ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರೂ, ನ್ಯಾಯವಾದಿಗಳೂ ಹಾಗೂ ಲಂಕೇಶ್ ಪತ್ರಿಕೆಯಲ್ಲಿ ದಶಕಗಳ ಕಾಲ ವರದಿಗಾರರಾಗಿ, ಸಮಾಜಮುಖಿ ಚಿಂತನೆ, ಅಂಬೇಡ್ಕರ್ ವಾದ, ಬಹುಜನ ಚಿಂತನೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಡಾ. ಸಿ. ಎಸ್ ದ್ವಾರಕಾನಾಥ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಟ್ರೂಥ್ ಇಂಡಿಯಾ ಕನ್ನಡ ಸುದ್ದಿತಾಣಕ್ಕಾಗಿ ಹರ್ಷಕುಮಾರ್ ಕುಗ್ವೆ ದ್ವಾರಕಾನಾಥ್ ಅವರ ಸಂದರ್ಶನ ನಡೆಸಿದ್ದಾರೆ.
ಟ್ರೂಥ್ ಇಂಡಿಯಾ: ಏಕೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ನೀವೇ ಯಾಕೆ ಆಯ್ಕೆಯಾಗಬೇಕೆಂದು ಬಯಸುತ್ತೀರಿ?
ಡಾ. ಸಿ.ಎಸ್. ದ್ವಾರಕಾನಾಥ್ : ಮೂಲತಃ ನಾನು ಆ ಕ್ಷೇತ್ರದವನು. ಅವಿಭಜಿತ ಕೋಲಾರ ಜಿಲ್ಲೆಯ ಒಂದು ಭಾಗ ಚಿಕ್ಕಬಳ್ಳಾಪುರ. ಈಗ ಸ್ಪರ್ಧಿಸಿರುವ ಹಾಗೂ ಗೆದ್ದಿರುವವರು ಎಲ್ಲರೂ ಹೊರಗಿನಿಂದ ಬಂದವರು. ನನ್ನ ಕ್ಷೇತ್ರದ ಸಮಸ್ಯೆಗಳೆಲ್ಲವೂ ಅವರಿಗಿಂತಲೂ ನನಗೆ ಚೆನ್ನಾಗಿ ಗೊತ್ತಿದೆ. ಯಾಕಂದ್ರೆ ಹುಟ್ಟಿನಿಂದ ಆ ಕ್ಷೇತ್ರದ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದೇನೆ. ಲಂಕೇಶ್ ಪತ್ರಿಕೆಯಲ್ಲಿ ವರದಿಗಾರನಾಗಿ ಆ ಕ್ಷೇತ್ರವನ್ನು ಪ್ರತಿನಿಧಿಸಿ 20 ವರ್ಷ ಕೆಲಸ ಮಾಡಿದ್ದೇನೆ. ಆ ಕ್ಷೇತ್ರದ ಪ್ರತಿಯೊಂದು ಸಮಸ್ಯೆಯೂ ನನಗೆ ಗೊತ್ತಿರುವುದರಿಂದ ಆ ಕ್ಷೇತ್ರವನ್ನು ಪ್ರತಿನಿಧಿಸುವುದು ಸರಿ ಎನಿಸಿದೆ. ಆ ಕಾರಣದಿಂದ ನಾನು ಅಲ್ಲಿಂದ ಸ್ಪರ್ಧಿಸುತ್ತಿದ್ದೇನೆ.
