2014ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಭರವಸೆಗಳ ಮಹಾಪೂರ ಹರಿಸಿ ಅಧಿಕಾರ ಗಿಟ್ಟಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಹಳೆಯ ಭರವಸೆಗಳ ಮಾತನಾಡುತ್ತಲೇ ಇಲ್ಲ. ಏಕೆ? ಭರವಸೆಗಳನ್ನು ಈಡೇರಿಸಿದ್ದರೆ ತಾನೇ ಅವುಗಳ ಬಗ್ಗೆ ಮಾತನಾಡುವುದು? ಈಗೇನಿದ್ದರು ದೇಶಭಕ್ತಿಯ ಉದ್ದೀಪಿಸಲು ಪುಲ್ವಾಮಾ ದಾಳಿ ಮತ್ತು ಬಾಲಕೋಟ್ ವಾಯುದಾಳಿಯನ್ನು ಮಾತ್ರ ಪ್ರಸ್ತಾಪಿಸುತ್ತಿದ್ದಾರೆ. ನಿರುದ್ಯೋಗ, ಅಭಿವೃದ್ಧಿ, ಮಹಿಳಾ ಸುರಕ್ಷತೆ, ಗ್ರಾಮೀಣಾಭಿವೃದ್ಧಿ, ಭ್ರಷ್ಟಾಚಾರ ನಿಯಂತ್ರಣ ಇತ್ಯಾದಿಗಳೆಲ್ಲವೂ ತೆರೆಮರೆಗೆ ಸರಿದಿವೆ.
ಅಷ್ಟಕ್ಕೂ ಪ್ರಧಾನಿ ಮೋದಿ ನೀಡಿದ್ದ ಪ್ರಮುಖ ಹತ್ತು ಭರವಸೆಗಳೇನು? ಅವುಗಳ ಸ್ಥಿತಿಗತಿ ಏನಾಗಿದೆ?
ಉದ್ಯೋಗ ಮತ್ತು ಉದ್ಯಮಶೀಲತೆ: ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಮತ್ತು ಉದ್ಯಮಶೀಲರಿಗೆ ಉತ್ತೇಜನ ನೀಡುವ ಭರವಸೆ ನೀಡಿದ್ದ ಮೋದಿ, ಈಗ ಎಲ್ಲೂ ಈ ಬಗ್ಗೆ ಮಾತನಾಡುತ್ತಿಲ್ಲ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡುವ ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್ಎಸ್ಎಸ್ಒ) ಗಂಟಲಿಗೆ ಬೀಗ ಜಡಿದಿದ್ದಾರೆ. ಅರ್ಥಾತ್ ನಿರುದ್ಯೋಗದ ವಾಸ್ತವಿಕ ಅಂಕಿ ಅಂಶಗಳನ್ನು ಪ್ರಕಟಿಸದಂತೆ ತಾಕೀತು ಮಾಡಿದ್ದಾರೆ. ವಾಸ್ತವಿಕ ಸ್ಥಿತಿ ಏನೆಂದರೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಆತಂಕಕಾರಿಯಾಗಿದೆ. 45 ವರ್ಷಗಳಲ್ಲೇ ಹೆಚ್ಚಿನ ನಿರುದ್ಯೋಗ ಸಮಸ್ಯೆ ಇದೆ ಎಂಬುದನ್ನು ಎನ್ಎಸ್ಎಸ್ಒ ಮತ್ತು ಸಿಎಂಐಇ ವರದಿಗಳು ಹೇಳಿವೆ. ಇಪಿಎಫ್ಒ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಕಳೆದ 16 ತಿಂಗಳಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸಲಾಗಿದೆಯಂತೆ! ಆದರೆ, ಈ ಅಂಕಿ ಅಂಶಗಳೇ ತಪ್ಪು ಎಂಬುದು ಆಮೇಲೆ ಸಾಬೀತಾಗಿದೆ.
