ಶಿವಮೊಗ್ಗ ಲೋಕಸಭಾ ಕ್ಷೇತ್ರ ಈ ಬಾರಿ ಮತ್ತೊಮ್ಮೆ ಪ್ರತಿಷ್ಠೆಯ ಕಣವಾಗಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿದೆ. ಮಾಜಿ ಮುಖ್ಯಮಂತ್ರಿಗಳಿಬ್ಬರ ಮಕ್ಕಳ ನಡುವಿನ ಹಣಾಹಣಿಯ ಕಣವಾಗಿ ಮತ್ತೆ ಕುತೂಹಲ ಕೆರಳಿಸಿದೆ. ಐದು ತಿಂಗಳ ಹಿಂದಷ್ಟೇ ಉಪಚುನಾವಣೆ ಕಂಡಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರ, ಇದೀಗ ಮತ್ತೆ ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಹಾಗೂ ದಿ ಎಸ್ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ನಡುವಿನ ನೇರ ಹಣಾಹಣಿಗೆ ಸಜ್ಜಾಗಿದೆ.
ಬಿಜೆಪಿ ಭದ್ರಕೋಟೆ ಎಂದೇ ಹೆಸರಾದ ಕ್ಷೇತ್ರದಲ್ಲಿ ಕಳೆದ ಬಾರಿಯೂ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಪ್ರಭಾವಿ ನಾಯಕ ಯಡಿಯೂರಪ್ಪ ಅವರ ಇನ್ನಿಲ್ಲದ ತಂತ್ರಗಾರಿಕೆಗಳ ಹೊರತಾಗಿಯೂ ಬಿ ವೈ ರಾಘವೇಂದ್ರ ವಿರುದ್ಧ ಕೇವಲ 52 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು.
ಕಳೆದ ಬಾರಿ ವಿದೇಶ ಪ್ರವಾಸದಲ್ಲಿದ್ದ ಮಧು, ಕೊನೇ ಗಳಿಗೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಈ ಬಾರಿ ಮಧು ಅವರಿಗೆ ಸಾಕಷ್ಟು ಸಮಯಾವಕಾಶ ಸಿಕ್ಕಿದೆ. ಫೆಬ್ರವರಿ ಅಂತ್ಯದ ಹೊತ್ತಿಗೇ ಜೆಡಿಎಸ್ ಅಧಿನಾಯಕ ದೇವೇಗೌಡರು ಶಿವಮೊಗ್ಗ ಕ್ಷೇತ್ರಕ್ಕೆ ಮಧು ಬಂಗಾರಪ್ಪ ಅವರೇ ಅಭ್ಯರ್ಥಿ ಎನ್ನುವ ಮೂಲಕ, ರಾಜ್ಯದಲ್ಲೇ ಮೊದಲ ಘೋಷಿತ ಅಭ್ಯರ್ಥಿಯಾಗಿ ಮಧು ಕಾಣಿಸಿಕೊಂಡಿದ್ದರು. ಆದರೆ, ಬಿಜೆಪಿಯ ರಾಘವೇಂದ್ರ ಅವರು ಕಳೆದ ನವೆಂಬರಿನ ಉಪಚುನಾವಣೆಯ ಫಲಿತಾಂಶ ಹೊರಬಿದ್ದ ದಿನದಿಂದಲೇ ಈ ಚುನಾವಣೆಗೆ ತಯಾರಿ ನಡೆಸಿದ್ದಾರೆ. ಕ್ಷೇತ್ರದಾದ್ಯಂತ ನಿರಂತರ ಪ್ರವಾಸ ಮತ್ತು ಕಾರ್ಯಕರ್ತರ ಸಭೆಗಳ ಮೂಲಕ ಅವರು ಚುನಾವಣಾ ಪ್ರಚಾರದ ವಿಷಯದಲ್ಲಿ ಈಗಾಗಲೇ ಸಾಕಷ್ಟು ಮುಂದೆ ಹೋಗಿದ್ದಾರೆ.
