1931ರ ಮಾರ್ಚ್ 23 ರಂದು ಭಾರತದ ಅತಿ ಪ್ರಭಾವಶಾಲಿ ಯುವನೇತಾರ, ಕ್ರಾಂತಿಕಾರಿ ಭಗತ್ ಸಿಂಗ್ ಮತ್ತು ಅವನ ಸಂಗಾತಿಗಳಾದ ಸುಖದೇವ್, ರಾಜಗುರು ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು. ಈ ಮೂವರು ಕ್ರಾಂತಿಕಾರಿಗಳನ್ನು ನೇಣಿಗೆ ಏರಿಸುವ ಮುನ್ನ ಕನಿಷ್ಟ ಪಕ್ಷ ಅವರ ಬಂಧುಗಳೊಂದಿಗೆ ಮಾತನಾಡಲೂ ಬಿಡದಷ್ಟು ಕ್ರೌರ್ಯವನ್ನು ಬ್ರಿಟಿಷ್ ಪ್ರಭುತ್ವ ತೋರಿತು.
ಹುತಾತ್ಮ ಭಗತ್ ಸಿಂಗ್ ಮತ್ತು ಅವನ ಸಂಗಾತಿಗಳ ಕುರಿತು ನಾವು ತಿಳಿದಿರಲೇಬೇಕಾದ ಕೆಲವು ಸಂಗತಿಗಳಿವೆ. ಅವು ಏನೆಂದು ನೋಡೋಣ.
- 1. ನೇಣುಗಂಬವೇರಿದಾಗ ಭಗತ್ ಸಿಂಗ್ ಗೆ ಕೇವಲ 23ರ ಹರಯ
ಭಗತ್ ಸಿಂಗ್ ಪಂಜಾಬ್ ಪ್ರಾಂತ್ಯದ ಬಂಗ ಗ್ರಾಮದಲ್ಲಿ 1907ರ ಸೆಪ್ಟೆಂಬರ್ 28ರಂದು ಜನಿಸಿದ. ಬಾಲ್ಯದಿಂದಲೆ ಹೋರಾಟದ ಮನೋಭಾವವನ್ನು ಬೆಳೆಸಿಕೊಂಡ ಭಗತ್ ನ ಕುಟುಂಬ ಆರ್ಯಸಮಾಜ ಮತ್ತು ಗದರ್ ಪಕ್ಷದ ಪ್ರಭಾವ ಹೊಂದಿತ್ತು. ಡಿ.ಎ.ವಿ. ಶಾಲೆ ಮತ್ತು ಲಾಹೋರಿನ ನ್ಯಾಷನಲ್ ಕಾಲೇಜಿನಲ್ಲಿ ಭಗತ್ ವ್ಯಾಸಂಗ ಮಾಡಿದ. ಅವನು ವಿದ್ಯಾರ್ಥಿದೆಸೆಯಲ್ಲಿ ರಂಗಕಲಾವಿದನೂ ಅದ್ಭುತ ಬರಹಗಾರನೂ ಆಗಿದ್ದ. ಬ್ರಿಟಿಷ್ ಸರ್ಕಾರ ಭಾರತೀಯರ ಮೇಲೆ ನಡೆಸುತ್ತಿದ್ದ ಲಾಟಿ-ಗುಂಡುಗಳ ಪ್ರಹಾರ ಮತ್ತು ಅದರ ವಿರುದ್ಧ ಜರಗುತ್ತಿದ್ದ ಚಳವಳಿ ಭಗತ್ ಸಿಂಗ್ ನನ್ನು ಬ್ರಿಟಿಷರ ವಿರುದ್ಧದ ಚಳವಳಿಗೆ ಧುಮುಕುವಂತೆ ಮಾಡಿತು. ಅಚ್ಚರಿ ಎಂದರೆ ಇಂದು ಇಡೀ ಭಾರತ ಉಪಖಂಡವೇ ಸ್ಮರಿಸಿಕೊಳ್ಳುವ ಭಗತ್ ಸಿಂಗ್ ಹುತಾತ್ಮರಾದಾಗ ಅವರಿಗೆ ಆಗಿದ್ದು ಕೇವಲ 23 ವರ್ಷ ವಯಸ್ಸು.
- 2. ಅಪಾರವಾದ ಓದಿನ ಹುಚ್ಚು ಹಚ್ಚಿಕೊಂಡಿದ್ದ
ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ರಾಜ್ ಗುರು, ಸುಖದೇವ್, ಮೊದಲಾದ ಹಲವಾರು ಕ್ರಾಂತಿಕಾರಿಗಳು ಜೊತೆಯಾಗಿದ್ದರೂ ಎಲ್ಲರ ಪೈಕಿ ಸೈದ್ಧಾಂತಿಕ ತಿಳುವಳಿಕೆ ಹೆಚ್ಚಿದ್ದದ್ದು ಸರ್ದಾರ್ ಭಗತ್ ಸಿಂಗ್ ಗೆ. ಇದಕ್ಕೆ ಕಾರಣ ಅವನಲ್ಲಿದ್ದ ಓದಿನ ತಿಳುವಳಿಕೆ. ಭಗತ್ ಸಿಂಗ್ ನ ಓದಿನ ಹಸಿವು ಅಪಾರ ಪ್ರಮಾಣದ್ದಾಗಿತ್ತು. ಅವನನ್ನು ಜೈಲಿನಲ್ಲಿ ಇಟ್ಟಾಗಲಂತೂ ಹೆಚ್ಚು ಸಮಯವನ್ನು ಓದುವುದರಲ್ಲೇ ಕಳೆಯುತ್ತಿದ್ದ. ಹೀಗಾಗಿಯೇ ಭಗತ್ ಸಿಂಗ್ ನ ಕೊನೆಯ ದಿನಗಳಲ್ಲಿ ಬರೆದ ಪ್ರಬಂಧಗಳಲ್ಲಿ ಹೆಚ್ಚು ಪ್ರೌಢಿಮ ಕಾಣುತ್ತದೆ. ಜೈಲಿನಲ್ಲಿ ಕಾವ್ಯ, ಸಾಹಿತ್ಯ, ಸಿದ್ದಾಂತ, ಜೀವನ ಚರಿತ್ರೆ, ಹೀಗೆ ನಾನಾ ಪ್ರಕಾರಗಳ ನೂರಾರು ಪುಸ್ತಕಗಳನ್ನು ಭಗತ್ ಸಿಂಗ್ ಓದಿದ್ದ.
- 3. ಹೇಡಿತನ ತೋರಲಿಲ್ಲ, ಸಾವಿಗೂ ಹೆದರಲಿಲ್ಲ
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕೆಲವರು ಆರಂಭದಲ್ಲಿ ಹುರುಪಿನಿಂದ ಬ್ರಿಟಿಷ್ ವಿರೋಧಿ ದಂಗೆಗಳನ್ನು ನಡೆಸಿದರೂ ಒಮ್ಮೆ ಬ್ರಿಟಿಷರ ಕೈಗೆ ಸಿಕ್ಕಿಬಿದ್ದು, ಅಂಡಮಾನ್, ಕಾಲಾಪಾನಿಯಂತಹ ಕಡೆ ಶಿಕ್ಷೆ ಅನುಭವಿಸಿದ ಕೂಡಲೇ ಬ್ರಿಟಿಷರಿಗೆ ‘ಇನ್ನೆಂದೂ ಸಾಯುವವರೆಗೂ ಬ್ರಿಟಿಷರ ವಿರುದ್ಧ ಹೋರಾಟ ಮಾಡುವುದಿಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದಿಲ್ಲ” ಎಂದು ಹೇಳಿದ ಮಹನೀಯರನ್ನು ನೋಡುತ್ತೇವೆ. ಉದಾಹರಣೆಗೆ, ಸಾವರ್ಕರ್. ಆದರೆ ಭಗತ್ ಸಿಂಗ್ ಅಂತಹ ಹೇಡಿಯಾಗಿರಲಿಲ್ಲ. ಅವನಿಗೆ ಮರಣ ದಂಡನೆ ಖಾಯಂ ಆದಾಗಲೂ ಬ್ರಿಟಿಷ್ ಪೊಲೀಸರು ರಾಜಿ ಆಗುತ್ತಾನೇನೋ ಎಂದು ನೋಡಿದರು. ಆದರೆ, ಭಗತ್ ಸಿಂಗ್ ತನ್ನ ಕೊನೆಯ ಉಸಿರು ಇರುವವರೆಗೂ ಬ್ರಿಟಿಷರೊಂದಿಗೆ ರಾಜಿಯಾಗಲಿಲ್ಲ. ಜೀವ ಉಳಿಸಿಕೊಳ್ಳಲು ಹೇಡಿಯಾಗಲಿಲ್ಲ.
- 4. ಜೈಲಿನಲ್ಲಿ 64 ದಿನ ಉಪವಾಸ ಸತ್ಯಾಗ್ರಹ ನಡೆಸಿದ್ದ
ಭಗತ್ ಸಿಂಗ್ ನ ಬಂಧನದ ನಂತರವೂ ಎಂದೂ ಅವನ ಆತ್ಮವಿಶ್ವಾಸ ಕುಗ್ಗಲಿಲ್ಲ. ಬದಲಾಗಿ ಅದು ಇನ್ನು ಹೆಚ್ಚಿತು. ಭಗತ್ ಸಿಂಗ್ ಮತ್ತು ಸಂಗಾತಿಗಳು ಕಾರಾಗೃಹದಲ್ಲಿರುವಾಗ ಅಲ್ಲಿನ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ಕೈಗೊಂಡರು. ಕೇವಲ ನೀರು ಕುಡಿದು 64 ದಿನ ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳು ಬದುಕಿದ್ದರು. 63ನೇ ದಿನ ಜತಿನ್ ದಾಸ್ ಎಂಬ ಸಂಗಾತಿ ಪ್ರಾಣ ಬಿಟ್ಟ. ಕೊನೆಯಲ್ಲಿ ಬ್ರಿಟಿಷ್ ಸರ್ಕಾರ ಇವರ ಉಗ್ರ ಉಪವಾಸ ಸತ್ಯಾಗ್ರಹಕ್ಕೆ ಮಣಿದು, ಇವರ ಬೇಡಿಕಗಳನ್ನು ಈಡೇರಿಸಲು ಒಪ್ಪಿಕೊಂಡಿತು.
- 5. ಸಮಾಜವಾದಿ ವಿಚಾರಧಾರೆಗೆ ಬದ್ಧನಾಗಿದ್ದ ಭಗತ್
ಭಗತ್ ಸಿಂಗ್ ಒಬ್ಬ ಸಮತಾವಾದಿ ಆಗಿದ್ದ. 1917ರ ರಷ್ಯಾ ಕ್ರಾಂತಿಯಿಂದ ಪ್ರಭಾವಿತನಾಗಿ ಅದೇ ಮಾದರಿಯ ಸಮಾಜವಾದಿ ಕ್ರಾಂತಿಯನ್ನು ಭಾರತದಲ್ಲಿ ಕಾಣಬೇಕೆಂದು ಹಂಬಲಿಸಿದ್ದ. ಇದಕ್ಕಾಗಿ ಆಜಾದ್, ರಾಜಗುರು, ಸುಖದೇವ್, ಮುಂತಾದವರ ಜೊತೆಗೆ ಹಿಂದೂಸ್ತಾನ್ ಸಮಾಜವಾದಿ ಕ್ರಾಂತಿಕಾರಿ ಸಂಘಟನೆಯನ್ನು (HSRA) ರಚಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡಿದ. ಮೊದಲಿಗೆ ಕೇವಲ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ ಎಂದಿದ್ದ ಸಂಘಟನೆಯ ಹೆಸರಿಗೆ 1927ರಲ್ಲಿ ಸೋಷಲಿಷ್ಟ್-ಸಮಾಜವಾದಿ ಎಂಬ ಪದ ಸೇರಿಸಿದ ಭಗತ್ ಸಿಂಗ್ ಅಷ್ಟರಲ್ಲಿ ಸಮಾಜವಾದದ ಬಗ್ಗೆ ಒಲವು ಬೆಳೆಸಿಕೊಂಡಿದ್ದ. ಜೈಲಿನಲ್ಲಿದ್ದಾಗ ಲೆನಿನ್ ಬರೆದಿದ್ದ ರಾಜ್ಯ ಮತ್ತು ಕ್ರಾಂತಿ’ ಕೃತಿಯನ್ನು ಓದಿದ್ದ ಭಗತ್ ಸಿಂಗ್ ಗೆ ಸ್ವಾತಂತ್ರ್ಯ ಹೋರಾಟದ ಕುರಿತು ಹಲವು ಅಭಿಪ್ರಾಯಗಳು ಬದಲಾಗಿದ್ದನ್ನು ಅವನ ಜೈಲು ದಿನಚರಿಗಳ ಮೂಲಕ ತಿಳಿಯಬಹುದು. 1932ರಲ್ಲಿ ಭಗತ್ ಸಿಂಗ್ ಬರೆದಿದ್ದ ‘ಯುವ ರಾಜಕೀಯ ಕಾರ್ಯಕರ್ತರಿಗೆ ಒಂದು ಪತ್ರವು ಭಗತ್ ಸಿಂಗ್ ಅದೆಷ್ಟು ಸಮಾಜವಾದಿ ಚಿಂತನೆಗೆ ಒಗ್ಗಿಕೊಂಡಿದ್ದ ಎಂಬುದನ್ನು ತೋರಿಸುತ್ತದೆ. ತಾನು ಗಲ್ಲಿಗೇರುವ ಮುನ್ನ ಜೈಲಿನಲ್ಲಿ ಭಗತ್ ಸಿಂಗ್ ರಷ್ಯಾದ ಕಮ್ಯುನಿಸ್ಟ್ ನಾಯಕ ಲೆನಿನ್ ಅವರ ಕೃತಿಯನ್ನು ಓದುತ್ತಿದ್ದನೆಂಬ ದಾಖಲೆಯಿದೆ.
- 6. ದೇವರ ಅಸ್ತಿತ್ವವನ್ನು ಪ್ರಶ್ನಿಸಿದ್ದ ಭಗತ್ ಸಿಂಗ್
ಭಗತ್ ಸಿಂಗ್ ದೇವರು ಧರ್ಮಗಳನ್ನು ಪ್ರಶ್ನಿಸುತ್ತಿದ್ದ ಎಂಬುದಕ್ಕೆ ಅವನು ಕಾರಾಗೃಹದಲ್ಲಿ ಬರೆದ “ನಾನೇಕೆ ನಾಸ್ತಿಕ” (Why am I an Athiest?) ಎಂಬ ಪ್ರಬಂಧವೇ ಸಾಕ್ಷಿ. ಅದರಲ್ಲಿ ಅವನು ಎಲ್ಲಾ ಮತಧರ್ಮಗಳನ್ನೂ ಏಕರೂಪವಾಗಿ ಟೀಕಿಸುತ್ತಾನೆ. “ಭಗವಂತ”ನಿಂದ ಸೃಷ್ಟಿಯಾಗಿದೆ ಎಂದು ಹೇಳಲಾಗಿರುವ ಪ್ರಪಂಚದಲ್ಲಿರುವ ಅಸಮಾನತೆಯನ್ನು ನೇರವಾಗಿ ಪ್ರಶ್ನಿಸುತ್ತಾನೆ. ಮಾನವನ ಸೃಷ್ಟಿ ಭಗವಂತನಿಂದಲ್ಲ, ಆದರೆ ಪೃಕೃತಿಯಿಂದ ಎಂಬ ಡಾರ್ವಿನ್ನರ ಸಿದ್ಧಾಂತದ ಕುರಿತು ಭಗತ್ ಸಿಂಗ್ ತನ್ನ ಲೇಖನದಲ್ಲಿ ಬರೆಯುತ್ತಾನೆ. ಕಟ್ಟಾ ಆರ್ಯ ಸಮಾಜದ ಅನುಯಾಯಿಗಳಾಗಿದ್ದ ಕುಟುಂಬವೊಂದರಲ್ಲಿ ಬೆಳೆದ ಭಗತ್ ಹೇಗೆ ನಾಸ್ತಿಕನಾದ ಮತ್ತು ಏಕೆ ನಾಸ್ತಿಕನಾದ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಾನೆ. ಇದೇ ಕೃತಿಯಲ್ಲಿ ಅವನು ದೇಶದ ಲಕ್ಷಾಂತರ ಜನರು ಬಡತನದಲ್ಲಿದ್ದರೂ, ಕಷ್ಟಕಾರ್ಪಣ್ಯದಲ್ಲಿದ್ದರೂ ಬಂದು ಅವರನ್ನು ರಕ್ಷಿಸದ ದೇವರನ್ನು ಪ್ರಶ್ನಿಸುತ್ತಾ, ‘ನಿಮ್ಮ ದೇವರು ಒಬ್ಬ ಚೆಂಗೀಸ್ ಖಾನ್, ಒಬ್ಬ ನೀರೋ” ಎಂದು ರೋಷದಿಂದ, ಚರಿತ್ರೆಯ ಕ್ರೂರ ದೊರೆಗಳಿಗೆ ದೇವರನ್ನು ಹೋಲಿಸಿ ಬರೆದಿದ್ದಾನೆ. ದೇವರು, ಧರ್ಮ ಶೋಷಿತ ಜನರ ಅಫೀಮು ಎಂಬ ಕಾರ್ಲ್ ಮಾರ್ಕ್ಸ್ ಹೇಳಿದ್ದನ್ನೂ ಭಗತ್ ಸಿಂಗ್ ಒಪ್ಪಿಕೊಂಡಿದ್ದ.
- 7. ಗಾಂಧಿವಾದದ ವಿರೋಧಿ ಆದರೆ ಗಾಂಧಿಯನ್ನು ದ್ವೇಷಿಸಲಿಲ್ಲ
ಭಗತ್ ಎಂದಿಗೂ ಗಾಂಧಿವಿರೋಧಿ ಆಗಿರಲಿಲ್ಲ, ಬದಲಾಗಿ ಗಾಂಧಿವಾದವನ್ನು ವಿರೋಧಿಸುತ್ತಿದ್ದ. 1922ರ ಚೌರಿ ಚೌರಾ ಘಟನೆಯ ನಂತರ ನಡೆದ ಕೋಮುಗಲಭೆಯಿಂದಾಗಿ ಗಾಂಧಿವಾದಕ್ಕೆ ದೂರವಾದ. ಭಗತ್ ಸಿಂಗ್ ನ ಪ್ರಕಾರ ಗಾಂಧಿ ಸ್ವರಾಜ್ ಕೂಗು ಭ್ರಮೆಯಿಂದ ಕೂಡಿತ್ತು. ಹಿಂಸೆ ಸದಾಕಾಲ ಬೇಕಿಲ್ಲ, ತೀರಾ ಅನಿವಾರ್ಯವೆಂದಾಗ ಮಾತ್ರ ಬಳಸಬೇಕಾಗುತ್ತದೆ ಎಂಬುದು ಭಗತ್ ಸಿಂಗ್ ನ ನಿಲುವಾಗಿತ್ತು. ಗಾಂಧೀವಾದಿಗಳು ರೈತರೊಂದಿಗೆ, ಕಾರ್ಮಿಕರೊಂದಿಗೆ ಬೆರೆಯದೇ ಕೇವಲ ಭೂಮಾಲೀಕರ ಮತ್ತು ಬಂಡವಾಳಿಗರ ನೆರವಿನಿಂದ ಚಳವಳಿ ಕಟ್ಟುತ್ತಾರೆ ಎನ್ನುವುದು ಭಗತ್ ಸಿಂಗ್ ತಕರಾರಾಗಿತ್ತು.
- 8. ಶ್ರಮಿಕ ವರ್ಗದ ಶಕ್ತಿಯಲ್ಲಿ ಭರವಸೆ ಇಟ್ಟಿದ್ದ ಭಗತ್ ಸಿಂಗ್
“ಭಾರತದಲ್ಲಿ ಕ್ರಾಂತಿಯನ್ನು ನಡೆಸಲು ಶಕ್ತರಾಗಿರುವವರು ಕೇವಲ ರೈತ ಹಾಗು ಕಾರ್ಮಿಕ ವರ್ಗ.”
“ನಿಜವಾದ ಕ್ರಾಂತಿಕಾರಿ ಶಕ್ತಿಗಳು ಇರುವುದು ಹಳ್ಳಿಗಳಲ್ಲಿ ಹಾಗು ಕೈಗಾರಿಕೆಗಳಲ್ಲಿ. ಇವರು ಮಲಗಿರುವ ಸಿಂಹಗಳಂತೆ. ಇವರ ನಿದ್ದೆಯನ್ನು ಕೆಣಕಿದರೆ (ಶೋಷಕರಿಗೆ) ಅಪಾಯ ಕಟ್ಟಿಟ್ಟಬುತ್ತಿ.”
ಫೆಬ್ರವರಿ 1931ರಲ್ಲಿ ಯುವರಾಜಕೀಯ ಕಾರ್ಯಕರ್ತರಿಗೆ ಭಗತ್ ಸಿಂಗ್ ಕಾರಾಗೃಹದಿಂದಲೇ ನೀಡಿದ ಸಂದೇಶದಿಂದ ಆಯ್ದ ಉಲ್ಲೇಖಗಳಿವು.
- 9. ಜನಸಮೂಹದ ಸಂಘಟನೆ ಬೇಕು ಎಂದಿದ್ದ ಭಗತ್ ಸಿಂಗ್
ಯುವಜನ, ವಿದ್ಯಾರ್ಥಿ, ರೈತ ಮತ್ತು ಕಾರ್ಮಿಕರ ಸಂಘಟನೆಗಳು ಮಾತ್ರ ಕ್ರಾಂತಿಯನ್ನು ಉಂಟುಮಾಡುತ್ತವೆ ಮತ್ತು ಉಳಿಸುತ್ತವೆ ಎಂಬುದು ಭಗತ್ ಸಿಂಗ್ ನ ಚಿಂತನೆಯಾಗಿತ್ತು. ಗದರ್ ಪಕ್ಷವು ಸಮೂಹ ಸಂಘಟನೆಗಳನ್ನು ನಿರ್ಲಕ್ಷಿಸಿದ ಕಾರಣ ಅದು ವಿಫಲವಾಯಿತು ಎಂದು ಭಗತ್ ಸಿಂಗ್ ವಿಶ್ಲೇಷಿಸಿದ್ದ. ಸಾಮೂಹಿಕ ಸಂಘಟನೆಗಳ ಮೂಲಕ ಕ್ರಾಂತಿಕಾರಿ ಪಕ್ಷ ಅಥವಾ ಕಮ್ಯುನಿಸ್ಟ್ ಪಕ್ಷವು ತನ್ನ ಸಿದ್ಧಾಂತ ಹಾಗು ವಿಚಾರಧಾರೆಗಳನ್ನು ಸರಳವಾಗಿ ಹಾಗು ಸ್ಪಷ್ಟವಾಗಿ ಜನರಿಗೆ ತಲುಪಿಸಬೇಕು ಎಂದು ಅವನು ತನ್ನ ಬರಹದಲ್ಲಿ ತಿಳಿಸುತ್ತಾನೆ.
- 10. ಕರಿಯರಿಂದ ಬಿಳಿಯರಿಗೆ ಅಧಿಕಾರ ಹಸ್ತಾಂತರವಲ್ಲ, ಅಮೂಲಾಗ್ರ ಬದಲಾವಣೆ ನಮ್ಮ ಗುರಿ ಎಂದಿದ್ದ ಭಗತ್ ಸಿಂಗ್
ಸ್ವಾತಂತ್ರ್ಯಕ್ಕೆ ಭಗತ್ ಸಿಂಗ್ ಕೊಟ್ಟ ವ್ಯಾಖ್ಯಾನ ಕಾಂಗ್ರೆಸ್ ನೀಡಿದ್ದಕ್ಕಿಂತ ಭಿನ್ನವಾಗಿತ್ತು. ಅವನು ಕೇವಲ ರಾಜಕೀಯ ಸ್ವಾತಂತ್ರ್ಯ ಬಯಸಿದವನಲ್ಲ. ಇದರ ಜೊತೆಗೆ ಆರ್ಥಿಕ ಸ್ವಾತಂತ್ರ್ಯವನ್ನೂ ಸಹ ಹಂಬಲಿಸಿದ್ದ. ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯಗಳ ನಡುವಿನ ಸಂಬಂಧದ ಬಗ್ಗೆ ಸ್ಪಷ್ಟತೆಯಿತ್ತು ಭಗತ್ ಗೆ. ಕ್ರಾಂತಿ ಎಂದರೆ ಕೇವಲ ಪರಕೀಯರಿಂದ ಸ್ವಾತಂತ್ರ್ಯ ಗಳಿಸುವುದಲ್ಲ; ಸಮಾಜದಲ್ಲಿ ಆಮೂಲಾಗ್ರ ಬದಲಾವಣೆ ತಂದು ಸಮಾಜವನ್ನು ಸಮಾಜವಾದಿ ಆಧಾರದಲ್ಲಿ ಪುನರ್ನಿರ್ಮಿಸುವದೇ ನಿಜವಾದ ಕ್ರಾಂತಿ ಎಂದಿದ್ದ ಭಗತ್ ಸಿಂಗ್.
- 11. ಆರ್ಥಿಕ ಸಮಾನತೆಗೆ ರಾಜಕೀಯ ಸ್ವಾತಂತ್ರ್ಯಅನಿವಾರ್ಯ
ರಾಜಕೀಯ ಸ್ವಾತಂತ್ರವನ್ನು ಪಡೆಯದೆ ಆರ್ಥಿಕ ಸ್ವಾತಂತ್ರ ಗಳಿಸುವುದು ಅಸಾಧ್ಯ, ಅದು ಬರೀ ಹುಚ್ಚಾಟವಾಗುತ್ತದೆ ಎಂಬುದು ಭಗತ್ ಸಿಂಗ್ ನ ವಾದವಾಗಿತ್ತು. ಕ್ರಾಂತಿಯ ಮೂಲ ಗುರಿ ಆರ್ಥಿಕ ಸಮಾನತೆ, ಆದರೆ ಅದನ್ನು ಸಾಧಿಸಲು ರಾಜಕೀಯ ಸ್ವಾತಂತ್ರ್ಯ ಬೇಕು. ಆರಂಭದಲ್ಲಿ ಚಳವಳಿಯು ಆರ್ಥಿಕ ಸುಧಾರಣೆಗಳಿಗೆ ಒತ್ತು ನೀಡಿದರೂ ನಂತರ ರಾಜಕೀಯ ಆಯಾಮವನ್ನು ಹೊಂದಬೇಕು ಎಂದು ಭಗತ್ ಸಿಂಗ್ ಹೇಳಿದ್ದ.
- 12. ಒಪ್ಪೊತ್ತಿನ ಕ್ರಾಂತಿಕಾರಿಗಳು ಪ್ರಯೋಜನವಿಲ್ಲ
“ಕ್ರಾಂತಿಗೆ ತಯಾರಿ ಬಹಳ ಮುಖ್ಯ. ಜನರನ್ನು ಕ್ರಾಂತಿಗಾಗಿ ಅಣಿಗೊಳಿಸುವುದು ಕ್ರಾಂತಿಕಾರಿಗಳ ಅತಿ ಕಠಿಣ ಜವಾಬ್ದಾರಿ. ಇದಕ್ಕಾಗಿ ಕ್ರಾಂತಿಕಾರಿಗಳು ತ್ಯಾಗ ಮಾಡಬೇಕಿದೆ. ನೀವು ಒಬ್ಬ ವ್ಯಾವಹಾರಿಕ ಅಥವಾ ಕೌಟುಂಬಿಕ ವ್ಯಕ್ತಿಯಾಗಿಯೇ ಇದ್ದರೆ ಕ್ರಾಂತಿಯೆಂಬ ಬೆಂಕಿಯೊಡನೆ ಸರಸವಾಡಬೇಡಿ. ಒಬ್ಬ ನಾಯಕನಾಗಿ ನೀವು ಚಳವಳಿಗೆ ಯಾವುದೆ ಪ್ರಯೋಜನಕ್ಕೆ ಬರುವುದಿಲ್ಲ. ಈಗಾಗಲೇ ಇಂತಹ ನಿರುಪಯೋಗಿ ಭಾಷಣಕಾರರು ನಮ್ಮಲ್ಲಿದ್ದಾರೆ. ಲೆನಿನ್ ಹೇಳಿದ ಹಾಗೆ ನಮಗೆ ಬೇಕಿರುವುದು ವೃತ್ತಿಪರ ಕ್ರಾಂತಿಕಾರಿಗಳು ಎಂಬುದು ಭಗತ್ ಸಿಂಗ್ ನಿಲುವಾಗಿತ್ತು.
ನೇರ ನುಡಿಗಳಲ್ಲಿ ಭಗತ್ ಸಿಂಗ್ ಕೊಟ್ಟ ಈ ಸಂದೇಶ ಅವನ ಸಂಘಟನಾತ್ಮಕ ಮನೋಭಾವವನ್ನು ತೋರುತ್ತದೆ, ಕ್ರಾಂತಿಕಾರಿಗಳಿಗೆ ಮಾರ್ಗದರ್ಶಿಯಾಗುತ್ತದೆ.
- 13. ಹಿಂಸಾವಾದವಲ್ಲ, ವೈಚಾರಿಕತೆ ಮುಖ್ಯ
“ಕ್ರಾಂತಿ ಎಂದರೆ ಬಾಂಬು-ಪಿಸ್ತೂಲುಗಳ ಆರಾಧನೆಯಲ್ಲ. ಅನ್ಯಾಯದ ಬುನಾದಿಯ ಮೇಲೆ ಸ್ಥಾಪಿತವಾಗಿರುವ ಸಮಾಜವೊಂದರ ಅಮೂಲಾಗ್ರ ಬದಲಾವಣೆ” ಇದು ಭಗತ್ ಸಿಂಗ್ ಮತ್ತು ಸಂಗಾತಿಗಳ ಅಚಲ ನಿಲುವಾಗಿತ್ತು. ಯಾವ ಭಗತ್ ಸಿಂಗ್ ನನ್ನು ಹಿಂಸಾವಾದಿ ಎಂದು ಬಿಂಬಿಸಲಾಗುತ್ತದೋ ಅದೇ ಭಗತ್ ಸಿಂಗ್ ವೈಚಾರಿಕತೆಯಿಲ್ಲದ ಹಿಂಸೆಯನ್ನು ವಿರೋಧಿಸುತ್ತಾನೆ. ಸಂಸತ್ತಿನ ಒಳಗೆ ಬಾಂಬ್ ಎಸೆದಾಗಲೂ ಅದು ಕಿವಿ ಕೇಳದಂತಿದ್ದ ಬ್ರಿಟಿಷರನ್ನು ಎಚ್ಚರಿಸಲೆಂದೇ ಹೊರತು ಪ್ರಾಣಹಾನಿ ಮಾಡುವ ಉದ್ದೇಶದಿಂದಲ್ಲ ಎಂಬುದನ್ನು ಪದೇಪದೇ ಭಗತ್ ಸಿಂಗ್ ಹೇಳುತ್ತಾನೆ. ಅವನು ಮತ್ತವನ ಸಂಗಾತಿಗಳು ಹಿಂಸೆಯನ್ನು ಪ್ರೀತಿಸಿದವರಲ್ಲ, ಮಾನವನಿಂದ ಮಾನವನ ಶೋಷಣೆಯನ್ನು ತಡೆಗಟ್ಟಿ ಸುಂದರ ಸಮಾಜದ ನಿರ್ಮಾಣಕ್ಕೆ ಹಿಂಸೆ ಅನಿವಾರ್ಯವಾದಾಗ ಮಾತ್ರ ಅದನ್ನು ಒಪ್ಪುವುದಾಗಿ ಭಗತ್ ಸಿಂಗ್ ಹೇಳಿದ್ದಾನೆ.
- 14. ಸಾರ್ವತ್ರಿಕ ವಯಸ್ಕರ ಮತದಾನದ ಪರವಿದ್ದ ಭಗತ್ ಸಿಂಗ್
ಭಗತ್ ಸಾರ್ವತ್ರಿಕ ವಯಸ್ಕರ ಮತದಾನದ ಪರ ಮಾತನಾಡಿದ್ದ. ಆಸ್ತಿ ಹೊಂದಿರುವುದನ್ನು ಆಧರಿಸಿ ಮತದಾರರ ಅರ್ಹತೆಯನ್ನು ನಿರ್ಧರಿಸುವ ಪದ್ಧತಿಯನ್ನು ಭಗತ್ ವಿರೋಧಿಸಿದ. ಹೆಣ್ಣಾಗಲಿ ಗಂಡಾಗಲಿ, ಎಲ್ಲಾ ವಯಸ್ಕರಿಗೂ ಮತದಾನದ ಹಕ್ಕನ್ನು ನೀಡಬೇಕೆಂದು ಆಗ್ರಹಿಸಿದ್ದ.
- 15. ಒಪ್ಪಂದ ಅಂದರೆ ಶರಣಾಗತಿ ಅಲ್ಲ ಎಂದಿದ್ದ ಭಗತ್ ಸಿಂಗ್
“ಒಪ್ಪಂದ ಎಂದರೆ ನಾವು ಶರಣಾಗತಿ ಎಂದು ಭಾವಿಸಿಲ್ಲ. ಒಪ್ಪಂದ ಎಂದರೆ ಒಂದು ಹೆಜ್ಜೆ ಮುಂದಕ್ಕೆ ಹಾಗು ಕೊಂಚ ವಿಶ್ರಾಂತಿ”. “ನೀವು ನೂರು ರುಪಾಯಿಗಳಿಗಾಗಿ ಹೋರಾಡುತ್ತಿದ್ದಾಗ ಒಂದು ರುಪಾಯಿ ಸಿಕ್ಕರೆ, ಅದನ್ನೂ ಜೇಬಲ್ಲಿಟ್ಟುಕೊಂಡು ಮತ್ತೆ ಹೋರಾಡಿ” (ಭಗತ್ ಸಿಂಗ್)
ಒಪ್ಪಂದಗಳು ಅಂತಿಮ ಗುರಿಯನ್ನು ನಾಶಪಡಿಸಬಾರದೆಂದು, ಆದರೆ ಹೋರಾಟದ ಹಾದಿಯಲ್ಲಿ ಮುಂದೆ ಸಾಗಲು ಸಹಕಾರಿಯಾಗಬೇಕೆಂಬುದು ಭಗತ್ ಸಿಂಗ್ ನ ಆಲೋಚನೆ.
- 16. ಆತ್ಮಹತ್ಯೆ ಕ್ರಾಂತಿಕಾರಿಗಳ ಲಕ್ಷಣವಲ್ಲ
ಭಗತ್ ಸಿಂಗ್ ನ ಸಂಗಾತಿ ಸುಖದೇವ್ ಜೈಲಿನಲ್ಲಿದ್ದಾಗಲೇ ಒಮ್ಮೆ ತನಗೆ ಮರಣದಂಡನೆಯಾಗದೆ ಜೀವಾವಧಿ ಶಿಕ್ಷೆಯಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಭಗತ್ ಸಿಂಗ್ ನಿಗೆ ಪತ್ರ ಬರೆಯತ್ತಾನೆ. ಅದಕ್ಕೆ ಭಗತ್ ಸಿಂಗ್ ಪ್ರೀತಿಯಿಂದಲೇ ಪ್ರತಿಕ್ರಿಯಿಸಿ ದೊಡ್ಡ ಪತ್ರ ಬರೆಯುತ್ತಾನೆ. “ಒಂದು ಉತ್ತಮ ಉದ್ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರೆ ಅದು ಆತ್ಮಹತ್ಯೆಯಲ್ಲ” ಎನ್ನುತ್ತ ಸುಖದೇವನ ಚಿಂತನೆಗೆ ತೀಕ್ಷ್ಣ ಪ್ರತಿರೋಧ ವ್ಯಕ್ತಪಡಿಸಿ ಆತ್ಮಹತ್ಯೆ ಹೇಡಿಗಳ ಲಕ್ಷಣ ಎಂದು ಹೇಳುತ್ತಾನೆ.
- 17. ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಜನಪ್ರಿಯಗೊಳಿಸಿದ್ದು ಭಗತ್ ಸಿಂಗ್
ಇಂದಿಗೂ ಪ್ರಚಲಿತವಾಗಿರುವ ಪ್ರಭಾವಿ ಘೋಷಣೆಯಾದ ಇಂಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ) ಘೋಷಣೆಯನ್ನು 1921ರಲ್ಲಿ ಭಾರತೀಯ ಕವಿ ಮೌಲಾನಾ ಹಸರತ್ ಅವರು ರಚಿಸಿದರೆ ಅದನ್ನು ಅತ್ಯಂತ ಜನಪ್ರಿಯ ಘೋಷಣೆಯಾಗಿ ಮಾರ್ಪಡಿಸಿದ್ದು ಭಗತ್ ಸಿಂಗ್ ಮತ್ತು ಅವನ ಗೆಳೆಯರು. ಇಂದಿಗೂ ದೇಶದಾದ್ಯಂದ ಜನ ಚಳುವಳಿಗಳು ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಬಳಸುತ್ತವೆ. ಇದು ಭಗತ್ ಸಿಂಗ್ ಗೆ ಗೌರವವೂ ಹೌದು
“ಅವರು ವ್ಯಕ್ತಿಯನ್ನು ಕೊಲ್ಲಬಹುದು, ಆದರೆ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ.” – ