿಬಿಐ ನಿರ್ದೇಶಕರು ತನಿಖೆ ನಡೆಸುತ್ತೇನೆ ಅಂದಾಗ ಅದನ್ನೂ ಮೋದಿ ತಡೆಹಿಡಿದಿದ್ದೇ ಅಲ್ಲದೇ ರಾತ್ರೋರಾತ್ರಿ ಸಿಬಿಐ ನಿರ್ದೇಶಕರನ್ನೇ ಬದಲಿಸಿಬಿಟ್ಟರು” ಎಂದು ಆಕ್ರೋಶದಿಂದ ನುಡಿದರು.
“ನೋಟು ಅಮಾನ್ಯದಿಂದ ಜನರು ಬೀದಿಗೆ ಬಂದು ಸಾಲು ನಿಂತರು, ಆದರೆ ನಿಜವಾಗಲೂ ಕಪ್ಪುಹಣ ಉಳ್ಳವರು ಎಸಿ ಕೊಠಡಿಯಲ್ಲಿ ಕುಳಿತಿದ್ದರು. ಜನರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದಿದ್ದರು, ಅದು ಇನ್ನೂ ಬಂದಿಲ್ಲ. ಲಕ್ಷಾಂತರ ರೈತರು ಸಾವಿರಾರು ರುಪಾಯಿ ವಿಮೆ ಹಣ ಜಮೆ ಮಾಡುತ್ತಿದ್ದಾರೆ, ಈ ಎಲ್ಲಾ ಹಣ ಕೇವಲ 15 ಶ್ರೀಮಂತರ ಖಾತೆಗೆ ಹೋಗುತ್ತಿದೆ. ಇದೀಗ ಚೌಕಿದಾರನ ಸುಳ್ಳುಗಳೆಲ್ಲಾ ಬಯಲಾಗಿವೆ” ಎಂದು ಕಿಡಿಕಾರಿದರು.
“ಮೋದಿ ಯುವಕರಿಗೆ ಎರಡು ಕೋಟಿ ಉದ್ಯೋಗ ಕೊಡ್ತೀನಿ ಅಂತ ಹೇಳಿದ್ದರು, ಆದರೆ ಅದು ಸುಳ್ಳಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಉದ್ಯೋಗ ಕೊಟ್ಟು ಸಾಬೀತು ಮಾಡಿದೆ. ಹೈದರಾಬಾದ್ ಕರ್ನಾಟಕಕ್ಕೆ 371 ಜೆ ಕಾಯ್ದೆ ಕೊಟ್ಟಿದೆ. ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ರೈತರ ಸಾವಿರಾರು ಕೋಟಿ ರುಪಾಯಿ ಸಾಲ ಮನ್ನಾ ಮಾಡಿದ್ದೇವೆ” ಎಂದು ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ನೆನಪಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ತಾವು ಪ್ರಧಾನಿಯಾದರೆ ಬಡವರ ಖಾತೆಗೆ ನೇರವಾಗಿ ಹಣ ಹಾಕುತ್ತೇವೆ ಎಂದ ಕಾಂಗ್ರೆಸ್ ಅಧ್ಯಕ್ಷ ದೇಶದ ಜನರಿಗೆ ಕನಿಷ್ಠ ಆದಾಯ ಮಿತಿ ನಿಗದಿ ಮಾಡುವ ಭರವಸೆ ನೀಡಿದರು. ಹಾಗೆಯೇ ಸರಳ ತೆರಿಗೆ ಪದ್ಧತಿ ಜಾರಿಗೆ ತರುವ, ಈಗ ಜಾರಿಯಲ್ಲಿರುವ ಜಿ ಎಸ್ ಟಿಯಿಂದ ಜನಸಾಮಾನ್ಯರಿಗೆ, ವ್ಯಾಪಾರಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದರು. “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ಅನ್ನು ಬದಲಿಸುತ್ತೇವೆ” ಎಂದು ರಾಹುಲ್ ಆಶ್ವಾಸನೆ ನೀಡಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, “ಮೋದಿ ಅವರು ಕೇವಲ ಭಾಷಣ ಮಾಡುವ ಮೂಲಕ ಜನರಿಗೆ ಮೋಡಿ ಮಾಡುತ್ತಿದ್ದಾರೆ ಹೊರತು ಯಾವುದೇ ಅಭಿವೃದ್ಧಿ ಮಾಡುತ್ತಿಲ್ಲ.
