ನವದೆಹಲಿ: “ಆಸಿಡ್ ದಾಳಿ ನಡೆಸುವುದು ಅನಾಗರಿಕತೆ ಮತ್ತು ಹೃದಯಹೀನ ಅಪರಾಧ, ಯಾವ ಕ್ಷಮೆಗೂ ಅರ್ಹವಲ್ಲ” ಎಂದು ಸುಪ್ರೀಂ ಕೋರ್ಟ್ ಸೋಮವಾರ ಚಾಟಿ ಬೀಸಿದೆ.
2004ರಲ್ಲಿ19 ವರ್ಷದ ಯುವತಿಯೊಬ್ಬಳ ಮೇಲೆ ಆಸಿಡ್ ದಾಳಿ ನಡೆಸಿ, ಈಗಾಗಲೇ ಐದು ವರ್ಷದ ಕಾರಾಗೃಹ ವಾಸ ಅನುಭವಿಸಿದ್ದ ಇಬ್ಬರು ಆರೋಪಿಗಳು ಸಂತ್ರಸ್ತೆಗೆ ಹೆಚ್ಚುವರಿಯಾಗಿ 1.5 ಲಕ್ಷ ರುಪಾಯಿ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ತಾಕೀತು ಮಾಡಿದೆ.
ಇದರ ಜೊತೆಗೆ ಹಿಮಾಚಲ ಪ್ರದೇಶ ಸರ್ಕಾರ ಸಹ ಸಂತ್ರಸ್ತರ ಪರಿಹಾರ ನಿಧಿಯಿಂದ ಸಂತ್ರಸ್ತೆಗೆ ಪರಿಹಾರ ನೀಡಬೇಕೆಂದು ಕೋರ್ಟ್ ಹೇಳಿದೆ.
ಇಬ್ಬರು ಆರೋಪಿಗಳು ಎಸಗಿರುವ ಅನಾಗರಿಕ, ಹೃದಯಹೀನ ಕೃತ್ಯದಿಂದ ಸಂತ್ರಸ್ತೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿರುತ್ತಾರೆ. ಆಕೆ ಅನುಭವಿಸಿರುವ ನೋವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎ. ಎಂ ಖನ್ವೀಲ್ಕರ್ ಮತ್ತು ಅಜಯ್ ರಸ್ತೊಗಿ ಅವರ ನ್ಯಾಯಪೀಠ ತಿಳಿಸಿದೆ.
“ಇಂತಹ ನೀಚ ಅಪರಾಧ ನಡೆಸುವವರು ಕನಿಕರ, ಕ್ಷಮೆಗೆ ಅರ್ಹರಲ್ಲ. ಸಂತ್ರಸ್ತೆ ಭಾವನಾತ್ಮಕವಾಗಿ ಸಾಕಷ್ಟು ನೊಂದಿರುತ್ತಾರೆ. ಖಂಡಿತವಾಗಿಯು ಅವರ ನೋವು, ಸಂಕಷ್ಟಕ್ಕೆ ಪ್ರತಿಯಾಗಿ ಆರೋಪಿಗಳಿಗೆ ಜೈಲು ಶಿಕ್ಷೆ ಅಥವಾ ಯಾವುದೇ ರೀತಿಯ ಪರಿಹಾರದ ಮೂಲಕ ಸಮಾಧಾನಪಡಿಸಲು ಸಾಧ್ಯವಿಲ್ಲ” ಎಂದು ಕೋರ್ಟ್ ಹೇಳಿತು.
ವಿಚಾರಣಾ ನ್ಯಾಯಾಲಯ ಆರೋಪಿಗಳಿಗೆ ವಿಧಿಸಿದ್ದ 10 ವರ್ಷದ ಜೈಲು ಶಿಕ್ಷೆಯನ್ನು5 ವರ್ಷಕ್ಕೆ ಕಡಿತ ಗೊಳಿಸಿ ಹಿಮಾಚಲ ಪ್ರದೇಶ ಹೈ ಕೋರ್ಟ್ 2008ರ ಮಾರ್ಚ್ 24ರಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಹಿಮಾಚಲ ಪ್ರದೇಶ ರಾಜ್ಯ ಸರ್ಕಾರ ಅಪೆಕ್ಸ್ ಕೋರ್ಟ್ ಮೆಟ್ಟಿಲೇರಿತ್ತು.
ಈ ಅರ್ಜಿಯ ವಿಚಾರಣೆ ವೇಳೆ ಅಪೆಕ್ಸ್ ಕೋರ್ಟ್, “ಹೈಕೋರ್ಟ್ ನೀಡಿರುವ ತೀರ್ಪಿಗೆ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಇಬ್ಬರು ಆರೋಪಿಗಳು ತಲಾ 1.5ಲಕ್ಷ ರುಪಾಯಿಗಳನ್ನು ಸಂತ್ರಸ್ತೆಗೆ ನೀಡಬೇಕು” ಎಂದು ಹೆಚ್ಚುವರಿ ದಂಡ ವಿಧಿಸಿ ನ್ಯಾಯಪೀಠ ತೀರ್ಪು ನೀಡಿದೆ.
‘2004ರ ಜುಲೈ 12ರಂದು ಸಂತ್ರಸ್ತೆ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುವಾಗ ಇಬ್ಬರು ಯುವಕರು ಬಂದು ಏಕಾಏಕಿ ಆಸಿಡ್ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು’ ಎಂದು ಸಂತ್ರಸ್ತೆ ಕೋರ್ಟ್ ಗೆ ತಿಳಿಸಿದ್ದಾರೆ.
ಆಸಿಡ್ ದಾಳಿಯಿಂದಾಗಿ ಸಂತ್ರಸ್ತೆಯ ದೇಹದ ಶೇಕಡಾ 16ರಷ್ಟು ಭಾಗ ಸುಟ್ಟು ಹೋಗಿತ್ತು. ಇಬ್ಬರು ಆರೋಪಿಗಳ ವಿರುದ್ಧ ಪೊಲೀಸರು ಆರೋಪಿ ಪಟ್ಟಿ ಸಲ್ಲಿಸಿದ್ದು, ವಿಚಾರಣಾ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 5 ಸಾವಿರ ದಂಡ ವಿಧಿಸಿತ್ತು.
ನಂತರ ಆರೋಪಿಗಳು ಈ ತೀರ್ಪು ಪ್ರಶ್ನಿಸಿ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಹೈ ಕೋರ್ಟ್ ಅವರ ಶಿಕ್ಷೆಯ ಅವಧಿಯನ್ನು ಐದು ವರ್ಷಕ್ಕೆ ಕಡಿತಗೊಳಿಸಿ 25 ಸಾವಿರ ರುಪಾಯಿಗಳ ದಂಡ ಪಾವತಿಸಬೇಕೆಂದು ತೀರ್ಪು ನೀಡಿತ್ತು.