ಚುನಾವಣೆ ಹತ್ತಿವಾಗುತ್ತಿದ್ದಂತೆ ರಾಜ್ಯ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮೇಲಿನ ಭ್ರಷ್ಟಾಚಾರ ಆರೋಪದ ಉರುಳುಗಳು ಮತ್ತಷ್ಟು ಬಿಗಿಯಾಗುತ್ತಲೇ ಇವೆ.ಮುಖ್ಯಮಂತ್ರಿ ಕುಮಾರಸ್ವಾಮಿ ಆಡಿಯೋ ಮೂಲಕ ಬಯಲಾದ ಅಪರೇಶನ್ ಕಮಲ ಹಗರಣ ಚರ್ಚೆಯಾಗಿ ಇನ್ನೇನು ಯಡಿಯೂರಪ್ಪ ಮೇಲೆ ತನಿಖೆ ನಡೆಯುತ್ತದೆ ಎಂಬಷ್ಟರಲ್ಲಿ ‘ಪುಲ್ವಾಮಾ ದಾಳಿ’ ನಡೆಯಿತು. ದೇಶದ, ರಾಜ್ಯದ ಗಮನವೆಲ್ಲಾ ಅತ್ತ ಸರಿಯಿತು. ಈ ನಡುವೆ ಅದೇನಾಯಿತೋ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದ ಆಡಿಯೋದ ಸೌಂಡ್ ಸ್ತಬ್ಧವಾಯಿತು. ಯಡಿಯೂರಪ್ಪ ಉಸಿರಾಡಿದರು ಎನ್ನುಷ್ಟರಲ್ಲಿ ಈಗ ಮತ್ತೊಂದು ಆರೋಪ ಎದುರಾಗಿದೆ.
ಯಡಿಯೂರಪ್ಪ ಮತ್ತು ಬಿಜೆಪಿ ಉನ್ನತ ನಾಯಕರ ನಡುವೆ ನಡೆದಿತ್ತು ಎನ್ನಲಾಗ 1800 ಕೋಟಿ ರೂಪಾಯಿ ಮೊತ್ತದ ರಾಷ್ಟ್ರಮಟ್ಟದ ಹಗರಣದ ಕುರಿತು ಕಾರವಾನ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯನ್ನಾಧರಿಸಿ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪದಿಂದಾಗಿ ಯಡಿಯೂರಪ್ಪ ಮತ್ತೊಮ್ಮೆ ರಾಷ್ಟ್ರ ರಾಜಕಾರಣದ ಗಮನ ಸೆಳೆದಿದ್ದಾರೆ. ಈ ಮೂಲಕ ‘ ನಾನೂ ಚೌಕೀದಾರ’ ಅಭಿಯಾನ ನಡೆಸುತ್ತಿರುವ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಮತ್ತೊಂದು ಮುಜುಗರವಾಗಿದೆ.
ಏನದು ಆರೋಪ?
‘ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 1,800 ಕೋಟಿ ರೂಪಾಯಿಗಳನ್ನು ತಮ್ಮ ಪಕ್ಷದ ರಾಷ್ಟ್ರೀಯ ನಾಯಕರಿಗೆ ನೀಡಿದ್ದರು ಹಾಗೂ ಇದನ್ನು ಶಾಸಕರ ದಿನಚರಿಯಲ್ಲಿ ಯಡಿಯೂರಪ್ಪ 2009ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿವರವಾಗಿ ದಾಖಲಿಸಿದ್ದರು. ಡೈರಿಯ ಪ್ರತಿ ಪುಟದಲ್ಲಿ ಸಹಿ ಹಾಕಿದ್ದರು’ ಎಂಬುದು ಕಾಂಗ್ರೆಸ್ ವಕ್ತಾರ ಸುರ್ಜೇವಾಲಾ ಇಂದು ದೆಹಲಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾಡಿದ ಆರೋಪ. ಯಡಿಯೂರಪ್ಪ ಹಸ್ತಾಕ್ಷರವಿದೆ ಎಂದು ಹೇಳಲಾದ ಡೈರಿಯ ಪುಟಗಳನ್ನೂ ಒಳಗೊಂಡಂತೆ ಪತ್ರಿಕೆಯಲ್ಲಿ ವರದಿಯಾದ ಕೆಲವು