ಒಂದು ಉನ್ನತ ಧ್ಯೇಯ ಮತ್ತು ಆದರ್ಶಗಳಿಗಾಗಿ ಹೋರಾಡಿ ಸ್ಥಾಪಿತ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು ವ್ಯವಸ್ಥೆಯ ಬದಲಾವಣೆಗಾಗಿ ಅವಿರತ ಶ್ರಮಿಸಿ, ಪ್ರಭುತ್ವದ ಧೂರ್ತತನಕ್ಕೆ ಬಲಿಯಾಗುವ ಪ್ರಾಮಾಣಿಕ ಹೋರಾಟಗಾರರನ್ನು ‘ಹುತಾತ್ಮ’ ಎಂದು ಬಣ್ಣಿಸಬಹುದು. ವ್ಯಕ್ತಿಗತ ಸೈದ್ಧಾಂತಿಕ ನೆಲೆಯಲ್ಲಿ ಹುತಾತ್ಮ ಎಂಬ ಪದಕ್ಕೆ ನಾನಾ ಅರ್ಥಗಳು ಮೂಡುತ್ತವೆ. ಭಾರತದ ಪ್ರಸ್ತುತ ರಾಜಕಾರಣದಲ್ಲಿ ಹುತಾತ್ಮ ಎಂಬ ಪದವೂ ಸಹ ಮಾರುಕಟ್ಟೆಯ ಸರಕಿನಂತಾಗಿದ್ದು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಚಿಮ್ಮುಹಲಗೆಯಾಗಿ ಪರಿಣಮಿಸಿದೆ.
ದೇಶ-ದೇಶದ್ರೋಹ-ದೇಶ ಭಕ್ತಿ ಮುಂತಾದ ವಿದ್ಯಮಾನಗಳು ಬಲಪಂಥೀಯ ರಾಜಕಾರಣದ ನೆಲೆಯಲ್ಲಿ ಅನುಕೂಲಸಿಂಧುವಾಗಿ ವ್ಯಾಖ್ಯಾನಿಸಲ್ಪಡುತ್ತಿರುವ ಸಂದರ್ಭದಲ್ಲಿ ಹುತಾತ್ಮ ಎಂಬ ಪದ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತಿದೆ.
ಆದರೆ ಹುತಾತ್ಮ ಎನ್ನುವ ಗೌರವ ಪಡೆಯುವ ಹಕ್ಕು ಕೇವಲ ಪ್ರಾಮಾಣಿಕ ದಿಟ್ಟ ಕ್ರಾಂತಿಕಾರಿಗಳಿಗೆ ಮಾತ್ರವೇ ಇರುತ್ತದೆ. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಾವಿರಾರು ಜನ ತಮ್ಮ ಜೀವವನ್ನೇ ಪಣವಿಟ್ಟು ಬ್ರಿಟೀಷರ ವಿರುದ್ಧ ಹೋರಾಡಿ ಮೃತರಾದರೂ ಹುತಾತ್ಮ ಎಂಬ ಪಟ್ಟಕ್ಕೆ ಅರ್ಹನಾದ ವ್ಯಕ್ತಿ ಸಂಗಾತಿ ಭಗತ್ಸಿಂಗ್ ಮತ್ತು ಆತನ ಸಂಗಾತಿಗಳಾದ ರಾಜಗುರು ಸುಖದೇವ್ ಮತ್ತಿತರರು. ಏಕೆಂದರೆ ಭಗತ್ ಸಿಂಗ್ ಕೇವಲ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಹೋರಾಡಲಿಲ್ಲ. ಭಾರತದಲ್ಲಿ ಅಮೂಲಾಗ್ರ ಬದಲಾವಣೆ ತರಲು ಅಸಮಾನತೆಯ ಬುನಾದಿ ಮೇಲೆ ನಿರ್ಮಾಣವಾಗಿರುವ ಶ್ರೇಣೀಕೃತ, ಊಳಿಗಮಾನ್ಯ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿದ್ದ ಶೋಷಣೆ ಮತ್ತು ಅಸಮಾನತೆಯ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತು ಹಾಕಲು ಪಣ ತೊಟ್ಟಿದ್ದರು. ತಾವು ಕನಸಿದ್ದ ನವ ಸಮ ಸಮಾಜದ ಕನಸು, ಸಂಪೂರ್ಣ ಸ್ವಾತಂತ್ರ್ಯದ ಕನಸು ಸಾಕಾರಗೊಳ್ಳುವ ಮುನ್ನವೇ , ಭಗತ್ ಸಿಂಗ್ ಮತ್ತು ಅವನ ಸಂಗಾತಿಗಳು ಅಮರರಾದರು.