ಮಹಿಳಾ ಮೀಸಲಾತಿ: ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವುದಾಗಿ ಮೋದಿ ಭರವಸೆ ನೀಡಿದ್ದರು. ರಾಜ್ಯಸಭೆಯಲ್ಲಿ ಈಗಾಗಲೇ ಅನುಮೋದನೆ ಪಡೆದಿರುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಬಹಮತ ಇದ್ದರೂ ಅನುಮೋದನೆ ಪಡೆಯುವ ಪ್ರಮಾಣಿಕ ಪ್ರಯತ್ನವನ್ನು ಮಾಡಲಿಲ್ಲ. ಆದರೆ, ಬರೀ ‘ಬೇಟಿ ಪಡಾವೋ ಬೇಟಿ ಬಚಾವೋ’ ಯೋಜನೆಯನ್ನು ಘೋಷಿಸಿ ಪ್ರಚಾರ ಮಾಡಿದರು. ಆದರೆ, ದೇಶದ ಮಹಿಳೆಯರ ಸ್ಥಿತಿ ಸುಧಾರಿಸಿಲ್ಲ.
ಭ್ರಷ್ಚಾಚಾರ ನಿಗ್ರಹ: ಕಳೆದ ಚುನಾವಣೆಗೂ ಮುನ್ನ ಭ್ರಷ್ಚಾಚಾರ ನಿಗ್ರಹ ಮಾಡುವುದಾಗಿ ಭರವಸೆ ನೀಡಿದ್ದ ನರೇಂದ್ರ ಮೋದಿ ಈಗ ಖುದ್ದು ತಾವೇ ರಫೈಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಚಾಚಾರ ಎಸಗಿರುವ ಆರೋಪ ಹೊತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಎತ್ತಿರುವ ಹತ್ತಾರು ಪ್ರಶ್ನೆಗಳಿಗೆ ಮೋದಿಯ ಬಳಿ ಉತ್ತರವೇ ಇಲ್ಲ. ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಾಸು ತಂದು ಪ್ರತಿಯೊಬ್ಬ ನಾಗರಿಕರ ಖಾತೆಗೂ 15 ಲಕ್ಷ ಜಮಾ ಮಾಡುವುದಾಗಿ ಜುಮ್ಲಾ ಹೊಡೆದಿದ್ದ ಮೋದಿ, ಅಧಿಕಾರಕ್ಕೆ ಬಂದ ನಂತರ ಕಪ್ಪು ಹಣ ನಿಗ್ರಹಕ್ಕೆ ಸಂಬಂಧಿಸಿದಂತೆ ಟಾಸ್ಕ್ ಫೋರ್ಸ್ ರಚಿಸಿದ್ದಷ್ಟೇ ಬಂತು. ಆದರೆ, ವಿದೇಶದಲ್ಲಿರುವ ಕಪ್ಪು ಹಣ ವಾಪಾಸು ತರಲು ಏನೇನೂ ಮಾಡಿಲ್ಲ. ಜನರ ಖಾತೆಗೆ 15 ಲಕ್ಷ ರುಪಾಯಿಯೂ ಜಮೆಯಾಗಲಿಲ್ಲ. ಅದು ಬರೀ ಜುಮ್ಲಾ ಆಗಿ ಉಳಿಯಿತು.