ದಾಖಲೆಗಳನ್ನು ಅವರು ಮಾಧ್ಯಮಗಳಿಗೆ ಪ್ರದರ್ಶಿಸಿ ಬಿಜೆಪಿಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಈ ಆರೋಪಕ್ಕೆ, ಇತ್ತೀಚೆಗೆ ಕಾರಾವಾನ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವಿವರವಾದ ವರದಿಯನ್ನು ದಾಖಲೆಯಾಗಿ ನೀಡಿರುವ ಸುರ್ಜೇವಾಲಾ, ‘ಪ್ರಧಾನಿ ನರೇಂದ್ರ ಮೋದಿಯವರನ್ನೂ ಒಳಗೊಂಡಂತೆ ಯಾರ ಹೆಸರುಗಳನ್ನು ಉಲ್ಲೇಖಿಸಲಾಗಿದೆಯೋ ಅವರೆಲ್ಲರೂ ಪ್ರತಿಕ್ರಿಯೆ ನೀಡಬೇಕು” ಎಂದು ಆಗ್ರಹಪಡಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಸ್ಥಾಪಿಸಿರುವ ಲೋಕಪಾಲವು ಈ ಪ್ರಕರಣದ ತನಿಖೆ ನಡೆಸಬೇಕು ಎಂದೂ ಒತ್ತಾಯಿಸಿರುವ ಅವರು 2017ರಿಂದಲೇ ಯಡಿಯೂರಪ್ಪ ಅವರ ಸಹಿ ಇದ್ದ ಡೈರಿಯು ತೆರಿಗೆ ಇಲಾಖೆಯ ಬಳಿ ಇದ್ದರೂ ಮೋದಿ ಇದನ್ನು ಯಾಕೆ ತನಿಖೆಗೆ ಒಳಪಡಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
‘ಕಾರಾವಾನ್’ ವರದಿಯಲ್ಲಿ ಏನಿದೆ?
ಕಾಂಗ್ರೆಸ್ ವಕ್ತಾರ ಸುರ್ಜೇವಾಲಾ ಉಲ್ಲೇಖಿಸಿ ಬಿಡುಗಡೆ ಮಾಡಿರುವ ಕಾರಾವಾನ್ ಪತ್ರಿಕೆಯ ವರದಿಯಲ್ಲಿ ಕೆಳಕಂಡ ಅಂಶಗಳಿವೆ
- ಕಾರಾವಾನ್ ಪತ್ರಿಕೆಗೆ ಮುಖ್ಯವಾದ ದಾಖಲೆಗಳು ಲಭ್ಯವಾಗಿವೆ.
- ಈ ದಾಖಲೆಗಳ ಪ್ರಕಾರ ಬಿಜೆಪಿಯ ಪ್ರಮುಖ ಮುಖಂಡರೊಬ್ಬರ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಸ್ತಾಕ್ಷರ, ಸಹಿ ಇರುವ ಡೈರಿಯೊಂದು ಆದಾಯ ತೆರಿಗೆ ಅಧಿಕಾರಿಗಳ ಬಳಿ ಇದೆ.
- ಡೈರಿಯಲ್ಲಿ ದಾಖಲಿಸಿರುವ ಪ್ರಕಾರ ಯಡಿಯೂರಪ್ಪ ಅವರು ಬಿಜೆಪಿಯ ಉನ್ನತ ಮಟ್ಟದ ನಾಯಕರರು, ಬಿಜೆಪಿ ಕೇಂದ್ರ ಸಮಿತಿ, ನ್ಯಾಯಮೂರ್ತಿಗಳು ಮತ್ತು ವಕೀಲರಿಗೆ ಒಟ್ಟು 1800 ಕೋಟಿ ರೂಪಾಯಿ ಹಣ ಸಂದಾಯ ಮಾಡಿರುವುದು ದಾಖಲಾಗಿದೆ.
- 2009ರಲ್ಲಿ ಈ ಆರೋಪಿತ ಹಣ ಸಂದಾಯವನ್ನು ಯಡಿಯೂರಪ್ಪ ಅವರೇ ತಮ್ಮ ಹಸ್ತಾಕ್ಷರಲ್ಲಿ ದಾಖಲಿಸಿದ್ದಾರೆ.
- ಈ ಯಡ್ಡಿ ಡೈರಿಯ ಪುಟಗಳ ಪ್ರತಿಗಳು 2017ರಿಂದಲೂ ಆದಾಯ ತೆರಿಗೆ ಇಲಾಖೆಯಲ್ಲಿ ಇವೆ.
- ಡೈರಿಯ ಪುಟಗಳ ಪ್ರತಿಗಳಲ್ಲಿ ಯಡಿಯೂರಪ್ಪ ಅವರು ಕೇಂದ್ರ ಸಮಿತಿಗೆ 1000 ಕೋಟಿ ರೂಪಾಯಿ ನೀಡಿರುವುದಾಗಿ ದಾಖಲಿಸಿದ್ದಾರೆ.
