ಇತ್ತೀಚೆಗೆ ಸುಪ್ರೀ ಕೋರ್ಟ್ ಮತ್ತು ಕೇಂದ್ರ ಸರ್ಕಾರಗಳು ಸೇರಿ ಲಕ್ಷಾಂತರ ಆದಿವಾಸಿಗಳನ್ನು ಸಣ್ಣ ರೈತರನ್ನು ಕಾಡಿನಿಂದ ಹೊರಬ್ಬುವ ಆದೇಶವೊಂದಕ್ಕೆ ಕಾರಣವಾಗಿದ್ದವು. ಇದರಿಂದ ದೇಶದಾದ್ಯಂತ ಲಕ್ಷಾಂತರ ಜನರು ಆತಂಕಕ್ಕೀಡಾಗಿದ್ದಾರೆ. ಹೀಗೆ ಮಾಡಲು ಕಾರಣ ಅರಣ್ಯ ರಕ್ಷಣೆಯ ಕಾರಣವನ್ನು ಮುಂದಿಡಲಾಗಿತ್ತು. ಆದರೆ ಚುನಾವಣೆಯ ಮುನ್ನ ಪ್ರತಿಭಟನೆಯ ಭಯದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದವು.
ಆದರೆ ಈಗ ನೋಡಿ, ಇದೇ ಕೇಂದ್ರ ಸರ್ಕಾರ ಭಾರತದ ಹೃದಯ ಭಾಗದ ಸುಮಾರು 4,20,000 ಎಕರೆ ದಟ್ಟ ಅರಣ್ಯದ ಅಸ್ತಿತ್ವಕ್ಕೇ ಸಂಚಕಾರ ತಂದಿದೆ. ಇದಕ್ಕೆ ಸುಪ್ರೀ ಕೋರ್ಟು ಸಹ ಮೌನವಾಗಿ ಕುಳಿತಿದೆ.
ಫೆ.21ರ ಗುರುವಾರ, ಕೇಂದ್ರ ಸರ್ಕಾರ ದೇಶದಲ್ಲಿಯೇ ಅತ್ಯಂತ ದಟ್ಟವಾದ ಅರಣ್ಯವಿರುವ, ಅತ್ಯಂತ ಹೆಚ್ಚು ಹಸಿರು ಹೊದಿಕೆ ಇರುವ ಛತ್ತೀಸ್ಗಡದ ಹಸ್ದೆಯೋ ಆರಂದ್ ಅರಣ್ಯದ ಪಾರ್ಸಾದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಅನುಮತಿ ನೀಡಿದೆ. ಇದು ದೇಶದ ಪರಿಸರದ ಬಗ್ಗೆ, ಅರಣ್ಯ ರಕ್ಷಣೆಯ ಬಗ್ಗೆ, ಹಾಗೂ ಜನರ ಬದುಕಿನ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರನ್ನೂ ಆತಂಕಕ್ಕೆ ತಳ್ಳುವ ವಿಚಾರ.
ಹಸ್ದೆಯೋ ಆರಂದ್ ಅರಣ್ಯ ಪ್ರದೇಶವು ಭಾರತದ ಹೃದಯ ಭಾಗದಲ್ಲಿರುವ ಅತಿದೊಡ್ಡ ಅರಣ್ಯ ವಿಭಾಗಗಳಲ್ಲಿ ಒಂದು. ಸುಮಾರು 4,20,000 ಎಕರೆ ಅರಣ್ಯ ಪ್ರದೇಶವು ಇದರಲ್ಲಿದೆ. ಈ ವಿಶಾಲ ಅರಣ್ಯ ಪ್ರದೇಶದಲ್ಲಿ ಯಾವ ಹೃದಯಭಾಗದ ದಟ್ಟ ಅರಣ್ಯದಲ್ಲಿ ಯಾವ ಕಾರಣಕ್ಕೂ ಗಣಿಗಾರಿಕೆ ನಡೆಸಕೂಡದು ಎಂದು 2009ರಲ್ಲಿ ಕೇಂದ್ರ ಸರ್ಕಾರದ ಅರಣ್ಯ ಸಲಹಾ ಸಮಿತಿ ಹೇಳಿತ್ತೋ, ಇಲ್ಲಿನ ಯಾವ ದಟ್ಟ ಹಸಿರು ಅರಣ್ಯ ಹೊದಿಕೆಯನ್ನು ನಾಶ ಮಾಡುವ ಯಾವುದೇ ಗಣಗಾರಿಕೆಗೆ ಅವಕಾಶ ನೀಡಬಾರದು ಎಂದು 2014ರಲ್ಲಿ ರಾಷ್ಟ್ರೀಯ ಅರಣ್ಯ ಸಮೀಕ್ಷೆ ವರದಿಯಲ್ಲಿ ಹೇಳಿತ್ತೋ, ಅದೇ ದಟ್ಟ ಹಸ್ದೆಯೋ ಆರಂದ್ ಅರಣ್ಯ ಪ್ರದೇಶದಲ್ಲಿ ಹೊರಭೂಕವಚ ಗಣಿಗಾರಿಕೆ (ಓಪನ್ ಕಾಸ್ಟ್ ಮೈನಿಂಗ್) ನಡೆಸಲು ಉದ್ಯಮಿ ಗೌತಮ್ ಆದಾನಿಯ ಆದಾನಿ ಗ್ರೂಪ್ನ ಕಂಪನಿಗೆ ಅನುಮತಿ ಸಿಕ್ಕಿದೆ. ಅಂದ ಹಾಗೆ ಈ ಆದಾನಿಯವರು ನಮ್ಮ ಪ್ರದಾನಿ ನರೇಂದ್ರ ಮೋದಿಯವರ ಖಾಸಾ ಚೆಡ್ಡಿ ದೋಸ್ತು ಎನ್ನುವುದು ಲೋಕಕ್ಕೇ ತಿಳಿದ ವಿಷಯವಾಗಿದೆ.
ಹಸ್ದೆಯೋ ಆರಂದ್ ಅರಣ್ಯ ಪ್ರದೇಶದಲ್ಲಿ ಈಗಾಗಲೇ ಇರುವ 30 ಕಲ್ಲಿದ್ದಲು ಗಣಿ ಪಟ್ಟಿಕೆಗಳಲ್ಲಿ ರಾಜಾಸ್ಥಾನ್ ರಾಜ್ಯ ವಿದ್ಯುತ್ ಉತ್ಪಾದನ್ ನಿಗಮ್ ಲಿ. (RVUNL) ಕಂಪನಿ ನಡೆಸುತ್ತಿರುವ ಪಾರ್ಸಾ ಕೋಲ್ ಬ್ಲಾಕ್ ಸಹ ಒಂದಾಗಿದೆ. ವರ್ಷಕ್ಕೆ 5 ಮೆಟ್ರಿಕ್ ಟನ್ ಸಾಮರ್ಥ್ಯದ ಗಣಿ ಯೋಜನೆ ಇದಾಗಿದ್ದು, ಇದನ್ನು ಆದಾನಿ ಎಂಟರ್ ಪ್ರೈಸಸ್ ಲಿ.ನ ಒಂದು ಘಟಕವಾಗಿರುವ ರಾಜಾಸ್ತಾನ್ ಕೋಲಿಯರೀಸ್ ಲಿಮಿಟೆಡ್ ಕಂಪನಿ (RCL) ನಡೆಸಿಕೊಂಡು ಹೋಗಲಿದೆ. ಈ ವರ್ಷದ ಫೆಬ್ರವರಿಯಲ್ಲಿ ಮೊದಲ ಅರಣ್ಯ ಕ್ಲಿಯರೆನ್ಸ್ನ್ನು ಈ ಕಂಪನಿ ಪಡೆದಿದೆ, ಈಗ 2095 ಎಕರೆ (848 ಹೆ) ಅತ್ಯಂತ ದಟ್ಟ ಅರಣ್ಯವನ್ನು ಪಾರ್ಸಾ ಕಲ್ಲಿದ್ದಲು ಗಣಿಗಾರಿಕೆಗೆ ಬಿಟ್ಟುಕೊಡುವ ತೀರ್ಮಾನ ಕೈಗೊಂಡಿರುವುದು ಅರಣ್ಯ ಸಲಹಾ ಸಮಿತಿಯ ನಡಾವಳಿಗಳ ಮೂಲಕ ತಿಳಿದು ಬಂದಿದೆ.
