“ರಾಜ್ಯದಲ್ಲಿ ಬಿಜೆಪಿ ಶಕ್ತಿ ಕುಗ್ಗಿಸುವ ತೀರ್ಮಾನ ಮಾಡಿದ್ದೇವೆ, ಲೋಕಸಭಾ ಚುನಾವಣೆಯನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ” – ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ
“ಸಮ್ಮಿಶ್ರ ಸರ್ಕಾರ, ಲೋಕಸಭಾ ಚುನಾವಣೆಯಲ್ಲಿ ರಾಜ್ಯವನ್ನು ಸಂಪೂರ್ಣವಾಗಿ ಬಿಜೆಪಿ ಮುಕ್ತ ಮಾಡಬೇಕು ಎಂದು ಪಣತೊಟ್ಟಿದೆ” –ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
• ಎಚ್.ಡಿ.ದೇವೇಗೌಡ-ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ, ಜಂಟಿ ಘೋಷಣೆ
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪರವಾಗಿ ಎರಡೂ ಪಕ್ಷಗಳೂ ಜಂಟಿಯಾಗಿ ಪ್ರಚಾರ ನಡೆಸಲಿದ್ದೇವೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಏರ್ಪಡಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಈ ವಿಷಯ ತಿಳಿಸಿದರು.
“ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಪರಿಣಾಮಕಾರಿಯಾಗಿ ಪ್ರಚಾರ ಮಾಡುತ್ತೇವೆ. ಈ ಬಗ್ಗೆ ಎರಡೂ ಪಕ್ಷಗಳು ಸುದೀರ್ಘ ಚರ್ಚೆ ನಡೆಸಿವೆ” ಎಂದು ತಿಳಿಸಿದರು.
“ಇದು ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ನಂತರ ತೆಗೆದುಕೊಂಡ ನಿರ್ಧಾರವಲ್ಲ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ವೇಳೆಯಲ್ಲೇ ಎರಡು ಪಕ್ಷಗಳ ನಡುವೆ ಆಗಿದ್ದ ಹೊಂದಾಣಿಕೆ ಇದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಒಟ್ಟಾಗಿ ಎದುರಿಸಿ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಬೇಕು ಎಂಬುದನ್ನು ಸಮ್ಮಿಶ್ರ ಸರ್ಕಾರ ಮೊದಲೇ ನಿರ್ಧಿಸಿತ್ತು ಎಂದು” ಅವರು ಸ್ಪಷ್ಟಪಡಿಸಿದರು.
‘ಬಿಜೆಪಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಮುಂದಾಗಿತ್ತು. ಆದರೆ ಇದು ಸಾಧ್ಯವಿಲ್ಲ. ಕೊಮುವಾದಿಗಳಿಗೆ ಜನತೆ ಬೆಂಬಲ ಕೊಡುವುದಿಲ್ಲ. ಸಮ್ಮಿಶ್ರ ಸರ್ಕಾರ, ಲೋಕಸಭಾ ಚುನಾವಣೆಯಲ್ಲಿ ರಾಜ್ಯವನ್ನು ಸಂಪೂರ್ಣವಾಗಿ ಬಿಜೆಪಿ ಮುಕ್ತ ಮಾಡಬೇಕು ಎಂದು ಪಣತೊಟ್ಟಿದೆ” ಎಂದರು.
“ಆದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಒಟ್ಟಾಗಿ ಲೋಕಸಭಾ ಚುನಾವಣೆ ಎದುರಿಸಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಸೀಟು ಹಂಚಿಕೆಯೂ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಘೋಷಣೆ ಆಗಲಿದೆ ಎಂದು” ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ಎಲ್ಲಾ ಜಿಲ್ಲಾ ಘಟಕದ ಅಧ್ಯಕ್ಷರು, ಇತರೆ ನಾಯಕರು, ಶಾಸಕರು, ಸಂಸದರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದ ಸಿದ್ದರಾಮಯ್ಯ “ಯಾವುದೇ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದರೂ ಎಲ್ಲವನ್ನೂ ಮರೆತು, ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಆದ್ಯತೆಯಾಗಬೇಕು ಎಂದು ತಿಳಿಸಿದ್ದೇವೆ” ಎಂದರು.
