ವಿಶ್ವಬ್ಯಾಂಕ್ ನ ಮಾಜಿ ಆರ್ಥಿಕ ನಿರ್ದೇಶಕ, ಭಾರತ ಸರ್ಕಾರದ ಮಾಜಿ ಅರ್ಥ ಸಲಹೆಗಾರ ಕೌಶಿಕ್ ಬಸ್ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ಭಾರತದ ನಿರುದ್ಯೋಗ ಪ್ರಮಾಣದ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಣ್ಣ ಉದ್ದಿಮೆಗಳನ್ನು ಸಂಪೂರ್ಣ ಕಡೆಗಣಿಸಿ ದೊಡ್ಡ ಉದ್ಯಮಗಳನ್ನು ಮಾತ್ರ ಪ್ರೋತ್ಸಾಹಿಸುವ ಮೂಲಕ ಅಸಮಾನ ಸೃಷ್ಟಿಸಿದ್ದಾರೆ ಎಂದು ಅವರು ಬರೆದಿದ್ದಾರೆ.
ಸರ್ಕಾರವು ಭಾರತದಲ್ಲಿ ಉದ್ಯೋಗದ ಸ್ಥಿತಿಗತಿಯ ಕುರಿತ ವರದಿಯನ್ನು ತಡೆಹಿಡಿದಿರುವುದರಿಂದ ಆರ್ಥಿಕ ವಿಶ್ಲೇಷಕರು ಖಾಸಗಿ ಮೂಲಗಳನ್ನು ಅವಲಂಬಿಸಬೇಕಾಗಿದೆ ಎಂದು ತಮ್ಮ “ಭಾರತವು ನಿರುದ್ಯೋಗ ಡೇಟಾ ಮುಚ್ಚಿಡಬಲ್ಲದೇ ವಿನಃ ಸತ್ಯವನ್ನಲ್ಲ” ಎಂಬ ಶೀರ್ಷಿಕೆಯ ಲೇಖನದಲ್ಲಿ ತಿಳಿಸಿದ್ದಾರೆ.
ಕೌಶಿಕ್ ಬಸು 2012ರಿಂದ 2016ರ ವರೆಗೆ ವಿಶ್ವಸಂಸ್ಥೆಯ ಮುಖ್ಯ ಆರ್ಥಶಾಸ್ತ್ರಜ್ಞರಾಗಿ ನೇಮಕಗೊಂಡಿದ್ದರು. 2009ರಿಂದ 2012ರ ವರೆಗೆ ಯುಪಿಎ ಆಡಳಿತಾವಧಿಯಲ್ಲಿ ಭಾರತ ಸರ್ಕಾರದ ಅರ್ಥ ಸಲಹೆಗಾರರಾಗಿದ್ದರು.
ಡಿಮಾನಿಟೈಸೇಶನ್ ಆದ ನಂತರ ಒಂದು ವರ್ಷದಲ್ಲಿ, ‘ಭಾರತದಲ್ಲಿ 2017-18ರಲ್ಲಿ ದಾಖಲಾಗಿರುವ ನಿರುದ್ಯೋಗ ಪ್ರಮಾಣವು (6.1%) ಕಳೆದ 45 ವರ್ಷಗಳಲ್ಲೇ ಅತಿಹೆಚ್ಚಿನದು’ ಎಂಬ ಆಘಾತಕಾರಿ ಮಾಹಿತಿಯನ್ನು ಬಿಸ್ನೆಸ್ ಸ್ಟಾಂಡರ್ಸ್ ಪತ್ರಿಕೆಯು ವರದಿ ಮಾಡಿತ್ತು. ಈ ವರದಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಅಂಕಿಸಂಖ್ಯೆ ಆಯೋಗವು ಅಧಿಕೃತವಾಗಿ ಅನುಮೋದನೆ ನೀಡಿತ್ತು. ಆದರೆ ಸರ್ಕಾರದ ಜಾಲತಾಣದ ಮೂಲಕ ಪ್ರಕಟಿಸುವ ಸಂದರ್ಭದಲ್ಲಿ ಸರ್ಕಾರದ ಮಂತ್ರಿಗಳು ಅದನ್ನು ತಡೆಹಿಡಿದಿದ್ದರು. ಈ ಕಾರಣದಿಂದ ಆಯೋಗದ ಹಂಗಾಮಿ ಅಧ್ಯಕ್ಷ ಮತ್ತೊಬ್ಬ ಸದಸ್ಯರು ರಾಜೀನಾಮೆ ನೀಡಿ ಪ್ರತಿಭಟಿಸಿದ್ದರು.
