ಚುನಾವಣೆ ಗೆಲ್ಲಲು ಯಾವುದಕ್ಕೂ ಸಿದ್ದವಾಗಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ಹೆಸರಿನ ಹಿಂದೆ ‘ಚೌಕಿದಾರ್’ ಎಂದು ಹಾಕಿಕೊಂಡಿದ್ದಾರೆ. ಆಡಳಿತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೂಡಾ ಚೌಕಿದಾರ್ ಆಗಿದ್ದಾರೆ. ಪ್ರಧಾನಿ ಮೋದಿ ಭಕ್ತರು ಮತ್ತು ಬಿಜೆಪಿ ಕಾರ್ಯಕರ್ತರೆಲ್ಲರೂ ತಮ್ ತಮ್ ಹೆಸರಿನ ಹಿಂದೆ ಚೌಕಿದಾರ್ ಸೇರಿಸಿಕೊಂಡಿದ್ದಾರೆ. ಇದೀಗ ಇಡೀ ದೇಶವೇ ಚೌಕಿದಾರರಿಂದ ತುಂಬಿ ತುಳುಕುತ್ತಿದೆ. ಎಲ್ಲಿ ನೋಡಿದರೂ ಚೌಕಿದಾರರದೇ ಸುದ್ದಿ. ಇತ್ತ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ‘ಚೌಕಿದಾರನೇ ಚೋರ’ ಎಂದು ಆರೋಪ ಮಾಡುತ್ತಿದ್ದಾರೆ.
2014ರ ಚುನಾವಣೆಯಲ್ಲಿ ‘ಪ್ರಧಾನ ಸೇವಕ’ನಾಗಿದ್ದ ಮೋದಿ ಇದ್ದಕ್ಕಿದ್ದಂತೆ ಚೌಕಿದಾರನಾಗಿ ಪರಿವರ್ತನೆಗೊಂಡಿದ್ದಾರೆ. ದೇಶದಲ್ಲಿರುವ ತಮ್ಮ ಭಕ್ತರನ್ನು ಚೌಕಿದಾರರನ್ನಾಗಿ ಮಾಡಿದ್ದಾರೆ. ರಾಹುಲ್ ಗಾಂಧಿ ಹೇಳಿಕೆ ಪ್ರಕಾರ ನೋಡಿದರೆ, ಸದ್ಯಕ್ಕೆ ‘ಸ್ವಘೋಷಿತ ಚೌಕಿದಾರ’ರೆಲ್ಲರೂ ಕಳ್ಳರೇ!! ಏಕೆಂದರೆ ರಾಹುಲ್ ಗಾಂಧಿ ಆರೋಪದ ಪ್ರಕಾರ, ಇವೆರಲ್ಲರೂ ಕಳ್ಳತನದ(ಭ್ರಷ್ಟಾಚಾರದ) ಆರೋಪ ತಪ್ಪಿಸಿಕೊಳ್ಳಲೆಂದೇ ಚೌಕಿದಾರರಾಗಿದ್ದಾರೆ.
ಆದರೆ, ನಿಜವಾದ ಚೌಕಿದಾರ ಅಂದರೆ ಕಾವಲುಗಾರ ಅಥವಾ ಸೆಕ್ಯುರಿಟಿ ಗಾರ್ಡ್ ಕಳ್ಳನಲ್ಲ. ಮನೆ, ಆಫೀಸ್, ಫ್ಯಾಕ್ಟರಿ, ಗೋದಾಮು, ಟೋಲ್, ಬಸ್, ರೈಲು, ಮೆಟ್ರೋ ನಿಲ್ದಾಣ ಮತ್ತಿತರ ಸ್ಥಳಗಳಲ್ಲಿ ಜನರಿಗೆ ಸುರಕ್ಷತೆ ನೀಡುವ ಮತ್ತು ತನ್ನ ಪರಿಸರದಲ್ಲಿರುವ ವಸ್ತುಗಳನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವ ಸಜ್ಜನನಾತ. ಸೆಕ್ಯುರಿಟಿ ಗಾರ್ಡ್ ಮನಸ್ಸಿಗೆ ಸುರಕ್ಷಿತ ಭಾವ ತಂದುಕೊಡುವ ಕಾವಲುಗಾರ. ಖಾಸಗಿ ಪ್ರದೇಶವಾಗಲೀ ಸಾರ್ವಜನಿಕ ಪ್ರದೇಶವಾಗಲೀ ಸುರಕ್ಷಿತವಾಗಿದೆ ಎಂದರೆ ಅದರ ಹೆಗ್ಗಳಿಕೆ ಈ ಕಾವಲುಗಾರನಿಗೆ ಸೇರಬೇಕು.
ಚೌಕಿದಾರನ ಅಥವಾ ಕಾವಲುಗಾರ ಹೆಸರಿನಲ್ಲಿ ಸೆಕ್ಯುರಿಟಿ ಇದೆ. ದುರದೃಷ್ಟವಶಾತ್ ಸೆಕ್ಯುರಿಟಿ ಗಾರ್ಡ್ ಗಳ ಬದುಕಿಗೆ ಸೆಕ್ಯುರಿಟಿ ಇಲ್ಲ. ಅವರ ಬದುಕಿಗೆ ಭವಿಷ್ಯವೂ ಇಲ್ಲ. ನರೇಂದ್ರಮೋದಿ ಅಮಿತ್ ಶಾ ಮತ್ತು ಅವರ ಹಿಂಬಾಲಕರು ಸೆಕ್ಯುರಿಟಿ ಗಾರ್ಡ್ ಗಳ ಹೆಸರನ್ನು ರಾಜಕೀಯಕ್ಕಾಗಿ ಬಳಸಿ, ಕಳಂಕ ತರುತ್ತಿದ್ದಾರೆ. ಇದುವರೆಗೆ ನೆಮ್ಮದಿಯಾಗಿದ್ದ ಸೆಕ್ಯುರಿಟಿ ಗಾರ್ಡ್ ಗಳು ತಮ್ಮದಲ್ಲದ ತಪ್ಪಿಗೆ, ಪ್ರಧಾನಿ ನರೇಂದ್ರ ಮೋದಿ ಮಾಡಿದ ತಪ್ಪಿಗೆ ಕಳ್ಳನೆಂಬ ಕಳಂಕ ಹೊರಹೇಕಿದೆ.
ಇತ್ತ ನರೇಂದ್ರ ಮೋದಿ, ಅಮಿತ್ ಷಾ ಮತ್ತವರ ಹಿಂ’ಬಾಲ’ಕರು “ನಾನೂ ಚೌಕಿದಾರ” ಎಂದು ದೇಶವ್ಯಾಪಿ ಘೋಷಣೆ ಮಾಡುತ್ತಿದ್ದಾರೆ. ಅತ್ತ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಮತ್ತವರ ಕಾರ್ಯಕರ್ತರು ‘ಚೌಕಿದಾರನೇ ಕಳ್ಳ’ ಎಂದು ಪ್ರತಿ ಘೋಷಣೆ ಹಾಕುತ್ತಿದ್ದಾರೆ. ಈಗ ಹೇಳಿ, ವಾಸ್ತವವಾಗಿ ಕಳಂಕ ಎದುರಿಸುತ್ತಿರುವುದು ದೇಶದಾದ್ಯಂತ ಇರುವ ಲಕ್ಷಾಂತರ ‘ಸೆಕ್ಯುರಿಟಿ ಗಾರ್ಡ್’ ಗಳಲ್ಲವೇ?
ಕಾವಲುಗಾರರ ಸಂಕಷ್ಟ ರಾಜಕೀಯ ಚೌಕಿದಾರರಿಗೆ ಗೊತ್ತಿಲ್ಲ!
ಈ ದೇಶದಲ್ಲಿ ಕೂಲಿ ಕಾರ್ಮಿಕರಷ್ಟೇ ಶೋಷಣೆಗೆ ಒಳಗಾಗುತ್ತಿರುವ ಶ್ರಮಿಕ ವರ್ಗ ಎಂದರೆ ಸೆಕ್ಯುರಿಟಿ ಗಾರ್ಡ್ ಗಳು. ಅತ್ಯಂತ ಕಡಿಮೆ ವೇತನ. ದಿನದಲ್ಲಿ 12-18 ಗಂಟೆಗಳಷ್ಟು ಕೆಲಸ. ಕೆಲವು ಸಂದರ್ಭಗಳಲ್ಲಿ 24 ಗಂಟೆಯೂ ದುಡಿಯಬೇಕು. ಇಷ್ಟಾದರೂ ಕಡಿಮೆ ವೇತನ. ಆದರೆ ಕಾರ್ಮಿಕರಿಗೆ ದಕ್ಕಬೇಕಾದ ಯಾವುದೇ ಸೌಲಭ್ಯಗಳಿಲ್ಲ. ಸೆಕ್ಯುರಿಟಿ ಗಾರ್ಡ್ ಗಳನ್ನು ಸರಬರಾಜು ಮಾಡುವ ಏಜೆನ್ಸಿಗಳು ನಾಯಿಕೊಡೆಗಳಂತೆ ಬೆಳೆದಿವೆ. ಈ ಏಜೆನ್ಸಿಗಳೂ ಕಮಿಷನ್ ಪಡೆದು ಶೋಷಣೆ ಮಾಡುತ್ತಿವೆ.
