ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ 14,000 ಕೋಟಿ ರುಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದ ನಂತರ ವಾಟ್ಸಾಪ್, ಫೇಸ್ ಬುಕ್ ಮತ್ತು ಟ್ವಿಟ್ಟರ್ ಗಳಲ್ಲಿ ಸಾಕಷ್ಟು ಜೋಕುಗಳು, ಕಾಮೆಂಟುಗಳು ಹರಿದಾಡುತ್ತಿವೆ.
‘ನಾನು 14,000 ರುಪಾಯಿ ನಗದು ಪಡೆಯಬೇಕಾದರೆ, ಕ್ಯಾಶ್ ಕೌಂಟರ್ ಮುಂದೆ ಟೋಕನ್ ಪಡೆದು ಸಾಲಿನಲ್ಲಿ ನಿಂತು ಕಾಯಬೇಕು, ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಅಷ್ಟೂ ಸಾವಿರ ಕೋಟಿ ರುಪಾಯಿ ಪಡೆಯಲು ಟೋಕನ್ ಪಡೆಯಬೇಕಿಲ್ಲ, ಸಾಲಿನಲ್ಲಿ ನಿಂತು ಕಾಯಲೂಬೇಕಿಲ್ಲ’ ಎಂಬ ವಾಟ್ಸಪ್ ಜೋಕು ಅತಿ ಹೆಚ್ಚು ವೈರಲ್ ಆಗಿದೆ.
ವಾಸ್ತವವಾಗಿ ಇದು ಬರೀ ಜೋಕು ಅಂತ ಅನಿಸುತ್ತಿಲ್ಲ. ಭಾರತೀಯ ಬ್ಯಾಂಕಿಂಗ್ ಉದ್ಯಮದ ಸ್ಥಿತಿಯನ್ನು ಅತ್ಯಂತ ಸರಳವಾಗಿ, ಅರ್ಥಪೂರ್ಣವಾಗಿ ಮಾಡಿದ ವಿಶ್ಲೇಷಣೆ ಎನಿಸುತ್ತಿದೆ.
ಇತ್ತೀಚೆಗೆ ಅತಿಹೆಚ್ಚು ನೀತಿ ನಿಯಮಗಳನ್ನು ಜಾರಿ ಮಾಡಿದ ಉದ್ಯಮ ಎಂದರೆ ಬ್ಯಾಂಕಿಂಗ್. ಅಪನಗದೀಕರಣದ ನಂತರವಂತೂ ಹತ್ತಾರು ನಿಯಮಗಳನ್ನು ರೂಪಿಸಲಾಗಿದೆ. ಆಧಾರ್ ಸಂಖ್ಯೆ ಜತೆಗೆ ಬ್ಯಾಂಕ್ ಖಾತೆ ಜೋಡಿಸಬೇಕು, ಪಾನ್ ನಂಬರ್ ಜೋಡಿಸುವುದು ಕಡ್ಡಾಯ ಎಂಬ ನಿಯಮ ಜಾರಿ ಮಾಡಿದೆ. ನಗದು ವಹಿವಾಟಿನ ಮೇಲೆ ನಿರ್ಬಂಧ, ನಗದು ಹೊಂದಲೂ ನಿರ್ಬಂಧ, ನಿಮ್ಮದೇ ದುಡ್ಡನ್ನು ನೀವು ನಗದು ರೂಪದಲ್ಲಿ ಪಾವತಿಸಲಿಕ್ಕೂ ನಿರ್ಬಂಧ, ಹೆಚ್ಚಿನ ವಹಿವಾಟು ನಡೆಸಿದಾಗ ಪಾನ್ ನಂಬರ್ ನಮೂದಿಸುವುದು ಕಡ್ಡಾಯ, ಕೆವೈಸಿ(ನೊ ಯುವರ್ ಕಸ್ಟಮರ್) ಕಡ್ಡಾಯ. ಹೀಗೆ ನಿಯಮ ಮತ್ತು ನಿರ್ಬಂಧಗಳ ಪಟ್ಟಿ ಬೆಳೆಯುತ್ತದೆ.
