ಕೇವಲ ಒಂದು ದಶಕದ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಒಬ್ಬ ರಾಜಕೀಯ ನಾಯಕನನ್ನು ಬೆಂಬಲಿಸುವುದು ಎಂದರೆ ಮತ್ತೊಬ್ಬ ನಾಯಕನ ವಿರುದ್ಧ ಮತ ಚಲಾಯಿಸುವುದು ಎಂದು ಮಾತ್ರ ಇತ್ತೇ ಹೊರತು ನಮಗಿಷ್ಟವಾಗದ ನಾಯಕ ನಮ್ಮ ಬಳಿ ಬಂದಾಗ ಅವನನ್ನು ಅಪಮಾನಿಸುವುದು ಎಂದಾಗಿರಲಿಲ್ಲ. ನಮ್ಮ ದೇಶ ಕಳೆದ 72 ವರ್ಷಗಳಲ್ಲಿ 16 ಲೋಕಸಭಾ ಚುನಾವಣೆಗಳನ್ನು ಕಂಡಿದೆ. ಈ ಅವಧಿಯಲ್ಲಿ ನೂರಾರು ರಾಷ್ಟ್ರನಾಯಕರು, ಸಹಸ್ರಾರು ರಾಜ್ಯ ಮಟ್ಟದ ನಾಯಕರು ಆಗಿ ಹೋಗಿದ್ದಾರೆ. ಹತ್ತಾರು ದೊಡ್ಡ ಪಕ್ಷಗಳು, ಲೆಕ್ಕವಿಲ್ಲದಷ್ಟು ಸಣ್ಣ ಪುಟ್ಟ ಪಕ್ಷಗಳು, ಹಲವಾರು ಬಲಿಷ್ಟ ಪ್ರಾದೇಶಿಕ ಪಕ್ಷಗಳು ಜನಬೆಂಬಲ ಪಡೆದು ರಾಷ್ಟ್ರ ರಾಜಕಾರಣದಲ್ಲೂ ತಮ್ಮ ಛಾಪು ಮೂಡಿಸಿವೆ. ಅಲುಗಾಡಿಸಲಾಗದಂತಹ ಏಕಪಕ್ಷ ಆಡಳಿತಗಳು ದೇಶವನ್ನು ನಡೆಸಿವೆ, ಅತ್ಯಂತ ದುರ್ಬಲ ಸಮ್ಮಿಶ್ರ ಸರ್ಕಾರಗಳೂ ಅಧಿಕಾರ ನಡೆಸಿವೆ.
ಏಳು ದಶಕಗಳ ರಾಜಕಾರಣದಲ್ಲಿ ಏನೆಲ್ಲಾ ನಡೆದರೂ, ದೇಶದ ಮತದಾರರು ಮಾತ್ರ ಎಂದೂ ಸಾಮಾನ್ಯ ಪ್ರಜ್ಞೆ ಕಳೆದುಕೊಂಡಿರಲಿಲ್ಲ, ತಾನು ‘ಪ್ರಜೆ’ ಎಂಬುದನ್ನು ಮರೆತಿರಲಿಲ್ಲ. ಹಾಗೆಯೇ ರಾಜಕೀಯ ನಾಯಕನಾದವನು ಎಂತಹ ಜನಪ್ರಿಯ ರಾಜಕಾರಣಿಯೇ ಆಗಿದ್ದರೂ ತನ್ನ ಬೆಂಬಲಿಗರನ್ನು ಎದುರಾಳಿ ನಾಯಕನನ್ನು ಅಪಮಾನಿಸಲು ಹೇಳಿಕೊಟ್ಟಿರಲಿಲ್ಲ. ಇದೆಲ್ಲಾ ನಡೆಯುತ್ತಿರುವುದು ಕಳೆದ ಐದಾರು ವರ್ಷಗಳ ಈಚೆಗೆ ನಿರ್ದಿಷ್ಟವಾಗಿ 2014ರಿಂದ.