ಪಾರ್ಸಾ ಕಲ್ಲಿದ್ದಲು ಗಣಿಯು ಹೊರ ಹೊರಭೂಕವಚ ಗಣಿಗಾರಿಕೆಯಾಗಿದ್ದು (ಓಪನ್ ಕಾಸ್ಟ್) ಅಪಾರ ಪ್ರಮಾಣದ ವಿಶಾಲ ಕಾಡಿನ ಪ್ರದೇಶವನ್ನು ನಾಶ ಮಾಡಿ ಭೂಮಿಯ ಮೇಲ್ಪದರವನ್ನು ಅಗೆಯಬೇಕಾಗಿರುತ್ತದೆ. ನಮ್ಮ ಬಳ್ಳಾರಿಯಲ್ಲಿ ಹೇಗೆ ಸಾವಿರಾರು ಎಕರೆ ಜಾಗದಲ್ಲಿ ಗಣಿಗಾರಿಕೆ ನಡೆಸಿ ಭೂಮಿಯನ್ನು ಬೋಳು ಮಾಡಲಾಗಿತ್ತೋ ಹಾಗೆ ಗಣಿ ಬಗೆಯುವ ವಿಧಾನವೇ ಓಪನ್ ಕಾಸ್ಟ್ ಮೈನಿಂಗ್. ಇಂತಹ ಪರಿಸರ ನಾಶದ ಗಣಿಗಾರಿಕೆಗೆ ಪರವಾನಗಿ ನೀಡುವ ವಿಚಾರವು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ತಜ್ಞರ ಅಂದಾಜು ಸಮಿತಿಯ (ಇಎಸಿ) ಮುಂದೆ ಮೂರು ಬಾರಿ ಪರಿಗಣನೆಗೆ ಬಂದಿತ್ತು. ಅಂತಿಮವಾಗಿ ಫೆ.21,2019ರಂದು ಅದು ಈ ಅಪಾಯಕಾರಿ ಗಣಿಗಾರಿಕೆಗೆ ತನ್ನ ಅನುಮೋದನೆ ನೀಡಿದೆ.
ಹಿಂದೆ 2018ರ ಫೆ 15ರಂದು ಇಎಸಿಯು ರಾಜ್ಯ ಬುಡಕಟ್ಟು ಕಲ್ಯಾಣ ಇಲಾಖೆಯನ್ನು ಗ್ರಾಮಸಭೆಯ ಒಪ್ಪಿಗೆ ವಿಷಯದಲ್ಲಿ ಅಭಿಪ್ರಾಯವೇನೆಂದು ಕೇಳಿತ್ತು ಹಾಗೆಯೇ ರಾಜ್ಯ ವನ್ಯಜೀವಿ ಮಂಡಳಿಯನ್ನೂ ಸಹ ಈ ಭಾಗದಲ್ಲಿ ಹಾದುಹೋಗುವ ಆನೆ ಕಾರಿಡಾರ್ ಮೇಲೆ ಬೀರುವ ಪರಿಣಾಮದ ಕುರಿತು ಅಭಿಪ್ರಾಯ ಕೇಳಿತ್ತು.
2018ರ ಜುಲೈ 24ರಂದು ಸಹ ಇಎಸಿಯು ಇದೇ ವಿಷಯಗಳನ್ನು ಕೇಳಿತ್ತು. ಹಸ್ದೆಯೋ ಆರಂದ್ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಸಂಬಂಧ ಯಾವುದೇ ದಾವೆಗಳು ನ್ಯಾಯಾಲಯದಲ್ಲಿವೆಯೇ ಎಂಬ ಕುರಿತೂ ಇಎಸಿ ತನಿಖೆ ನಡೆಸಿತ್ತು.