ರಾಜ್ಯ, ರಾಷ್ಟ್ರದ ಹಿತದೃಷ್ಟಿಯಿಂದ, ಸಂವಿಧಾನವನ್ನು ರಕ್ಷಿಸುವ ಸಲುವಾಗಿ ಈ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಹೈಕಮಾಂಡ್, ಪಕ್ಷ, ಜೆಡಿಎಸ್ ಏನು ತಿರ್ಮಾನಿಸಿದೆಯೋ ಅದನ್ನು ಒಪ್ಪಿಕೊಂಡು ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ನಮ್ಮ ರಾಜಕೀಯ ಎದುರಾಳಿಯನ್ನು ಸೋಲಿಸುವ ದೃಷ್ಟಿಯಿಂದಲು ಇದು ಅನಿವಾರ್ಯ -ಸಿದ್ದರಾಮಯ್ಯ
ಮಾರ್ಚ್ 31ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ ದೇವೇಗೌಡರು ಭಾಗವಹಿಸಲಿದ್ದಾರೆ. ಈ ಸಮಾವೇಶ ಐತಿಹಾಸಿಕ ಸಾರ್ವಜನಿಕ ಸಭೆಗೆ ಸಾಕ್ಷಿಯಾಗಲಿದೆ. ಇಲ್ಲಿಂದ ಕರ್ನಾಟಕದ ರಣಕಹಳೆ ಆರಂಭವಾಗುತ್ತದೆ. ನಂತರದ ಸಭೆ, ಸಮಾರಂಭಗಳನ್ನು ಜಂಟಿಯಾಗಿ ನಡೆಸುತ್ತೇವೆ – ಸಿದ್ದರಾಮಯ್ಯ
ನಂತರ ಮಾತನಾಡಿದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ರಾಜ್ಯದಲ್ಲಿ ಬಿಜೆಪಿ ಶಕ್ತಿ ಕುಗ್ಗಿಸುವ ತೀರ್ಮಾನ ಮಾಡಿದ್ದೇವೆ, ಲೋಕಸಭಾ ಚುನಾವಣೆಯನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದರು.
“ನಮಗೆ ಬಹಳ ಕಡಿಮೆ ಸಮಯ ಇದೆ. ಇಡೀ ದೇಶದ ಚುನಾವಣೆ ಮೇ ವರೆಗೂ ನಡೆದರೂ ನಮ್ಮದು ಏಪ್ರಿಲ್ ನಲ್ಲೇ ಮುಗಿಯುತ್ತದೆ” ಎಂದ ದೇವೇಗೌಡರು, “ಮೋದಿಯವರ ಮಾತುಗಳು ನಮಗೆ ಪ್ರಚೋದನೆ ಉಂಟು ಮಾಡುತ್ತದೆ. ಮಹಾಘಟನಬಂಧನ್ ಬಗ್ಗೆ ಮೋದಿ ಬಹಳ ಲಘುವಾಗಿ ಮಾತನಾಡುತ್ತಾರೆ. ಆದರೆ ಈಗಲೂ ಬಿಜೆಪಿ ಕೆಲವು ರಾಜ್ಯಗಳಲ್ಲಿ ನಡೆಸುತ್ತಿರುವುದು ಮಹಾಘಟಬಂಧನ್ ಸರ್ಕಾರವನ್ನೇ” ಎಂದು ಲೇವಡಿ ಮಾಡಿದರು.

“ನಾಮಾಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದ್ದೇವೆ, ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾರ್ಗದರ್ಶನಲ್ಲಿ ಎಲ್ಲ ಮುಖಂಡರು ಒಟ್ಟಾಗುತ್ತೇವೆ. ಇದು ರಾಷ್ಟ್ರಕ್ಕೆ ಮಾತ್ರವಲ್ಲ, ವಿಶ್ವಕ್ಕೆ ಕೊಟ್ಟ ಮಹಾನ್ ಸಂದೇಶ” ಎಂದು ಮಾಜಿ ಪ್ರಧಾನಿ ಹೇಳಿದರು.
