ಅಸ್ಸಾಂ ರಾಜ್ಯದ 40 ಲಕ್ಷ ಜನರ ಹೆಸರು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ ಸಿ ) ಯಲ್ಲಿ ಸೇರ್ಪಡೆಯಾಗಿಲ್ಲ, ಅವರ ಬದುಕು ಅತಂತ್ರವಾಗಿದೆ ಎಂಬ ಅಚ್ಚರಿಯ ಸಂಗತಿಯನ್ನು ಅಮೆರಿಕದ ಗೃಹ ಇಲಾಖೆ ಬಹಿರಂಗಪಡಿಸಿದೆ.
ಭಾರತದಲ್ಲಿ ಅಲ್ಪಸಂಖ್ಯಾತರು ಹಾಗೂ ದುರ್ಬಲ ವರ್ಗದವರನ್ನು ಗುರಿಮಾಡಿ ಅವರ ಮಾನವ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಬಿಜೆಪಿ ನಾಯಕರು ಹಾಗೂ ಆಡಳಿತ ಪಕ್ಷದ ಸಚಿವರ ಹೆಸರನ್ನು ಉಲ್ಲೇಖಿಸಿರುವ 55 ಪುಟಗಳ ವಿಸ್ತೃತ ವರದಿಯನ್ನು ಅಮೆರಿಕ ಗೃಹ ಇಲಾಖೆ ಬಿಡುಗಡೆ ಮಾಡಿದೆ.
ಅಸ್ಸಾಂನಲ್ಲಿ ನೆಲೆಸಿರುವ ಸುಮಾರು 40 ಲಕ್ಷ ಅಸ್ಸಾಂ ನಾಗರಿಕರನ್ನು ರಾಷ್ಟ್ರೀಯ ನಾಗರಿಕರ ನೋಂದಣಿಯಿಂದ ಹೊರಗಿಡಲಾಗಿದ್ದು ಕೆಲವಾರು ತಲೆಮಾರುಗಳಿಂದ ಭಾರತದಲ್ಲಿ ಬದುಕು ಕಟ್ಟಿಕೊಂಡಿರುವ ಇವರ ಭವಿಷ್ಯ ಡೋಲಾಯಮಾನವಾಗಿದೆ ಎಂದು ಈ ವರದಿಯಲ್ಲಿ ತಿಳಿಸಿದೆ. ಸೆ 24, 2017ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಲವಾರು ದಶಕಗಳ ಹಿಂದೆ ಭಾರತದಲ್ಲಿ ಬಂದು ನೆಲೆಸಿರುವ ಬಾಂಗ್ಲಾದೇಶಿಗಳನ್ನು “ಗೆದ್ದಲು ಹುಳು”ಗಳೆಂದು ಕರೆದು ಅವರನ್ನು ನಾಗರಿಕ ಪಟ್ಟಿಯಿಂದ ಕಿತ್ತು ಹಾಕಲಾಗುವುದು ಎಂದು ಹೇಳಿದ್ದನ್ನು ಈ ವರದಿ ಉಲ್ಲೇಖಿಸಿದೆ. ಬಿಜೆಪಿ ಅಧ್ಯಕ್ಷರ ಹೇಳಿಕೆಯಂತೆ ಅಸ್ಸಾಂನ ನಾಲ್ಕು ಮಿಲಿಯನ್ ಜನರ ಪೌರತ್ವ ಅನಿಶ್ಚಿತವಾಗಿದೆ ಎಂದು ತಿಳಿಸಿರುವ ವರದಿ ನಿರಾಶ್ರಿತ ಮತ್ತು ಆಂತರಿಕವಾಗಿ ಸ್ಥಳಾಂತರಗೊಂಡ ಜನರ ಮಾನವ ಹಕ್ಕುಗಳನ್ನು ರಕ್ಷಿಸಲು ಪರಿಣಾಮಕಾರಿ ಕಾನೂನಾತ್ಮಕ ರಕ್ಷಣೆ ಅಗತ್ಯವಿದೆ ಎಂದಿದೆ.