2014ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹೇಯವಾಗಿ ಅಪಮಾನಿಸಲಾಗಿತ್ತು, ರಾಹುಲ್ ಗಾಂಧಿಯನ್ನು “ಪಪ್ಪು” ಎಂದು ಕರೆದು ಮಾಡಬಾರದ ರೀತಿಯಲ್ಲಿ ಅಪಮಾನಿಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಬಿಜೆಪಿ ಮತ್ತು ಆಗಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಬಳಿ ಇದ್ದ ದೊಡ್ಡ ಅಸ್ತ್ರ ಎಂದರೆ ಅವರ ಬಳಿ ದೇಶದ ಉತ್ತಮ ಭವಿಶ್ಯಕ್ಕಾಗಿ ಅಗತ್ಯವಿದ್ದ ಕೆಲವು ಆಶ್ವಾಸನೆಗಳು, ಭರವಸೆಗಳು ಮತ್ತು ದೇಶದ ಅಭಿವೃದ್ಧಿಯ ಕನಸುಗಳು. ಹೀಗಾಗಿಯೇ ಕೋಟ್ಯಂತರ ಭಾರತೀಯರು ಅಂದು ಮೋದಿಯನ್ನು ಸುಲಭವಾಗಿ ನಂಬಿಯೂಬಿಟ್ಟರು. ಆಶ್ವಾಸನೆಗಳ ಜೊತೆಗೆ ಎದುರಾಳಿಗಳ ನಿಂದನೆ, ಮೋದಿಯ ಆರಾಧನೆ, ಬ್ರ್ಯಾಂಡಿಂಗ್ ಇತ್ಯಾದಿಗಳೆಲ್ಲಾ ನಡೆದು ದೇಶದಾದ್ಯಂತ ಮೋದಿ ಅಲೆ ಎಂಬ ಯೂಫೋರಿಯಾ ಸೃಷ್ಟಿಯಾಗಿತ್ತು.
ಆದರೆ ಇಂದು? ಪರಿಸ್ಥಿತಿ ಹಾಗೆಯೇ ಇದೆಯೇ?
ಖಂಡಿತಾ ಇಲ್ಲ.
2014ರಲ್ಲಿ ಬಿಜೆಪಿ ಮತ್ತು ಮೋದಿಯ ಬಳಿ ಇದ್ದ ‘ಆಶ್ವಾಸನೆಗಳಾವೂ 2019ರ ಬಜೆಪಿ ಮತ್ತು ಮೋದಿಯ ಬಳಿ ಇಲ್ಲ. ಹೋಗಲಿ 2014ರಲ್ಲಿ ಆಡಿದ ಮಾತಿನಂತೆ ಮಾಡಿದ ರಿಪೋರ್ಟ್ ಕಾರ್ಡೂ ಕೈಯಲ್ಲಿ ಇಲ್ಲ. ಈಗ ಮೋದಿ ಮತ್ತು ಮೋದಿ ಬೆಂಬಲಿಗರ ಬಳಿ ಉಳಿದಿರುವ ಏಕೈಕ ಅಸ್ತ್ರ ಎಂದರೆ ಎದುರಾಳಿಯ ನಿಂದನೆ, ಅಪಮಾನ. ಅಷ್ಟೇ. ಹೀಗಾಗಿಯೇ ಈ ಏಕೈಕ ಅಸ್ತ್ರವನ್ನು ಸೋಮವಾರ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕಿನಲ್ಲಿ ರಾಹುಲ್ ಗಾಂಧಿ ಟೆಕ್ಕಿಗಳೊಂದಿಗೆ ಸಂವಾದಕ್ಕೆ ಬಂದಾಗ ‘ಭಕ್ತರ ಸಣ್ಣ ಗುಂಪೊಂದು ಝಳಪಿಸಿತು.
ಈ ಘಟನೆ ನಡೆದ ಮೇಲೆ ನಿಜಕ್ಕೂ ಮೋದಿಯನ್ನು ನಂಬಿಕೊಂಡಿರುವ ಕುರುಡು ಭಕ್ತರ ಬಗ್ಗೆ “ಅಯ್ಯೋ ಪಾಪ’ ಅನಿಸುತ್ತಿದೆ. ಅವರ ಅಸಹಾಯಕತೆ ಬಗ್ಗೆ ಒಂದರೆಕ್ಷಣ ಕನಿಕರ ಮೂಡುತ್ತದೆ.