ಆದರೆ, ಮಧು ಅವರಿಗೆ ಈ ಬಾರಿ ಕಾಂಗ್ರೆಸ್ ರಾಜ್ಯ ನಾಯಕರ ಬಲ ಸಿಕ್ಕಿದೆ. ಅದರಲ್ಲೂ ಕಳೆದ ಉಪಚುನಾವಣೆಯಲ್ಲಿ ಬಳ್ಳಾರಿಯ ರೆಡ್ಡಿ ಪಾಳೆಯದ ಭದ್ರಕೋಟೆ ಪುಡಿಗಟ್ಟಿ ವಿ ಎಸ್ ಉಗ್ರಪ್ಪ ಅವರನ್ನು ಭಾರೀ ಬಹುಮತದೊಂದಿಗೆ ಗೆಲ್ಲಿಸಿದ ಸೂತ್ರಧಾರ, ಡಿ ಕೆ ಶಿವಕುಮಾರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹೊಣೆ ಹೊತ್ತಿದ್ದಾರೆ. ಜೊತೆಗೆ ಹಿಂದಿನಂತೆ, ಈ ಬಾರಿಯೂ ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಮೈತ್ರಿಕೂಟ ಚುನಾವಣೆಗೆ ಹೊರಟಿದೆ. ಹಾಗಾಗಿ ಶಿವಮೊಗ್ಗ ಕ್ಷೇತ್ರ ಈ ಬಾರಿ ಹೈವೋಲ್ಟೇಜ್ ಹಣಾಹಣಿಗೆ ವೇದಿಕೆಯಾಗಲಿದೆ. ಭಾನುವಾರ(ಮಾ.17) ಕ್ಷೇತ್ರದ ಕಾರ್ಯಕರ್ತರ ಸಭೆಯ ಮೂಲಕ ಎಚ್ ಡಿ ದೇವೇಗೌಡರು ಚುನಾವಣಾ ಪ್ರಚಾರಕ್ಕೆ ಭರ್ಜರಿ ಚಾಲನೆ ನೀಡಿದ್ದಾರೆ. ಜೊತೆಗೆ ಕಾಂಗ್ರೆಸ್ ಪ್ರಮುಖರೊಂದಿಗೂ ಸಭೆ ನಡೆಸಿ, ಮಿತ್ರಪಕ್ಷದ ಸ್ಥಳೀಯ ನಾಯಕರ ವಿಶ್ವಾಸ ಪಡೆಯುವ ಯತ್ನವನ್ನೂ ಮಾಡಿದ್ದಾರೆ.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳೊಂದಿಗೆ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರವೂ ಸೇರಿ, ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕ್ಷೇತ್ರದಲ್ಲಿ, ಸದ್ಯ ಏಳು ಕ್ಷೇತ್ರಗಳಲ್ಲಿ(ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ, ಸಾಗರ, ಸೊರಬ, ಶಿಕಾರಿಪುರ ಹಾಗೂ ಬೈಂದೂರು) ಬಿಜೆಪಿ ಶಾಸಕರಿದ್ದು, ಒಂದು ಕಡೆ(ಭದ್ರಾವತಿ) ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಲಿಂಗಾಯತ ಸಮುದಾಯದ ರಾಘವೇಂದ್ರ ಅವರಿಗೆ ಜಾತಿ ಮತಗಳೊಂದಿಗೆ ತಮ್ಮದೇ ಪಕ್ಷದ ಏಳು ಶಾಸಕರ ಪ್ರಭಾವದ ಮತಗಳೇ ಬಲವಾಗಿದ್ದರೆ, ಮಧು ಬಂಗಾರಪ್ಪ ಅವರಿಗೆ ಕ್ಚೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ತಮ್ಮ ಈಡಿಗ ಸಮುದಾಯ ಹಾಗೂ ಇತರ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತಗಳ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟು ಶೇಕಡವಾರು ಮತಗಳ ಮೇಲೆ ವಿಶ್ವಾಸವಿಟ್ಟಿದ್ದಾರೆ.