ಆಗಸ್ಟ್ 2017ರಿಂದ ಫೆ.2018ರ ನಡುವೆ 1,674 ಕಸ್ಟಡಿ ಸಾವುಗಳು ಸಂಭವಿಸಿದ್ದು ಅದರಲ್ಲಿ ಖೈದಿಗಳು 1,530 ಜೈಲು ಕಸ್ಟಡಿಯಲ್ಲೂ 144 ಖೈದಿಗಳು ಪೊಲೀಸ್ ಕಸ್ಟಡಿಯಲ್ಲೂ ಸಾವಿಗೀಡಾಗಿದ್ದಾರೆ ಎಂದು ತಿಳಿಸಿರುವ ಈ ವರದಿ ಲಾಕಪ್ ಡೆತ್ನಲ್ಲಿ ಸಾವಿಗೀಡಾದ ಇತ್ತೀಚಿನ ವ್ಯಕ್ತಿ ದಕ್ಷಿಣ ಕಾಶ್ಮೀರದ 29 ವಯಸ್ಸಿನ ಶಾಲಾ ಪ್ರಿನ್ಸಿಪಾಲ್ ರಿಝ್ವಾನ್ ಪಂಡಿತ್ ಎಂದು ತಿಳಿಸಿದೆ.
“ಭಾರತದ ಶೇಕಡಾ 53ರಷ್ಟು ಖೈದಿಗಳು ಮುಸ್ಲಿಮರು, ದಲಿತರು ಮತ್ತು ಆದಿವಾಸಿಗಳಾಗಿದ್ದು ಕನಿಷ್ಟ ವಿಚಾರಣೆಯೂ ಇಲ್ಲದೇ ಕೊಳೆಯುತ್ತಿದ್ದಾರಲ್ಲದೇ ಅವರಲ್ಲಿ ಅನೇಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಹಾಗೂ ಅವರ ಕುರಿತು ಯಾವುದೇ ದಾಖಲೆಗಳೇ ಇಲ್ಲವಾಗಿದೆ. ಒಟ್ಟಾರೆ ಎಲ್ಲ ಖೈದಿಗಳು ಜೀವನ ಹಂಗು ತೊರೆದು ಬದುಕುತ್ತಿದ್ದಾರೆ” ಎಂಬ ಭಯಾನಕ ಸುದ್ದಿಯನ್ನು ಈ ವರದಿ ಬಹಿರಂಗಪಡಿಸಿದೆ. ಭಾರತದ ಪೊಲೀಸರು ಬಂಧನ ವಾರಂಟ್ ಇಲ್ಲದೆಯೇ, ತಮ್ಮ ಗುರುತನ್ನೂ ಬಹಿರಂಗಪಡಿಸದೇ ಹಲವರನ್ನು ಬಂಧಿಸಿ ವಿಚಾರಣೆ ನಡೆಸಿರುವ ಘಟನೆಗಳೂ ಸಾಕಷ್ಟಿದೆ ಎನ್ನುತ್ತದೆ ವರದಿ.
2018ರ ಜುಲೈ 22ರಂದು ಜಾನುವಾರು ವ್ಯಾಪಾರಿ ರಕ್ಬರ್ ಖಾನ್ ಎಂಬ ಆರೋಪಿಯು ರಾಜಸ್ತಾನದ ಜೈಲಿನಲ್ಲೇ ಮೃತನಾದ ಬಗ್ಗೆ ದಾಖಲೆ ಇದೆ, ಅಂದರೆ ಆತನ್ನು ಬಂಧಿಸಿ ಮೂರು ತಿಂಗಳಾದರೂ ಆತನ ವಿರುದ್ಧ ಯಾವುದೇ ಕ್ರಿಮಿನಲ್ ಅಪರಾಧ ಪ್ರಕರಣ ದಾಖಲಾಗಿರಲಿಲ್ಲ ಎಂಬ ಅಂಶವನ್ನೂ ವರದಿ ತಿಳಿಸಿದೆ.
ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಮನದ ಪ್ರಕರಣಗಳನ್ನು ದಾಖಲಿಸಿರುವ ವರದಿಯಲ್ಲಿ 2017ರಲ್ಲಿ ದ ಹೂಟ್ ನ ವರದಿನ್ನು ಉಲ್ಲೇಖಿಸಿ, 2017ರಲ್ಲಿ 11 ಪತ್ರಕರ್ತರ ಹತ್ಯೆ, 40 ಹಲ್ಲೆ ಪ್ರಕರಣಗಳು, 77 ಜನರ ಅಂತರ್ಜಾಲ ಸಂಪರ್ಕ ನಿಷೇಧ ಮತ್ತು 20 ಪತ್ರಕರ್ತರ ಮೇಲಿನ ರಾಜದ್ರೋಹ ಪ್ರಕರಣಗಳು ಹಾಗೂ 335 ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿರುವುದನ್ನು ವರದಿ ಉಲ್ಲೇಖಿಸಿದೆ. ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಪ್ರಕರಣವನ್ನೂ ಸಹ ವರದಿ ಉಲ್ಲೇಖಿಸಿದೆ. ಭಾರತದಲ್ಲಿ ನೈಜ ಸುದ್ದಿಯನ್ನು ವರದಿ ಮಾಡಿದ ಕಾರಣಕ್ಕಾಗಿ ಅಥವಾ ತಮ್ಮ ವಿರುದ್ಧ ವರದಿಗಳನ್ನು ಪ್ರಕಟಿಸಿದರೆಂಬ ಕಾರಣಕ್ಕಾಗಿ ಪತ್ರಕರ್ತರ ಮೇಲಿನ ದೈಹಿಕ ಹಲ್ಲೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುವವರ ವಿರುದ್ಧ ನಡೆದಿರುವ ದಾಳಿಗಳು ಸಾಕಷ್ಟಿವೆ. ಅಲ್ಲದೇ ಎಷ್ಟೋ ಪತ್ರಕರ್ತರು ಇದಕ್ಕಾಗಿ ಬೆದರಿಕೆ ಅಥವಾ ಕೊಲೆಯಂಥ ಭೀಕರ ಸನ್ನಿವೇಶಗಳನ್ನು ಎದುರಿಸಿರುವ ನಿದರ್ಶನಗಳಿವೆ’ ಎಂಬುದನ್ನೂ ಈ ವರದಿ ದಾಖಲಿಸಿದೆ.
ಭಾರತದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ದಮನ ಪ್ರಕರಣಗಳನ್ನೂ ವರದಿಯಲ್ಲಿ ತಿಳಿಸಲಾಗಿದೆ. ಕಥುವಾದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಲಾಗಿದೆ, ಹಾಗೆಯೇ ಪಂಜಾಬ್, ಉತ್ತರ ಪ್ರದೇಶ ಮತ್ತು ಹರಿಯಾಣಗಳಲ್ಲಿ ನಡೆದ ಮರ್ಯಾದೆಗೇಡು ಹತ್ಯೆಗಳು, 2017ರ ಏಪ್ರಿಲ್ ನಲ್ಲಿ ತೆಲುಗು ಸಿನಿಮಾ ನಟಿಯರು ತೆಲುಗು ಸಿನಿಮಾ ರಂಗದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯಗಳ ಕುರಿತು ಸಲ್ಲಿಸಿದ್ದ ದೂರನ್ನು ಸಹ ಉಲ್ಲೇಖಿಸಲಾಗಿದೆ. ದೇವದಾಸಿ ಪದ್ಧತಿ ಹೆಸರಿನಲ್ಲಿ ತಳಸಮುದಾಯಗಳ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ವರದಿಯಲ್ಲಿ ತಿಳಿಸಿದ್ದು ಒಂದು ಅಂದಾಜಿನ ಪ್ರಕಾರ 4.5 ಲಕ್ಷ ಮಹಿಳೆಯರು ಭಾರತದಲ್ಲಿ ದೇವಸ್ಥಾನ ಸಂಬಂಧಿ ಶೋಷಣೆಗೆ ತುತ್ತಾಗಿದ್ದಾರೆ ಎಂದು ತಿಳಿಸಿದೆ.
ಉತ್ತರ ಪ್ರದೇಶ, ಛತ್ತೀಸ್ ಗಢ ಮತ್ತು ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದಲೇ ಸಾಕಷ್ಟು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಬಗ್ಗೆ ಎಲ್ಲೂ ವರದಿಯಾಗಿಲ್ಲ ಎಂದು ಅಮೆರಿಕ ಗೃಹ ಇಲಾಖೆಯ ಈ ವರದಿ ತಿಳಿಸಿದೆ.
ಭಾರತದಲ್ಲಿ ಹಲವು ರೀತಿಗಳಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಸರ್ಕಾರ ನಡೆಸುವ ಮಾನವ ಹಕ್ಕು ಉಲ್ಲಂಘನೆಯೊಂದಿಗೆ ಭಾರತದ ಬಂಡುಕೋರರು ಮಕ್ಕಳನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ದಂಗೆ ಏಳುವಂತೆ ಪ್ರೇರಣೆ ನೀಡುತ್ತಿದ್ದಾರೆ. ಛತ್ತೀಸ್ ಗಢ, ಜಾರ್ಖಂಡ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಬಂಡುಕೋರರು ಹಾಗೂ ಉಗ್ರಗಾಮಿಗಳು ಲಾಟರಿ ಮೂಲಕ ಮಕ್ಕಳನ್ನು ನೇಮಿಸಿಕೊಳ್ಳುತ್ತಿದ್ದಾರೆ. ನಕ್ಸಲರು ಅಂದಾಜು 12 ವರ್ಷದ ಆಸುಪಾಸಿನ ಮಕ್ಕಳನ್ನು ತಮ್ಮ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದೂ ಈ ವರದಿ ಹೇಳಿದೆ.