ವಿಶ್ವಸಂಸ್ಥೆ ಬುಧವಾರ ಬಿಡುಗಡೆ ಮಾಡಿರುವ ವಿಶ್ವ ಸಂತೋಷ ಸೂಚ್ಯಂಕ -2019ರ(World Happiness Index) ವರದಿಯಲ್ಲಿ ಜನರ ಜೀವನದಲ್ಲಿ ಮನಸ್ಸಿಗೆ ಸಂತೋಷ, ಆನಂದ ಇರುವ 156 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 140ನೇ ಸ್ಥಾನಕ್ಕೆ ಕುಸಿಯುವ ಮೂಲಕ ಹಿನ್ನಡೆಯ ಸ್ಥಾನ ಪಡೆದಿದೆ.
ವಿಶ್ವಸಂಸ್ಥೆಯು ‘ವಿಶ್ವ ಸಂತೋಷ ದಿನ’ವೆಂದು ಘೋಷಿಸಿರುವ ಮಾರ್ಚ್ 20ರಂದು ‘ವಿಶ್ವಸಂಸ್ಥೆಗಾಗಿ ಸುಸ್ಥಿರ ಅಭಿವೃದ್ಧಿ ಪರಿಹಾರ ಜಾಲ ಸಂಸ್ಥೆಯು ವಿಶ್ವಸಂಸ್ಥೆಯ ಈ ವರದಿ ಬಿಡುಗಡೆ ಮಾಡಿದೆ.
ದಕ್ಷಿಣ ಏಷ್ಯಾದಲ್ಲಿರುವ ಭಾರತದ ನೆರೆ ರಾಷ್ಟ್ರಗಳಾದ ಪಾಕಿಸ್ತಾನ – 67, ಭೂತಾನ್ -95, ಬಾಂಗ್ಲಾದೇಶ -125 ಮತ್ತು ಶ್ರೀಲಂಕಾ- 130ನೇ ಸ್ಥಾನ ಗಳಿಸುವ ಮೂಲಕ ಭಾರತದಕ್ಕಿಂತ ಅಗ್ರ ಸ್ಥಾನವನ್ನು ಈ ದೇಶಗಳು ಗಳಿಸಿದೆ.
2013ನೇ ಇಸವಿಯಲ್ಲಿ 117ನೇ ಸ್ಥಾನ ಕಾಪಾಡಿಕೊಂಡಿದ್ದ ಭಾರತವು 2016ರಲ್ಲಿ 118ನೇ ಸ್ಥಾನ, 2017ರಲ್ಲಿ 122ನೇ ಸ್ಥಾನ, 2018ರಲ್ಲಿ 133ನೇ ಸ್ಥಾನ ಹಾಗೂ ಈಗ 2019ನೇ ಸಾಲಿನಲ್ಲಿ 140ನೇ ಸ್ಥಾನಕ್ಕೆ ಕುಸಿದಿದೆ.
ಕಳೆದ ಬಾರಿಗಿಂತಲೂ ಭಾರತ ಈ ಬಾರಿ 7 ಸ್ಥಾನಗಳು ಕೆಳಗಿಳಿದಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸುತ್ತದೆ.
ಫಿನ್ ಲ್ಯಾಂಡ್ ಸತತ ಎರಡನೇ ಬಾರಿ ಹೆಚ್ಚು ಸಂತಸ ಹೊಂದಿರುವ ರಾಷ್ಟ್ರವಾಗಿ ಮೊದಲ ಸ್ಥಾನವನ್ನು ಹಾಗೂ ಡೆನ್ಮಾರ್ಕ್ ಹಾಗೂ ನಾರ್ವೆ ದೇಶಗಳು ನಂತರದ ಸ್ಥಾನಗಳನ್ನು ವಿಶ್ವಸಂಸ್ಥೆಯ ಪಟ್ಟಿಯಲ್ಲಿ ಕಾಯ್ದುಕೊಂಡಿದೆ.

ಯಾವ ದೇಶಗಳು ಇಳಿಮುಖ ಕಂಡಿದೆಯೋ ಆ ರಾಷ್ಟ್ರಗಳಲ್ಲಿ ಆರ್ಥಿಕತೆ, ರಾಜಕೀಯ ಮತ್ತು ಸಾಮಾಜಿಕ ಒತ್ತಡಗಳು ದೇಶದ ಜನರ ಸಂತೋಷವನ್ನು ಕಸಿದಿದೆ ಎಂದು ವರದಿ ತಿಳಿಸುತ್ತದೆ. ಪಾಕಿಸ್ತಾನ, ಭೂತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳು ಭಾರತಕ್ಕಿಂತಲೂ ಹೆಚ್ಚಿನ ರ್ಯಾಂಕ್ ಪಡೆದಿದೆ. ದಕ್ಷಿಣ ಸುಡಾನ್ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ವಿಶ್ವದಲ್ಲೇ ಹೆಚ್ಚು ಸಂತೋಷ ಕಾಣದ ದುಃಖಕರ ರಾಷ್ಟ್ರವಾಗಿದೆ. 2005ರಿಂದ 2008ರವರೆಗೆ ಸಂತೋಷದಿಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸೇರಿದಂತೆ ಐದು ರಾಷ್ಟ್ರಗಳು ಗರಿಷ್ಠ ಇಳಿಮುಖವನ್ನು ಕಂಡಿದೆ.
ವಿಶ್ವಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಸಂತಸ ಸೂಚ್ಯಂಕ ತಯಾರಿಸುವಾಗ ಕೆಲವು ಪ್ರಮುಖ ಮಾನದಂಡಗಳನ್ನು ಇಟ್ಟುಕೊಂಡಿದೆ. ಆ ಮಾನದಂಡಗಳು ಆಯಾ ದೇಶದ ಸರ್ವತೋಮುಖ ಏಳಿಗೆಯನ್ನು ಸೂಚಿಸುತ್ತವೆ. ವಿಶ್ವ ಸಂಸ್ಥೆ ನಿಗದಿ ಪಡಿಸಿರುವ ಆ ಮಾನದಂಡಗಳೆಂದರೆ,
-
ತಲಾದಾಯ ಜಿಡಿಪಿ
-
ಆರೋಗ್ಯಕರ ಜೀವನ
-
ಜೀವನದಲ್ಲಿ ವ್ಯಕ್ತಿಗಳು ಹೊಂದಿರುವ ಆಯ್ಕೆಯ ಸ್ವಾತಂತ್ರ್ಯ
-
ಸಾಮಾಜಿಕ ಬೆಂಬಲ
-
ಉದಾರ ಮನೋಭಾವ
-
ಭ್ರಷ್ಟಾಚಾರ ಕುರಿತ ಮನೋಭಾವ
ಒಂದು ದೇಶವು ಸಂತಸ ಸೂಚ್ಯಂಕ ಕುಸಿದಿದೆ ಎಂದರೆ ಆ ದೇಶದ ಜನರ ತಲಾದಾಯದಲ್ಲಿ ಕುಸಿತ ಕಂಡುಬಂದಿದೆ, ಆ ದೇಶದ ಜನರ ಆರೋಗ್ಯದ ಸ್ಥಿತಿ ಹದಗೆಟ್ಟಿದೆ, ದೇಶದ ಪ್ರಜೆಗಳು ತಮ್ಮ ಆಯ್ಕೆಯಲ್ಲಿ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿದ್ದಾರೆ ಹಾಗೂ ಸಾಮಾಜಿಕ ಬೆಂಬಲ ಕ್ಷೀಣಿಸುತ್ತಿದೆ ಎಂದು ಅರ್ಥ.
ಕಳೆದ ನಾಲ್ಕಾರು ವರ್ಷಗಳಲ್ಲಿ ವಿಶ್ವ ಸಂತೋಷ ಸೂಚ್ಯಂಕರಲ್ಲಿ ಭಾರತವು ಸತತವಾಗಿ ಕುಸಿತ ಕಂಡಿದೆ ಎಂದರೆ ಸಮಾಜದ ಎಲ್ಲಾ ರಂಗಗಳಲ್ಲಿ ಭಾರತೀಯರು ಹಿನ್ನಡೆ ಕಂಡಿದ್ದಾರೆ ಎಂದು ಅರ್ಥ. ಭಾರತೀಯರ ಪಾಲಿಗೆ ಇದು ಕೆಟ್ಟ ಸುದ್ದಿ.