ಬೆಲೆ ಏರಿಕೆ ನಿಯಂತ್ರಣ: ಅಧಿಕಾರಕ್ಕೆ ಬಂದ ತಕ್ಷಣ ಬೆಲೆ ಏರಿಕೆ ನಿಯಂತ್ರಿಸುವುದಾಗಿ ದೇಶವ್ಯಾಪಿ ಪ್ರಚಾರ ಮಾಡಿದ್ದ ಮೋದಿ, ಕಾಳದಂಧೆಕೋರರನ್ನು ಶಿಕ್ಷಿಸಲು ವಿಶೇಷ ನ್ಯಾಯಾಲಯ ರಚಿಸುವುದಾಗಿಯೂ ಭರವಸೆ ನೀಡಿದ್ದರು. ಬೆಲೆ ಸ್ಥಿರೀಕರಣ ನಿಧಿ ಸ್ಥಾಪನೆ, ಭಾರತೀಯ ಆಹಾರ ನಿಗಮದ ಕಾರ್ಯಾಚರಣೆ ಮತ್ತು ಗೋದಾಮುಗಳ ಸದ್ಬಳಕೆ ಮೂಲಕ ಕಾಳದಂಧೆ ನಿಯಂತ್ರಣ ಮಾಡುವುದಾಗಿಯೂ ಹೇಳಿದ್ದರು. ತೊಗರಿ ಬೇಳೆ ದರ ಯದ್ವಾ ತದ್ವಾ ಏರಿದಾಗ ಅಲ್ಲಲ್ಲಿ ಕಾಳದಂಧೆಕೋರರ ವಿರುದ್ಧ ದಾಳಿ ನಡೆದದ್ದು ಬಿಟ್ಟರೆ, ವಿಶೇಷ ನ್ಯಾಯಾಲಯವೂ ಆಗಿಲ್ಲ, ಆಹಾರ ನಿಗಮದ ಸದ್ಭಳಕೆಯೂ ಆಗಿಲ್ಲ.
ಗ್ರಾಮೀಣ ಮತ್ತು ನಗರ ಪ್ರದೇಶ ಅಭಿವೃದ್ಧಿ: ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ವಿದ್ಯುತ್ ಸರಬರಾಜು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೇ 100 ಹೊಸ ಹೈಟೆಕ್ ನಗರಗಳನ್ನು ನಿರ್ಮಿಸುವುದಾಗಿಯೂ ಹೇಳಿದ್ದರು. ಆದರೆ, ದೇಶದಲ್ಲಿ ಎಲ್ಲೂ ಹೈಟೆಕ್ ಸಿಟಿಗಳು ತಲೆ ಎಲ್ಲಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯೂ ಇನ್ನೂ ಯೋಜನೆ ಸಿದ್ಧಪಡಿಸುವ ಹಂತದಲ್ಲೇ ಇದೆ. ಯುಪಿಎ ಸರ್ಕಾರ ಹಮ್ಮಿಕೊಂಡಿದ್ದ ಯೋಜನೆಗಳನ್ನೇ ಮರುನಾಮಕರಣ ಮಾಡಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಒದಗಿಸುವ ಪ್ರಯತ್ನ ಮಾಡಲಾಗಿದೆ. ಆದರೆ, ಐದು ವರ್ಷಗಳಲ್ಲಿ ಆಗಬೇಕಾದಷ್ಟು ಕೆಲಸಗಳು ಆಗಿಲ್ಲ.
ಆರೋಗ್ಯ ಸೇವೆ: ಆರೋಗ್ಯ ಸೇವೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದಾಗಿ, ಸರ್ವರಿಗೂ ಆರೋಗ್ಯ ಸೇವೆ ಒದಗಿಸುವುದಾಗಿ ಭರವಸೆ ನೀಡಿದ್ದ ಮೋದಿ ಆಯುಷ್ಮಾನ್ ಭಾರತ್ ಎಂಬ ಬೃಹತ್ ಯೋಜನೆಯನ್ನು ಘೋಷಣೆ ಮಾಡಿ ಅದ್ದೂರಿ ಪ್ರಚಾರ ಪಡೆದಿದ್ದಾರೆ. ಕೇಂದ್ರ ಸರ್ಕಾರವೇ ಘೋಷಿಸಿರುವ ಈ ಯೋಜನೆಗೆ ರಾಜ್ಯ ಸರ್ಕಾರಗಳೇ ಅತಿ ಹೆಚ್ಚು ಅನುದಾನ ನೀಡಬೇಕಾದ ಪರಿಸ್ಥಿತಿ ಬಂದಿದೆ. ತ್ವರಿತ ಲಸಿಕೆ ಹಾಕಲು ಯುಪಿಎ ಸರ್ಕಾರದ ರೂಪಿಸಿದ್ದ ಯೋಜನೆಗೆ ಇಂಧ್ರ ಧನುಷ್ ಎಂದು ಮರುನಾಮಕರಣ ಮಾಡಲಾಗಿದೆ.