” ಸ್ವಾತಂತ್ರ್ಯ ಎಂದರೆ ಕೇವಲ ಯಜಮಾನರ ಬದಲಾವಣೆ ಎಂದಾದರೆ ಜನರ ಶೋಷಣೆಯು ಹಾಗೆ ಮುಂದುವರಿಯಲಿದೆ. ಆದ್ದರಿಂದ ಈ ಶೋಷಕ ವ್ಯವಸ್ಥೆಯನ್ನು ಬುಡ ಸಮೇತ ಕಿತ್ತು ಹಾಕಬೇಕು, ಹಳೆಯ ಸಂಗತಿಗಳನ್ನು ಕಾಪಾಡಿಕೊಂಡು ನವ ಸಮಾಜ ನಿರ್ಮಾಣ ಅಸಾಧ್ಯ, ಅಂದರೆ ಈ ದೇಶದಿಂದ ಬಿಳಿಯ ದೊರೆಗಳು ಹೋಗಿ ಕಂದು ಬಣ್ಣದ (ಇದೇ ದೇಶದ) ಭೂಮಾಲಿಕ, ಬಂಡವಾಳದಾರರ ಕೈಗೆ ರಾಜಕೀಯ ಅಧಿಕಾರ ಹಸ್ತಾಂತರವಾಗುವುದರಿಂದ ನಿಜವಾದ ಸ್ವಾತಂತ್ರ್ಯ ಬರುವುದಿಲ್ಲ. ಬದಲಿಗೆ ಈ ದೇಶದ ಬಡಜನರ ಶೋಷಣೆ ಮುಂದುವರೆಯಲಿದೆ” ಎಂಬ ಭಗತ್ ಸಿಂಗ್ ಆಡಿದ್ದ ಮಾತು ದೇಶದ ಇವತ್ತಿಗೆ ಹೆಚ್ಚು ಪ್ರಸ್ತುತ. ಹೌದು ಈಸ್ಟ್ ಇಂಡಿಯಾ ಕಂಪನಿಗಳ ಸ್ಥಾನದಲ್ಲಿ ಬಹುರಾಷ್ಟ್ರೀಯ ಕಾರ್ಪೋರೇಟ್ ಕಂಪೆನಿಗಳು, ಬ್ರಿಟಿಷರ ಪಾತ್ರದಲ್ಲಿ ರಾಜಕಾರಣದ ವ್ಯಾಪಾರಿಗಳು ಈ ದೇಶವನ್ನು ಲೂಟಿ ಹೊಡೆದು ಜನರನ್ನು ವಂಚಿಸುತ್ತಿದ್ದಾರೆ. 1947 ರಲ್ಲಿ ಕೇವಲ ಆಳುವ ಯಜಮಾನರು ಮಾತ್ರ ಬದಲಾಗಿರುವುದು. ಹಾಗಾಗಿಯೇ ಈಗಲೂ ದೇಶ ಬಡತನ, ಅಸ್ಪೃಶ್ಯತೆ, ಮೌಢ್ಯ, ಧರ್ಮಾಂಧತೆ, ದುಡಿಯುವ ರೈತ ಕಾರ್ಮಿಕರ ಪೋಷಣೆ ಮುಂದುವರೆದಿದೆ.