ಈ ಸಂಬಂಧ ಸುಪ್ರೀಂ ಕೋರ್ಟಿನಲ್ಲಿ ಎರಡು ದಾವೆಗಳಿವೆ. ಒಂದು ಛತ್ತೀಸ್ ಗಡದ ಸುದೀಪ್ ಶ್ರೀವಾಸ್ತವ ಎಂಬ ವಕೀಲರೊಬ್ಬರು ಹೂಡಿರುವ ದಾವೆಯಾಗಿದ್ದು ಪಾರ್ಸಾ-ಕೆಂಟೆ ವಿಸ್ತರಣಾ ಗಣಿ ಪಟ್ಟಿಕೆಯಲ್ಲಿ RVUNL ನಡೆಸುತ್ತಿರುವ ಗಣಿಗಾರಿಕೆಯನ್ನು ರದ್ದು ಪಡಸಿಲು ಕೋರಿ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಜಂಟಿ ಸಹಯೋಗದ ಗಣಿಕಾರಿಕೆಯನ್ನು ರದ್ದು ಪಡಿಸಿ, ಆದಾನಿ ಎಂಟರ್ ಪ್ರೈಸಸ್ ಲಿಯೊಂದಿಗೆ ಮಾಡಿಕೊಂಡಿರುವ ಕಲ್ಲಿದ್ದಲು ಸರಬರಾಜು ಒಪ್ಪಂದವನ್ನೂ ರದ್ದು ಪಡಿಸಲು ಕೋರಿ ಈ ದಾವೆ ಹೂಡಲಾಗಿದೆ. ಮತ್ತೊಂದು ದಾವೆಯನ್ನು RVUNL ಗಣಿಗಾರಿಕೆ ಕಂಪನಿಯೇ ಹೂಡಿದ್ದು ಛತ್ತೀಸ್ ಗಡದ ಕೆಲವು ಅರಣ್ಯ ಭಾಗಗಳಲ್ಲಿ ಗಣಿಗಾರಿಕೆಗೆ ರಾಷ್ಟ್ರೀಯ ಹಸಿರು ನ್ಯಾಯಪೀಠವು (ಎನ್ ಜಿ ಟಿ) ನಿಷೇಧ ಹೇರಿರುವುದನ್ನು ಸಡಿಲಗೊಳಿಸುವಂತೆ ಕೋರಲಾಗಿದೆ.
ಅರಣ್ಯ ಸಲಹಾ ಸಮಿತಿಯು ಮೇಲ್ಕಂಡ ದಾವೆಗಳ ಹಿನ್ನೆಲೆಯಲ್ಲಿ ಸಹಾಯಕ ಸಾಲಿಸಿಟರ್ ಜನರಲ್ (ಎಎಸ್ಜಿ) ಸಲಹೆ ಕೇಳಿದ್ದು ಅದಕ್ಕೆ, ಎಎಸ್ಜಿಯು’ ಮೇಲಿನ ದಾವೆಗಳಿಗೂ ಪಾರ್ಸಾ ಕಲ್ಲಿದ್ದಲು ಬ್ಲಾಕ್ಗೂ ಸಂಬಂಧವಿಲ್ಲ’ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಈ ಗಣಿಗಾರಿಕೆಗೆ ಕ್ಲಿಯರೆನ್ಸ್ ನೀಡಿದೆ.
ಫೆ 21ರಂದು ನೀಡಿರುವ ಗಣಿಗಾರಿಕೆ ಅನುಮತಿಯು ಸುಪ್ರೀ ಕೋರ್ಟಿನಲ್ಲಿ ಬಾಕಿ ಇರುವ ದಾವೆಗಳ ತೀರ್ಪಿಗೆ ಒಳಪಟ್ಟಿರುತ್ತದೆ ಎಂದೂ ಇಎಸಿ ನಡಾವಳಿಗಳ ಮೂಲಕ ತಿಳಿದುಬಂದಿದೆ. ಹಾಗೆಯೇ ಮೂರು ವರ್ಷಕ್ಕೊಮ್ಮೆ ಮೂರನೇ ಪಕ್ಷದವರಿಂದ ಪರಿಸರದ ಮೇಲಿನ ಪರಿಣಾಮಗಳನ್ನೂ ಮೌಲ್ಯಮಾಪನ ನಡೆಸಬೇಕೆಂದೂ ತಿಳಿಸಲಾಗಿದೆ.