ಸೆಕ್ಯುರಿಟಿ ಗಾರ್ಡ್ ಗಳಿಗೆ ಏಕರೂಪದ ವೇತನ ಭತ್ಯೆಗಳಿಲ್ಲ. ದೇಶದಲ್ಲಿ ಸಂಘಟಿತ ವಲಯ ಮತ್ತು ಅಸಂಘಟಿತ ವಲಯದಲ್ಲಿ ಹರಡಿಕೊಂಡಿರುವ ಸೆಕ್ಯುರಿಟಿ ಗಾರ್ಡ್ ಗಳ ಸಂಖ್ಯೆ ಸುಮಾರು 75 ಲಕ್ಷ ಎಂದು ಅಂದಾಜು ಮಾಡಲಾಗಿದೆ. ಆಯಾ ರಾಜ್ಯಗಳು ಕನಿಷ್ಠ ವೇತನ ನಿಗದಿ ಮಾಡುವಾಗ ಸೆಕ್ಯುರಿಟಿ ಗಾರ್ಡ್ ಗಳಿಗೂ ಕನಿಷ್ಠ ವೇತನ ನಿಗದಿ ಮಾಡುತ್ತವೆ. ಕರ್ನಾಟಕದಲ್ಲೂ ಸೆಕ್ಯುರಿಟಿ ಗಾರ್ಡ್ ಗಳಿಗೆ ಕನಿಷ್ಠ ವೇತನ ನಿಗದಿ ಮಾಡಲಾಗಿದೆ. (Security Agency – Notification No:- KAE 123 LMW 2015 dated 29-02-2016) ಕನಿಷ್ಠ ವೇತನದ ಪ್ರಕಾರ ವೇತನ ಪಾವತಿಸಿದರೆ ಮಾತ್ರ ಈ ಕಾವಲುಗಾರರು ಐದಂಕಿ ಸಂಬಳ (ತಿಂಗಳಿಗೆ 10,000 ಕ್ಕಿಂತ ಹೆಚ್ಚು) ಪಡೆಯಲು ಸಾಧ್ಯ. ಕರ್ನಾಟಕ ಸರ್ಕಾರದ ಅಧಿಸೂಚನೆ ಪ್ರಕಾರ, ಸೆಕ್ಯುರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುವವರನ್ನು ನಾಲ್ಕು ಹಂತದಲ್ಲಿ ವರ್ಗೀಕರಿಸಿ, ವಲಯ-1 ಮತ್ತು ವಲಯ-2 ಎಂದು ನಿಗದಿ ಮಾಡಲಾಗಿದೆ.
ಮೊದಲ ವರ್ಗದಲ್ಲಿ ಸೆಕ್ಯುರಿಟಿ ಆಫೀಸರ್ ಮತ್ತು ಫೀಲ್ಡ್ ಆಫೀಸರ್. ಕೊನೆ ಹಂತದಲ್ಲಿ ಸೆಕ್ಯುರಿಟಿ ಗಾರ್ಡ್ ಗಳು ಬರುತ್ತಾರೆ. ಇವರ ವೇತನ ವಿವರ ಕೆಳಕಂಡಂತೆ ಇದೆ.