ಒಂದು ರಾಜಕೀಯ ಪಕ್ಷದ ಪ್ರಧಾನಿ ಅಭ್ಯರ್ಥಿಯೊಬ್ಬ ತಮ್ಮೊಂದಿಗೆ ಸಂವಾದ ನಡೆಸಲು ಬರುತ್ತಿದ್ದಾನೆ ಎಂದಾಗ, ಐಟಿ,ಬಿಟಿಯಂತಹ ಉನ್ನತ ಶಿಕ್ಷಣ ಪಡೆದ ಒಬ್ಬ ವ್ಯಕ್ತಿಯಿಂದ ನಮ್ಮ ಭಾರತ ಬಯಸುವುದು ಒಂದು ಪ್ರಜ್ಞಾವಂತಿಕೆ, ಮತ್ತೊಂದು ಬುದ್ಧಿವಂತಿಕೆ. ಆದರೆ ಮೋದಿ,ಮೋದಿ,ಮೋದಿ ಎಂದು ರಾಹುಲ್ ಗಾಂಧಿಯನ್ನು ಅಪಮಾನಿಸಿದವರು ತಮಗೆ ಎರಡೂ ಇಲ್ಲ ಎಂಬುದನ್ನು ತೋರಿಸಿಕೊಂಡರು. ಅದರೊಂದಿಗೆ ತಮಗೆ ಸಭ್ಯತೆ, ಸಂಸ್ಕೃತಿ, ಸಂಸ್ಕಾರಗಳೂ ಇಲ್ಲ ಎಂದೂ ತೋರಿಸಿಕೊಂಡರು.
ರಾಹುಲ್ ಗಾಂಧಿಯನ್ನು 2014ರಿಂದಲೂ ಏನೂ ತಿಳಿಯದ ‘ದಡ್ಡ’ ಎಂದೂ, ದೇಶದ ಯಾವ ಯೂನಿವರ್ಸಿಟಿಯಲ್ಲೂ ಇಲ್ಲದ ಎಂಟೈರ್ ಪೊಲಿಟಿಕಲ್ ಸೈನ್ಸ್ “ಓದಿರುವ” ಮೋದಿಯನ್ನು ಮಹಾನ್ ಬುದ್ಧಿವಂತ, ಜಗತ್ತಿನ ಏಕೈಕ ಬುದ್ಧಿವಂತ ಎಂದು ತಾವೂ ನಂಬಿಕೊಂಡು ಜನರಿಗೆ ನಂಬಿಸುವುದೂ ನಡೆದುಕೊಂಡೇ ಬಂದಿದೆ. ಆದರೆ ನಿಜ ಜೀವನದ ಅನುಭವಗಳನ್ನು ಗಮನವಿಟ್ಟು ನೋಡಿದಾಗ ವಾಸ್ತವ ಬೇಗ ತಿಳಿಯುತ್ತದೆ.
ನೆನ್ನೆ ಹಾಗೆಯೇ ಆಯಿತು.
ರಾಹುಲ್ ಗಾಂಧಿ ನೂರಾರು ಟೆಕ್ಕಿಗಳ ಸಮ್ಮುಖದಲ್ಲಿ ಮೈಕ್ ಹಿಡಿದು ತಾಸಿಗೂ ಹೆಚ್ಚು ಕಾಲ ಸಂವಾದಿಸಿದರು. ಸಭೆಯಲ್ಲಿ ಬಂದ ಪ್ರಶ್ನೆಗಳಿಗೆ ಯಾವ ಉದ್ವೇಗಕ್ಕೂ ಒಳಗಾಗದೇ, ಯಾವ ನಾಟಕೀಯತೆಯೂ ಇಲ್ಲದೇ ಮಾತನಾಡಿದರು. ನವೋದ್ಯಮಿಗಳ, ಮತ್ತು ಉದ್ಯಮಶೀಲತೆಯ ಸಮಸ್ಯೆಗಳ ಬಗ್ಗೆ ತಮ್ಮ ಒಳನೋಟಗಳನ್ನು ಹಂಚಿಕೊಂಡರು. ಹಳ್ಳಿಗಾಡಿನಲ್ಲಿ ಉದ್ಯಮಶೀಲತೆಯನ್ನು ಬೆಳೆಸುವುದು ಹೇಗೆ, ಭಾರತದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ದಾರಿ ಏನು? ಕೌಶಲ್ಯ ಅಭಿವೃದ್ಧಿಯ ಸಮಸ್ಯೆಯನ್ನು ಎದುರುಗೊಳ್ಳುವುದು ಹೇಗೆ? ದಲಿತ ಸಮುದಾಯಗಳ ಉದ್ಯಮಿಗಳು