ಇಂದು ಹುತಾತ್ಮ ಭಗತ್ ಸಿಂಗ್ ನ ರಾಜಕೀಯ, ಆರ್ಥಿಕ, ಸೈದ್ಧಾಂತಿಕ, ವಿಚಾರಗಳು, ಅವರ ಆದರ್ಶ ನಮಗೆ ಪ್ರೇರೇಪಣೆಯಾಗಿವೆ. ಎಡಪಂಥೀಯ ಸಂಘಟನೆಗಳಿಗೆ ಭಗತ್ ಸಿಂಗ್ನ ಸಾಮ್ರಾಜ್ಯಶಾಹಿ, ವಸಹಾತುಶಾಹಿ ವಿರೋಧಿ ಧೋರಣೆ ಅಪ್ಯಾಯಮಾನವಾದರೆ ಬಲಪಂಥೀಯರಿಗೆ ಅವರದೇ ಆದ ಸೀಮಿತ ಚೌಕಟ್ಟಿನ “ ದೇಶಪ್ರೇಮ-ದೇಶಭಕ್ತಿ ” ಅವನನ್ನು ಆರಾಧಿಸುವಂತೆ ಮಾಡುತ್ತದೆ. ಭಗತ್ ಸಿಂಗ್ ಗಲ್ಲುಶಿಕ್ಷೆಗೊಳಗಾಗದೆ ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆಯಲ್ಲಿ ತಾನು ಬಯಸಿದ ಸಮಾಜವಾದಿ ವ್ಯವಸ್ಥೆಯನ್ನು ತರಲು ತನ್ನ ಯತ್ನ ಮುಂದುವರೆಸಿದ್ದಲ್ಲಿ ಬಹುಶಃ ಈಗಿನ ಸ್ವಯಂ ಘೋಷಿತ ದೇಶಭಕ್ತರಿಂದ ಭಾರತದಲ್ಲಿ ಆರಾಧ್ಯ ದೈವದ ಪಟ್ಟ ಅವನಿಗೆ ದೊರೆಯುತ್ತಿಲಿಲ್ಲವೇನೋ..!
ವಿಶ್ವದ ಇತಿಹಾಸ ಪಠ್ಯಗಳಲ್ಲಿ ಲ್ಯಾಟಿನ್ ಅಮೆರಿಕದ ಕ್ರಾಂತಿಕಾರಿ ಚೆ ಗುವಾರನನ್ನು ಕಡೆಗಣಿಸಿರುವಂತೆಯೇ ಭಗತ್ಸಿಂಗ್ನನ್ನೂ ಕಡೆಗಣಿಸಲಾಗಿದೆ. ಒಂದು ಅರ್ಥದಲ್ಲಿ ಭಗತ್ ಸಿಂಗ್ ಹುತಾತ್ಮನಾಗಿದ್ದು “ ದೇಶಭಕ್ತಿ ”ಯ ವಕ್ತಾರರಿಗೆ ಒಂದು ವರದಾನವಾಗಿ ಪರಿಣಮಿಸಿತೆಂದೇ ಹೇಳಬಹುದು. ಆದರೆ, ಕೇಸರಿಪಡೆಗಳಿಗೆ ಭಗತ್ ಸಿಂಗ್ ಪ್ರತಿಪಾದಿಸಿದ ನಾಸ್ತಿಕವಾದ, ಜಾತ್ಯತೀತ ,ಸಮಾಜವಾದಿ ವಿಚಾರಗಳು ಬಲಪಂಥೀಯ ರಾಜಕಾರಣಕ್ಕೆ ವಿರುದ್ಧವಾಗಿರುವುದರಿಂದ ಭಗತ್ ಸಿಂಗ್ ನನ್ನು ಕೇಸರಿಪಡೆಗಳು ಪೂರ್ತಿ ಹೈಜಾಕ್ ಮಾಡಲು ಸಾಧ್ಯವಾಗಿಲ್ಲ. ಇಲ್ಲದಿದ್ದರೆ ಕೆಂಪುಕೋಟೆಯ ತ್ರಿವರ್ಣ ಧ್ವಜದ ನೆರಳಲ್ಲಿ ವಿಜೃಂಭಿಸುವ ಭಗತ್ ಸಿಂಗ್ ನನ್ನು ಕೇಸರಿ ಭಗವಾಧ್ವಜದ ಶೋಭಾಯಾತ್ರೆಯಲ್ಲೂ ವಿಜೃಂಭಿಸುತ್ತಿದ್ದರು.