ತೆರಿಗೆ ವಂಚಿಸುವುದನ್ನು ತಪ್ಪಿಸಲು ಹೆಚ್ಚಿನ ಮೌಲ್ಯದ ವಹಿವಾಟಿಗೆ ಪಾನ್ ಕಾರ್ಡ್ ಕಡ್ಡಾಯ ಮಾಡಲಾಗಿದೆ, ನಗದು ರಹಿತ ವಹಿವಾಟು ಜಾರಿ ಮಾಡಲು ನಗದಿನ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂಬುದು ಸರ್ಕಾರದ ವಾದ. ಮುಕ್ತ ಆರ್ಥಿಕ ವ್ಯವಸ್ಥೆ ಇರುವ ಮತ್ತು ಶೇ.95ಕ್ಕಿಂತಲೂ ಹೆಚ್ಚು ನಗದು ವಹಿವಾಟೇ ನಡೆಯುವ ಭಾರತ ದೇಶದಲ್ಲಿ ಅಮೆರಿಕಾ, ಜಪಾನ್ ಮಾದರಿ ನಗದು ರಹಿತ ವಹಿವಾಟು ಜಾರಿಗೆ ತರುವುದು ಉಚಿತವಲ್ಲ. ಅಂತಹದ್ದೊಂದು ಕಲ್ಪನೆಯೇ ಹುಚ್ಚುತನದ್ದು. ಆ ಹುಚ್ಚುತನಕ್ಕಾಗಿ ರೂಪುಗೊಂಡ ಅಪನಗದೀಕರಣ ಯೋಜನೆಯಿಂದಾಗಿ ದೇಶದ ಆರ್ಥಿಕತೆ ಕುಂಠಿತವಾಗಿದೆ. ಪೂರ್ಣ ಚೇತರಿಕೆಗೆ ಸಾಕಷ್ಟು ತ್ರೈಮಾಸಿಕಗಳು ಬೇಕಾಗುತ್ತದೆ.
ಈಗ ಮುಖ್ಯ ಪ್ರಶ್ನೆ ಎಂದರೆ ಸಾಮಾನ್ಯ ಗ್ರಾಹಕರ ಮೇಲೆ ಅಷ್ಟೆಲ್ಲ ನಿರ್ಬಂಧ ಹೇರಿ, ನಿಯಮ ಜಾರಿ ಸಾಧಿಸಿದ್ದಾದರೂ ಏನು? ಭಾರತ ಆರ್ಥಿಕ ತ್ವರಿತ ಚೇತರಿಕೆಯ ಹಾದಿಯಲ್ಲಿರುವ ರಾಷ್ಟ್ರ. ಅದು ಮನಮೋಹನ್ ಸಿಂಗ್ ಅವರು ರೂಪಿಸಿದ ಮುಕ್ತ ಆರ್ಥಿಕನೀತಿಯ ಫಲಶೃತಿ. ಅಪನಗದೀಕರಣದ ಅಡೆತಡೆ ಇಲ್ಲದಿದ್ದರೆ ಜಿಡಿಪಿ ಈ ವೇಳೆಗೆ ಶೇ.8ನ್ನು ದಾಟಿರುತ್ತಿತ್ತು.
ಮೋದಿ ಸರ್ಕಾರ ಮಾಡಬಯಸಿರುವ ನಗದು ರಹಿತ ವಹಿವಾಟು ಸುಧೀರ್ಘ ಅವಧಿಯಲ್ಲಿ ಅಂದರೆ, ಕೆಲವು ದಶಕಗಳ ನಂತರ ತನ್ನಿಂತಾನೇ ಆಗುವಂತಹ ಸಹಜ ಪ್ರಕ್ರಿಯೆ. ಈಗ ದೇಶದಲ್ಲಿ ಸ್ಮಾರ್ಟ್ ಫೋನ್ ಗಳ ಕ್ರಾಂತಿಯಾಗಿದೆ. ಸ್ಮಾರ್ಟ್ ಫೋನ್ ಕೇವಲ ಕರೆಗಾಗಿ ಮಾತ್ರ ಬಳಕೆಯಾಗುತ್ತಿಲ್ಲ. ಅದು ನಿತ್ಯ ವಹಿವಾಟಿನ ಭಾಗವಾಗುತ್ತಿದೆ. ಅದು ಸಹಜವಾಗಿ ನಮ್ಮ ಆರ್ಥಿಕ ವಹಿವಾಟನ್ನೂ ನಿಭಾಯಿಸುತ್ತದೆ. ಕೆಲವರು ತ್ವರಿತವಾಗಿ ಅದಕ್ಕೆ ತೆರೆದುಕೊಳ್ಳುತ್ತಾರೆ. ಇನ್ನು ಕೆಲವರು ನಿಧಾನವಾಗಿ ತೆರೆದುಕೊಳ್ಳುತ್ತಾರೆ. ಕಾಲಾನುಕ್ರಮದಲ್ಲಿ ನಗದು ರಹಿತ ವಹಿವಾಟಿಗೆ ಹೊಂದಿಕೊಳ್ಳುತ್ತಾರೆ. ಇವೆಲ್ಲವೂ ಸಹಜವಾಗಿ ಆಗುವಂತಹವು.