ಫೆ.20ರಂದು ಅಂದರೆ ಕೇಂದ್ರವು ಪಾರ್ಸಾ ಗಣಿಗಾರಿಕೆಗೆ ಅಂತಿಮ ಅನುಮತಿಯ ಮುದ್ರೆ ಒತ್ತುವ ಹಿಂದಿನ ದಿನ ಛತ್ತೀಸ್ಗಡ ಬಚಾವೋ ಆಂದೋಲನದ ಪದಾಧಿಕಾರಿಗಳು ಇಎಸಿಗೆ ಪತ್ರವೊಂದನ್ನು ಬರೆದಿದ್ದು ಈ ಗಣಿಗಾರಿಕೆಯಿಂದ ಪರಿಸರ ಮೇಲೆ ಆಗುವ ಹಾನಿ ಮತ್ತು ಕಾನೂನಾತ್ಮಕ ತೊಡಕುಗಳನ್ನು ತಿಳಿಸಿದ್ದರು. ಛತ್ತೀಸ್ಗಡದ ಸರ್ಗುಜಾ ಜಿಲ್ಲೆಯ ಎರಡು ಗ್ರಾಮಗಳ ಗ್ರಾಮಸಭೆಗಳು ಒಪ್ಪಿಗೆ ನೀಡದೇ ಇದ್ದರೂ ಒಪ್ಪಿಗೆ ನೀಡಿರುವಂತೆನಕಲಿ ದಾಖಲೆ ಸೃಷ್ಟಿಸಿರುವ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿರುವುದನ್ನೂ ಈ ಪತ್ರದಲ್ಲಿ ತಿಳಿಸಲಾಗಿದೆ. ಕೆಲದಿನಗಳ ಹಿಂದೆ ಈ ಭಾಗದ ಜನರು ಗಣಿಗಾರಿಕೆ ವಿರೋಧಿಸಿ ಬೃಹತ್ ಪಾದಯಾತ್ರೆಯನ್ನೂ ನಡೆಸಿದ್ದರು. ಆದರೆ ಈ ಯಾವುದನ್ನೂ ಪರಿಗಣಿಸದ ಸರ್ಕಾರ ಆದಾನಿಗೆ ಅರಣ್ಯ ಬಗೆಯಲು ಅನುಮತಿಸಿದೆ.
ಕಾನೂನು ತಜ್ಞರು ಹೇಳುವ ಪ್ರಕಾರ, ಹಸ್ದೆಯೋ ಆರಂದ್ ಅರಣ್ಯ ಪ್ರದೇಶದ ಹೊರವಲಯದ ಪಾರ್ಸಾ ಈಸ್ಟ್ ಮತ್ತು ಕೇಟೆ ಬಸಾವೋ ಗಣಿಪಟ್ಟಿಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವಾಗ ಛತ್ತೀಸ್ ಗಡ ಸರ್ಕಾರವು ಹಸ್ದೆಯೋ ಆರಂದ್ ಅರಣ್ಯದ ಮುಖ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಕೂಡದು ಎಂಬ ಶರತ್ತು ವಿಧಿಸಲಾಗಿತ್ತು. ಆದರೆ ಈಗ ಅನುಮತಿ ನೀಡಿರುವ ಪಾರ್ಸಾ ಹೊರಭೂಕವಚ ಗಣಿಗಾರಿಕೆಯು ಈ ಶರತ್ತನ್ನು ಗಾಳಿಗೆ ತೂರಿ ಹಸ್ದೆಯೋ ಅರಣ್ಯದ ದಟ್ಟ ಅರಣ್ಯವನ್ನೇ ನಾಶ ಮಾಡಲಿದೆ.
“ಈ ಗಣಿಗರಿಕೆ ಸಂಪೂರ್ಣವಾಗಿ ಇಂದು ಕೈಗೊಳ್ಳಬೇಕಿರುವ ಪರಿಸರ ಮುನ್ನೆಚ್ಚರಿಕೆಗೆ ವಿರುದ್ಧವಾಗಿ ಹೋಗುತ್ತಿದೆ, ಮಧ್ಯ ಭಾರತದಲ್ಲಿರುವ ಮುಖ್ಯ ಅರಣ್ಯವನ್ನು ನಾಶ ಮಾಡಲಿದೆ, ಅರಣ್ಯ ಹಕ್ಕುಗಳನ್ನು ಉಲ್ಲಂಘಿಸಲಿದೆ ಹಾಗೂ ಮನುಷ್ಯ-ವನ್ಯಜೀವಿ ಸಂಘರ್ಷವನ್ನು ಹೆಚ್ಚಿಸಲಿದೆ” ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ನ ಕಾನೂನು ಸಂಶೋಧಕ ಕಂಚಿ ಕೊಹಿಲಿ ಹೇಳಿದ್ದಾರೆ.
2009ರಲ್ಲಿ ಹಾಸ್ದೆಯೋ ಅರಣ್ಯ ಪ್ರದೇಶವನ್ನು “ನಿಷೇಧಿತ ಪ್ರದೇಶ” ಎಂದು ಪರಿಸರ ಸಚಿವಾಲಯ ವರ್ಗೀಕರಿಸಿತ್ತು. ಅಂದು ಅರಣ್ಯ ಸಚಿವರಾಗಿದ್ದ ಜೈರಾಮ್ ರಮೇಶ್ ಅವರ ಎದುರು ಈ ಗಣಿಗಾರಿಕೆ ಪ್ರಸ್ತಾವ ಬಂದಾಗ ಅವರು ಹಸ್ದೆಯೋ ಅರಣ್ಯದ ಹೊರವಲಯದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದರೂ ದಟ್ಟ ಅರಣ್ಯ ಇರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ಇಲ್ಲವಂದು ಕಡಾಖಂಡಿತವಾಗಿ ತಿರಸ್ಕರಿಸಿದ್ದರು.