ಭಗತ್ ಸಿಂಗ್ ಹುತಾತ್ಮನಾಗಿ 89 ವರ್ಷಗಳು ಕಳೆದಿರುವ ಈ ಸಂದರ್ಭದಲ್ಲಿ ಕೇವಲ ಸ್ವಾತಂತ್ರ್ಯ ಸಂಗ್ರಾಮ ಎಂಬ ಸೀಮಿತ ಚೌಕಟ್ಟಿನೊಳಗೆ ಬಂಧಿಸುವುದು ಆ ಹುತಾತ್ಮನಿಗೆ ಅಪಚಾರ ಎಸಗಿದಂತೆಯೇ ಸರಿ. ಏಕೆಂದರೆ ಬ್ರಿಟೀಷ್ ಆಡಳಿತ ವ್ಯವಸ್ಥೆ ಭಗತ್ ಸಿಂಗ್ ಎಂಬ ಒಬ್ಬ ವ್ಯಕ್ತಿಯನ್ನು ಗಲ್ಲಿಗೇರಿಸಿತ್ತು. “ವ್ಯಕ್ತಿಗಳನ್ನು ಕೊಂದು ಹಾಕಬಹುದು ಆದರೆ ಅವರ ವಿಚಾರಗಳನ್ನಲ್ಲ. ಉನ್ನತ ಆದರ್ಶಗಳು ಅಂತ್ಯಗೊಳಿಸುವುದಿಲ್ಲ” ಎಂಬ ಭಗತ್ಸಿಂಗ್ನ ಮುತ್ತಿನಂತಹ ನುಡಿ ಸಾರ್ವಕಾಲಿಕ ಸತ್ಯ. ಭಗತ್ ಸಿಂಗ್ ಹುತಾತ್ಮನಾದ ನಂತರವೂ ಆತನ ವಿಚಾರ, ತತ್ವ ಸಿದ್ಧಾಂತಗಳು ಜೀವಂತವಾಗಿವೆ. ಇನ್ನೂ ಶತಮಾನಗಳ ಕಾಲ ಜೀವಂತವಾಗಿರುತ್ತವೆ.
ಇಂದು ಆಳುವ ವರ್ಗಗಳ ತಾಳಕ್ಕೆ ತಕ್ಕಂತೆ ಪತನದತ್ತ ಹೆಜ್ಜೆ ಹಾಕುತ್ತಾ ಭ್ರಷ್ಟ ವ್ಯವಸ್ಥೆಯ ಕಬಂಧ ಬಾಹುಗಳಿಗೆ ಸಿಲುಕಿ ನಲುಗುತ್ತಿರುವುದು ದೇಶದ ಯುವಜನತೆ. ಭಗತ್ ಸಿಂಗ್ ಪ್ರತಿಪಾದಿಸಿದ ಉನ್ನತ ಆದರ್ಶಗಳು ಯಾವುವು ಇಂದಿನ ಯುವಜನರು ಗಮನಿಸಬೇಕು. ತ್ಯಾಗ, ಪ್ರಾಮಾಣಿಕತೆ, ಆದರ್ಶ ಮತ್ತು ಸತ್ಯಸಂಧತೆಯನ್ನು ಭೌಗೋಳಿಕ ಚೌಕಟ್ಟಿನಲ್ಲಿ ಬಂಧಿಸುವ ಬದಲು ಸಾಮಾಜಿಕ ನೆಲೆಯಲ್ಲಿ ಗ್ರಹಿಸಿದಾಗ ಸಮಾಜ ಒಂದು ಉನ್ನತ ಧ್ಯೇಯದೆಡೆಗೆ ಸಾಗುವುದು ಸಾಧ್ಯ. ಇಲ್ಲವಾದಲ್ಲಿ ಎಲ್ಲವೂ ಆಳುವವರ ಹಿತಾಸಕ್ತಿ ಕಾಪಾಡುವ ಭೂಪಟದ ಭೌಗೋಳಿಕ ದೇಶಭಕ್ತಿಯ ಸೀಮಿತ ಶರಪಂಜರದೊಳಗೆ ಬಂಧಿಯಾಗುತ್ತವೆ.