ಕೌಶಿಕ್ ಬಸ್ ಬರೆಯುತ್ತಾ, ಭಾರತದ ಮಟ್ಟಿಗೆ ಇಂತಹ “ಮಾಹಿತಿ ತಡೆಹಿಡಿಯುವಿಕೆ” ಯಾವತ್ತೂ ನಡೆಯದಿರುವಂತದ್ದು. “ಡಾಟಾ ಸಂಗ್ರಹದಲ್ಲಿ ಹಿಂದಿನಿಂದಲೂ ಭಾರತವು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿಕೊಂಡಿದೆ” ಎಂದಿದ್ದಾರೆ. “ಸರ್ಕಾರದ ಅಂಕಿಸಂಖ್ಯೆಗಳು ಇಲ್ಲದಿರುವ ಸಂದರ್ಭದಲ್ಲಿ ಹೊರಬರುತ್ತಿರುವ ಖಾಸಗಿ ಸಂಸ್ಥೆಗಳ ಅಂಕಿಅಂಶಗಳು ದಿಗಿಲು ಹುಟ್ಟಿಸುತ್ತಿವೆ” ಎಂದವರು ಹೇಳಿದ್ದಾರೆ. ಸೆಂಟರ್ ಪಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಹಾಗೂ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯಗಳು ಬಿಡುಗಡೆಗೊಳಿಸಿರುವ ಅಂಕಿಅಂಶಗಳನ್ನು ಉಲ್ಲೇಖಿಸಿ ಬಸು ಮೇಲಿನ ಮಾತು ಹೇಳಿದ್ದಾರೆ.
“ಮೋದಿ ಸರ್ಕಾರದ ಅರ್ಥಿಕ ನೀತಿ ಕೇವಲ ದೊಡ್ಡ ಕಾರ್ಪೊರೇಟ್ ಉದ್ಯಮಗಳಿಗೇ ಅನುಕೂಲಕರವಾಗಿದ್ದು ಸಣ್ಣ ಉದ್ದಿಮೆ ಹಾಗೂ ವ್ಯಾಪಾರಿಗಳಿಗೆ ಮಾರಕವಾಗಿದೆ, ಕೃಷಿ ಕ್ಷೇತ್ರ ಹಾಗೂ ಬಹುತೇಕ ಕಾರ್ಮಿಕರನ್ನು ಕಡೆಗಣಿಸಲಾಗಿದೆ. ಇದೆಲ್ಲದರ ಪರಿಣಾಮ ಗೋಚರವಾಗುತ್ತಿದೆ”
ಎಂದು ಬಸು ಬರೆದಿದ್ದಾರೆ.
ಇದೇ ಲೇಖನದಲ್ಲಿ, “ಡಿಮಾನಿಟೈಸೇಶನ್ ಭಯಾನಕವಾಗಿ ತಪ್ಪುದಾರಿಗೆಳೆಯಲ್ಪಟ್ಟ ಯೋಜನೆಯಾಗಿತ್ತು, ಹಾಗೂ ಜಿಎಸ್ ಟಿ ಜಾರಿಗೊಳಿಸಿದ್ದು ಸರಿಯಾದ ದಿಕ್ಕಿನಲ್ಲಿದ್ದರೂ ಅದರ ಅನುಷ್ಠಾನ ಬಹಳ ಕೂಡಿತ್ತು” ಎಂದು ಕೌಶಿಕ್ ಬಸು ಅಭಿಪ್ರಾಯ ಪಟ್ಟಿದ್ದಾರೆ.
– ಟ್ರೂಥ್ ಇಂಡಿಯಾ ಕನ್ನಡ
ಈ ಲೇಖನಗಳನ್ನೂ ಓದಿ
ಉದ್ಯೋಗ ಸೃಷ್ಟಿ ಕುರಿತಂತೆ ದೇಶದ ಹಾದಿ ತಪ್ಪಿಸುತ್ತಿದ್ದಾರೆಯೇ ಪ್ರಧಾನಿ ಮೋದಿ?
ನರೇಂದ್ರ ಮೋದಿ ಸರ್ಕಾರ ನೀಡುವ ಅಂಕಿ ಅಂಶಗಳೇಕೆ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿವೆ?
ದೇಶದಲ್ಲಿರುವ ನಿರುದ್ಯೋಗದ ಕುರಿತು NSSO ನೀಡಿದ್ದ ವರದಿ ‘ಫೇಕ್ ನ್ಯೂಸ್’: ಸ್ಮೃತಿ ಇರಾನಿ ವಿವಾದಾಸ್ಪದ ಹೇಳಿಕೆ
ನಿಮ್ಮ ಬಳಿ ಯಾವುದೇ ಡೇಟಾ ಇಲ್ಲದಂತೆ ಮಾಡುವುದೇ ಒಂದು ಷಡ್ಯಂತ್ರ! ಬಹುದೊಡ್ಡ ಭ್ರಷ್ಟಾಚಾರ!
ಯುದ್ಧೋನ್ಮಾದದಲ್ಲಿ ಮರೆಯಬಾರದ ಸಂಗತಿಗಳು