ಪಶ್ವಿಮ ಬಂಗಾಳದಲ್ಲಿ ಬಿಜೆಪಿ ಪಕ್ಷವು ತಾನು ಆಡಳಿತಾರೂಢ ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ಸೋಲಿಸಿಯೇ ಸಿದ್ಧ ಎಂದು ಭಾರೀ ಸದ್ದುಗದ್ದಲ ಮಾಡುತ್ತಿದೆ. ಟಿಎಂಸಿ ಪಕ್ಷದ ರಾಜ್ಯಸಭಾ ಸದಸ್ಯರಾದ ಡೆರೆಕ್ ಓ’ ಬ್ರಿಯೆನ್ ಪ್ರಚಂಡ ವಾಗ್ಮಿ. ಟಿಎಂಸಿಯ ರಾಷ್ಟ್ರೀಯ ವಕ್ತಾರರೂ ಹೌದು. ಅವರೊಂದಿಗೆ ದಿ ಹಿಂದೂ ಪತ್ರಿಕೆ ನಡೆಸಿದ ಸಂದರ್ಶನವನ್ನು ಟ್ರೂಥ್ ಇಂಡಿಯಾ ಕನ್ನಡ ತನ್ನ ಓದುಗರಿಗೆ ನೀಡುತ್ತಿದೆ. ಬಿಜೆಪಿಯ ಸಾಮರ್ಥ್ಯ, ಟಿಎಂಸಿ ಸ್ಥಿತಿಗತಿ, ಮೈತ್ರಿಕೂಟ, ಪುಲ್ವಾಮಾ ದಾಳಿ, ಇತ್ಯಾದಿ ವಿಷಯಗಳ ಕುರಿತು ಮಾನ್ಯ ಸಂಸದರು ಮಾತನಾಡಿದ್ದಾರೆ.
ಪ್ರತಿಪಕ್ಷಗಳು ಚುನಾವಣಾ ಸಮರವನ್ನು ಒಂದು ಕಡೆ ಬಿಜೆಪಿ ಮತ್ತೊಂದು ಕಡೆ ಇತರ ಎಲ್ಲಾ ಪಕ್ಷಗಳು ಎಂಬಂತೆ ಮಾಡಿವೆ. ಇಂತಹ ಬೈನರಿ ಬಿಜೆಪಿಗೆ ಸಹಕಾರಿಯಾಗುವುದೇ?
ಪ್ರತಿಪಕ್ಷಗಳೇ ನೂ ಇದನ್ನು ಮೋದಿ ವರ್ಸಸ್ ಇತರರು ಎನ್ನುವ ಹಾಗೆ ಮಾಡಿಲ್ಲ. ಹಾಗಾಗಿಬಿಟ್ಟಿದೆ ಎಂದು ನಾವು ನಂಬುವಂತೆ ಮಾಡುತ್ತಿರುವುದು ಬಿಜೆಪಿ. ಈ ಭಾವನೆ ನಮ್ಮಲ್ಲಿ ಮೂಡಲಿ, ಇದನ್ನೇ ನಾವು ನಂಬಲಿ ಎಂದು ಬಿಜೆಪಿ ಬಯಸುತ್ತಿದೆ.
ಉದ್ಯೋಗ, ಕೃಷಿ ಇತ್ಯಾದಿಗಳ ಬಗ್ಗೆ ನರೇಂದ್ರ ಮೋದಿ ಕೊಟ್ಟಿದ್ದ ಭರವಸೆಗಳನ್ನು ಈಡೇರಿದ್ದಾರೆಯೇ ಇಲ್ಲವೇ- ಇದೇ ಈ ಸಲದ ಚುನಾವಣಾ ವಿಷಯ. ಮೋದಿ ಇದ್ದಕ್ಕಿದ್ದಂತೆ ನೋಟು ಅಮಾನ್ಯೀಕರಣ ಮಾಡಿದರು. ಆದರೆ ಹಾಗೆ ಮಾಡುವಾಗ ತಾವು ತಿಳಿಸಿದ್ದ ಗುರಿ ತಲುಪಿದರೇ?
ಪ್ರಸ್ತುತ ಸಮಸ್ಯೆಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಬಿಜೆಪಿ ಬಳಿ ಉತ್ತರವೇ ಇಲ್ಲ. ಆದ್ದರಿಂದ ಚುನಾವಣೆಯನ್ನು ಘೋಷಣೆಗಳು ಹಾಗೂ ಆಕರ್ಷಕ ಜಾಹೀರಾತುಗಳ ಮೂಲಕ ಬದಲಾಯಿಸಿ ಜನರನ್ನು ಮತ್ತೊಮ್ಮೆ ಮೂರ್ಖರಾಗಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ.