ಎದುರಿಸುವ ಸಮಸ್ಯೆಗಳ ಬಗ್ಗೆ ನಿಮ್ಮ ಅವಗಾಹನೆ ಏನು? ಉದ್ಯಮಶೀಲತೆಗೆ ತೊಡಕಾಗಿರುವ ಏಂಜೆಲ್ ಟ್ಯಾಕ್ಸ್ ಕುರಿತು ನಿಮ್ಮ ನಿಲುವು ಏನು? ಇಂತಹ ಅತ್ಯಂತ ಗಂಭೀರ ವಿಷಯಗಳ ಬಗ್ಗೆ ನೆರೆದಿದ್ದ ನೂರಾರು ಪ್ರಜ್ಞಾವಂತರ ನಡುವೆ ಓಡಾಡಿಕೊಂಡು ಮಾತಾಡಿದ ರಾಹುಲ್ ಗಾಂಧಿ ಯಾರಿಗಾದರೂ “ಪಪ್ಪು” ಎಂಬಂತೆ ರೀತಿ ಕಾಣಿಸಿದರೇ? ಪ್ರತಿಷ್ಟಿತ ಮಾಹಿತಿ ತಂತ್ರಜ್ಞಾನದ ಕೇಂದ್ರವೊಂದರಲ್ಲಿ, ಸಾಕಷ್ಟು ವಿಷಯ ತಜ್ಞರು, ಪರಿಣಿತರ ನಡುವೆ ಸುಮ್ಮನೇ ಬಂದು ‘ಮಾತಾಡ್ತೀನಿ’ ಎಂದು ನಿಲ್ಲಲು ಸಾಧ್ಯವಿಲ್ಲ. ಅದಕ್ಕೆ ಒಂದು ಸಾಮರ್ಥ್ಯ ಬೇಕು, ಹಾಗೆ ದಿಟ್ಟತನವೂ ಬೇಕು. ಯಾರಾದರೂ ಇಂತಹುದೇ ಒಂದು ‘ಸಂವಾದ”ದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಯಾವತ್ತೂ ಪೂರ್ವ ತಯಾರಿ ಮಾಡಿಕೊಂಡ ಭಾಷಣಗಳನ್ನು ಮಾತ್ರ ಮಾಡುವ, ಯಾವುದೇ ಮುಕ್ತ ಸಂವಾದಕ್ಕೆ ತಾನು ಸಿದ್ಧ ಎಂದು ತನ್ನ ಜೀವಮಾನದಲ್ಲೇ ಎಂದೂ ತೋರದ ನರೇಂದ್ರ ಮೋದಿಯನ್ನು ಬೆಂಬಲಿಸುವ ‘ಭಕ್ತರು” ತಮ್ಮ ‘ದೇವರ”ನ್ನು ಒಮ್ಮೆಯಾದರೂ ನೆಲದ ಮೇಲಿಟ್ಟು ನೋಡಲಿ.
ಟೆಕ್ಕಿಗಳು ಎಂದರೆ ಸಾಮಾನ್ಯ ಜನರಿಗೆ ಅದೇನೋ ಒಂದು ಭ್ರಮೆ. ಇವರೆಲ್ಲಾ ತಂತ್ರಜ್ಞಾನ ತಿಳಿದವರು, ವಿಜ್ಞಾನ ತಿಳಿದವರು, ಕಂಪ್ಯೂಟರ್ ತಿಳಿದವರು ಎಂದು ಎಲ್ಲರಿಗಿಂತ ಸ್ವಲ್ಪ ಹೆಚ್ಚಾಗಿಯೋ ನೋಡುವ ಪರಿಪಾಠವಿದೆ. ಇದರಲ್ಲಿ ಸತ್ಯಾಂಶವೂ ಇಲ್ಲದಿಲ್ಲ. ಆದರೆ ಇವರ ಗಂಭೀರ ಸಮಸ್ಯೆ ಇರುವುದು ಸಮಾಜ ಮತ್ತು ರಾಜಕೀಯಗಳನ್ನು ಗ್ರಹಿಸುವುದರಲ್ಲಿ. ವಿಜ್ಞಾನ, ತಂತ್ರಜ್ಞಾನಗಳನ್ನು ಆಳವಾಗಿ ಸ್ವಯಂ ಅಧ್ಯಯನ ಮಾಡಿ ದೊಡ್ಡ ಸಂಸ್ಥೆಗಳಲ್ಲಿ, ದೊಡ್ಡ ಸಂಬಳಕ್ಕೆ ಕೆಲಸ ಮಾಡುವ ಐಟಿ ವೃತ್ತಿಪರರ ಪೈಕಿ ಅನೇಕರಿಗೆ ಸಮಾಜ, ಇತಿಹಾಸ ಮತ್ತು ರಾಜಕೀಯಗಳ ವಿಷಯದಲ್ಲಿ ಬಿಜೆಪಿಯ ಐಟಿ ಸೆಲ್ ಬಿಟ್ಟರೆ ಬೇರೆ ಯಾವ ಸ್ವಯಂ ಅಧ್ಯಯನವೂ ಇರುವುದಿಲ್ಲ. ಹೀಗಾಗಿಯೇ ರಾಹುಲ್ ಗಾಂಧಿಯಂತಹ ಒಬ್ಬ ರಾಜಕಾರಣಿ ತಮ್ಮ ಬಳಿ ಬಂದಾಗ ಕನಿಷ್ಟ ಸಭ್ಯತೆಯಿಂದ ಬಿಹೇವ್ ಮಾಡುವುದೂ ಇವರಿಗೆ ತಿಳಿಯುವುದಿಲ್ಲ. ಹಳ್ಳಿಯಲ್ಲಿ, ಕೊಳಗೇರಿಗಳಲ್ಲಿ ಬದುಕುವ ಬಡವರು, ಸಾಮಾನ್ಯ ಜನರು ಬೇಕಾದಂತೆ ಯಾವುದೇ ರಾಜಕಾರಣಿ ಬಂದರೂ ಅವರ ಮಾತು ಆಲಿಸುತ್ತಾರೆ, ಅಂತಿಮವಾಗಿ ತಮಗೆ ಬೇಕಾದವರಿಗೆ ಮತ ಚಲಾಯಿಸುತ್ತಾರೆ. ಆದರೆ ತಮ್ಮ ಮಾನವೇ ಹರಾಜಾಗುವಂತೆ ಟೆಕ್ಕಿಗಳಲ್ಲಿನ ಭಕ್ತರು ತೀರಾ ಕೆಳಮಟ್ಟಕ್ಕೆ ಇಳಿದದ್ದಕ್ಕೆ ಬೆಂಗಳೂರು ಸಾಕ್ಷಿಯಾಯಿತಲ್ಲ.
ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ನಾವು ಒಂದು ವಿಷಯ ತಿಳಿದುಕೊಳ್ಳಬೇಕಾಗುತ್ತದೆ. ನಮ್ಮ ದೇಶ ಎಷ್ಟೊಂದು ಸಂಕೀರ್ಣ ಮತ್ತು ವಿಶಾಲವಾಗಿದೆ ಎಂದರೆ ಸಾವಿರ ವರ್ಷ ಕಳೆದರೂ ಯಾರೋ ಒಬ್ಬ ವ್ಯಕ್ತಿ ಬಂದು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಬಿಡುತ್ತೇನೆ ಎಂದು ಹೇಳುವ ಚಾನ್ಸೇ ಇಲ್ಲ. ಆದರೂ ಕೆಲವರು ತಮ್ಮನ್ನು ಉದ್ಧರಿಸುವ ಒಬ್ಬಿಬ್ಬ ವ್ಯಕ್ತಿಗಳಿಂದಲೇ ಎಲ್ಲವೂ ಆಗಿಬಿಡುತ್ತದೆ ಎಂದು ನಂಬುವವರಷ್ಟು ಆತ್ಮವಂಚಕರು ದೇಶದಲ್ಲಿ ಮತ್ಯಾರೂ ಇಲ್ಲ. ಅದು ನರೇಂದ್ರ ಮೋದಿಯೋ, ರಾಹುಲ್ ಗಾಂಧಿಯೋ, ಮತ್ಯಾರೋ… ಎಲ್ಲರೂ ಅಂತಿಮವಾಗಿ ಈ ದೇಶದ ಸಂವಿಧಾನದ ಅಡಿಯಾಳುಗಳೇ ಹೊರತು ದೇಶದ ಸಂವಿಧಾನವಾಗಲೀ, ಪ್ರಜಾಪ್ರಭುತ್ವ ವ್ಯವಸ್ಥೆಯಾಗಲೀ, ಸಂಸತ್ತಾಗಲೀ ಇವರಿಗೆ ಅಧೀನವಾಗಿರುವುದಿಲ್ಲ. ಆಗಿರಲೂ ಬಾರದು. ಒಂದೊಮ್ಮೆ ಅಂತಹ ಸಂದರ್ಭ ಬಂದರೆ ನಾವುಗಳಾರೂ ಪ್ರಜೆಗಳಾಗಿರುವುದಿಲ್ಲ.
