ಒಂದು ಕಡೆ ದೇಶದಾದ್ಯಂತ ಪ್ರಧಾನಿ ಮೋದಿಯವರ ’ಮೇ ಭೀ ಚೌಕಿದಾರ್’ ಘೋಷಣೆ ಮತ್ತು ಅದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿಯವರ ’ಚೌಕಿದಾರ್ ಚೋರ್ ಹೈ’ ಘೋಷಣೆಗಳು ಸದ್ದು ಮಾಡುತ್ತಿದ್ದರೆ, ಮೋದಿಯವರ ಸ್ವಕ್ಷೇತ್ರ ವಾರಣಾಸಿಯ ಗಂಗಾ ಒಡಲಿನಲ್ಲಿ ’ಬೆಹನ್ ಪ್ರಿಯಾಂಕಾ’ ಬಿರುಗಾಳಿ ಆರಂಭವಾಗಿದೆ.
ಉತ್ತರಪ್ರದೇಶದ ಹೊಣೆಗಾರಿಕೆಯೊಂದಿಗೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕಾರದ ಮೂಲಕ ಸಕ್ರಿಯ ರಾಜಕಾರಣಕ್ಕೆ ಅಡಿಇಟ್ಟ ಬಳಿಕ ಪ್ರಿಯಾಂಕಾ ಗಾಂಧಿ, ಉತ್ತರಪ್ರದೇಶ ಮತ್ತು ಗುಜರಾತಿನ ಮೋದಿಯವರ ಭದ್ರಕೋಟೆಗಳಲ್ಲೇ ಅವರ ಆಡಳಿತ ಮತ್ತು ಸಾಧನೆಗಳ ಬಗ್ಗೆ ವಾಗ್ದಾಳಿ ಮಾಡಿದ ಬಳಿಕ ಇದೀಗ ಅವರ ಸ್ವಕ್ಷೇತ್ರ ವಾರಣಾಸಿಯಲ್ಲಿ ಮೂರು ದಿನಗಳ ಗಂಗಾ ಯಾತ್ರೆಯ ಮೂಲಕ ಸಾಮಾನ್ಯ ಮತದಾರರೊಂದಿಗೆ ನೇರ ಮುಖಾಮುಖಿ ಅಭಿಯಾನ ಆರಂಭಿಸಿದ್ದಾರೆ. ಪ್ರಯಾಗ್ ರಾಜ್ನ ಸಂಗಮದಿಂದ ಸೋಮವಾರ ಆರಂಭವಾಗಿರುವ ಗಂಗಾ ಯಾತ್ರಾ ಮೂರು ದಿನಗಳ ಅವಧಿಯಲ್ಲಿ ಅಲಹಾಬಾದ್ನಿಂದ ವಾರಣಾಸಿವರೆಗಿನ ೧೦೦ ಕಿ.ಮೀ ಅಂತರವನ್ನು ಗಂಗಾ ನದಿಯ ಮೂಲಕವೇ ಕ್ರಮಿಸಲಿದೆ. ಮೊದಲ ದಿನ ಸೋಮವಾರ, ಬದೋಹಿ ಜಿಲ್ಲೆಯ ಸೀತಾಮರ್ರಿಯಲ್ಲಿ ತಂಗಿದ್ದು ಪ್ರಿಯಾಂಕಾ, ಮಂಗಳವಾರ ಮಿರ್ಜಾಪುರ ವ್ಯಾಪ್ತಿಯಲ್ಲಿ ಯಾನ ಮುಂದುವರಿಸಿದರು. ಬುಧವಾರ ವಾರಣಾಸಿಯಲ್ಲಿ ಗಂಗಾ ಯಾತ್ರೆ ಸಮಾಪ್ತಿಗೊಳ್ಳಲಿದೆ.