ಹೊಸದಾಗಿ ಚೌಕಿದಾರ್ ಎಂದು ಆರಂಭಿಸಿ ಢೋಂಗಿತನ ತೋರುತ್ತಿದ್ದಾರೆ. ಮೋದಿ ನಿಜವಾಗಿ ಚೌಕಿದಾರನೇ ಆಗಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗಳನ್ನು ಖಂಡಿಸಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟಿಸಬೇಕಿತ್ತು, ಆದರೆ ಅದನ್ನವರು ಮಾಡಲಿಲ್ಲ. ಇದೇ ತಿಳಿಸುತ್ತದೆ ಅವರ ಪೊಳ್ಳು ಆಡಳಿತಕ್ಕೆ ಸಾಕ್ಷಿ” ಎಂದು ಯಡಿಯೂರಪ್ಪನವರನ್ನು ಉದ್ದೇಶಿಸಿ ಹೇಳಿದರು.
ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕೇವಲ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿ, ಸಮಾಜ, ದೇಶಕ್ಕೆ ಸಂಬಂಧವಿರದ ವಿಷಯಗಳನ್ನು ಪ್ರಸ್ತಾಪಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರು ನೀಡಿದ್ದ ಯಾವ ಭರವಸೆಗಳೂ ಈಡೇರಿಲ್ಲ, ನಿರುದ್ಯೋಗ ತಾಂಡವಾಡುತ್ತಿದೆ. 5 ವರ್ಷದಲ್ಲಿ 10ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು, ನಿರುದ್ಯೋಗ ಸಮಸ್ಯೆ ಯಾವುದೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಿಲ್ಲ. ನೋಟು ಅಮಾನ್ಯೀಕರಣದ ನಂತರ 1 ಕೋಟಿ 80 ಲಕ್ಷ ಉದ್ಯೋಗಗಳು ಜನರು ಕೆಲಸ ಕಳೆದುಕೊಂಡಿದ್ದಾರೆ. ಇದಕ್ಕೆ ಮೋದಿ ಅವರೇ ನೇರ ಹೊಣೆಗಾರರು” ಎಂದು ಪ್ರಧಾನಿ ಮೋದಿಯನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರಲ್ಲದೇ “ಬಿಜೆಪಿ ಸರ್ಕಾರ ರೈತರಿಗೆ ಸಾಲಮನ್ನ ಮಾಡಿಲ್ಲ, ಕನಿಷ್ಟ ಬೆಂಬಲ ಬೆಲೆ ಕೊಟ್ಟಿಲ್ಲ” ಎಂದು ಟೀಕಿಸಿದರು.
371 ಜೆ ಕಾಯ್ದೆ ಪ್ರಸ್ತಾಪವನ್ನು ಬಿಜೆಪಿಯವರು ಕಸದ ಬುಟ್ಟಿಗೆ ಹಾಕಿದ್ದರು- ಖರ್ಗೆ
ನಂತರ ಕಾಂಗ್ರೆಸ್ ಹಿರಿಯ ಮುಖಂಡ, ಲೋಕಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು.