ಸದ್ಯ ಕ್ಷೇತ್ರದಲ್ಲಿ ಚುನಾವಣಾ ವಿಷಯಗಳಾಗಬಹುದಾದ ಹಲವು ಜ್ವಲಂತ ಸಮಸ್ಯೆಗಳಿವೆ. ಅರಣ್ಯ ಹಕ್ಕು ಕಾಯ್ದೆಯ ವಿಷಯದಲ್ಲಿ ಸುಪ್ರೀಂಕೋರ್ಟಿನ ಇತ್ತೀಚಿನ ತೀರ್ಪಿನ ಪ್ರಕಾರ(ಅರ್ಜಿ ತಿರಸ್ಕೃತರನ್ನು ಕಾಡಿನಿಂದ ಹೊರಹಾಕಿ) ಜಿಲ್ಲೆಯಲ್ಲಿ ಕನಿಷ್ಠವೆಂದರೂ ಒಂದೂವರೆ ಲಕ್ಷ ಅರಣ್ಯ ವಾಸಿ ಬುಡಕಟ್ಟು ಮತ್ತು ಇತರೆ ಸಮುದಾಯಗಳ ಜನ ತಮ್ಮ ಮನೆ-ಮಠ, ಗದ್ದೆ-ತೋಟ ಕಳೆದುಕೊಳ್ಳಲಿದ್ದಾರೆ. ಭೂ ಕಬಳಿಕೆ ನಿಷೇಧ ಕಾಯ್ದೆಯನ್ನು ಮಲೆನಾಡಿನ ಸಣ್ಣಪುಟ್ಟ ಒತ್ತುವರಿದಾರರ ಮೇಲೆ ಪ್ರಯೋಗಿಸಿರುವುದರಿಂದ ಸುಮಾರು 80 ಸಾವಿರ ರೈತರು ನ್ಯಾಯಾಲಯದ ಕಟಕಟೆ ಏರಿದ್ದಾರೆ. ಆರು ವರ್ಷಗಳ ಹಿಂದೆ ಏಕಾಏಕಿ ಜಿಲ್ಲೆಯ ಸುಮಾರು 2 ಲಕ್ಷ ಎಕರೆ ಕಂದಾಯ ಭೂಮಿಯನ್ನು ಅರಣ್ಯ ಭೂಮಿಯನ್ನಾಗಿ ದಾಖಲೆ ತಿದ್ದುಪಡಿ ಮಾಡಿ ಇಂಡೀಕರಣ ಮಾಡಿದ್ದರಿಂದಾಗಿ ಸುಮಾರು 60 ಸಾವಿರಕ್ಕೂ ಹೆಚ್ಚು ಬಗರ್ ಹುಕುಂ ಸಾಗುವಳಿದಾರರು, ಊರು-ಕೇರಿಗಳು ಯಾವುದೇ ಕ್ಷಣದಲ್ಲಿ ಎತ್ತಂಗಡಿಯಾಗುವ ಅಪಾಯದಲ್ಲಿವೆ.
ಜಿಲ್ಲೆಯ ಐದು ಬೃಹತ್ ಜಲಾಶಯಗಳು ಮತ್ತು ಐದು ಅಭಯಾರಣ್ಯಗಳು ಸೃಷ್ಟಿಸಿದ ‘ಮುಳುಗಡೆ’ ಹಾಗೂ ‘ಎತ್ತಂಗಡಿ’ ಎಂಬ ಕರಿನೀರಿನ ಕರಾಳ ಶಿಕ್ಷೆಯಿಂದ ಇನ್ನೂ ಮಲೆನಾಡಿನ ಜನ ಪೂರ್ಣ ಮುಕ್ತರಾಗಿಲ್ಲ. ಅಷ್ಟರಲ್ಲಿ ಅರಣ್ಯ ಹಕ್ಕು ನಿರಾಕರಣೆಯ ಆದೇಶ, ಭೂ ಕಬಳಿಕೆ ಕಾಯ್ದೆ ಮತ್ತು ಇಂಡೀಕರಣಗಳು ಜನರನ್ನು ಮತ್ತೆ ಬೀದಿಗೆ ತಳ್ಳಿವೆ. ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಲೆನಾಡಿನ ಬದುಕನ್ನು ಮೊಟಕುಗೊಳಿಸಿದೆ ಎಂಬ ಕೂಗೂ ಇದೆ. ಈ ನಡುವೆ, ಪರ್ಯಾಯ ಉದ್ಯೋಗಾವಕಾಶಗಳಿಲ್ಲದೆ ಮಲೆನಾಡಿನ ಯುವಕರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ಅಕ್ಷರಸ್ಥರು ನಗರಮುಖಿಯಾದರೆ, ಅನಕ್ಷರಸ್ಥ, ದುರ್ಬಲ ಸಮುದಾಯಗಳಿಂದ ಅರಣ್ಯಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಇಂತಹ ಸಾವುಬದುಕಿನ ಬಿಕ್ಕಟ್ಟುಗಳು ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ನಿರಂತರ ಕುರುಡಾಗಿವೆ.