ಕಾಟನ್ ಸೀರೆ, ಗುಂಗುರು ಕೂದಲು, ಆಕರ್ಷಕ ನಗೆಯಲ್ಲಿ ಥೇಟು ಅಜ್ಜಿ ಇಂದಿರಾಗಾಂಧಿಯ ಪ್ರತಿರೂಪದಂತೆ ಮತದಾರರ ಕಣ್ಣಲ್ಲಿ ಕಾಣುತ್ತಿರುವ ಪ್ರಿಯಾಂಕಾ, ಅವರ ಯಾತ್ರೆಯ ಉದ್ದಕ್ಕೂ ಭಾರೀ ಜನಸ್ತೋಮ ಅವರಿಗೆ ಜಯಘೋಷದ ಮೂಲಕ ಸ್ವಾಗತ ಕೋರುತ್ತಿದೆ. ಮೀನುಗಾರರು ಸೇರಿದಂತೆ ವಿವಿಧ ತಳ ಸಮುದಾಯಗಳ ಆಮ್ ಆದ್ಮಿಗಳ ಅಭಿಮಾನ ಮತ್ತು ಪ್ರೀತಿಯಲ್ಲಿ ಕಾಂಗ್ರೆಸ್ ಯುವರಾಣಿ ಉತ್ತರಪ್ರದೇಶದ ಮಟ್ಟಿಗೆ ಮಾತ್ರವಲ್ಲದೆ, ದೇಶಾದ್ಯಂತ ಕಾಂಗ್ರೆಸ್ನ ಹೊಸ ನಿರೀಕ್ಷೆಯ ಮುಖವಾಗಿ ಹೊರಹೊಮ್ಮುತ್ತಿದ್ದಾರೆ. ಯಾತ್ರೆಯುದ್ದಕ್ಕೂ ಜನಸಾಮಾನ್ಯರು ತಮ್ಮ ನೆಚ್ಚಿನ ಇಂದಿರಾ ಅವರನ್ನು ಪ್ರಿಯಾಂಕಾ ಅವರಲ್ಲಿ ಕಾಣುತ್ತಿದ್ದು, ಹೋದಲ್ಲೆಲ್ಲಾ ಜನ ಮುತ್ತಿಕೊಳ್ಳುತ್ತಿದ್ದಾರೆ. ಹೂಮಳೆಗರೆದು ಹೊಸ ನಾಯಕಿಗೆ ಸ್ವಾಗತ ಕೋರುತ್ತಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರು, ಯುವಕ-ಯುವತಿಯರಾದಿಯಾಗಿ ಎಲ್ಲರ ಕಣ್ಮಣಿಯಾಗುತ್ತಿರುವ ಪ್ರಿಯಾಂಕಾ ಕೂಡ, ತನ್ನ ಭದ್ರತೆಯನ್ನೂ ಬದಿಗೊತ್ತಿ ನೇರವಾಗಿ ಜನಜಂಗುಳಿಯ ನಡುವೆ ಬೆರೆತು ಅವರ ಪ್ರೀತಿಗೆ ಪಾತ್ರರಾಗುತ್ತಿದ್ದಾರೆ.
ಗಂಗಾ ಯಾತ್ರೆಯ ಉದ್ದಕ್ಕೂ ಎಲ್ಲೆಡೆ ಪ್ರಿಯಾಂಕಾ, ಇಂದಿರಾಗಾಂಧಿ, ರಾಹುಲ್ ಗಾಂಧಿಯವರ ಕಟೌಟ್ ಮತ್ತು ಬ್ಯಾನರ್ಗಳು ತುಂಬಿದ್ದು, ಬಹುತೇಕ ಪೋಸ್ಟರುಗಳಲ್ಲಿ ‘ಇಂದಿರಾಗಾಂಧಿ-2’ ಮತ್ತು ‘ದುರ್ಗಾ’ ರೂಪದಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಪ್ರಿಯಾಂಕಾ ಅವರನ್ನು ಭಾರತದ ರಾಜಕಾರಣದ ದುರ್ಗೆ ಇಂದಿರಾ ಅವರನ್ನು ಕಾಣುತ್ತಿದ್ದಾರೆ. ಸಭೆ- ಸಂವಾದಗಳಲ್ಲಿ ಕೂಡ ಪ್ರಿಯಾಂಕಾ ಅವರ ಹೆಸರಿನ ಜೊತೆ ಇಂದಿರಾ ಗಾಂಧಿ ಹೆಸರು ಜೋಡಿಸಿ ಜಯಕಾರ, ಬೆಹನ್ ಪ್ರಿಯಾಂಕಾ, ಬೆಹನ್ ಪ್ರಿಯಾಂಕಾ ಎಂಬ ಘೋಷಣೆ ಮೊಳಗುತ್ತಿವೆ. ಎಲ್ಲೆಡೆ, ದಹನ್ ಕರೋ ಮೋದಿ ಕೀ ಲಂಕಾ, ಬೆಹನ್ ಪ್ರಿಯಾಂಕಾ, ಬೆಹನ್ ಪ್ರಿಯಾಂಕಾ ಘೋಷಣೆ ಪ್ರತಿಧ್ವನಿಸುತ್ತಿದೆ.