‘ಕಲಬುರಗಿ ಜನರಿಗೆ ಮೋದಿ ತಮ್ಮ ಸರ್ಕಾರ ಏನು ಕೊಟ್ಟಿದೆ, ಮುಂದೆ ಏನು ಕೊಡಲಿದ್ದೇನೆ ಎನ್ನುವುದನ್ನು ಅವರ 40 ನಿಮಿಷದ ಭಾಷಣದಲ್ಲಿ ಒಂದು ಶಬ್ದವೂ ಹೇಳಲಿಲ್ಲ. ಅವರಿಗೆ ಈ ಭಾಗದ ಜನರ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. ಈ ಭಾಗದ ಜನರಿಗೆ 371 ಜೆ ಕಾಯ್ದೆಯನ್ನು ತಿದ್ದುಪಡಿ ಮಾಡಿ ಎಂದು ಸೋನಿಯಾ ಗಾಂಧಿ ಅವರ ಬಳಿ ಕೇಳಿಕೊಂಡಾಗ, ಅವರು ಸಮ್ಮತಿಸಿ ಸಂವಿಧಾನವನ್ನು ತಿದ್ದುಪಡಿ ಮಾಡಿ 371 ಜೆ ಕಾಯ್ದೆಯನ್ನು ತಂದಿದ್ದೇವೆ. ಇದೇ ಬದಲಾವಣೆಯನ್ನು ಹಿಂದೆ ಬಿಜೆಪಿ ಸರ್ಕಾರದ ಮುಂದೆ ಇಟ್ಟಾಗ, ಅಡ್ವಾಣಿ ಅವರು ಅದನ್ನು ಕಸದ ಬುಟ್ಟಿಗೆ ಬಿಸಾಕಿದ್ದರು. ಇಂತಹವರಿಗೆ ಇಲ್ಲಿ ಬಂದು ಮತ ಕೇಳಲು ಏನು ಹಕ್ಕಿದೆ?’
ಎಂದು ಖರ್ಗೆ ಕಿಡಿಕಾರಿದರು.
“ನನಗಾಗಿ ದೆಹಲಿಯಿಂದ ಗಲ್ಲಿವರೆಗೂ ಸಂಚು ರೂಪಿಸುತ್ತಿದ್ದಾರೆ, ನಿಮ್ಮ ಆಶೀರ್ವಾದ ಇರೋವರೆಗೂ ಯಾವ ಮೋದಿ ಬಂದು ಏನು ಭಾಷಣ ಮಾಡಿದರೂ ಏನು ಆಗುವುದಿಲ್ಲ. ಕಳೆದ ಬಾರಿಗಿಂತ ಈ ಭಾರೀ ಬಹುಮತದಿಂದ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡುತ್ತೀರಿ ಅನ್ನೋ ವಿಶ್ವಾಸ ಇದೆ” ಎಂದ ಖರ್ಗೆ ಮತದಾರರಿಗೆ ‘ಪ್ರಜಾತಂತ್ರವನ್ನು ಉಳಿಸಲು ಮತ ಹಾಕಿ ತಮ್ಮನ್ನು ಗೆಲ್ಲಿಸಲು ಕೇಳಿಕೊಂಡರು.
ಕಾಂಗ್ರೆಸ್ ನ ಈ ಪರಿವರ್ತನಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ಪ್ರಧಾನ ಕಾರ್ಯದರ್ಶಿ ಕೆ. ವೇಣುಗೋಪಾಲ್, ಕೆಪಿಸಿಸಿ ಕಾರ್ಯದರ್ಶಿ ಈಶ್ವರ ಖಂಡ್ರೆ, ಸಚಿವರಾದ ಡಿ. ಕೆ. ಶಿವಕುಮಾರ್, ಹೆಚ್. ಕೆ ಪಾಟೀಲ್, ಪ್ರಿಯಾಂಕ ಖರ್ಗೆ, ರಾಜಶೇಖರ್ ಪಾಟೀಲ್, ಸಂಸದ, ಕೆ, ಎಚ್ ಮುನಿಯಪ್ಪ ಮತ್ತು ಶಾಸಕ ಅಜಯ್ ಸಿಂಗ್ ಉಪಸ್ಥಿತರಿದ್ದರು