“ಪಾರ್ಸಾ ಗಣಿಗಾರಿಕೆಗೆ ಅವಕಾಶ ನೀಡಿರುವುದು ಕಾನೂನು ಬಾಹಿರ, ಏಕೆಂದರೆ ಈ ಹಿಂದೆ ಅರಣ್ಯ ಸಲಹಾ ಸಮಿತಿಯು ಹಸ್ದೆಯೋ ಆರಂದ್ ಪ್ರದೇಶದಲ್ಲಿ ಯಾವ ಕಾರಣಕ್ಕೂ ಹೊರಭೂಕವಚ ಗಣಿಗಾರಿಕೆಗೆ ಗಣಿ ಅವಕಾಶ ನೀಡಕೂಡದು ಎಂದಿದೆ. 2014ರ ಭಾರತದ ಅರಣ್ಯ ಸಮೀಕ್ಷೆ ವರದಿಯ ಸಹ ಹಸ್ದೆಯೋ ಆರಂದ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಯದಂತೆ ನೋಡಿಕೊಳ್ಳಬೇಕು ಎಂದಿದೆ” ಎನ್ನುತ್ತಾರೆ ಈ ವಿಷಯದಲ್ಲಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿ ಕಾನೂನು ಹೋರಾಟ ನಡೆಸುತ್ತಿರುವ ವಕೀಲ ಶ್ರೀವಾತ್ಸವ.
“ಪಾರ್ಸಾ ಕಲ್ಲಿದ್ದಲು ಬ್ಲಾಕ್ ನ ಇಡೀ ಪ್ರದೇಶ ದಟ್ಟ ಅರಣ್ಯದಿಂದ ಕೂಡಿದ್ದು ಅಲ್ಲಿ ಹೊರಭೂಕವಚ ಗಣಿಗಾರಿಕೆಗೆ ಅವಕಾಶ ನೀಡುವುದು ಇಡೀ ಹಾಸ್ದೆಯೋ ಪ್ರದೇಶದ ಮೇಲೆ, ಹತ್ತಿರದೇ ಹರಿಯುವ ಹಾಸ್ದೆಯೋ ನದಿಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರುತ್ತದೆ” ಎನ್ನುತ್ತಾರೆ ಛತ್ತೀಸ್ಗಡ ಬಚಾವೋ ಆಂದೋಲನದ ಅಲೋಕ್ ಶುಕ್ಲಾ. ‘ಈ ಪ್ರದೇಶವು ಆನೆ ಕಾರಿಡಾರ್ ಆಗಿತ್ತು ಈಗಾಗಲೇ ನಡೆಯುತ್ತಿರುವ ಗಣಿಗಾರಿಕೆಯಿಂದ ತೊಂದರೆಗೀಡಾಗಿರುವ ಆನೆಗಳು ಕಳೆದ ಮೂರು ವರ್ಷದಲ್ಲಿ ಐದು ಜನರನ್ನು ಕೊಂದಿವೆ. ಈಗ ಈ ಗಣಿಗಾರಿಕೆ ನಡೆದರೆ ಮನುಷ್ಯ-ಆನೆಗಳ ಸಂಘರ್ಷ ವಿಕೋಪಕ್ಕೆ ಹೋಗತ್ತದೆ’ ಎಂದು ಅವರು ಹೇಳುತ್ತಾರೆ. ಅಲೋಕ್ ಹೇಳುವಂತೆ “ಈ ಭಾಗದ ಸ್ಥಳೀಯರು ಗಣಿಗಾರಿಕೆ ಯೋಜನೆಯನ್ನು ವಿರೋಧಿಸುತ್ತಿದ್ದಾರೆ” .