“ರಾಜ್ಯದಲ್ಲಿ ನಮ್ಮ 12 ಸ್ಥಾನ ಉಳಿಸಿಕೊಳ್ಳುವ ಜೊತೆಗೆ, ಬಿಜೆಪಿಯ 16 ಸ್ಥಾನಗಳನ್ನು ಕಸಿದುಕೊಳ್ಳಲೂ ನಮಗೆ ಸಾಧ್ಯವಿದೆ. ಆ ಧೃಡ ನಂಬಿಕೆ ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಇದೆ. ಬಿಜೆಪಿ ಎರಡಂಕಿ ಸಹ ಮುಟ್ಟಲು ಬಿಡಲ್ಲ” -ಎಚ್.ಡಿ.ದೇವೇಗೌಡ
ರಾಹುಲ್ ಗಾಂಧಿ ಅವರು ನಿನ್ನೆ ಮಾನ್ಯತಾ ಟೆಕ್ ಪಾರ್ಕ್ ಗೆ ಭೇಟಿ ನೀಡಿದ್ದಾಗ, ಕೆಲವರು ಮೋದಿ ಪರ ಘೋಷಣೆ ಕೂಗಿ ಅವಮಾನಿಸಿದ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, “ಒಂದು ಪಕ್ಷದ ಕಾರ್ಯಕ್ರಮ ನಡೆಯುವಾಗ ಈ ರೀತಿ ದುರ್ವರ್ತನೆ ತೋರುವುದು ಸಭ್ಯತೆಯಲ್ಲ. ಅಮಿತ್ ಷಾ ಅವರು ತಮ್ಮ ಕಾರ್ಯಕರ್ತರಿಗೆ ಮೊದಲು ಸಭ್ಯತೆಯನ್ನು ಕಲಿಸಬೇಕಿದೆ “ಎಂದು ವೇಳೆ ಟೀಕಿಸಿದರು.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯದರ್ಶಿ ಈಶ್ವರ ಖಂಡ್ರೆ ಉಪಸ್ಥಿತರಿದ್ದರು. ಉಪಮುಖ್ಯಮಂತ್ರಿ ಡಾ.ಕೆ ಪರಮೇಶ್ವರ್ ಗೈರು ಹಾಜರಾಗಿದ್ದರು.
ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರು ಸುದ್ದಿಗೋಷ್ಠಿಗೆ ಗೈರುಹಾಜರಾಗಿದ್ದರು ಈ ಕುರಿತು ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ. “ಕುಟುಂಬದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮವಿದ್ದ ಕಾರಣ ಇಂದು ಕಾಂಗ್ರೆಸ್- ಜೆಡಿಎಸ್ ಪಕ್ಷದ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.ಮೈತ್ರಿ ಪಕ್ಷದ ಹಿರಿಯ ನಾಯಕರೆಲ್ಲಾ ಸೇರಿ ಚುನಾವಣೆಯ ಸಂಬಂಧ ಹಲವು ಸಭೆ ನಡೆಸಿ ರಣತಂತ್ರ ರೂಪಿಸಿದ್ದೇವೆ. ಅಂತೆಯೇ ಜಂಟಿಯಾಗಿ ಚುನಾವಣೆಗೆ ದುಡಿಯಲಿದ್ದೇವೆ” ಎಂದು ಡಿಸಿಎಂ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಕುಟುಂಬದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮವಿದ್ದ ಕಾರಣ ಇಂದು ಕಾಂಗ್ರೆಸ್- ಜೆಡಿಎಸ್ ಪಕ್ಷದ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.ಮೈತ್ರಿ ಪಕ್ಷದ ಹಿರಿಯ ನಾಯಕರೆಲ್ಲಾ ಸೇರಿ ಚುನಾವಣೆಯ ಸಂಬಂಧ ಹಲವು ಸಭೆ ನಡೆಸಿ ರಣತಂತ್ರ ರೂಪಿಸಿದ್ದೇವೆ. ಅಂತೆಯೇ ಜಂಟಿಯಾಗಿ ಚುನಾವಣೆಗೆ ದುಡಿಯಲಿದ್ದೇವೆ.#ಕರ್ನಾಟಕದ_ಪ್ರಗತಿಗಾಗಿ_ಮೈತ್ರಿ
— Dr. G Parameshwara (@DrParameshwara) March 19, 2019
-ಟ್ರೂಥ್ ಇಂಡಿಯಾ ಕನ್ನಡ