- ಡೈರಿ ದಾಖಲೆಯ ಪ್ರಕಾರ ಯಡಿಯೂರಪ್ಪ ಹಣಕಾಸು ಸಚಿವ ಅರುಣ್ ಜೈಟ್ಲಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ತಲಾ 150 ಕೋಟಿ ರೂಪಾಯಿ, ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ 100 ಕೋಟಿ ರೂಪಾಯಿ; ಬಿಜೆಪಿ ಹಿರಿಯ ರಾಜಕಾರಣಿ ಎಲ್ ಕೆ ಅಡ್ವಾಣಿ, ಮತ್ತೊಬ್ಬ ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ ಅವರಿಗೆ ತಲಾ 50 ಕೋಟಿ ರೂಪಾಯಿ ಸಂದಾಯ ಮಾಡಿದ್ದಾರೆ
- ಇದರೊಂದಿಗೆ ‘ಗಡ್ಕರಿಯ ಮಗ’ನ ಮದುವೆಗೆ 10 ಕೋಟಿ ಸಂದಾಯವಾಗಿದೆ. ಇದಲ್ಲದೇ ಯಡಿಯೂರಪ್ಪ ಅವರು ನ್ಯಾಯಾಧೀಶರಿಗೆ 250 ಕೋಟಿ ರೂಪಾಯಿ ಹಾಗೂ ವಕೀಲರ ಫೀಜು ಎಂದು 50 ಕೋಟಿ ರೂಪಾಯಿ ಸಂದಾಯ ಮಾಡಿದ್ದಾರೆಂದು ಡೈರಿಯಲ್ಲಿ ದಾಖಲಿಸಿರುವುದಾಗಿ ಕಾರಾವಾನ್ ವರದಿ ಮಾಡಿದೆ. (ಈ ನ್ಯಾಯಾಧೀಶರು, ವಕೀಲರ ಹೆಸರುಗಳನ್ನು ಡೈರಿಯಲ್ಲಿ ತಿಳಿಸಿರುವುದಿಲ್ಲ)
- ಅರುಣ್ ಜೈಟ್ಲಿ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಮತ್ತು ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿ ಅವರಿಗೆ ಹಣ ಸಂದಾಯ ಮಾಡಿದ್ದಾರೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿರುವ, ಕಾರಾವಾನ್ ಪತ್ರಿಕೆಯಲ್ಲಿ ವರದಿಯಾದ ಯಡಿಯೂರಪ್ಪ ಹಸ್ತಾಕ್ಷರ, ಸಹಿ ಇದೆ ಎನ್ನಲಾದ 2009ನೇ ಇಸವಿಯ ಡೈರಿ ಕೆಲವು ಪುಟಗಳು (ದೊಡ್ಡದಾಗಿ ಕಾಣಲು ಚಿತ್ರದ ಮೇಲೆ ಒತ್ತಿ)
ಕಾರವಾನ್ ಪತ್ರಿಕೆಯಲ್ಲಿ ವರದಿಯಾಗಿರುವ ಈ ಎಲ್ಲಾ ಮಾಹಿತಿಯನ್ನು ಮಾಧ್ಯಮಗಳೆದುರು ತೆರೆದಿಟ್ಟಿರುವ ರಣದೀಪ್ ಸುರ್ಜೇವಾಲಾ ಯಡಿಯೂರಪ್ಪ ಅವರನ್ನು “ಸ್ವಭಾವಸಿದ್ಧ ಅಪರಾಧಿ” (habitual offender) ಎಂದು ಜರೆದಿದ್ದಾರೆ. ಅಲ್ಲದೇ ಯಡಿಯೂರಪ್ಪ ಡೈರಿ ಹಗರಣವು ಕೇವಲ ಕರ್ನಾಟಕಕ್ಕೆ ಸೀಮಿತ ಆಗಿರುವ ಹಗರಣವಲ್ಲ, ಇದು ಇಡೀ ರಾಷ್ಟ್ರಕ್ಕೇ ಸಂಬಂಧಿಸಿರುವ ಹಗರಣ, 1,800 ಕೋಟಿ ರೂಪಾಯಿ ಎಂಬುದು ಸಣ್ಣ ಮೊತ್ತವೇನಲ್ಲ ಎಂದಿದ್ದಾರೆ.
ಬಿಜೆಪಿ ಮತ್ತು ಯಡಿಯೂರಪ್ಪ ಪ್ರತಿಕ್ರಿಯೆ ಏನಾಗಿದೆ?
ದೆಹಲಿಯಲ್ಲಿ ಶುಕ್ರವಾರ ಕಾಂಗ್ರೆಸ್ ವಕ್ತಾರ ಸುರ್ಜೇವಾಲಾ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ಮೇಲೆ ಗಂಭೀರ ಆರೋಪ ನಡೆಸುತ್ತಿದ್ದಂತೆ ಬಿಜೆಪಿ ಹಾಗೂ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ರಣದೀಪ್ ಸಿಂಗ್ ಸರ್ಜೆವಾಲಾ ಬಿಡುಗಡೆ ಮಾಡಿದ ಡೈರಿ ಸುಳ್ಳು…ಕಾಂಗ್ರೆಸ್ ತಾವೇ ಸಿದ್ದಪಡಿಸಿರೋ ಸುಳ್ಳು ಡೈರಿಯನ್ನ ಬಿಡುಗಡೆ ಮಾಡಿದ್ದಾರೆ…ಇದಕ್ಕಾಗಿ ಮಾಧ್ಯಮಗಳ ಸಮಯವನ್ನು ವ್ಯರ್ಥ ಮಾಡಿದ್ದಾರೆ…ಬರವಣಿಗೆ ಮತ್ತು ಸಹಿ ಎರಡು ನಕಲಿಯದ್ದಾಗಿದೆ..ಅದು ಕಾಂಗ್ರೆಸ್ ನ ಫೇಕ್ ಡೈರಿ ಆಗಿದೆ…” ಎಂದು ಬಿಜೆಪಿ ಪ್ರತಿಕ್ರಿಯಿಸಿದ್ದರೆ,
ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ “ಮೈಭೀಚೌಕೀದಾರ್” (ನಾನೂ ಚೌಕಿದಾರನೇ) ಅಭಿಯಾನದ ಹಿನ್ನೆಲೆಯಲ್ಲಿ ತಮ್ಮ ಟ್ವಿಟರ್ ಹೆಸರನ್ನು “ಚೌಕೀದಾರ್ ಬಿ.ಎಸ್. ಯಡಿಯೂರಪ್ಪ” ಎಂದು ಬದಲಿಸಿರುವ ಯಡಿಯೂರಪ್ಪ ಅವರ ಟ್ವೀಟ್ ಪ್ರತಿಕ್ರಿಯೆ ಹೀಗಿದೆ
“ಕಾಂಗ್ರೆಸ್ ಪಕ್ಷ ಮತ್ತು ಅವರ ನಾಯಕರು ವೈಚಾರಿಕವಾಗಿ ದಿವಾಳಿ ಆಗಿದ್ದಾರೆ..ಸರ್ವಜನಿಕವಾಗಿ ಚರ್ಚಿಸೋಕೆ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ…ಮೋದಿ ಅವರ ಜನಪ್ರಿಯತೆ ಹೆಚ್ಚಾಗಿದೆ ಇದರಿಂದ ಕಾಂಗ್ರೆಸ್ ನವರು ಹತಾಶೆಯಾಗಿದ್ದೆ..ಸೋಲು ಕಟ್ಟಿಟ್ಟ ಬುತ್ತಿ ಅಂತಾ ಕಾಂಗ್ರೆಸ್ ನವರಿಗೆ ಗೊತ್ತಾಗಿದೆ..ಮೊದಲೇ ಸೋಲು ಒಪ್ಪಿಕೊಂಡಿದ್ದೆ..ಈ ಹಿಂದೆ ಈ ವಿಚಾರಚಾಗಿ ವಿಚಾರಣೆ ನಡೆದು ಅವೆಲ್ಲ ನಕಲಿ ಅಂತಾ ಗೊತ್ತಾಗಿದೆ..ಆದರೂ ನಕಲಿ ಸುದ್ದಿಗಳನ್ನು ಹರಡುವ ಉದ್ದೇಶ ಹೊಂದಿದ್ದಾರೆ…ಇದು ಅಪ್ರಸ್ತುತ ಮತ್ತು ಸುಳ್ಳಿನ ಕಂತೆ..ಈ ವಿಚಾರವಾಗಿ ಕಾನೂನು ತಜ್ಞರ ಜೊತೆ ಮಾತನಾಡಿ, ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗುತ್ತೇನೆ..”
Absolute nonsense, disgusting & desperate efforts by @INCIndia to release such fake diary, prove it at the earliest or face defamation case. pic.twitter.com/3sMkYTd3Kb
— Chowkidar B.S. Yeddyurappa (@BSYBJP) March 22, 2019
Its nonsence. Nobody belive this.