ಎರಡನೆಯದಾಗಿ, ಅಲ್ಲಿನ ಪರಿಸರ ನನಗೆ ಚೆನ್ನಾಗಿ ಪರಿಚಯ ಇದೆ. ಅಹಿಂದ ಚಳವಳಿ ಹುಟ್ಟಿದ್ದೇ ಆರಂಭದ ಅಲ್ಲಿಂದ. ಅಹಿಂದ ಕಾನ್ಸೆಪ್ಟ್ ಆರಂಭ ಆಗಿದ್ದೇ ಚಿಕ್ಕಬಳ್ಳಾಪುರ ಕ್ಷೇತ್ರದಿಂದ. ಅವಿಭಜಿತ ಕೋಲಾರ ಜಿಲ್ಲೆ ಆಗಿದ್ದಾಗ ನಾವು ಮೊಟ್ಟ ಮೊದಲು ಕೋಲಾರದಲ್ಲಿ ಸಮ್ಮೇಳನ ಮಾಡಿದ್ದು. ಹಾಗಾಗಿ ನನಗೆ ಅಲ್ಲಿರುವ ಎಲ್ಲಾ ತಳಸಮುದಾಯಗಳ, ಅಲ್ಪಸಂಖ್ಯಾತರ, ಮುಸ್ಲಿಂ ಮತ್ತು ಕ್ರೈಸ್ತರ ಎಲ್ಲ ಸಮುದಾಯಗಳ, ಅವರ ವೇದನೆ, ನೋವು, ಕಷ್ಟಗಳನ್ನು ಬಹಳ ಹತ್ತಿರದಿಂದ ನೋಡಿದ್ದೆ ಹಾಗೂ ಅನುಭವಿಸಿದ್ದೆ. ಆ ಕಾರಣದಿಂದ ನಾನು ಅಲ್ಲಿಂದ ಸ್ಪರ್ಧಿಸುತ್ತಿದ್ದೇನೆ.
ಟ್ರೂಥ್ ಇಂಡಿಯಾ ಕನ್ನಡ: ನೀವು ಬಹುಜನ ಸಮಾಜ ಪಕ್ಷವನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದು?
ಡಾ. ಸಿ.ಎಸ್. ದ್ವಾರಕಾನಾಥ್ : ಕಾಂಗ್ರೆಸ್, ಬಿಜೆಪಿ ಮತ್ತು ದಳ ಮೂರು ಪಕ್ಷಗಳು ಈಗಾಗಲೇ ಅಲ್ಲಿ ಪ್ರತಿನಿಧಿಸುತ್ತಿದೆ. ನಾನು ಕಳೆದ 40-45 ವರ್ಷದಿಂದ ಅಲ್ಲಿನ ರಾಜಕಾರಣವನ್ನು ನೋಡುತ್ತಾ ಬಂದಿದ್ದೇನೆ. ನೋಡುತ್ತಾ ಬಂದಿರುವ ಸಂದರ್ಭದಲ್ಲಿ ಆ ಕ್ಷೇತ್ರವನ್ನು ಪ್ರತಿನಿಧಿಸುವಂಥವರು ಎಂದೂ ಕೂಡ ಆ ಕ್ಷೇತ್ರದ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಒಂದೂ ಪ್ರಶ್ನೆ ಕೂಡ ಕೇಳಿರುವುದನ್ನು ನಾನು ನೋಡಿಲ್ಲ. ಅಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಏಕೆ ಪ್ರಶ್ನಿಸಿಲ್ಲ ಎಂದು ಕಾಂಗ್ರೆಸ್ ನಲ್ಲಿ ಕೇಳಿದಾಗ ಅವರಿಗೆ ಹೈಕಮಾಂಡ್ ಅಡ್ಡಿ ಇರತ್ತೆ, ಅವರಿಗೇನೋ ನೀರಿನ ರಾಜಕಾರಣದ ಅಡ್ಡಿ ಇರತ್ತೆ. ಬಿಜೆಪಿ ಸಹ ಹೈ ಕಮಾಂಡ್ ಅಡ್ಡಿ ಎಂದು ಹೇಳುತ್ತಾರೆ. ಜೆಡಿಎಸ್, ಇದು ಪ್ರಾದೇಶಿಕ ಸಮಸ್ಯೆ, ರಾಷ್ಟ್ರ ಮಟ್ಟದಲ್ಲಿ ಪ್ರಶ್ನಿಸಲು ಆಗುವುದಿಲ್ಲ ಎಂದು ಹೇಳುತ್ತಾರೆ. ಅದರೆ ನನಗೆ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಮಾತನಾಡಲು ಒಂದು ಅವಕಾಶ ಸಿಗುವಂಥದ್ದು, ಇದೆಲ್ಲಕ್ಕಿಂತಲೂ ಹೆಚ್ಚಾಗಿ ಸಂವಿಧಾನವನ್ನೇ ತನ್ನ ಪ್ರಣಾಳಿಕೆ ಮಾಡಿಕೊಂಡ ಭಾರತದ ಏಕೈಕ ಪಕ್ಷ ಬಹುಜನಸಮಾಜ ಪಕ್ಷ ಮಾತ್ರ. ಈ ಕಾರಣಕ್ಕೋಸ್ಕರ ಸಮಾಜವಾದಿ ಪಕ್ಷವನ್ನು ಆಯ್ಕೆ ಮಾಡಿಕೊಂಡೆ.