ಪುಲ್ವಾಮ ದುರಂತ ಹಾಗೂ ಬಾಲಕೋಟ್ ದಾಳಿಯ ಪರಿಣಾಮ ಏನು?
ನಿರುದ್ಯೋಗ, ಆಡಳಿತದಲ್ಲಿ ಅಸಾಮರ್ಥ್ಯ ಪ್ರದರ್ಶನ, ನೋಟು ಅಮಾನ್ಯೀಕರಣ ಎಂಬ ವಿಪತ್ತು, ಜಿಎಸ್ ಟಿ ಬೇಕಾಬಿಟ್ಟಿ ಜಾರಿ, ಆರ್ಥಿಕತೆಯ ಹಿನ್ನಡೆ ಮತ್ತು ನೀಡಿದ್ದ ಭರವಸೆಗಳನ್ನು ಈಡೇರಿಸದೆ ಇರುವುದು ಸದ್ಯದ ಸಮಕಾಲೀನ ಸಮಸ್ಯೆಗಳು. ಆದರೆ ಬಿಜೆಪಿ ಇದೆಲ್ಲವನ್ನು ಮರೆಮಾಚಿ, ಈ ವಿಷಯಗಳ ಮೇಲಿನ ಜನರ ಗಮನವನ್ನು ಬೇರೆಡೆ ಸೆಳೆಯಲು ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಬಿಂಬಿಸುತ್ತಿದೆ.
ಅಲ್ಲದೇ, ದೇಶದ ಪ್ರಧಾನಿ ಮೋದಿ ಅವರು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 42 ಸಿಆರ್ ಪಿಎಫ್ ಯೋಧರ ಭಾವಚಿತ್ರವನ್ನು ಬಳಸಿಕೊಂಡು ರ್ಯಾಲಿ ನಡೆಸಿದ್ದನ್ನು ಕಂಡಾಗ ಮತ್ತು ದೆಹಲಿಯ ಸಂಸದನೊಬ್ಬ ಪ್ರಚಾರಕ್ಕಾಗಿ ಮೋದಿ, ಅಮಿತ್ ಷಾ ಚಿತ್ರದ ಜೊತೆ ಯೋಧರ ಭಾವಚಿತ್ರಗಳನ್ನು ಪೋಸ್ಟರ್ ಗಳಲ್ಲಿ ಹಾಕಿದ್ದನ್ನು ನೋಡಿದಾಗ ಬಹಳ ದುಃಖ ಹಾಗೂ ರೋಷ ಹುಟ್ಟಿಸುತ್ತದೆ. ಇವುಗಳ ಮೂಲಕ ಬಿಜೆಪಿ ತನ್ನ ದೇಶಭಕ್ತಿಯನ್ನು ಸಾಬೀತು ಮಾಡಲು ಯತ್ನಿಸುತ್ತಿದೆ.
ಬಿಜೆಪಿಯ ಸಿಧ್ಧಾಂತಿಗಳು ಯಾರೆಲ್ಲಾ ಇದ್ದರೋ ಅವರಲ್ಲಿ ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ ಎಂಬುದು ನಮಗೆಲ್ಲ ತಿಳಿದ ವಿಷಯ. ಈಗ ಬಿಜೆಪಿ ಮಾಡುತ್ತಿರುವ ಗಿಮಿಕ್ಕುಗಳು ಫಲಿಸುತ್ತವೆ ಎಂದೇನೂ ನನಗೆ ಅನಿಸಲ್ಲ. ಯಾಕಂದ್ರೆ ಭಾರತದ ಸರಾಸರಿ ಮತದಾರರಿಗೆ ವಿಚಾರವಂತಿಕೆ ಹಾಗೂ ಗಿಮಿಕ್ ಗಳ ನಡುವಿನ ವ್ಯತ್ಯಾಸ ತಿಳಿದಿದೆ. ಸರಿಯಾಗಿ, ಸಮಚಿತ್ತದ ಯೋಚನೆ ಮಾಡುವ ಯಾವ ಭಾರತೀಯ ಪ್ರಜೆಗೂ ದೇಶಭಕ್ತಿಯ ಬಗ್ಗೆ ಭಾಷಣ ಮಾಡುವ ಅಗತ್ಯವಿಲ್ಲ.
ಬಿಜೆಪಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವತ್ತ ಆಕ್ರ,ಮಣಕಾರಿ ಹೆಜ್ಜೆ ಇಟ್ಟಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಬಳಿ ಹೈಪ್ ಮಾಡುವ ಯುಂತ್ರವಿದೆ. ಅದರ ಮೂಲಕ ಹಾಗೆ ಮಾಡುತ್ತಿದೆ.
ನಾನು ರಾಜಕಾರಣಿ, ಅಲ್ಲದೇ ರಾಜಕೀಯ ವಿದ್ಯಾರ್ಥಿಯೂ ಹೌದು. ಇಲ್ಲಿ ವಿರೋಧ ಪಕ್ಷದ ಸ್ಥಾನವನ್ನು ತುಂಬಲು ಮೊದಲು ಕಾಂಗ್ರೆಸ್, ನಂತರ ಎಡಪಂಥೀಯ ಪಕ್ಷಗಳು ಪ್ರಯತ್ನಿಸಿದಂತೆ ಈಗ ಅದನ್ನು ಕಸಿಯಲು ಬಿಜೆಪಿ ಪ್ರಯತ್ನಿಸುವುದು ಸಹಜವಾಗಿದೆ.
ಆದರೆ ಬಿಜೆಪಿ ತೃಣಮೂಲ ಕಾಂಗ್ರೆಸ್ ಗೆ ಒಂದು ಪರ್ಯಾಯವಾಗಲು ಎಂದಿಗೂ ಸಾಧ್ಯವಿಲ್ಲ. ಪ.ಬಂಗಾಳದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದ ಗೀತೆಯಲ್ಲಿ ತೃಣಮೂಲ ಕಾಂಗ್ರೆಸ್ ಹೆಸರನ್ನು 55 ಸಲ ಬಳಸಿದ್ದಾರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಸರು ಐದು ಸಲ ಬಳಸಿಕೊಂಡಿದ್ದಾರೆ. ನಾವು ಅತ್ಯಂತ ಜನಪ್ರಿಯ ಪಕ್ಷ ಎಂಬುದು ನಮಗೆ ಖಾತರಿಯಿದೆ, ಬಿಜೆಪಿಗೂ ಇದರ ಅರಿವಿದೆ.

ಟಿಎಂಸಿಯಲ್ಲಿ ಇತ್ತೀಚೆಗೆ ಹಲವು ಶಾಸಕರು ಹಾಗೂ ಸಂಸದರು ಪಕ್ಷಾಂತರ ಮಾಡಿದ್ದಾರೆ. ಇದು ನಿಮಗೆ ಪರಿಣಾಮ ಬೀರುವುದಿಲ್ಲವೇ?
ಟಿಎಂಸಿಯಲ್ಲಿ 224 ಶಾಸಕರಿದ್ದಾರೆ, ಅವರಲ್ಲಿ ಓರ್ವ ಶಾಸಕ ಪಕ್ಷಾಂತರ ಮಾಡಿದ್ದಾರಷ್ಟೇ. 47 ಸಂಸದರಿದ್ದಾರೆ, ಅವರಲ್ಲಿ ಇಬ್ಬರನ್ನು ನಾವೇ ಉಚ್ಛಾಟಿಸಿದ್ದೇವೆ. ಚಳಿಗಾಲದ ಅಧಿವೇಶನದ ಆರಂಭಕ್ಕೂ ಮುನ್ನವೇ ಅವರನ್ನು ಸಂಸದರ ವ್ಯಾಟ್ಸಾಪ್ ಗುಂಪಿನಿಂದ ತೆಗೆಯಲಾಗಿತ್ತು. ಆದ್ದರಿಂದ ನಮ್ಮ ಪಕ್ಷದಿಂದ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಆರು ತಿಂಗಳ ಮುಂಚೆಯೇ ಅವರಿಗೆ ತಿಳಿದಿತ್ತು. ಸಹಜವಾಗಿ ಅವರು ಟಿಕೆಟ್ ಹುಡುಕಿಕೊಂಡು ಹೋಗಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯನ್ನು ಮಣಿಸಲು ತೃಣಮೂಲ ಕಾಂಗ್ರೆಸ್ ಕಮ್ಯುನಿಷ್ಟ್ ಪಕ್ಷಕ್ಕೆ ಸಹಕಾರ ನೀಡುತ್ತಿದೆ ಎಂಬುದಾಗಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.