ಸರ್ಕಾರ ನಗದು ರಹಿತ ವಹಿವಾಟನ್ನು ಹೇರುವುದು ಬೇಕಿಲ್ಲ. 130 ಕೋಟಿ ಗ್ರಾಹಕರ ದೇಶ ಭಾರತ. ಯಾವುದೋ ಒಂದು ವರ್ಗವನ್ನು ಗುರಿಯಾಗಿಟ್ಟುಕೊಂಡು ನೀತಿ ನಿಯಮ ರೂಪಿಸುವುದು ಉಚಿತವಲ್ಲ. ಬಹುಸಂಖ್ಯಾತ ಜನರಿಗೆ ಅನನಕೂಲವಾಗುವ ಅಪಾಯವೇ ಹೆಚ್ಚಿರುತ್ತದೆ. ಆದರೆ, ಸುಧೀರ್ಘಕಾಲದಲ್ಲಿ ನಾಗರಿಕರು ಇಂತಹ ನಿಯಮಗಳಿಗೆ ಕಷ್ಟವಾದರೂ ಸರಿಯೇ ಒಗ್ಗಿಕೊಳ್ಳುತ್ತಾರೆ. ಆದರೆ, ಉದ್ದೇಶರಹಿತವಾಗಿ ನಿಯಮ ರೂಪಿಸಿ ಜಾರಿಮಾಡುವುದರ ಔಚಿತ್ಯ ಏನು?
ಎಷ್ಟೆಲ್ಲ ನಿಯಮಗಳ ಜಾರಿ ನಂತರವೂ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೊಕ್ಸಿ, ಲಲಿತ್ ಮೋದಿ, ದೀಪಕ್ ತಲ್ವಾರ್, ಸಂಜಯ್ ಭಂಡಾರಿ ಸಾವಿರಾರು ಕೋಟಿ ರುಪಾಯಿ ವಂಚಿಸಿ ದೇಶ ಬಿಟ್ಟು ಪರಾರಿಯಾಗಿಲ್ಲವೇ? ನೀರವ್ ಮೋದಿ, ಮಲ್ಯ ಅವರನ್ನು ಇಂಗ್ಲೆಂಡ್ ಸರ್ಕಾರ ಬಂಧಿಸಿರಬಹುದು. ಆದರೆ, ಅವರಿಬ್ಬರೂ ವಂಚಿಸಿರುವ ಸುಮಾರು 25,000 ಕೋಟಿ ರುಪಾಯಿ ವಾಪಾಸು ಬರುತ್ತದೆಯೇ?