ಹಾಗೆ ದೇಶದ ಸಂವಿಧಾನ, ಸಂಸತ್ತುಗಳೆಲ್ಲವೂ ವ್ಯಕ್ತಿಯೊಬ್ಬನಿಗೆ ಅಡಿಯಾಳಾಗುವಂತ ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ‘ಗುಲಾಮರು’ ಮತ್ತು ‘ರೋಬೋಟು’ಗಳೆಂಬ ಎರಡೇ ವರ್ಗವಿರಲು ಸಾಧ್ಯವೇ ಹೊರತು “ಪ್ರಜೆ” ಎಂಬ ವರ್ಗವೇ ಅಲ್ಲಿ ಅಸ್ತಿತ್ವದಲ್ಲಿ ಇರುವುದಿಲ್ಲ. ಹೀಗಾಗಿಯೇ ನಾವು ಅಂದರೆ ದೇಶದ ಮತದಾರರು ನಮ್ಮನ್ನು ಶಾಶ್ವತವಾಗಿ “ಪ್ರಜೆ”ಗಳಾಗಿ ಉಳಿಸಿಕೊಳ್ಳುವುದು ಬಹಳ ಮುಖ್ಯ. ಪ್ರಜೆ ಆದವನು ರಾಜಕಾರಣಿಯ ಅಭಿಮಾನಿಯಾಗಿರಬಹುದು, ಒಂದು ರಾಜಕೀಯ ಪಕ್ಷದ ಬೆಂಬಲಿಗಳಾಗಿರಬಹುದು ಆದರೆ ಯಾವ ಕಾರಣಕ್ಕೂ ರಾಜಕಾರಣಿಯ ಗುಲಾಮನಾಗಲೀ, ಐಟಿ ಸೆಲ್ ನಿರ್ದೇಶನದಲ್ಲಿ ನಡೆಯುವ ರೋಬೋಟ್ ಆಗಲೀ ಆಗಿರುವುದು ಸಾಧ್ಯವಿಲ್ಲ.
ದೇಶದ ಚುನಾವಣೆಯನ್ನು, ವಿಷಯಗಳನ್ನು, ಆದ್ಯತೆಗಳನ್ನು ಒಬ್ಬ ಹೊಣೆಯರಿತ ಪ್ರಜೆ ನೋಡುವುದಕ್ಕೂ ಐಟಿ ಸೆಲ್ ನಿರ್ದೇಶಿತ ‘ರೋಬೋ ಭಕ್ತ” ನೋಡುವುದಕ್ಕೂ ಅಜಗಜಾಂತರವಿದೆ. ಪ್ರಜೆಯಾದವನು ರಾಜಕಾರಣಿ ಅಥವಾ ರಾಜಕೀಯ ಪಕ್ಷ ತನ್ನದೇ ಆಗಿದ್ದರೂ, ಗೆದ್ದು ಬಂದು ಆಳ್ವಿಕೆ ನಡೆಸಿದ ವರ್ಷಗಳಲ್ಲಿ ದೇಶಕ್ಕೆ, ಜನರಿಗೆ ಏನು ಮಾಡಿದ್ದಾನೆ, ಮೊದಲು ನೀಡಿದ್ದ ಯಾವ ಆಶ್ವಾಸನೆಗಳನ್ನು ಯಾವ ರೀತಿ ಈಡೇರಿಸಿದ್ದಾನೆ ಎಂದು ಸ್ವತಂತ್ರ ಬುದ್ಧಿಯಿಂದ ಬಿಡಿಸಿ ನೋಡುವ ಪ್ರಜ್ಞಾವಂತಿಕೆ ಮೆರೆಯುತ್ತಾನೆ. ಆದರೆ ಐಟಿ ಸೆಲ್ ರೋಬೋಭಕ್ತ ತನ್ನನ್ನು ಹೇಗೆ ಪ್ರೋಗ್ರಾಂ ಮಾಡಲಾಗಿದೆಯೋ ಅದೇ ರೀತಿ ಟಾಸ್ಕ್ ನಿರ್ವಹಿಸುತ್ತಾನೆ.
ರಾಹುಲ್ ಗಾಂಧಿ ಬರುತ್ತಿದ್ದಂತೆ,” ಮೋದಿ, ಮೋದಿ, ಮೋದಿ, ವಂದೇ ಮಾತರಂ ..” ಎಂದು ಕೂಗಿಕೊಂಡರಲ್ಲ, ಥೇಟ್ ಹಾಗೆಯೇ!
Very good article. These techies are behaved like
remote controlled Robots, as if they don’t have brains inside their heads. Thank u for very good article.