ಧಾರವಾಡ: ಐದಂತಸ್ತಿನ ಕಟ್ಟಡವೊಂದು ನಿರ್ಮಾಣ ಹಂತದಲ್ಲೇ ಸಂಪೂರ್ಣವಾಗಿ ಕುಸಿದು ಭಾರಿ ಅನಾಹುತವೊಂದು ಧಾರವಾಡದ ಕುಮಾರೇಶ್ವರ ನಗರದಲ್ಲಿ ಸಂಭವಿಸಿದೆ. ಪೂರ್ತಿ ನೆಲಸಮವಾಗಿರುವ ಕಟ್ಟಡದ ಅಡಿಯಲ್ಲಿ ಹಲವಾರು ಜನರು ಸಿಕ್ಕಿ ಹಾಕಿಕೊಂಡಿದ್ದು, ಒಬ್ಬ ವ್ಯಕ್ತಿ ಮೃತ ಪಟ್ಟಿರುವುದು ದೃಢಪಟ್ಟಿದೆ. ಮೃತಪಟ್ಟವರನ್ನು ಹುಬ್ಬಳ್ಳಿಯ ಘೋಡ್ಕೆ ನಿವಾಸಿ ಸಲೀಂ ಮಕಂದರ್ (40) ಎಂದು ಗುರುತಿಸಲಾಗಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಏಳು ಮಂದಿ ಗಾಯಾಳುಗಳನ್ನು ಹೊರ ತೆಗೆಯಲಾಗಿದೆ. 50 ಕ್ಕೂ ಹೆಚ್ಚು ಜನ ಕಟ್ಟಡದ ಅಡಿ ಸಿಲುಕಿರಬಹುದು ಎಂಬು ಅಂದಾಜಿಸಲಾಗಿದೆ. 19 ಜನರನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ, ಕೆಲವರನ್ನು ಕಿಮ್ಸ್ ಆಸ್ಪತ್ರೆಗೂ ಚಿಕಿತ್ಸೆಗಾಗಿ ಕಳಿಸಲಾಗಿದೆ.. ಕಟ್ಟಡ ಕುಸಿದ ಸ್ಥಳದಲ್ಲಿ ವ್ಯಾಪಕವಾಗಿ ಹರಡಿರುವ ಧೂಳಿನ ನಡುವೆ ಇನ್ನೂ ದೇಹಗಳನ್ನು ಹೊರತೆಗೆಯಲಾಗುತ್ತಿದೆ.
ಸ್ಥಳದಲ್ಲಿ ಸಾವಿರಾರು ಸ್ಥಳೀಯರು ಜಮಾಯಿಸಿದ್ದು ಸಿಕ್ಕಿಹಾಕಿಕೊಂಡಿರಬಹುದಾದ ತಮ್ಮವರಿಗಾಗಿ ಆಕ್ರಂದನ ಮುಗಿಲು ಮುಟ್ಟಿದೆ. ಉದ್ವೇಗ, ಕುತೂಹಲಗಳಿಂದ ನೆರೆದ ಸಾರ್ವಜನಿಕರೇ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ನಿಷೇದಾಜ್ಞೆ ವಿಧಿಸಿ ಆಯುಕ್ತ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ದೀಪಾ ಚೋಳನ್ ಅವರೂ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯದ ಉಸ್ತುವಾರಿ ನಡೆಸುತ್ತಿದ್ದಾರೆ.
ಚುನಾವಣಾ ಬಂದೋಬಸ್ತ್ ಕಾರ್ಯಕ್ಕೆ ಆಗಮಿಸಿದ್ದ ಗಡಿ ಭದ್ರತಾ ಪಡೆಯ ಸೈನಿಕರೂ ರಕ್ಷಣಾ ಕಾರ್ಯಕ್ಕೆ ದೌಡಾಯಿಸಿದ್ದಾರೆ.
ಇಂದು ಮದ್ಯಾಹ್ನ 3.12ರ ಸಮಯಕ್ಕೆ ಕುಸಿದು ಬಿದ್ದ ಕಟ್ಟಡವು ಮಾಜಿ ಸಚಿವ ವಿನಯ ಕುಲರ್ಣಿ ಅವರ ಮಾವ ಅವರೂ ಸೇರಿದಂತೆ ನಾಲ್ಕು ಜನರ ಮಾಲೀಕತ್ವ ಹೊಂದಿತ್ತು ಎನ್ನಲಾಗಿದೆ. ಮೂರು ವರ್ಷಗಳ ಹಿಂದೆ ತಳಪಾಯ ಹಾಕಿದ್ದ ಕಟ್ಟಡದ ನಿರ್ಮಾಣಕ್ಕೆ ಕ್ಲಿಯರೆನ್ಸ್ ಸಿಕ್ಕಿದ್ದು ವರ್ಷದ ಹಿಂದೆ ಎಂದು ಮಾಜಿ ಕಾರ್ಪೊರೇಟರ್ ಶ್ರೀಕಾಂತ್ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಈ ಭಾರೀ ದುರಂತದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, “ ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದ ಸುದ್ದಿ ಕೇಳಿ ಆಘಾತಗೊಂಡಿದ್ದೇನೆ. ಕೂಡಲೇ ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆ ನಡೆಸಲು ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ ಹೆಚ್ಚುವರಿ ರಕ್ಷಣಾ ಸಿಬ್ಬಂದಿಯನ್ನು ವಿಶೇಷ ವಿಮಾನದ ಮೂಲಕ ಧಾರವಾಡಕ್ಕೆ ಕಳಿಸಿಕೊಡಲೂ ಮುಖ್ಯ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.
Shocked to learn about the collapse of an under-construction building in Dharwad. I have instructed the Chief Secretary to supervise rescue operations. I have also directed the CS to send additional resources and expert rescuers by a special flight to #Dharwad .
— H D Kumaraswamy (@hd_kumaraswamy) March 19, 2019
ಟ್ರೂಥ್ ಇಂಡಿಯಾ ಕನ್ನಡ