ಅದರ ಜತೆಯಲ್ಲೇ ಕಾನ್ಶೀರಾಂ ಅವರ ಆಲೋಚನೆಗಳು, ದೊಡ್ಡ ರಾಜಕಾರದ ಕೌಟುಂಬಿಕ ಹಿನ್ನೆಲೆಯಿರಲಿಲ್ಲ, ದೊಡ್ಡ ಕುಟುಂಬದಿಂದ ಬಂದವರಲ್ಲ, ದೊಡ್ಡ ಜಾತಿಯಿಂದ ಬಂದವರಲ್ಲ. ದೊಡ್ಡ ಹಣವಂತರಲ್ಲ, ಏನು ಅಲ್ಲದಿರುವ ಒಬ್ಬ ಅವರೊಬ್ಬ ಸಾಧಾರಣ ಮನುಷ್ಯನಾಗಿ, ಸಾಮಾನ್ಯ ವ್ಯಕ್ತಿ ರಾಜಕಾರಣ ಮಾಡುವುದಿದೆಯಲ್ಲ ಅದು ನನಗೆ ಬಹಳ ಆಕರ್ಷಿಸಿತು. ಆ ಕಾರಣಕ್ಕಾಗಿ ಈ ಕ್ಷೇತ್ರ, ಪಕ್ಷವನ್ನು ಆಯ್ಕೆ ಮಾಡಿಕೊಂಡೆ.
ಟ್ರೂಥ್ ಇಂಡಿಯಾ ಕನ್ನಡ: ಬಹುತೇಕ ಚುನಾವಣೆಗಳಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷ. ಈ ಹಿಂದೆ ಜಾಲಪ್ಪ, ಹಾಲಿ ಸಂಸದ ವೀರಪ್ಪ ಮೊಯ್ಲಿಯಂಥ ಘಟಾನುಘಟಿಗಳಿದ್ದಾರೆ. ಇವರಿಗಿಂತ ನೀವು ಹೇಗೆ ಭಿನ್ನವಾಗಿದ್ದೀರ? ಅಲ್ಲಿನ ಸಮಸ್ಯೆಗಳು, ಚಿಕ್ಕಬಳ್ಳಾಪುರದ ವಿಷಯಗಳಿರಬಹುದು ನೀವು ಹೇಗೆ ಭಿನ್ನವಾಗಿ ಅದನ್ನು ನೋಡುತ್ತೀರಾ. ಅಲ್ಲದೇ, ಅಲ್ಲಿನ ಜನರಿಗೆ ಹೊಸದಾಗಿ ಯಾವ ಭರವಸೆಯನ್ನು ನೀವು ನೀಡುತ್ತೀರಾ?
ಡಾ. ಸಿ.ಎಸ್. ದ್ವಾರಕಾನಾಥ್ : ಮೊದಲನೆಯದಾಗಿ ಜಾಲಪ್ಪನವರು ಆಯ್ಕೆಯಾದ ಸಂದರ್ಭದಲ್ಲಿ ನಾನು ಸಹ ಅವರ ಜೊತೆ ಕೆಲಸ ಮಾಡಿದ್ದೀನಿ. ಯಾಕಂದ್ರೆ ಒಬ್ಬ ಹಿಂದುಳಿದ ವರ್ಗದ ನಾಯಕ ಜತೆ ಕೆಲಸ ಮಾಡುವುದು ಆದ್ಯತೆ ಆಗಿತ್ತು, ಆ ಕಾರಣಕ್ಕಾಗಿ ಅವರ ಜತೆ ಕೆಲಸ ಮಾಡಿದ್ದೀನಿ. ಅವರ ಗೆಲುವಿಗೆ ಕೂಡ ನಾನು ಆ ಸಂದರ್ಭದಲ್ಲಿ ಕೆಲಸ ಮಾಡಿದ್ದೇನೆ. ಜಾಲಪ್ಪ ಅವರು ಅನೇಕ ಸಲ ಪಾರ್ಲಿಮೆಂಟ್ ನಲ್ಲಿ ಪ್ರತಿನಿಧಿಸಿದಾಗ, ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ, ಅವರು ಕೇಂದ್ರ ಮಂತ್ರಿ ಕೂಡ ಆಗಿದ್ದರು.