ಮಲೆನಾಡಿನಗರ ಅಸ್ತಿತ್ವದ ಪ್ರಶ್ನೆಯಾಗಿರುವ ಈ ಸಮಸ್ಯೆಗಳು ಈ ಬಾರಿ ಕೂಡ ಚುನಾವಣಾ ಕಣದಲ್ಲಿ ಸದ್ದು ಮಾಡಲಾರವು ಎಂಬ ಸೂಚನೆ ಈಗಾಗಲೇ ಸಿಕ್ಕಿದೆ. ನಿರೀಕ್ಷೆಯಂತೆ ಬಿಜೆಪಿ ‘ಪಾಕಿಸ್ತಾನ’ದ ಬೆದರುಬೊಂಬೆಯನ್ನು ಈಗಾಗಲೇ ಕಟ್ಟಿನಿಲ್ಲಿಸಿದೆ. ‘ಇಸ್ಲಮೊಫೋಬಿಯಾ’ದ ಬೇರೆ ಬೇರೆ ಅವತರಣಿಕೆಗಳು ಕಣದಲ್ಲಿ ರೂಪುತಾಳುತ್ತಿವೆ. ಇನ್ನು ‘ಚೌಕಿದಾರ’ ಮತ್ತು ಭಾರತೀಯ ಸೇನೆಯ ಸಾಹಸಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರದ ಸರಕಾಗಿ ಬಳಕೆಯಾಗುತ್ತಿವೆ. ಮೋದಿಯ ಸುತ್ತ ಬಿಜೆಪಿಯ ಪ್ರಚಾರ ಗಿರಕಿಹೊಡೆಯುತ್ತಲಿದ್ದರೆ, ಮೋದಿಯನ್ನೇ ಗುರಿಯಾಗಿಸಿಕೊಂಡು ಪ್ರತಿದಾಳಿ ಮಾಡುವ ಮೂಲಕ ಮೈತ್ರಿಕೂಟ ಕೂಡ ಬಿಜೆಪಿಯ ತಂತ್ರಗಾರಿಕೆಗೇ ಸಿಲುಕಿಕೊಂಡಿದೆ.
ಆ ಮೂಲಕ ಸ್ಥಳೀಯ ಮತದಾರರ ಬಿಕ್ಕಟ್ಟುಗಳನ್ನು ಮರೆಮಾಚಿ, ಸಂಪೂರ್ಣ ಚುನಾವಣೆಯನ್ನು ಮೋದಿ ಪರ ಮತ್ತು ವಿರುದ್ಧದ ರಣರಂಗವಾಗಿ ಪರ್ಯಾವಸಾನಗೊಳಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ಜಾತಿ ಮತ್ತು ಜನಾಂಗವಾರು ಮತ ಧ್ರುವೀಕರಣವನ್ನು ತಡೆಯುವ ನಿಟ್ಟಿನಲ್ಲಿ ಬಿಜೆಪಿ ಹಿಂದುತ್ವದ ‘ಕೋಮು’ ದಾಳ ಉರುಳಿಸಿದೆ. ಹಾಗಾಗಿ, ಕ್ಷೇತ್ರದಲ್ಲಿ ತಮ್ಮ ಸಮುದಾಯದವರೇ ನಿರ್ಣಾಯಕ ಸಂಖ್ಯೆಯಲ್ಲಿದ್ದರೂ ಮಧು ಬಂಗಾರಪ್ಪ ಅವರಿಗೆ ಕೋಮು ಭಾವನೆಯ ಬೇಲಿ ಮುರಿದು ಜಾತಿ ಮತಗಳನ್ನು ಕೀಳುವುದು ಕಷ್ಟವಾಗಬಹುದು.
ಹಾಗಾಗಿ, ಬಿಜೆಪಿ ಸರ್ಕಾರ(ಕೇಂದ್ರ ಮತ್ತು ರಾಜ್ಯ)ಗಳ ಅವಧಿಯಲ್ಲಿಯೇ ಜಾರಿಗೆ ಬಂದಿರುವ ಮಲೆನಾಡಿನ ರೈತರ ಪಾಲಿನ ‘ಮರಣಶಾಸನ’ಗಳು ಸೃಷ್ಟಿಸಿರುವ ಅನಾಹುತಗಳನ್ನು ಚುನಾವಣಾ ಪ್ರಚಾರದ ಕೇಂದ್ರಕ್ಕೆ ತರದೇ ಹೋದರೆ, ಇಡೀ ಚುನಾವಣೆ ಮೈತ್ರಿಕೂಟದ ಕೈಜಾರಲಿದೆ. ಸದ್ಯದ ಸ್ಥಿತಿಯಲ್ಲಿ ಕಣದಲ್ಲಿ ಚರ್ಚೆಗೆ ಬರುತ್ತಿರುವ ಸಂಗತಿಗಳನ್ನು ಗಮನಿಸಿದರೆ, ಇಡೀ ಚುನಾವಣಾ ಪ್ರಚಾರದ ವಾಗ್ವಾದವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ರೂಪಿಸುವಲ್ಲಿ ಯಶಸ್ವಿಯಾಗುತ್ತಿರುವಂತೆ ತೋರುತ್ತಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲೇ ಕೇಳಿಬರುತ್ತಿದೆ.