Security officer , Field Officer | Basic | 475.38 | 12360.00 | 465.38 | 12100.00 | |||||||||||
VDA | 61.20 | 1591.20 | 61.20 | 1591.20 | ||||||||||||
Total | 536.58 | 13951.20 | 526.58 | 13691.20 | ||||||||||||
2. | Security Inspector, security supervisor, ASO | Basic | 437.38 | 11372.00 | 423.38 | 11008.00 | ||||||||||
VDA | 61.20 | 1591.20 | 61.20 | 1591.20 | ||||||||||||
Total | 498.58 | 12963.20 | 484.58 | 12599.20 | ||||||||||||
3. | Head guard, Intelligence & Fire Fighting | Basic | 426.38 | 11086.00 | 413.38 | 10748.00 | ||||||||||
VDA | 61.20 | 1591.20 | 61.20 | 1591.20 | ||||||||||||
Total | 487.58 | 12677.20 | 474.58 | 12339.20 | ||||||||||||
4. | Security guard, Lady guard,/ lady searcher | Basic | 398.00 | 10350.00 | 385.00 | 10012.00 | ||||||||||
VDA | 61.20 | 1591.20 | 61.20 | 1591.20 | ||||||||||||
Total | 459.20 | 11941.20 | 446.20 | 11603.20 |
ವಾಸ್ತವಿಕ ಸಮಸ್ಯೆ ಏನೆಂದರೆ ಸೆಕ್ಯುರಿಟಿ ಗಾರ್ಡ್ ಗಳ ನೇರ ನೇಮಕಾತಿ ಪ್ರಮಾಣ ತೀರಾ ಅತ್ಯಲ್ಪ. ಅಂಕಿ ಅಂಶಗಳ ಪ್ರಕಾರ, ಶೇ.95-96 ರಷ್ಟು ಸೆಕ್ಯುರಿಟಿ ಗಾರ್ಡ್ ಗಳನ್ನು ಏಜೆನ್ಸಿಗಳ ಮೂಲಕವೇ ನೇಮಕ ಮಾಡಿಕೊಳ್ಳಲಾಗುತ್ತದೆ. ಸೆಕ್ಯುರಿಟಿ ಗಾರ್ಡ್ ಗಳ ಸೇವೆ ಪಡೆಯುವ ಸಂಸ್ಥೆಗಳು ಕನಿಷ್ಠ ವೇತನ ನಿಯಮಾನುಸಾರ ವೇತನ ಪಾವತಿ ಮಾಡಿದರೂ, ಅದು ನೇರವಾಗಿ ಸೆಕ್ಯುರಿಟಿ ಗಾರ್ಡ್ ಗಳಿಗೆ ಪಾವತಿಯಾಗುವುದಿಲ್ಲ. ಏಜೆನ್ಸಿಗೆ ಪಾವತಿಯಾಗುತ್ತದೆ. ಸೆಕ್ಯುರಿಟಿ ಏಜೆನ್ಸಿಗಳು ಈ ವೇತನದಲ್ಲಿ ತಮ್ಮ ಕಮಿಷನ್ ಕಡಿತ ಮಾಡಿಕೊಂಡು ಸೆಕ್ಯುರಿಟಿ ಗಾರ್ಡ್ ಗಳಿಗೆ ವೇತನ ಪಾವತಿಸುತ್ತವೆ. ಈ ಕಮಿಷನ್ ಶೇ.10-25ರಷ್ಟೂ ಇದೆ. ಹೀಗಾಗಿ ಯಾವುದೇ ಸೆಕ್ಯುರಿಟಿ ಗಾರ್ಡ್ ಐದಂಕಿ ಸಂಬಳ ಪಡೆಯುವುದು ಸಾಧ್ಯವೇ ಇಲ್ಲವಾಗಿದೆ. ಕೆಲವು ಏಜೆನ್ಸಿಗಳು ಹೆಚ್ಚಿನ ಸಂಬಳ, ಪಿಎಫ್, ಇಎಸ್ಐ, ವಸತಿ ಮತ್ತಿತರ ಸೌಲಭ್ಯ ಒದಗಿಸುವುದಾಗಿ ಜಾಹಿರಾತು ನೀಡುತ್ತವೆ. ನೇಮಕ ಮಾಡಿಕೊಳ್ಳುವಾಗ ಉದ್ಯೋಗಾಕಾಂಕ್ಷಿಗಳ ಗಮನಕ್ಕೆ ಬಾರದಂತೆ ಹಲವು ನಿಯಮಗಳನ್ನು ಸೇರಿಸಿ ವಂಚಿಸುತ್ತವೆ.
ಸೆಕ್ಯುರಿಟಿ ಗಾರ್ಡ್ ಆಗಿ ನೇಮಕಗೊಂಡವರು, ಕಾವಲುಗಾರನ ಕೆಲಸದ ಜತೆಗೆ ಮನೆಕೆಲಸವನ್ನೂ ಅಥವಾ ಕಚೇರಿಯ ಇತರ ಕೆಲಸವನ್ನು ಮಾಡಬೇಕಾಗುತ್ತದೆ. ಇತರ ಕೆಲಸಗಳಿಗೆ ಹೆಚ್ಚಿನ ವೇತನ ಇರುವುದಿಲ್ಲ. ಅಲ್ಲದೇ 8 ಗಂಟೆ ಮೀರಿದ ನಂತರ ಪ್ರತಿಗಂಟೆಗೂ ಹೆಚ್ಚುವರಿ ವೇತನ ನೀಡಬೇಕೆಂಬ ನಿಯಮವನ್ನು ಯಾವ ಏಜೆನ್ಸಿಗಳೂ ಪಾಲಿಸುವುದಿಲ್ಲ. ಕಾರ್ಮಿಕ ಇಲಾಖೆ ಸೇರಿದಂತೆ ಯಾವ ಇಲಾಖೆಯೂ ಸೆಕ್ಯುರಿಟಿ ಗಾರ್ಡ್ ಗಳ ಕಷ್ಟ ಸುಖ ಕೇಳುವುದಿಲ್ಲ. ಅವರ ಶೋಷಣೆ ತಪ್ಪಿಸಲು ಪ್ರಯತ್ನಿಸುವುದಿಲ್ಲ. ಸೆಕ್ಯುರಿಟಿ ಗಾರ್ಡ್ ಗಳ ಶೋಷಣೆ ತಪ್ಪಿಸಲು ಖಾಸಗಿ ಸುರಕ್ಷತಾ ಸಂಸ್ಥೆಗಳ ನಿಯಂತ್ರಣ ಕಾಯ್ದೆ 2005 (ಪ್ರೈವೆಟ್ ಸೆಕ್ಯುರಿಟಿ ಏಜೆನ್ಸಿಸ್ ರೆಗ್ಯುಲೆಷನ್ ಆ್ಯಕ್ಟ್– ಪಿಎಸ್ಎಆರ್ ಎ) ಇದ್ದರೂ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿಲ್ಲ.