ಪ್ರಿಯಾಂಕಾ ಅವರು ಜನರೊಂದಿಗೆ ಅವರದೇ ನಡೆನುಡಿಯೊಂದಿಗೆ ಬೆರೆಯುವ ರೀತಿ, ಸರಳತೆ, ಸಮಾಜದ ಕೆಳಸ್ತರದ ಜನರ ಕಷ್ಟ ಆಲಿಸುವ ಅವರ ಕಾಳಜಿ, ನಿತ್ಯದ ಸಂಕಷ್ಟಗಳನ್ನು ಕೇಳಿ ತಿಳಿದುಕೊಳ್ಳುವ ಅವರ ಪ್ರಾಮಾಣಿಕ ಪ್ರೀತಿಗಳು ಜನಸಾಮಾನ್ಯರಲ್ಲಿ ಅವರ ಬಗೆಗಿನ ಈವರೆಗಿನ ಕುತೂಹಲವನ್ನು, ಅಭಿಮಾನವಾಗಿ, ಹೆಮ್ಮೆಯಾಗಿ ಪರಿವರ್ತಿಸುತ್ತಿವೆ. ಪ್ರಿಯಾಂಕಾ ಕೂಡ, ಜನರ ನಿಜವಾದ ಕಷ್ಟ, ಸಂಕಷ್ಟಗಳನ್ನು ಅರಿಯುವ ಯತ್ನವಾಗಿಯೇ ತಾವು ಈ ಯಾತ್ರೆ ಕೈಗೊಂಡಿದ್ದು, ಜನರೊಂದಿಗೆ ನೇರ ಸಂವಾದವೇ ತಮ್ಮ ಉದ್ದೇಶ ಎನ್ನುವ ಮೂಲಕ, ತಮ್ಮದು ’ಸಚ್ಛಾ ಸಂವಾದ್’ ಎಂದಿದ್ದಾರೆ.