ಮೋದಿ ಆಡಳಿತ, ವ್ಯಕ್ತಿತ್ವ, ಪುಲ್ವಾಮಾ ದಾಳಿ, ಬಾಲಾಕೋಟ್ ದಾಳಿ, ದೇಶದ ಸುರಕ್ಷತೆ, ಗಡಿಯಾಚೆಯ ಅಪಾಯಗಳನ್ನು ಮಾತ್ರ ಚುನಾವಣಾ ಚರ್ಚೆಯ ವಸ್ತುವನ್ನಾಗಿ ಮಾಡುವಲ್ಲಿ ಬಿಜೆಪಿ, ತನ್ನ ಸಾಮಾಜಿಕ ಜಾಲತಾಣ, ಕೇಡರ್ ಮತ್ತು ಪ್ರಮುಖವಾಗಿ ಪೇಜ್ ಪ್ರಮುಖರ ಜಾಲವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಆ ಮೂಲಕ ಸ್ಥಳೀಯ ವಿಷಯಗಳು ಚರ್ಚೆಯ ವ್ಯಾಪ್ತಿಗೇ ಬರದಂತೆ ವ್ಯವಸ್ಥಿತವಾಗಿ ತಂತ್ರ ಹೂಡಿದೆ.
ಆ ತಂತ್ರಗಾರಿಕೆ ಬಲಿಯಾಗುತ್ತಿರುವ ಪ್ರತಿಪಕ್ಷಗಳು ಕೂಡ ಅದು ಪ್ರಸ್ತಾಪಿಸಿದ ವಿಷಯಗಳನ್ನೇ ಪ್ರಸ್ತಾಪಿಸುವ, ಅದರ ವಾದಗಳಿಗೆ ತಿರುಗೇಟು ನೀಡುವ ಮೂಲಕ, ತನ್ನ ಎದುರಾಳಿ ತೋಡುತ್ತಿರುವ ಖೆಡ್ಡಾದಲ್ಲಿ ಬೀಳುತ್ತಿವೆ. ಹಾಗಾಗಿ, ಈ ಬಾರಿಯ ಚುನಾವಣೆ ಶಿವಮೊಗ್ಗ ಕ್ಷೇತ್ರದ ಮಟ್ಟಿಗೆ ಯಾವ ವಿಷಯಗಳ ಸುತ್ತ ಸುತ್ತಬೇಕಿತ್ತೋ, ಆ ವಿಷಯಗಳು ಸಂಪೂರ್ಣ ಮೂಲೆಗುಂಪಾಗಿದ್ದು, ಸದ್ಯ ಸ್ಥಳೀಯವಾಗಿ ಅಪ್ರಸ್ತುತವಾಗಿರುವ ಸಂಗತಿಗಳು ಮುನ್ನೆಲೆಗೆ ಬಂದಿವೆ.
ಇನ್ನು ಏಪ್ರಿಲ್ 23ರಂದು ಮತದಾನ ನಡೆಯಲಿರುವ ಕ್ಷೇತ್ರದಲ್ಲಿ ಮೊದಲ ವಾರದಲ್ಲಿ ನಾಮಪತ್ರ ಸಲ್ಲಿಕೆ ಬಿರುಸುಪಡೆಯಲಿದ್ದು, ಆ ವೇಳೆಗೆ ಡಿ ಕೆ ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಕ್ಷೇತ್ರಕ್ಕೆ ಕಾಲಿಡಲಿದ್ದು, ಆ ಬಳಿಕದ ತಂತ್ರಗಾರಿಕೆಗಳು ಚುನಾವಣೆಯನ್ನು ಯಾವ ದಿಕ್ಕಿಗೆ ತಿರುಗಿಸುತ್ತವೆ ಎಂಬುದನ್ನು ಕಾದುನೋಡಬೇಕಿದೆ.