ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಧಾರವಾಡದ ಕಟ್ಟಡ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಅವರಿಗೆ ಶುಕ್ರವಾರ ಹೃದಯಾಘಾತವಾಗಿತ್ತು, ಕೂಡಲೇ ಅವರನ್ನು ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶಿವಳ್ಳಿ ಅವರಿಂದು ಕೊನೆಯುಸಿರೆಳೆದಿದ್ದಾರೆ.
ಧಾರವಾಡದ ಕಟ್ಟಡದ ದುರಂತ ಸ್ಥಳದಲ್ಲೇ ಮಾರ್ಚ್ 20 ರಿಂದ ಬೀಡು ಬಿಟ್ಟಿದ್ದ ಶಿವಳ್ಳಿ ಅವರು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಗುರುವಾರ ಮಧ್ಯರಾತ್ರಿಯ ವರೆಗೆ ಅವರು ಅಲ್ಲಿಯೇ ಇದ್ದರು, ಈ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ.
ಕಳೆದ ತಿಂಗಳು ವಿಷಾಹಾರ ಸೇವನೆಯಿಂದಾಗಿ ಅವರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ಸಚಿವ ಶಿವಳ್ಳಿ ಅವರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದಾರೆ.
ಶಿವಳ್ಳಿ ಅವರು ಕುಂದಗೋಳ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಸದ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪುಟದಲ್ಲಿ ಪೌರಾಡಳಿತ ಇಲಾಖೆ ಸಚಿವರಾಗಿದ್ದರು.
56 ವರ್ಷದ ಶಿವಳ್ಳಿ 1999ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಎಸ್. ಬಂಗಾರಪ್ಪ ಅವರ ಬೆಂಬಲಿಗರಾಗಿದ್ದ ಶಿವಳ್ಳಿ ಅವರು ವಿಧಾನಸಭೆ ಚುನಾವಣೆಯಲ್ಲಿ 3 ಬಾರಿ ಸೋಲು ಹಾಗೂ 3 ಬಾರಿ ಗೆಲುವು ಕಂಡಿದ್ದರು. 2 ಬಾರಿ ಪಕ್ಷೇತರರಾಗಿಯೂ ಚುನಾವಣೆ ಕಣಕ್ಕೆ ಇಳಿದಿದ್ದರು. 1999, 2013, 2018ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿರುವ ಅವರು ರೈತ ಪರ ಹೋರಾಟದ ಮೂಲಕ ಸಾರ್ವಜನಿಕ ಬದುಕಿಗೆ ಬಂದವರು. ನವಲಗುಂದ ತಾಲೂಕಿನ ಶೆಲವಡಿ ಗ್ರಾಮದಲ್ಲಿ ಜನಿಸಿರುವ ಅವರು ಕುಂದಗೋಳ ತಾಲೂಕು ಯರಗುಪ್ಪಿಯವರು.
ಶಿವಳ್ಳಿ ಅವರ ಅಗಲಿಕೆಗೆ ಮುಖಂಡರು ಸಂತಾಪ ಸೂಚಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು, ಸುದೀರ್ಘ ಕಾಲದ ನನ್ನ ಸ್ನೇಹಿತರಾದ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಶಿವಳ್ಳಿ ಅವರು ಮೆಲುಮಾತಿನ,ಸರಳ ವ್ಯಕ್ತಿತ್ವದ, ಜನಾನುರಾಗಿ ನಾಯಕರಾಗಿದ್ದರು. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಸುದೀರ್ಘ ಕಾಲದ ನನ್ನ ಸ್ನೇಹಿತರಾದ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಶಿವಳ್ಳಿ ಅವರು ಮೆಲುಮಾತಿನ,ಸರಳ ವ್ಯಕ್ತಿತ್ವದ, ಜನಾನುರಾಗಿ ನಾಯಕರಾಗಿದ್ದರು.
ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.@INCKarnataka pic.twitter.com/swXAWGNIqJ— Siddaramaiah (@siddaramaiah) March 22, 2019
ಹಾಸನದಲ್ಲಿ ನಡೆಯುತ್ತಿದ್ದ ಸಭಾ ಕಾರ್ಯಕ್ರಮದ ನಡುವೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ, ನಮ್ಮ ಸಚಿವ ಸಂಪುಟದ ಪೌರಾಡಳಿತ ಸಚಿವ, ಧಾರವಾಡದ ನಾಯಕ ಶಿವಳ್ಳಿ ಅವರು ನಿಧನ ಹೊಂದಿದರುವುದು ವಿಷಾದದ ಸಂಗತಿ ಎಂದು ಒಂದು ನಿಮಿಷದ ಮೌನಾಚರಣೆ ಮಾಡಿದರು.
ಸಚಿವ ಶಿವಳ್ಳಿ ಅವರ ನಿಧನದ ಸುದ್ದಿ ಆಘಾತ ಉಂಟುಮಾಡಿದೆ. ಜನಸಾಮಾನ್ಯರ ನಡುವೆ ಬೆರೆಯುತ್ತಿದ್ದ, ಮಣ್ಣಿನ ಮಗ, ರಾಜಕಾರಣಿ ಶಿವಳ್ಳಿ ಅವರು ಸರಳತೆ ಹಾಗೂ ಬದ್ಧತೆಯಿಂದ ಜನರ ಸೇವೆ ಮಾಡುತ್ತಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಧಾರವಾಡ ಜಿಲ್ಲೆಗೆ ತುಂಲಾರದ ನಷ್ಟ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
Shocked to hear the sudden demise of our minister Sri CS Shivalli. A truly grassroots, son of the soil poltician who served the people with great simplicity and commitment.
A great loss for the Congress and for the Dharwad region.
— Dinesh Gundu Rao / ದಿನೇಶ್ ಗುಂಡೂರಾವ್ (@dineshgrao) March 22, 2019
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸರಳ, ಸಜ್ಜನಿಕೆಯ ರಾಜಕಾರಣಿ ಶಿವಳ್ಳಿ ನಿಧನ ಬಹಳ ದುಃಖದ ಸಂಗತಿ. ಅವರು ಜನರೊಂದಿಗೆ ಸುಲಭವಾಗಿ ಬೆರೆಯುತ್ತಿದ್ದರು, ಸದಾ ಜನೋಪಯೋಗಿ ಕೆಲಸಗಳನ್ನು ಮಾಡುತ್ತಿದ್ದರು. ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಅಭಿವೃದ್ಧಿ ಸಂಬಂಧ ಇಬ್ಬರೂ ಹಲವು ಬಾರಿ ಚರ್ಚಸಿದ್ದೆವು. ಅವರ ನಿಧನ ಜಿಲ್ಲೆಗೆ ತುಂಬಲಾರದ ನಷ್ಟ ಎಂದರು.