ವಾಸ್ತವವಾಗಿ ಮೋದಿ ಸರ್ಕಾರ ಎಚ್ಚರಿಕೆ ವಹಿಸಿದ್ದರೆ, ವಿಜಯ್ ಮಲ್ಯ ಮತ್ತು ನೀರವ್ ಮೋದಿ ದೇಶ ಬಿಟ್ಟು ಪರಾರಿ ಆಗಲು ಸಾಧ್ಯವೇ ಇರಲಿಲ್ಲ. ವಿಜಯ್ ಮಲ್ಯ ದೇಶಬಿಟ್ಟು ಪರಾರಿ ಆಗುವ ಮುನ್ನ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ, ತಾನು ಸಾಲ ಪಾವತಿಸಲು ಸಿದ್ದವಾಗಿರುವುದಾಗಿ, ಆದರೆ, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಪಾವತಿಗೆ ವಿಳಂಬವಾಗುತ್ತಿರುವ ವಿಷಯವನ್ನು ತಿಳಿಸಿದ್ದಾಗಿ ಖುದ್ದು ಮಲ್ಯ ಹೇಳಿದ್ದಾರೆ. ಮಲ್ಯ ವಿಷಯ ತಿಳಿಸಿದಾಗ ವಿತ್ತ ಸಚಿವ ಅರುಣ್ ಜೇಟ್ಲಿ ಎಚ್ಚೆತ್ತುಕೊಳ್ಳಬೇಕಿತ್ತು. 10,000 ಕೋಟಿ ಸಾಲ ಪಡೆದ ವ್ಯಕ್ತಿಯ ಮೇಲೆ ನಿಗಾ ಇಡಬಹುದಿತ್ತು. ನಿಗಾ ಇಡುವಂತೆ ಐಟಿ ಅಧಿಕಾರಿಗಳಿಗೆ ಸೂಚಿಸಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ. ವಿಜಯ್ ಮಲ್ಯ ತಾವು ರಾಜ್ಯಸಭಾ ಸದಸ್ಯರಾಗಿದ್ದರಿಂದ ವಿಮಾನ ನಿಲ್ದಾಣದಲ್ಲಿ ಯಾವುದೇ ವಿಶೇಷ ತಪಾಸಣೆ ಇಲ್ಲದೇ ಇಂಗ್ಲೆಂಡ್ ಗೆ ಹಾರಿದರು. ನೀರವ್ ಮೋದಿ ವಿಷಯದಲ್ಲೂ ಮೋದಿ ಸರ್ಕಾರ ಲೋಪ ಎಸಗಿದೆ. ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಅವರು ನಡೆಸಿರುವ ವಂಚನೆಯನ್ನು ಪಂಚಾಬ್ ನ್ಯಾಷನಲ್ ಬ್ಯಾಂಕ್ ಸಿಬ್ಬಂದಿ 2018 ಜನವರಿ 16ರಂದು ಪತ್ತೆ ಹಚ್ಚಿದರು. ಆ ಬಗ್ಗೆ ವಿತ್ತ ಸಚಿವಾಲಯಕ್ಕೂ ಮಾಹಿತಿ ನೀಡಿದರು. ಆದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ದೂರು ನೀಡಿದ್ದು 2018 ಜನವರಿ 29 ರಂದು. ಈ ಅವಧಿಯಲ್ಲೇ, ಮೋದಿ ಸರ್ಕಾರಕ್ಕೆ ವಂಚನೆಯ ಮಾಹಿತಿ ಇದ್ದಾಗಲೇ ನೀರವ್ ಮೋದಿ ಪರಾರಿಯಾಗಿದ್ದ.
ಅಚ್ಚರಿಯ ಸಂಗತಿ ಎಂದರೆ ವಿಜಯ್ ಮಲ್ಯ ಬ್ಯಾಂಕುಗಳಿಂದ ಸಾಲ ಪಡೆದು ಹಿಂತಿರುಗಿಸದೇ ಇಚ್ಛಾವರ್ತಿ ಸುಸ್ತಿದಾರನಾಗಿ ದೇಶಬಿಟ್ಟು ಪರಾರಿಯಾದ ನಂತರವೂ ಬ್ಯಾಂಕುಗಳಿಗೆ ವಂಚಿಸುವ ಪ್ರಕರಣಗಳು ನಡೆದಿವೆ. ಎಂದರೆ ಮೋದಿ ಸರ್ಕಾರ ಆರ್ಥಿಕ ಸುಧಾರಣೆ ಹೆಸರಿನಲ್ಲಿ ಹೇರುತ್ತಿರುವ ಆರ್ಥಿಕ ನಿರ್ಬಂಧದಿಂದ ಏನೂ ಉಪಯೋಗವಾಲಿಲ್ಲ ಎಂದೇ ಅರ್ಥ ತಾನೆ? ತಪ್ಪಿನಿಂದ ಪಾಠ ಕಲಿಯುತ್ತಿಲ್ಲ. ಒಂದು ದೊಡ್ಡ ನಷ್ಟದಿಂದಲೂ ಪಾಠ ಕಲಿಯುತ್ತಿಲ್ಲ. ಎಲ್ಲಕ್ಕೂ ಮಿಗಿಲಾಗಿ ಇಂತಹ ನಷ್ಟಗಳಾದಾಗ ನೈತಿಕ ಹೊಣೆ ಹೊರುವವರು ಯಾರೂ ಇಲ್ಲ.