ಅದೇ ಹೊತ್ತಿಗೆ, ಅಲಹಾಬಾದಿನ ತಮ್ಮ ಮೊದಲ ದಿನದ ಯಾತ್ರೆಗೆ ಮುನ್ನ, ಅಜ್ಜಿ ಇಂದಿರಾಗಾಂಧಿಯವರು ಜನಿಸಿದ ಕಟ್ಟಡದ ಕುರಿತು ಪ್ರಸ್ತಾಪಿಸುತ್ತಾ, ಅಜ್ಜಿ ಹೇಳುತ್ತಿದ್ದ ಜೋನ್ ಆಫ್ ಆರ್ಕ್ನಂತಹ ಸಾಹಸ ಕಥೆಗಳು ಇಂದಿಗೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿವೆ. ಒಮ್ಮೆ ನೀನು ಭಯ ಎಂಬುದರಿಂದ ಹೊರಬಂದರೆ, ಇನ್ನುಳಿದ ಎಲ್ಲವೂ ತಾನೇತಾನಾಗಿ ಸರಿಹೋಗುತ್ತವೆ ಎನ್ನುವ ಅವರ ಮಾತು ಇಂದು ನನಗೆ ನೆನಪಾಗುತ್ತಿದೆ ಎಂದು ಟ್ವೀಟ್ ಮಾಡುವ ಮೂಲಕ ರಾಜಕಾರಣದ ಒಳಸುಳಿಗಳ ಅರಿವಿದ್ದೂ, ಭಯ ಬಿಟ್ಟು ನೀರಿಗಿಳಿದಿರುವೆ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಸೇರಿದಂತೆ, ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಅಲ್ಲದೆ, ಮೊದಲ ದಿನವೇ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡು, ಶ್ರೀಮಂತರಿಗೆ ಚೌಕಿದಾರರ ಜರೂರಿದೆ. ರೈತರು, ಬಡವರಿಗೆ ಯಾವ ಚೌಕಿದಾರರ ಅಗತ್ಯವೂ ಇಲ್ಲ. ಅವರಿಗೆ ಅವರೇ ಚೌಕಿದಾರರು ಎನ್ನುವ ಮೂಲಕ ಮೋದಿಯವರ ’ಮೇ ಭೀ ಚೌಕಿದಾರ್’ ಅಭಿಯಾನ ಎಷ್ಟು ಅರ್ಥಹೀನ ಎಂದು ಟೀಕಿಸಿದ್ದಾರೆ. ಅಲ್ಲದೆ, ಇವತ್ತಿನ ನಿಂತ ನೀರಾಗಿರುವ ದೇಶದ ರಾಜಕೀಯವನ್ನು ಬದಲಾಯಿಸಲು ಜನಸಾಮಾನ್ಯರೊಂದಿಗಿನ ನೇರ ಮುಖಾಮುಖಿಯೇ ದಾರಿ. ಜನರೊಂದಿಗೆ ಅವರದೇ ಭಾಷೆಯಲ್ಲಿ ಮಾತನಾಡುವ ಮೂಲಕ ಅವರ ನೈಜ ಸಮಸ್ಯೆ ಅರಿಯುವುದು ಇಂದಿನ ರಾಜಕಾರಣದ ತುರ್ತು ಎನ್ನುವ ಮೂಲಕ, ಅಭಿಯಾನ, ಆನ್ ಲೈನ್ ಟ್ರೋಲ್, ಕೃತಕ ರಾಜಕೀಯ ವಾಗ್ವಾದಗಳ ಬಿಜೆಪಿ ಮತ್ತು ಮೋದಿಯವರ ರಾಜಕೀಯ ವರಸೆಯನ್ನು ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ.
ಅಲ್ಲದೆ, ತಮ್ಮ ಎರಡು ವರ್ಷಗಳ ಸಾಧನೆಯ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿ, ಇಡೀ ದೇಶದಲ್ಲೇ ಉತ್ತರಪ್ರದೇಶ ಮಾದರಿ ಎಂದು ಹೇಳಿರುವ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೇಳಿಕೆಯನ್ನೂ ಟೀಕಿಸಿರುವ ಪ್ರಿಯಾಂಕಾ, ರಿಪೋರ್ಟ್ ಕಾರ್ಡ್, ಮಾಧ್ಯಮಗಳ ಮೂಲಕ ಸಾಧನೆ ಬಿಂಬಿಸುವುದೆಲ್ಲಾ ನೋಡಲು ಅಷ್ಟೇ ಚೆಂದ. ಆದರೆ, ಉತ್ತರಪ್ರದೇಶದ ಜನಸಾಮಾನ್ಯರ ಬದುಕು ಎಷ್ಟು ದುರವಸ್ಥೆಗೆ ತಲುಪಿದೆ ಎಂಬುದು ಕಣ್ಣೆದುರಿನ ಕಟು ವಾಸ್ತವ ಎಂದಿದ್ದಾರೆ. ಆ ಮೂಲಕ, ಚುನಾವಣಾ ಕಣದಲ್ಲಿ ಅಭಿವೃದ್ಧಿಯ ಕಟ್ಟುಕತೆಯನ್ನು ಸೃಷ್ಟಿಸುವ ಸರ್ಕಾರದ ಯತ್ನಕ್ಕೆ ಆರಂಭದಲ್ಲೇ ತಿರುಗೇಟು ನೀಡಿದ್ದಾರೆ.
ಜೊತೆಗೆ, ಮೋದಿಯವರ ಐದು ವರ್ಷಗಳ ಆಡಳಿತ ಅವಧಿಯ ಪ್ರಮುಖ ರಕ್ಷಣಾ ತಂತ್ರವಾದ ’60 ವರ್ಷದಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ’ ಎಂಬ ಹೇಳಿಕೆಗೂ ಭರ್ಜರಿ ತಿರುಗೇಟು ನೀಡಿರುವ ಪ್ರಿಯಾಂಕಾ, ಅರವತ್ತು ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುವ ನಿಮ್ಮ ಪಲಾಯನವಾದಕ್ಕೂ ಒಂದು ಮಿತಿ ಇದೆ. ಅದು ಬಹಳ ಕಾಲ ನಡೆಯಲಾರದು. ಐದು ವರ್ಷದ ಅಧಿಕಾರವಧಿಯಲ್ಲಿ ನೀವೇನು ಮಾಡಿದ್ದೀರಿ ಎಂಬುದನ್ನು ಜನತೆಗೆ ಮೊದಲು ತಿಳಿಸಿ ಎನ್ನುವ ಮೂಲಕ ಇತಿಹಾಸದ ಮೇಲೆ ವರ್ತಮಾನದ ರಾಜಕೀಯ ವಾಗ್ವಾದ ಕಟ್ಟುವುದು ತರವಲ್ಲ; ಬದಲಾಗಿ ವರ್ತಮಾನ ಮತ್ತು ಭವಿಷ್ಯದ ಮೇಲೆ ವಾಗ್ವಾದ ನಡೆಸುವುದು ರಾಜಕೀಯ ಪ್ರಬುದ್ಧತೆ ಎಂಬ ಕಿವಿಮಾತನ್ನೂ ಹೇಳಿದ್ದಾರೆ.
ಒಟ್ಟಾರೆ, ತಿಂಗಳ ಹಿಂದಿನ ತಮ್ಮ ಅಧಿಕಾರ ಸ್ವೀಕಾರದ ದಿನದ ಲಖನೌ ರೋಡ್ ಶೋನಿಂದ ಈಗಿನ ಗಂಗಾಯಾತ್ರೆಯವರೆಗೆ, ದೇಶದ ಅಧಿಕಾರ ಚುಕ್ಕಾಣಿಯ ಭವಿಷ್ಯ ಬರೆಯುವ ಉತ್ತರಪ್ರದೇಶದ ನೆಲದಲ್ಲಿ ’ಪ್ರಿಯಾಂಕಾ ಬೆಹನ್’ ಬಿರುಗಾಳಿ ವೇಗ ಪಡೆಯುತ್ತಿದ್ದು, ಬಿಜೆಪಿ ಮತ್ತು ಸ್ವತಃ ನರೇಂದ್ರ ಮೋದಿಯವರ ಪಾಲಿಗೆ ಭವಿಷ್ಯದ ದಿನಗಳು ಹೀಗೆಯೇ ಇರಲಾರವು ಎಂಬ ಸಂದೇಶವನ್ನಂತೂ ರವಾನಿಸಿದೆ. ಗಂಗೆಯ ಮೇಲಿನ ’ಇಂದಿರಾ ಗಾಂಧಿ-೨’ ಯಾತ್ರೆ, ರಾಜಕೀಯ ಬಿಕ್ಕಟ್ಟಿನ ಉಬ್ಬರವಿಳಿತಗಳ ಮೀರಿ ಕಾಂಗ್ರೆಸ್ಸನ್ನು ಯಶಸ್ವಿಯಾಗಿ ದಡಮುಟ್ಟಿಸುವುದೇ ಎಂಬುದನ್ನು ಕಾದುನೋಡಬೇಕಿದೆ.