ಮುಕ್ತ ಸರ್ಕಾರ, ಉತ್ತರದಾಯಿತ್ವ ಆಡಳಿತ: ಅಧಿಕಾರಕ್ಕೆ ಬಂದರೆ ಪಾರದರ್ಶಕ ಮತ್ತು ಉತ್ತರದಾಯಿತ್ವ ಆಡಳಿತ ನಡೆಸುವುದಾಗಿ ಘೋಷಿಸಿದ್ದರು ಮೋದಿ. ಆದರೆ, ಆರಂಭ ಶೂರತ್ವ ಮೆರೆದ ಮೋದಿ, ತಮ್ಮ ಸರ್ಕಾರದ ವೈಫಲ್ಯಗಳು ಹೊರ ಬರತೊಡಗಿದ ನಂತರ ಮುಕ್ತ ಸರ್ಕಾರದ ಬದಲಿಗೆ ಮುಚ್ಚಿಟ್ಟ ಸರ್ಕಾರವನ್ನಾಗಿ ರೂಪಿಸಿದರು. ಅವರ ಹತಾಶೆ ಎಷ್ಟರ ಮಟ್ಟಿಗೆ ಮುಟ್ಟಿದೆ ಎಂದರೆ ಎನ್ಎಸ್ಎಸ್ಒ ಅಂಕಿ ಅಂಶಗಳನ್ನು ಪ್ರಕಟಿಸುವುದಕ್ಕೂ ನಿರ್ಬಂಧ ಹೇರಿದ್ದಾರೆ. ಅಪನಗದೀಕರಣದ ನಂತರ ಬ್ಯಾಂಕಿಂಗ್ ವ್ಯವಸ್ಥೆಗೆ ಎಷ್ಟು ನಗದು ವಾಪಾಸು ಬಂತೆಂಬುದರ ಮಾಹಿತಿ ನೀಡದಂತೆಯೂ ಭಾರತೀಯ ರಿಸರ್ವ್ ಬ್ಯಾಂಕ್ ಗೆ ತಾಕೀತು ಮಾಡಿದ್ದರು. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಇತ್ಯಾಧಿ ಆಕರ್ಷಕ ಜುಮ್ಲಾಗಳ ಮೂಲಕ ಜನರನ್ನು ಮರಳು ಮಾಡುತ್ತಿದ್ದಾರೆ.
ಪ್ರಾದೇಶಿಕ ಸಮತೋಲನ: ಈಶಾನ್ಯ ರಾಜ್ಯಗಳಲ್ಲಿ ಹೆಚ್ಚು ಅಭಿವೃದ್ಧಿಗೆ ಒತ್ತು ನೀಡುವುದಾಗಿ ಘೋಷಿಸಿದ್ದ ನರೇಂದ್ರ ಮೋದಿ, ಅಭಿವೃದ್ಧಿ ಮಾಡಿದ್ದಾರೋ ಇಲ್ಲವೋ, ಆದರೆ, ಈಶಾನ್ಯ ರಾಜ್ಯಗಳಲ್ಲೂ ಕೇಸರಿ ಆಡಳಿತವನ್ನು ವಿಸ್ತರಿಸಿಕೊಂಡಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳ್ಳುವ ಹಂತದಲ್ಲಿದ್ದ ಬಹುತೇಕ ಮೂಲಭೂತ ಸೌಲಭ್ಯ ಯೋಜನೆಗಳನ್ನು ಪೂರ್ಣಗೊಂಡ ನಂತರ ಉದ್ಘಾಟನೆ ನೆರವೇಸಿದ್ದಾರೆ. ಅದು ತಮ್ಮದೇ ಯೋಜನೆ ಎಂಬಂತೆ ಬೀಗಿದ್ದಾರೆ.
ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ: ರಾಷ್ಟ್ರೀಯ ಮದ್ರಾಸಾಗಳ ನವೀಕರಣ ಯೋಜನೆ, ಅಲ್ಪಸಂಖ್ಯಾತರ ವಿಶಿಷ್ಟ ಕರಕುಶಲ ಕಲೆಗಳಿಗೆ ಉತ್ತೇಜನ, ಶಾಂತ ಮತ್ತು ಸುರಕ್ಷತಾ ಪರಿಸರದ ಬದುಕಿನ ಭರವಸೆ ನೀಡಿದ್ದರು. ಆದರೆ, ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಆದರೆ, ಮೋದಿ ಅಧಿಕಾರಕ್ಕೆ ಬಂದ ನಂತರ ಗೋರಕ್ಷಕರ ಹೆಸರಿನಲ್ಲಿ ದೇಶದ ಅಲ್ಲಲ್ಲಿ ಅಲ್ಪಸಂಖ್ಯಾತರ ಮೇಲೆ ಗುಂಪುದಾಳಿ ನಡೆಸುವ ಪ್ರಕರಣಗಳು ಹೆಚ್ಚಿವೆ.
ರಾಮಮಂದಿರ: ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಭರವಸೆ ನೀಡಿದ್ದ ನರೇಂದ್ರ ಮೋದಿ, ನಾಲ್ಕುವರೆ ವರ್ಷಗಳ ಕಾಲ ಆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿರಲಿಲ್ಲ. ಈ ನಡುವೆ ಚುನಾವಣೆ ಸಮೀಪಿಸಿದಂತೆ ಸುಗ್ರೀವಾಜ್ಞೆ ಬಳಸಿ ರಾಮಮಂದಿರ ನಿರ್ಮಾಣಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಬೇಕು ಎಂಬ ಬೇಡಿಕೆಯನ್ನು ಬಿಜೆಪಿ ಮತ್ತು ಸಂಘಪರಿವಾರಗಳು ಮುಂದಿಟ್ಟು ದೇಶವ್ಯಾಪಿ ಮೆರವಣಿಗೆ ನಡೆಸಲು ಯತ್ನಿಸಿದವು. ಆದರೆ, ಜನರ ತಣ್ಣನೆಯ ಪ್ರತಿಕ್ರಿಯೆಯಿಂದಾಗಿ ರಾಮಮಂದಿರ ವಿಷಯವನ್ನು ಕೈಬಿಡಲಾಗಿದೆ. ಸುಪ್ರೀಂ ಕೋರ್ಟ್ ಸೂಕ್ಷ್ಮ ಮತ್ತು ಸಂವೇದನೆಯಿಂದ ಕೈಗೊಂಡ ನಿರ್ಣಯಗಳು ಸರ್ಕಾರದ ಅತಿರೇಕಕ್ಕೆ ಕಡಿವಾಣ ಹಾಕಿವೆ.
ನರೇಂದ್ರ ಮೋದಿ ಅವರ ಮುಂದೆ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಹೆಚ್ಚಿನ ವಿಷಯಗಳಿಲ್ಲ. ಕೊಟ್ಟ ಭರವಸೆಗಳು ಈಡೇರಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ನಿರುದ್ಯೋಗ ಹೆಚ್ಚಿದೆ, ಜನರಲ್ಲಿ ಹತಾಶೆ ಮೂಡಿದೆ, ಅಪನಗದೀಕರಣದಿಂದ ಹುಟ್ಟಿಕೊಂಡ ಸಂಕಷ್ಟಗಳು ಮತ್ತಷ್ಟು ಹೆಚ್ಚುತ್ತಿವೆ. ಈ ವಾಸ್ತವಿಕತೆ ಮೋದಿಗೂ ಗೊತ್ತು. ಹೀಗಾಗಿಯೇ ಅಭಿವೃದ್ಧಿ ಬಗ್ಗೆ ಮಾತನಾಡುವುದನ್ನು ಬಿಟ್ಟು ದೇಶಪ್ರೇಮ ಉದ್ದೀಪಿಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಅಭಿವೃದ್ಧಿ ಹಿನ್ನೆಲೆಗೆ ಸರಿದಿದೆ.
-
ಟ್ರೂಥ್ ಇಂಡಿಯಾ ಕನ್ನಡ