ನೀರವ್ ಮೋದಿ- ಮೆಹುಲ್ ಚೊಕ್ಸಿ ಪ್ರಕರಣ ಹೊರಬಿದ್ದ ನಂತರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರೆ ನರೇಂದ್ರ ಮೋದಿ ಸರ್ಕಾರದ ಮೇಲೆ ಜನತೆಗೆ ಒಂದಷ್ಟು ವಿಶ್ವಾಸ ಬರುತ್ತಿತ್ತು. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನೇರವಾಗಿ ಭಾಗಿಯಾಗದೇ ಇರುವ ಹಗರಣಕ್ಕೆ ಅವರೇಕೆ ರಾಜೀನಾಮೆ ಸಲ್ಲಿಸಬೇಕು ಎಂಬ ಪ್ರಶ್ನೆ ಏಳುತ್ತದೆ. ವಿತ್ತ ಸಚಿವರಾದ ಅರುಣ್ ಜೇಟ್ಲಿ ಅವರು ಸಾರ್ವಜನಿಕ ವಲಯದ ಬ್ಯಾಂಕುಗಳ ಕಾವಲುಗಾರ. ಅದು ಸಂವಿಧಾನದತ್ತವಾದ ಜವಾಬ್ದಾರಿ. ಅವರು ಕಾವಲುಗಾರರಾಗಿರುವ ಬ್ಯಾಂಕುಗಳಲ್ಲಿ ಹಗರಣವಾದಾಗ ತಪ್ಪನ್ನು ಹೊರಬೇಕಿಲ್ಲ. ಆದರೆ, ನೈತಿಕ ಜವಾಬ್ದಾರಿಯನ್ನು ಹೊರಬೇಕು. ರಾಜಕೀಯ ಮಾಡುವವರಿಗೆ ನೈತಿಕತೆ ಭಯ ಇಲ್ಲದೇ ಹೋದಾಗ, ಮೋಸ, ವಂಚನೆ ಮಾಡುವವರಿಗೆ ಸರ್ಕಾರದ ಮೇಲಾಗಲೀ, ವ್ಯವಸ್ಥೆಯ ಮೇಲಾಗಲೀ ಭಾಯ ಇರುವುದಿಲ್ಲ. ಒಂದು ವೇಳೆ ವಿಜಯ್ ಮಲ್ಯ ಹಗರಣದ ನಂತರ ಬ್ಯಾಂಕುಗಳಿಗೆ ವಂಚಿಸುತ್ತಿರುವವರ ಮೇಲೆ ನಿಗಾ ಇಟ್ಟಿದ್ದರೆ 14000 ಕೋಟಿ ರುಪಾಯಿ ವಂಚನೆ ಪ್ರಕರಣ ತಡೆಯಬಹುದಿತ್ತು. ಇದೇನು ಕಡಮೆ ಮೊತ್ತವೇ? ಈ ಮೊತ್ತದಲ್ಲಿ 1.28 ಲಕ್ಷ ಮನೆಗಳನ್ನು ನಿರ್ಮಿಸಬಹುದಿತ್ತು, ಇಲ್ಲವೇ ಗ್ರಾಮೀಣ ಪ್ರದೇಶ 12800 ಕಿ.ಮೀ. ರಸ್ತೆಯನ್ನು ಸರ್ವಋತು ರಸ್ತೆಗಳನ್ನು ನಿರ್ಮಿಸಬಹುದಿತ್ತು. 2.56 ಲಕ್ಷ ಶಾಲಾ ಕೊಠಡಿಗಳನ್ನು ನಿರ್ಮಿಸಬಹುದಿತ್ತು.
ಕೇಂದ್ರ ಸರ್ಕಾರ ಈಗ ಹೊಸದೊಂದು ಕಾನೂನು ರೂಪಿಸಿದೆ. ಸಾವಿರಾರು ಕೋಟಿ ವಂಚಿಸಿ ದೇಶಬಿಟ್ಟು ಪರಾರಿಯಾಗುವ ಆರ್ಥಿಕ ಅಪರಾಧಿಗಳ ಆಸ್ತಿಗಳನ್ನು ತ್ವರಿತವಾಗಿ ವಶಕ್ಕೆ ಪಡೆಯಲು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆ 2018 ಜಾರಿಗೆ ತಂದಿದೆ. ಇಂತಹ ವಂಚನೆಗಳನ್ನು ತಡೆಯಲು ಇದುವರೆಗೆ ಅರ್ಧ ಡಜನ್ ಕಾನೂನುಗಳಿವೆ. ಅವುಗಳ ಪಾಲನೆಯಾಗುತ್ತಿಲ್ಲ.
ರೈತರು ಸಾಲ ಮರುಪಾವತಿ ಮಾಡದೇ ಇದ್ದಾಗ, ರೈತರ ಮನೆಗೆ ನುಗ್ಗಿ ಜಫ್ತಿ ಮಾಡುವ ಬ್ಯಾಂಕುಗಳು ನೂರಾರು ಕೋಟಿ ಸಾಲ ಪಡೆದವರನ್ನು ಪ್ರಶ್ನಿಸುವುದಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ರಜನಿಶ್ ಕುಮಾರ್ ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ ಮಾಡುವಂತೆ ಒತ್ತಾಯ ಮಾಡುವವರ ಮುಂದೆ ಒಂದು ಪ್ರಶ್ನೆ ಇಟ್ಟಿದ್ದಾರೆ. ಸಾವಿರಾರು ಕೋಟಿ ಸಾಲ ಪಡೆದ ಕಾರ್ಪೊರೆಟ್ ದಿಗ್ಗಜರು ಮೊದಲು ಸಾಲ ಪಾವತಿ ಮಾಡುತ್ತಾರಾ? ವಿವಿಧ ಉದ್ಯಮಗಳ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಇಂತಹ ಸುಸ್ತಿದಾರರೇ ಏಕಿರಬೇಕು? ಸಾಲ ನೀಡುವ ಬ್ಯಾಂಕುಗಳೇಕೆ ಮುಂಚೂಣಿಯಲ್ಲಿ ಇರಬಾರದು? ಎಂದು.
ರಜನೀಶ್ ಅವರ ಪ್ರಶ್ನೆಯೇ ಇಡೀ ಉದ್ಯಮದ ಸ್ಥಿತಿಯನ್ನು ವಿವರಿಸುತ್ತದೆ. ಏಕೆಂದರೆ ಸಾವಿರಾರು ಕೋಟಿ ಸಾಲ ಮಾಡಿ ಸುಸ್ತಿದಾರರಾಗಿರುವ ಕಾರ್ಪೊರೆಟ್ ದಿಗ್ಗಜರು ಮೋದಿ ಸರ್ಕಾರದ ವಿವಿಧ ಸಲಹಾ ಸಮಿತಿಗಳಲ್ಲಿ ಸದಸ್ಯರಾಗಿರುತ್ತಾರೆ. ಚುನಾವಣಾ ಪೂರ್ವದಲ್ಲಿ ನೀಡಿದ ನೆರವಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ನರೇಂದ್ರ ಮೋದಿ ಸರ್ಕಾರ ಹುದ್ದೆಗಳನ್ನು ನೀಡಿದೆ. ಹೀಗಾಗಿ ಇಲ್ಲಿ ಹಿತಾಸಕ್ತಿಗಳ ಸಂಘರ್ಷ ಇದ್ದೇ ಇದೆ. ನೈತಿಕ ರಾಜಕಾರಣ, ನೈತಿಕ ಆಡಳಿತ ನಡೆಸುವವರು ಮಾತ್ರವೇ ಇಂತಹ ಹಿತಾಸಕ್ತಿಗಳ ಸಂಘರ್ಷದಿಂದ ದೂರ ಇರುತ್ತಾರೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನೈತಿಕ ಹೊಣೆಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಿಲ್ಲ. ನೀಡಿದ್ದರೆ, ಇಡೀ ಹಗರಣದ ಗಾಂಭೀರ್ಯತೆ ಮತ್ತು ಅದರಿಂದ ಬ್ಯಾಂಕಿಂಗ್ ಉದ್ಯಮದ ವಿಶ್ವಾಸಾರ್ಹತೆ ಮೇಲಾಗಿರುವ ಧಕ್ಕೆಯ ಅಳ-ಅಗಲದ ಅರಿವಾಗುತ್ತಿತ್ತು. ಒಂದು ಸತ್ಸಂಪ್ರದಾಯಕ್ಕೆ ನಾಂದಿಯಾಗುತ್ತಿತ್ತು. ಅರುಣ್ ಜೇಟ್ಲಿ ಅವರಿಗೆ ಇನ್ನೂ ಆರು ಬಜೆಟ್ ಮಂಡಿಸುವ ತರಾತುರಿ ಇದ್ದಂತಿದೆ. ಅಲ್ಲದೇ ಚುನಾವಣೆ ವರ್ಷದಲ್ಲಿ ಅಧಿಕಾರಾವಧಿ ಪೂರ್ಣಗೊಳಿಸುವ ಸರ್ಕಾರವು ಪೂರ್ಣಪ್ರಮಾಣದ ಬಜೆಟ್ ಮಂಡಿಸದೇ ಕೇವಲ ಲೇಖಾನುದಾನ ಪಡೆಯಬೇಕು. ಆದರೆ, ಅರುಣ್ ಜೇಟ್ಲಿ ಅವರು ಲೇಖಾನುದಾನ ಪಡೆಯುವ ಬದಲಿಗೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿ ರೈತರಿಗೆ ಮುಂಗಡವಾಗಿಯೇ 2,000 ರುಪಾಯಿ ಪಾವತಿಸುವ ಚಾಣಾಕ್ಷತನ ತೋರಿದ್ದಾರೆ. ರೈತರ ‘ಮತಲಾಭ’ಕ್ಕಾಗಿ ಸಂವಿಧಾನಿಕ ಸತ್ಸಂಪ್ರದಾಯಗಳನ್ನು, ಆರ್ಥಿಕತೆಯಲ್ಲಿನ ನೈತಿಕತೆಯನ್ನು ಮರೆತಿದ್ದಾರೆ.
ಅಷ್ಟೇ ಅಲ್ಲ, ಸಚಿವ ಅರುಣ್ ಜೇಟ್ಲಿ ಅವರು, ಸರ್ಕಾರದ ಪ್ರಕಟಿಸಿರುವ ಜಿಡಿಪಿ ಅಂಕಿ ಅಂಶಗಳ ಅನುಮಾನ ವ್ಯಕ್ತಪಡಿಸಿದ, ಮತ್ತು ನಿರುದ್ಯೋಗ ಕುರಿತ ಮಾಹಿತಿಯನ್ನು ಮುಚ್ಚಿಡುವ ಸರ್ಕಾರದ ನಿಲವನ್ನು ವಿರೋಧಿಸಿದ 108 ಮಂದಿ ಅರ್ಥಶಾಸ್ತ್ರಜ್ಞರು ಮತ್ತು ಸಂಖ್ಯಾಶಾಸ್ತ್ರಜ್ಞರನ್ನು ಕಟುವಾಗಿ ಟೀಕಿಸಿದ್ದಾರೆ. ರಾಜಕೀಯ ಉದ್ದೇಶಕ್ಕೆ ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ, ಅವರೆಲ್ಲ ಪ್ರತಿಪಕ್ಷಗಳ ಏಜೆಂಟ್ ಗಳೆಂಬ ಅರ್ಥದಲ್ಲಿ ಮೂದಲಿಸಿದ್ದಾರೆ. ಆ ಮೂಲಕ ನರೇಂದ್ರ ಮೋದಿ ಸರ್ಕಾರದ ‘ಆರ್ಥಿಕ ಅಸಹಿಷ್ಣತೆ’ಯನ್ನು ಬಹಿರಂಗ ಪಡಿಸಿದ್ದಾರೆ.