ವೈಚಾರಿಕತೆ,ಜನಪರ ಹೋರಾಟಗಳಲ್ಲಿ ಪ್ರಾಮಾಣಿಕತೆಯಿಂದ ತೊಡಗಿದರೆ ಹತ್ಯೆಗೀಡಾಗುವ, ಒತ್ತಡಕ್ಕೆ ಸಿಲುಕಿಸಿ ಆತ್ಮಹತ್ಯೆಗೆ ಶರಣಾಗುವಂತೆ ಮಾಡಲಾಗುತ್ತಿದೆ. ಪಟ್ಟಭದ್ರ ಹಿತಾಸಕ್ತಿಗಳ, ಮತೀಯವಾದಿಗಳ, ಧರ್ಮಾಂಧರ ಕೆಂಗಣ್ಣಿಗೆ ಬಲಿಯಾಗಿ ಬದುಕಿದ್ದೂ ಶವದಂತಾಗುವ ಸಾಹಿತಿ, ವಿಚಾರವಾದಿಗಳು, ಈ ವ್ಯವಸ್ಥೆಯ ಲೋಪಗಳನ್ನು ಜನಸಾಮಾನ್ಯರ ಮುಂದಿರಿಸಿದ ಅಪರಾಧಕ್ಕಾಗಿ ಸ್ಥಾಪಿತ ವ್ಯವಸ್ಥೆಯಿಂದಲೇ ದಮನಕ್ಕೊಳಗಾಗುವ ಹೋರಾಟಗಾರರು, ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಒಂದು ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಲು ಶ್ರಮಿಸಿ ಆಡಳಿತ ವ್ಯವಸ್ಥೆಯ, ಪ್ರಭುತ್ವದ ದಮನಕ್ಕೊಳಗಾಗುವ ಪ್ರಜ್ಞಾವಂತರು, ಇವರೆಲ್ಲರೂ ತಮ್ಮೊಳಗಿನ ಬೌದ್ಧಿಕ ಶಕ್ತಿ ಮತ್ತು ಉತ್ಸಾಹಗಳು ಹುತಾತ್ಮವಾಗುವುದನ್ನು ನಮ್ಮ ಕಣ್ಣೇದುರೇ ನಡೆಯುತ್ತಿದೆ.
ಕೇವಲ 23 ವರ್ಷಕ್ಕೆ ನೇಣುಗಂಬಕ್ಕೆ ಏರುವ ಕೊನೆಯ ಗಳಿಗೆಯಲ್ಲೂ ಭಗತ್ ಸಿಂಗ್ ನ ಸ್ಪೂರ್ತಿಯಾಗಿದ್ದ ಕಾಮ್ರೇಡ್ ಲೆನಿನ್ ರವರ ಪುಸ್ತಕ ಓದಿ ಮುಗಿಸುವುದು ಕೊನೆಯುಸಿರೆಳೆಯುವ ಮುನ್ನ ಅಂತಿಮ ಆಸೆ ಎಂದಿದ್ದರು. ಆದರೆ ಇಂದು ದೇಶಭಕ್ತಿಯನ್ನು ಸ್ವಯಂ ಗುತ್ತಿಗೆ ಪಡೆದುಕೊಂಡಿರುವವರು ತ್ರಿಪುರಾದ ಅರ್ಗತಲಾ ದಲ್ಲಿ ಲೆನಿನ್ ಪ್ರತಿಮೆಯನ್ನು ಜೆಸಿಬಿ ಯಂತ್ರದಿಂದ ಉರುಳಿಸಿ ರಣಕೇಕೆ ಹಾಕಿದ್ದು ನೋಡಿದರೆ ಗೊತ್ತಾಗುತ್ತದೆ ಈ ಶಕ್ತಿಗಳು ಭಗತ್ ಸಿಂಗ್ ಕನಸಿನ ಭಾರತವನ್ನು ಛಿದ್ರಗೊಳಿಸುತ್ತಿದ್ದಾರೆ ಎಂದು. ಈ ಕೋಮುವಾದಿ, ಮೂಲಭೂತವಾದಿ ಶಕ್ತಿಗಳಿಂದ ದೇಶದ ಐಕ್ಯತೆ ಸಮಗ್ರತೆ ಜಾತ್ಯತೀತತೆಯನ್ನು ಕಾಪಾಡುವುದೇ ನಮ್ಮ ಮುಂದಿರುವ ಮೊದಲ ಕರ್ತವ್ಯ.