ವೆಚ್ಚ ಕಡಿತ ಮಾಡಲು ಮುಂದಾಗಿರುವ ಕಾರ್ಪೊರೆಟ್ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು ಸಹ ಏಜೆನ್ಸಿಗಳ ಮೂಲಕವೇ ಸೆಕ್ಯುರಿಟಿ ಗಾರ್ಡ್ ಗಳನ್ನು ನೇಮಕ ಮಾಡಿಕೊಳ್ಳುವುದರಿಂದ ಉತ್ತಮ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೂ ವೇತನ ಮಾತ್ರ ಉತ್ತಮವಾಗಿರುವುದಿಲ್ಲ.
ಎಟಿಎಂ, ಖಾಸಗಿ ವಸತಿ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಸೆಕ್ಯುರಿಟಿ ಗಾರ್ಡ್ ಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಇದೆ. ಹೆಚ್ಚಿನ ಅವಧಿಯವರೆಗೆ ದುಡಿಸಿಕೊಳ್ಳುವುನ್ನು ಪಿಎಸ್ಎಆರ್ಎ ಕಾಯ್ದೆ ನಿಷೇಧಿಸುತ್ತದೆ. ಆದರೂ ಅದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತಿಲ್ಲ. ಬಹುತೇಕ ಏಜೆನ್ಸಿಗಳು ಫಿಕ್ಸೆಡ್ ವೇತನ ನೀಡುತ್ತವೆ. ಅಂದರೆ, ಪಿಎಫ್, ಇಎಸ್ಐ, ಮತ್ತಿತರ ಸೌಲಭ್ಯಗಳನ್ನು ನೀಡುವುದಿಲ್ಲ. ಫಿಕ್ಸೆಡ್ ವೇತನಕ್ಕೆ ಕೆಲಸ ನಿರ್ವಹಿಸಲು ಒಪ್ಪಿರುವುದಾಗಿ ಮುಂಚೆಯೇ ಸಹಿ ಪಡೆದಿರುತ್ತವೆ. ಹೀಗಾಗಿ ಕಡಮೆ ವೇತನಕ್ಕೆ ಯಾವ ಸೌಲಭ್ಯವೂ ಇಲ್ಲದೇ ಸೆಕ್ಯುರಿಟಿ ಗಾರ್ಡ್ ಗಳು ದುಡಿಯುವ ಅನಿವಾರ್ಯ ಪರಿಸ್ಥಿತಿ ಇದೆ.
ಅಯ್ಯಾ ನರೇಂದ್ರ ಮೋದಿ, ನಿಮಗೆ ‘ಚೌಕಿದಾರ್’ ಎಂಬ ಹೆಸರು ಹೆಚ್ಚು ಆಕರ್ಷಕವಾಗಿ ಕಾಣಬಹುದು. ಅದರಿಂದ ರಾಜಕೀಯ ಲಾಭವೂ ದಕ್ಕಬಹುದು. ಆದರೆ, ಒಮ್ಮೆಯಾದರೂ ಚೌಕಿದಾರರ ಮನದ ಮಾತನ್ನು ಆಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ. ಚೌಕಿದಾರರ ಮನದ ಮಾತು ಆಲಿಸಿದರೆ ನಿಮಗೆ ಲಕ್ಷಾಂತರ ಚೌಕಿದಾರರ ಸಂಕಷ್ಟಗಳು ಅರ್ಥವಾಗಬಹುದು!
ಟ್ರೂಥ್ ಇಂಡಿಯಾ ಕನ್ನಡ