ಮಂಡ್ಯ ಕ್ಷೇತ್ರದಿಂದ ಸ್ವಂತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಮಾರ್ಚ್ 20ರಂದು ಬೆಳಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದು ಸುಮಲತಾ ಅಂಬರೀಶ್ ಇಂದು ತಿಳಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸುಮಲತಾ ಅವರು, ಅಂಬರೀಶ್ ಅಗಲಿಕೆ ನನಗೆ ಆಘಾತ ನೀಡಿದೆ. ಜೀವನದಲ್ಲಿ ನಾನು ಎಂದೂ ನಿರೀಕ್ಷಿಸದ ಘಟನೆ ನನಗೆ ಹಲವು ನಿರ್ಧಾರಗಳನ್ನು ಕೈಗೊಳ್ಳುವಂತೆ ಮಾಡಿತು. ಅಂಬರೀಶ್ ಅವರ ಮೇಲೆ ನೀವಿಟ್ಟ ಪ್ರೀತಿಯ ಋಣ ತೀರಿಸಬೇಕಿದೆ ಎಂದರು.
ಅಂಬರೀಶ್ ಅವರು ನಮಗೆ ಎಲ್ಲವನ್ನು ಕೊಟ್ಟಿದ್ದಾರೆ. ನನಗೆ ರಾಜಕೀಯ ಮಾಡಬೇಕೆಂಬ ಯಾವ ಉದ್ದೇಶವೂ ಇಲ್ಲ. ನಿಮ್ಮಅಭಿಮಾನದ ಒತ್ತಾಯಕ್ಕೆ ಮಣಿದು ರಾಜಕೀಯಕ್ಕೆ ಬಂದೆ ಎಂದ ಅವರು, ಸೋಲು ಗೆಲುವು ನನ್ನ ಕೈಯಲ್ಲಿ ಇಲ್ಲ, ಅದು ಜನರ ಇಚ್ಛೆ. ಜನರಿಗೆ ಸ್ಪಂದಿಸುವ ಒಂದೇ ಕಾರಣದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ರಾಜಕೀಯ ದಾರಿ ಸುಲಭವಲ್ಲ ಎಂಬುಂದೂ ನನಗೆ ಗೊತ್ತು ಎಂದು ಹೇಳಿದರು.
ನನ್ನ ನಿರ್ಧಾರ ಕೆಲವರಿಗೆ ಇಷ್ಟ ಆಗಬಹುದು, ಕೆಲವರಿಗೆ ಇಷ್ಟ ಆಗದೆಯೂ ಇರಬಹುದು. ಆದರೆ ನೀವು ಅಂಬರೀಶ್ ಮೇಲೆ ಇಟ್ಟಿರುವ ಪ್ರೀತಿಯ ಋಣ ತೀರಿಸಲು ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ನಿರ್ಧಾರ ದಿಂದ ಕೆಲವರನ್ನು ಈಗಾಗಲೇ ಕಳೆದುಕೊಂಡಿದ್ದೇನೆ, ಮುಂದೆಯೂ ಕೆಲವರು ದೂರವಾಗಬಹುದು ಎಂದರು.
ಯಾರ ಮನಸ್ಸನ್ನೂ ನೋಯಿಸುವ, ವೈಯಕ್ತಿಕವಾಗಿ ನಿಂದಿಸುವ ಕೆಲಸ ಮಾಡಬೇಡಿ. ನೀವು ಹಿರಿಯರು ನಿಮ್ಮನ್ನು ಯುವಕರು ಪಾಲಿಸುತ್ತಾರೆ ಎಂದು ಪರೋಕ್ಷವಾಗಿ ರೇವಣ್ಣ ಅವರಿಗೆ ತಿಳಿಸಿದರು.
ನನ್ನ ಬೆಂಬಲಕ್ಕೆ ನಟ ದರ್ಶನ್, ಯಶ್ ರಂಥ ಮಕ್ಕಳು ಧೈರ್ಯ, ಸ್ಥೈರ್ಯ ತುಂಬುತ್ತಾ ಜೊತೆಗಿದ್ದಾರೆ. ಇನ್ನು ಮುಂದೆ ಹೊಸ ಪ್ರಯಾಣ ಆರಂಭಿಸುತ್ತೇನೆ, ಎಲ್ಲರ ಸಹಕಾರ ಇರಲಿ, ಜನತೆಯ ಸಹಕಾರ ಚುನಾವಣೆಯೆ ಮೂಲಕ ತಿಳಿಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ನಟ ದೊಡ್ಡಣ್ಣ, ನಟ ಜೈ ಜಗದೀಶ್, ನಿರ್ಮಾಪಕಿ, ನಿರ್ದೇಶಕಿ, ವಿಜಯಲಕ್ಷ್ಮೀ ಸಿಂಗ್ ಇದ್ದರು.