ಇದಕ್ಕೆ ಕಾರಣ ಎಂದರೆ ಸಮಕಾಲೀನ ಭಾರತದಲ್ಲಿ ಉನ್ನತ ಸಮಾಜವನ್ನು ನಿರ್ಮಿಸಲು ನೆರವಾಗುವ ಎಲ್ಲ ಮೌಲ್ಯಗಳೂ ಬಿಕರಿಗಿವೆ, ಹಾಗೆಯೇ ಈ ಎಲ್ಲ ಮೌಲ್ಯಗಳೂ ಪ್ರಭುತ್ವದ ಶೋಷಣೆಗೆ ಸಿಲುಕಿ ನಲುಗುತ್ತಿವೆ. ಭೌತಿಕವಾಗಿ ಆತ್ಮ, ದೇಹ ಇಲ್ಲದ ಈ ಮೌಲ್ಯಗಳನ್ನು ಗಲ್ಲಿಗೇರಿಸಲು ವ್ಯವಸ್ಥೆಯ ಸಂರಕ್ಷಕರಿಗೆ ಸಾಧ್ಯವಿಲ್ಲ. ಆದರೆ ಈ ಮೌಲ್ಯಗಳನ್ನು ಪ್ರತಿಪಾದಿಸುವ ವ್ಯಕ್ತಿಗಳನ್ನು ಪಂಜರದೊಳಗೆ ಬಂಧಿಸುವ ಮೂಲಕ ನಿರ್ನಾಮ ಮಾಡುವುದು ಸುಲಭಸಾಧ್ಯ. ರೋಹಿತ್ ವೇಮುಲ, ಕನ್ನಯ್ಯ ಕುಮಾರ್, ಜೆಎನ್ಯು ವಿವಾದ, ದಾದ್ರಿ ಘಟನೆ ಮತ್ತು ಭೀಮ್ ಕೊರೆಂಗಾವ. ವಿದ್ಯಮಾನಗಳು ರಾಷ್ಟ್ರ ಮತ್ತು ರಾಷ್ಟ್ರೀಯತೆಯ ವ್ಯಾಖ್ಯೆಯನ್ನೇ ವಿಭಿನ್ನ ನೆಲೆಗೆ ಕೊಂಡೊಯ್ದಿದೆ. ರಾಷ್ಟ್ರ ಭಕ್ತಿ ಎನ್ನುವ ಬೌದ್ಧಿಕ ವಿದ್ಯಮಾನ ಇಂದು ಲೌಕಿಕತೆಯನ್ನು ಪಡೆದುಕೊಂಡಿದ್ದು ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ದೇಶಭಕ್ತಿ ಪ್ರದರ್ಶಿಸಲು ಜಯಕಾರ ಕೂಗಬೇಕಾದ ಸಂದರ್ಭ ಒದಗಿಬಂದಿದೆ..! ಹಾಗಾಗಿ ಪ್ರಭುತ್ವ ಮತ್ತು ಪ್ರಜೆಗಳ ನಡುವಿನ ಸಂಘರ್ಷವನ್ನು ದೇಶಭಕ್ತಿ-ದೇಶದ್ರೋಹದ ಚೌಕಟ್ಟಿನಲ್ಲೇ ವ್ಯಾಖ್ಯಾನಿಸಲಾಗುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಪ್ಪಟ ದೇಶಪ್ರೇಮಿ ಭಗತ್ ಸಿಂಗ್ ಮತ್ತು ಸಂಗಾತಿಗಳನ್ನು ಹುತಾತ್ಮರೆಂದು ನೆನೆಯುತ್ತಿದ್ದೇವೆ. ಭಗತ್ ಸಿಂಗ್ ಇಂದಿಗೂ ಭಾರತದ ಭವಿಷ್ಯ ಕಟ್ಟಲು ಚಿಂತಿಸುವವರೆಲ್ಲರೊಳಗೆ ಅದಮ್ಯ ಚೇತನವಾಗಿದ್ದಾನೆ.
ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳು ಬಿದ್ದ ಮರಗಳಲ್ಲ ಬಿತ್ತಿದ ಬೀಜಗಳು.
ನಮ್ಮೆಲ್ಲರಲ್ಲೂ ಭಗತ್ ಸಿಂಗ್ ವಿಚಾರಧಾರೆ ಕ್ರಾಂತಿಯನ್ನುಂಟು ಮಾಡಲಿ.
ವಾಸುದೇವ ರೆಡ್ಡಿ, ವಿದ್ಯಾರ್ಥಿ ಮುಖಂಡರು, ಕೋಲಾರ
ಡಿಸ್ ಕ್ಲೇಮರ್: ಬರೆಹದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಬರೆಹಗಾರರ ವೈಯಕ್ತಿಕ ನಿಲುವುಗಳನ್ನು ಪ್ರತಿಫಲಿಸುತ್ತವೆ