ಆದರೆ ನಂತರ ಬಂದ ವೀರಪ್ಪ ಮೊಯ್ಲಿ ಅವರು ಆ ಕ್ಷೇತ್ರದವರಲ್ಲ. ಅವರು ದಕ್ಷಿಣ ಕನ್ನಡದಿಂದ ಬಂದಥವರು. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಬಹಳ ಪ್ರಬಲವಾದಂಥ ಸಂದರ್ಭದಲ್ಲಿ ಅಲ್ಲಿ ನಿಂತು ಅದನ್ನು ಎದುರಿಸಬೇಕಾದಂಥ ಒಬ್ಬ ನಾಯಕ ಆ ಕ್ಷೇತ್ರವನ್ನೇ ಬಿಟ್ಟು ಓಡಿ ಬರ್ತಾರೆ ಅಂದರೆ ಏನರ್ಥ?. ಆ ನಾಯಕ ಅಲ್ಲಿಂದ ಬರಬಾರದಿತ್ತು, ಅಲ್ಲಿ ಬಿಜೆಪಿಯನ್ನು ಹಿಮ್ಮೆಟ್ಟಿಸುವ ಛಲವನ್ನು ಆತ ತೊಡಬೇಕಿತ್ತು.
ಉದಾಹರಣೆಗೆ, ಜನರ್ಧಾನ ಪೂಜಾರಿ ಅಂಥವರು ವಿಫಲರಾಗಿರಬಹುದು, ಆದರೆ ಅಲ್ಲೇ ನಿಂತು ಹೋರಾಟ ಮಾಡುತ್ತಿದ್ದಾರೆ. ಆದರೆ ಇವರು ಅಲ್ಲಿಂದ ಓಡಿ ಬಂದುಬಿಟ್ಟಿದದ್ದಾರೆ. ಬಂದು ಇಲ್ಲಿ ಸುರಕ್ಷಿತ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಗೆದ್ದು, 10 ವರ್ಷದಿಂದ ನೀರಿನ ಬಗ್ಗೆ ಆಶ್ವಾಸನೆಗಳನ್ನು ಕೊಡುತ್ತಲೇ ಬಂದಿದ್ದಾರೆ. ಇವತ್ತಿಗೂ ಕೂಡ ಆಶ್ವಾಸನೆಯ ಶೇಕಡಾ ಒಂದರಷ್ಟು ಸಹ ಯಶಸ್ವಿಯಾಗಿಲ್ಲ. ಜನಗಳು ಅಲ್ಲಿ ವೀರಪ್ಪ ಮೊಯ್ಲಿ ಎಂದರೇ ಸಾಕು ನಗ್ತಾರೆ, ಸುಳ್ಳುಹೇಳ್ತಾರೆ ಅಂತ ಆಡಿಕೊಂಡು ನಗ್ತಾರೆ. ಅಂಥ ಸ್ಥಿತಿ ತಲುಪಿಸಿದ್ದಾರೆ.
ಆ ಕಾರಣಕ್ಕಾಗಿ ಇವರೆಲ್ಲರಿಗಿಂತ ನಾನು ಉತ್ತಮ ಅಭ್ಯರ್ಥಿ ಅನಿಸತ್ತೆ.