“ಈ ಗಣಿಗಾರಿಕೆಯು ಅರಣ್ಯ ಹಕ್ಕು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಯೋಜನಗೆ ಗ್ರಾಮಸಭೆಗಳು ಒಪ್ಪಿಗೆ ನೀಡಿಲ್ಲ. ಈ ಅಪಾಯಕಾರಿ ಗಣಿಗಾರಿಕೆ ನಡೆಯಕೂಡದು. ನಾವು ಹೊಸ ಕಾಂಗ್ರೆಸ್ ನೇತೃತ್ವದ ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದೇವೆ, ಈ ಯೋಜನೆಗೆ ಅನುಮತಿ ಹಿಂಪಡೆಯಲು ಒತ್ತಾಯಿಸಿದ್ದೇವೆ; ಹಸ್ದೆಯೋ ಅರಣ್ಯ ಪ್ರದೇಶದ ಗ್ರಾಮಸ್ಥರು ಮೊನ್ನೆ 28 ಕಿಲೋಮೀಟರ್ ಪಾದಯಾತ್ರೆ ನಡೆಸಿ ಈ ಯೋಜನೆಯನ್ನು ಪ್ರತಿಭಟಿಸಿದ್ದಾರೆ” ಎಂದು ಶುಕ್ಲಾ ಹೇಳುತ್ತಾರೆ.
ಇದಕ್ಕೆ ವ್ಯತಿರಿಕ್ತವಾಗಿ, ಗಣಿಗಾರಿಕೆ ಕಂಪನಿ,ಇಲ್ಲಿ ತಾನು ಗಣಿಗಾರಿಕೆ ನಡೆಸಲು ಎಲ್ಲಾ ರೀತಿಯ ಕ್ಲಿಯರೆನ್ಸ್, ಅನುಮತಿಗಳನ್ನು ಪಡೆದುಕೊಂಡಿರುವುದಾಗಿ ಹೇಳುತ್ತಿದೆ. ಸುಪ್ರೀಂ ಕೋರ್ಟಿನಲ್ಲಿರುವ ದಾವೆ ಬೇರೆ ಪ್ರದೇಶಕ್ಕೆ ಅನ್ವಯವಾಗುವುದರಿಂದ ನಮ್ಮ ಗಣಿಗಾರಿಕೆಗೆ ಬಾಧಿಸುವುದಿಲ್ಲ ಎಂಬ ವಿಶ್ವಾಸ ಕಂಪನಿಯ ಆಡಳಿತ ಮಂಡಳಿಯದ್ದು.
ಆದಾನಿ ಗ್ರೂಪ್ ನ ವಕ್ತಾರರು, ‘ನಾವು ಇಲ್ಲಿ ಗಣಿಗಾರಿಕೆಯನ್ನು ಹೊಣೆಗಾರಿಕೆಯಿಂದ ನಡೆಸುವ ಜೊತೆಗೆ ಪರಿಸರವನ್ನೂ ಕಾಪಾಡುತ್ತೇವೆ, ಆದಾನಿ ಗ್ರೂಪ್ ಸೋಲಾರ್ ಬೆಳಕು, ಗ್ಯಾಸ್ ವಿತರಣೆ, ರಸ್ತೆ ನಿರ್ಮಾಣ ಇತ್ಯಾದಿ ಕೆಲಸಗಳನ್ನು ಛತ್ತೀಸ್ ಗಡ ರಾಜ್ಯದಲ್ಲಿ ನಡೆಸುತ್ತದೆ. ಛತ್ತೀಸ್ ಗಡದ ಜನ ಮತ್ತು ಪರಿಸರಕ್ಕೆ ನಾವು ಬದ್ಧತೆ ಹೊಂದಿದ್ದೇವೆ ಹಾಗೆಯೇ ದೇಶದ ವಿದ್ಯುತ್ ಶಕ್ತಿಯ ಭದ್ರತೆಗೂ ಬದ್ಧರಾಗಿದ್ದೇವೆ’ ಎನ್ನುತ್ತಾರೆ.
ಟ್ರೂಥ್ ಇಂಡಿಯಾ ಕನ್ನಡ
(ಈ ಲೇಖನದ ಕೆಲವು ಭಾಗಗಳನ್ನು ದಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ದಿನಾಂಕ 21.03.2019ರಂದು ಪ್ರಕಟಿಸಿರುವ ವರದಿಯಿಂದ ಪಡೆಯಲಾಗಿದೆ)
This project should not start at any cost. We have to protest to save wild life and environment. If it is a concern of job creation, it is because of high population of our country and people should stop making two or more babies instead of cutting trees.