34 ವರ್ಷದ ಎಡ ಪಕ್ಷದ ಆಡಳಿತದಲ್ಲಿ ಟಿಎಂಸಿಯ 45 ಸಾವಿರ ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ. ದಯವಿಟ್ಟು ಇಂತಹ ಆಲೋಚನೆ ತರಲೇಬೇಡಿ. ಬಂಗಾಳದಲ್ಲಿ ನಾವು ಬಿಜೆಪಿ ಹಾಗೂ ಸಿಪಿಐ(ಎಂ) ಎರಡನ್ನೂ ಒಟ್ಟಾಗಿ ಎದುರಿಸುತ್ತಿದ್ದೇವೆ. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಎದುರು ಸ್ಪರ್ಧಿಸುತ್ತಿದ್ದೇವೆ.
ರಾಷ್ಟ್ರೀಯ ಮಟ್ಟದಲ್ಲಿ ನಾವು ಕಾಂಗ್ರೆಸ್ ಪಕ್ಷದ ಜೊತೆ ಇದ್ದೇವೆ. ಪಶ್ಚಿಮ ಬಂಗಾಳದಲ್ಲಿ ಮೂರೂ ಪಕ್ಷಗಳ ವಿರುದ್ಧ ಚುನಾವಣೆ ಎದುರಿಸಲಿದ್ದೇವೆ. ಈಗ ಬಂಗಾಳದ ಜನತೆಗೆ ಇರುವುದು ಎರಡೇ ಆಯ್ಕೆ. ಒಬ್ಬ ದುಷ್ಟ ಮನುಷ್ಯ ಹಾಗೂ ದುಷ್ಟ ಮನುಷ್ಯನನ್ನು ಸಂಹರಿಸಲು ಜನ್ಮ ತಳೆದಿರುವ ಒಬ್ಬ ಮಹಿಳೆ. ಈ ಇಬ್ಬರ ನಡುವೆ ಚುನಾವಣಾ ಹಣಾಹಣಿ ನಡೆಯಲಿದೆ. ದುಷ್ಟ ಮನುಷ್ಯ ತನ್ನ ಪರಾಕ್ರಮವನ್ನು ದ್ವೇಷಭಾವದಿಂದ ಪಡೆದರೆ, ಮಹಿಳೆಯು ಪ್ರೀತಿ, ವಿಶ್ವಾಸದಿಂದ ಧೈರ್ಯ ಪಡೆಯುತ್ತಾಳೆ. ಇವೇ ಇಂದು ಬಂಗಾಳದ ಮತದಾರರಿಗಿರುವ ಎರಡು ಆಯ್ಕೆಗಳು.
2019ರ ಚುನಾವಣೆ ರಾಷ್ಟ್ರೀಯ ಮಟ್ಟದ ವಿಷಯಗಳ ಮೇಲೆ ಚುನಾವಣಾ ಸಮರ ನಡೆಯಲಿದೆಯೋ ಅಥವಾ ರಾಜ್ಯ ಮಟ್ಟದ ವಿಷಯಗಳಿಗೆ ಸೀಮಿತವಾಗಲಿದೆಯೋ?
ಈ ಚುನಾವಣಾ ಫಲಿತಾಂಶ ರಾಜ್ಯ ಚುನಾವಣೆಗಳ ಸಾರಾಂಶವಾಗಲಿದೆ.
ಬಿಜೆಪಿ ವಿರುದ್ಧ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ಹೋರಾಟ ನಡೆಸಿದರೆ, ನಾವು ಪಶ್ಚಿಮ ಬಂಗಾಳದಲ್ಲಿ ಸೆಣೆಸಲಿದ್ದೇವೆ, ತಮಿಳುನಾಡಿನಲ್ಲಿ ಡಿಎಂಕೆ ತನ್ನ ಶಕ್ತಿ ಪ್ರದರ್ಶಿಸುತ್ತದೆಯಷ್ಟೇ… ಮಿಕ್ಕ ಕಡೆಗಳಲ್ಲಿ ಸಹ ಹೀಗೆಯೇ ಇರುತ್ತದೆ.
ಮೂಲ: ದಿ ಹಿಂದೂ
Not only Modi since Independence ,no one has fullfilled promises.