ಯಾಕಂದ್ರೆ ಆ ಜಿಲ್ಲೆಯಲ್ಲಿ ನೀರಿನ ಹೋರಾಟ ಆರಂಭ ಮಾಡಿದ್ದೇ ನಾನು. ಮೊಟ್ಟ ಮೊದಲ ಕೇಸ್ ಇರೋದೆ ನನ್ನ ಮೇಲೆ, ಆದ್ದರಿಂದ ಅಲ್ಲಿ ಆ ಹೋರಾಟ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲಿ ಮೂಲಭೂತ ಸಮಸ್ಯೆ ಇರೋದೆ, ನೀರು, ನಿರುದ್ಯೋಗ, ಮಕ್ಕಳಲ್ಲಿ ಪೌಷ್ಠಿಕಾಂಶದ ಸಮಸ್ಯೆ ಇದೆ. ಈ ಎಲ್ಲಾ ಇರೋದರಿಂದಾಗಿ ನಾನು ಅಲ್ಲಿ ನಿಂತು ಆ ಜನಗಳನ್ನು ಪ್ರತಿನಿಧಿಸೋಕೆ ಸಾಧ್ಯ ಅಂತ ನನಗೆ ಅನಿಸತ್ತೆ. ಜತೆಗೆ ಸಂವಿಧಾನದ ಬಗ್ಗೆ ನನಗೆ ಜ್ಞಾನ ಇರುವುದರಿಂದ ಇವರೆಲ್ಲರಿಗಿಂತ ಇನ್ನೂ ಪರಿಣಾಮಕಾರಿಯಾಗಿ ಸಂಸತ್ ಪ್ರತಿನಿಧಿಸಬಲ್ಲೆ ಎಂಬುದು ನನ್ನ ಅಭಿಪ್ರಾಯ.
ಟ್ರೂಥ್ ಇಂಡಿಯಾ ಕನ್ನಡ: ರಾಷ್ಟ್ರ ಮಟ್ಟದಲ್ಲಿ ಇತ್ತೀಚೆಗೆ ಪುಲ್ವಾಮ ದಾಳಿ ಆದ ನಂತರ ಯುದ್ಧ ರೀತಿಯ ಸನ್ನಿವೇಶ ಸೃಷ್ಟಿಸಿ ಅಥವಾ ಬಾಲ ಕೋಟ್ ವೈಮಾನಿಕ ದಾಳಿ ಎಲ್ಲವನ್ನು ಬಳಸಿಕೊಂಡು ಹೊಸ ಉನ್ಮಾದವನ್ನು ಸೃಷ್ಟಿಸಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ನಿನ್ನೆ ಚುನಾವಣಾ ಆಯೋಗ ಸಹ ಅದರ ಬಗ್ಗೆ ಎಚ್ಚರಿಕೆ ನೀಡಿದೆ. ನಿಮ್ಮ ಜಿಲ್ಲೆಯಲ್ಲಿ ಜನರಿಗೆ ಇದರ ಪರಿಣಾಮವನ್ನು ಎದುರಿಸಲು ಜನರಿಗೆ ನೀವು ಯಾವ ರೀತಿ ಮನವೊಲಿಸುತ್ತೀರಾ?
ಡಾ. ಸಿ.ಎಸ್. ದ್ವಾರಕಾನಾಥ್ : ಮೂಲಭೂತವಾಗಿ ನನ್ನ ಜಿಲ್ಲೆಯಲ್ಲಿರುವಂತಹ ಎಲ್ಲಾ ಸೈನಿಕರು, ಸೇನೆಯಲ್ಲಿರುವ ಅನೇಕ ಕುಟುಂಬಗಳ ಸಂಪರ್ಕ ನನಗಿದೆ. ಅವರ್ಯಾರು ದೊಡ್ಡ ದೊಡ್ಡ ಕುಟುಂಬಗಳು, ದೊಡ್ಡ ದೊಡ್ಡ ಜಾತಿಯಿಂದ ಬಂದವರಲ್ಲ. ಅವರೆಲ್ಲರ ಜತೆಗೆ ನನ್ನ ಸಂಪರ್ಕ ಇದೆ. ಅವರೆಲ್ಲ ನಮ್ಮ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ದಲಿತರಾಗಿದ್ದಾರೆ. ಹಾಗಾಗಿ ಅವರ ನಿಜವಾದ ನೋವು ನನಗೆ ಗೊತ್ತಿದೆ. ಇವರು ಯುದ್ಧೋನ್ಮಾದವನ್ನು ಸೃಷ್ಟಿಸಿ ಯುದ್ಧೋನ್ಮಾದದ ಮೂಲಕ ಏನೂ ಅರಿಯದ ಮಕ್ಕಳನ್ನು ಬಲಿಕೊಟ್ಟು ರಾಜಕಾರಣ ಮಾಡುವುದಿದೆಯಲ್ಲ, ಇಂಥ ಸತ್ಯಗಳನ್ನು ಅವರಿಗೆ ಅರಿವು ಮಾಡಿಕೊಡುತ್ತಿದ್ದೇನೆ. ಅವರಿಗೂ ಗೊತ್ತಾಗ್ತಾ ಇದೆ. ಮಾಧ್ಯಮಗಳಲ್ಲಿ ಹರಡುತ್ತಿರುವ ಸುಳ್ಳುಗಳಿವೆಯಲ್ಲ, ಅದನ್ನೂ ಸಹ ಬಹಳ ಸಷ್ಟವಾಗಿ ನಿದರ್ಶನದೊಂದಿಗೆ ಹೇಳ್ತಾ ಇದೀನಿ. ಕಳೆದ ಒಂದು ತಿಂಗಳಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ. ಆ ಕಾರಣಕ್ಕಾಗಿಯೇ ನಾನು ಹೋದ ಕಡೆ ಎಲ್ಲಾ ಸುಳ್ಳುಗಳು ಹೊರಬೀಳುತ್ತಿದೆ, ಸತ್ಯ ಅರ್ಥವಾಗುತ್ತಿದೆ. 100 ಜನ ಹುಡುಗರು ಸಿಕ್ಕರೂ ಅವರಿಗೆ ನೈಜಚಿತ್ರಣ ತಿಳಿಸುತ್ತೇನೆ. ನಿನ್ನೆ ಸಹ ವಿಜಯಪುರದಲ್ಲಿ ಇದನ್ನೇ ಮಾತಾಡಿದೆ. ಕೆಲವು ಯುವಕರು ಏನೋ ದೊಡ್ಡ ಯುದ್ಧ ನಡೆಯುತ್ತಿದೆ, ದೇಶವನ್ನು ಉಳಿಸುವುದಕ್ಕಾಗಿ ಯುದ್ಧ ಮಾಡುತ್ತಿದ್ದಾರೆ ಎಂಬ ಕಲ್ಪನೆಯಲ್ಲಿದ್ದರು. ಗೊಂದಲದಲ್ಲಿದ್ದ ಯುವಕರಿಗೆ, ಯಾರಿಗೋಸ್ಕರ ಯುದ್ಧ, ಯಾವ ಚುನಾವಣೆಗಾಗಿ ಯುದ್ಧ ಎಂಬುದನ್ನು ಬಿಡಿಸಿ ಹೇಳಿದ ಮೇಲೆ ಅವರಿಗೆ ಅರ್ಥವಾಯಿತು. ನಮ್ಮ ಸೋಷಲ್ ಮೀಡಯಾ ಜಾಲ ಕೂಡಾ ಚೆನ್ನಾಗಿದ್ದು ಅದನ್ನೂ ಬಳಸಿಕೊಳ್ಳುತ್ತಿದ್ದೇವೆ. ಅವರ ಸುಳ್ಳುಗಳು, ಮಿಥ್ಯಗಳನ್ನು ಬ್ರೇಕ್ ಮಾಡುತ್ತಾ, ಸತ್ಯಗಳನ್ನು ಜನರತ್ತ ತೆಗೆದುಕೊಂಡು ಹೊಗ್ತಾ ಇದ್ದೇವೆ.
ಟ್ರೂಥ್ ಇಂಡಿಯಾ ಕನ್ನಡ: ನಿಮ್ಮ ಅಭಿಪ್ರಾಯದಲ್ಲಿ ಮುಂದೆ ಯಾರು ಪ್ರಧಾನಿಯಾಗಬೇಕು?
ಡಾ. ಸಿ.ಎಸ್.ದ್ವಾರಕಾನಾಥ್: ನನಗೆ ಈಗಿನ ಪರಿಸ್ಥಿತಿಗಳನ್ನು ನೋಡಿದಾಗ ಪ್ರಧಾನ ಮಂತ್ರಿ ಆಗುವ ಅರ್ಹತೆ ಇರುವುದು ಮಾಯಾವತಿ ಅವರಿಗೆ ಮಾತ್ರಾನೆ. ಯಾಕೆ ಈ ಮಾತನ್ನು ಹೇಳ್ತೀನಿ ಅಂದ್ರೆ, ಉತ್ತರ ಪ್ರದೇಶದ ಗೆಲುವು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಯಾವುದೇ ಪಕ್ಷ ಆಗಲಿ ಬಹುಮತ ಪಡೆಯುತ್ತಿದೆ ಎಂದು ನನಗೆ ಅನಿಸುತ್ತಿಲ್ಲ. ಯಾರೇ ಬಂದರೂ ಮಾಯಾವತಿ ಅವರ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕಾಗುತ್ತದೆ. ಅದರಲ್ಲೂ ಕೂಡ ನಾವೆಲ್ಲಾ ಸೇರಿರುವುದರಿಂದ ಆದಷ್ಟು ಬಿಜೆಪಿಗೆ ಬೆಂಬಲ ಕೊಡದಂತೆ ನೋಡಿಕೊಂಡು, ಕಾಂಗ್ರೆಸ್ ಪರವಾಗಿ, ಕಾಂಗ್ರೆಸ್ ಮಹಾ ಜಾತ್ಯತೀತ ಪಕ್ಷ ಎಂದು ನಾನು ನಂಬಿಲ್ಲ, ಆದರೆ ಹೋಲಿಸಿದಾಗ ಕಾನ್ಶೀರಾಂ ಅವರು ಹೇಳಿದಂತೆ ಒಂದು ಹೆಡೆ ಎತ್ತಿರುವ ಹಾವು, ಇನ್ನೊಂದು ಹುಲ್ಲಲ್ಲಿ ಮಲಗಿರುವ ಹಾವು. ಆದರೂ ಬಿಜೆಪಿಯ ಕೋಮುವಾದಿ ಭಾವನೆಗಳು ಇದೆಯಲ್ಲಾ, ಅವರ ಅಟ್ಟಹಾಸ ನೋಡಿದ ಮೇಲೆ ಈ ಕ್ಷಣಕ್ಕಾದರೂ ಅವರನ್ನು ಸದೆಬಡಿಯಲು ನಮಗಿರುಂವಂಥ ಹತ್ತಿರದ ಸ್ನೇಹಿತರ ಜತೆ ನಾವು ಹೋಗಬೇಕಿದೆ. ನಾನು ಜೆಡಿಎಸ್ ಜತೆ ಮಾತನಾಡಿದೆ, ಅವರ ರಾಜಕಾರಣ ಎಲ್ಲರಿಗೂ ಗೊತ್ತಿರುವುದರಿಂದ ಹೆಚ್ಚು ಹೇಳಲ್ಲ. ನನಗೆ ಮೂಲತಃ ಟಿಕೆಟ್ ಕೊಡಲಿಕ್ಕೆ ನನ್ನ ಜಾತಿ ಅಡ್ಡ ಬರತ್ತೆ, ನಾನು ಜೆಡಿಎಸ್ ಜಾತಿಯವನಲ್ಲ. ಅದಕ್ಕೋಸ್ಕರ ನನಗೆ ಜಾತಿ ಅಡ್ಡಿ ಆಗತ್ತೆ. ನನಗೆ ಆಶ್ಚರ್ಯ ಆಗುತ್ತಿರುವುದು ಏನಂದ್ರೆ, ನಾನು ಕ್ಷೇತ್ರಕ್ಕೆ ಕಾಲಿಟ್ಟಾಗ ನಾನು ಏನು ನೀರಿಕ್ಷಿಸಿದ್ದೆನೋ, ಅದಕ್ಕೆ ಹತ್ತು ಪಟ್ಟು ಹೆಚ್ಚಿನ ಸ್ಪಂದನೆ ಸಿಕ್ಕಿದೆ. ಅವರಿಗೆ ಒಂದು ಬದಲಾವಣೆ ಬೇಕಿದೆ, ಅವರನ್ನ ಪ್ರತಿನಿಧಿಸುವಂಥವರು ಪಾರ್ಲಿಮೆಂಟ್ ಗೆ ಹೋಗಬೇಕು ಅನ್ನೋ ಭಾವನೆ ಅವರಲ್ಲಿದೆ. ಅವರ ಮೂಲಭೂತ ಸಮಸ್ಯೆಯಾದ ಕುಡಿಯುವ ನೀರನ್ನೂ ಕೊಡಲಾರದಂಥ ರಾಜಕಾರಣ ಅಲ್ಲಿ ನಡೀತಾ ಇದೆಯಲ್ಲ, ನೀರು ಕೊಟ್ಟರೂ ವಿಷದ ನೀರು ಕೊಡ್ತಾ ಇದ್ದಾರೆ. ಇಲ್ಲಿ ಬೆಂಗಳೂರಲ್ಲಿರುವ ಎಲ್ಲಾ ವಿಷಕರವಾದ, ರಾಸಾಯನಿಕ ನೀರನ್ನು ಸ್ವಚ್ಚ ಮಾಡಿ ಕೊಡುವಂಥ ಪ್ರಯತ್ನ ನಡೀತಾ ಇದೆ. ನೀರಿನಲ್ಲಿ ರಾಸಾಯನಿಕ ಇರುವುದರಿಂದ ಈ ನೀರನ್ನು ಕುಡಿಯಲು, ದನ ಕರುಗಳಿಗೂ ಹಾಗೂ ವ್ಯವಸಾಯಕ್ಕೂ ಬಳಸಬೇಡಿ. ಎಂದು ನರಸಾಪುರ ಮಂಡಲ ಪಂಚಾಯತ್ ನಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಎಲ್ಲಾ ಕಾರಣದಿಂದ ನನ್ನ ಮೊಟ್ಟ ಮೊದಲ ಆದ್ಯತೆಯೇ ನೀರು. ಈ ನೀರಿನ ಸಮಸ್ಯೆಯನ್ನು ನಾನು ಮಾತ್ರ ಬಗೆಹರಿಸಬಲ್ಲೆ ಎನ್ನುವ ನಂಬಿಕೆ ನಮ್ಮ ಸಮುದಾಯಗಳಿಗೆ ಬರ್ತಾ ಇದೆ. ಆ ಕಾರಣಕ್ಕಾಗಿ ಬಹಳ ದೊಡ್ಡ ಸ್ಪಂದನೆ ಸಿಗುತ್ತಿದೆ.
ಅಲ್ಲದೇ, ನಾನು ಗ್ರಾಮಾಂತರ ಪ್ರದೇಶಗಳಿಗೆ ಹೋದಾಗ ಅನೇಕ ಜನ ಮಕ್ಕಳಿಗೆ ನೀರಿನ ಸಂಬಂಧಿ ಕಾಯಿಲೆ ಫ್ಲೋರೋಸಿಸ್ ಸೇರಿದಂತೆ ಹಲವು ಕಾಯಿಲೆಗಳಿಂದ ಮಕ್ಕಳು ಬಳಲುತ್ತಿದ್ದಾರೆ. ಅದರ ಜತೆಗೆ ಬಡತನದಿಂದಾಗಿ ಪೌಷ್ಟಿಕಾಂಶದ ಕೊರತೆಯೂ ಇದೆ. ಒಂದು ಹಳ್ಳಿಗೂ ರಸ್ತೆ ಇಲ್ಲ, ಒಂದು ಹಳ್ಳಿಯಲ್ಲೂ ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಒಂದು ಸರ್ಕಾರಿ ಶಾಲೆ ಸರಿಯಿಲ್ಲ, ಒಂದು ಸರ್ಕಾರಿ ಆಸ್ಪತ್ರೆ ಸರಿಯಿಲ್ಲ. ಇದನ್ನೆಲ್ಲಾ ನೋಡುತ್ತಿರುವ ಸಂದರ್ಭದಲ್ಲಿ ಎಲ್ಲರಿಗೂ ಒಂದು ನಂಬಿಕೆ ಬರುತ್ತಿದೆ. ನಿಮ್ಮಂಥವರು ಬಂದರೆ ಏನಾದರೂ ಒಂದು ಮಾಡಲಿಕ್ಕೆ ಸಾಧ್ಯ ಆಗತ್ತೆ ಎಂದು ಹೇಳುತ್ತಿದ್ದಾರೆ.
ಟ್ರೂಥ್ ಇಂಡಿಯಾ ಕನ್ನಡ: ಧನ್ಯವಾದಗಳು, ಶುಭಾಶಯಗಳು ಸರ್
ಡಾ.ಸಿ.ಎಸ್.ದ್ವಾರಕಾನಾಥ್: ಧನ್ಯವಾದಗಳು
2 Comments
Truth India Kannada is one of the scribes mentioned by Napolean who said “I can face two battalions but not two scribes, while the Brashtcahar Joothe Psychopaths (BJP) referred media as PRESSTITUTES.
Yes sir,
Very true.
You are the only hope .
Regards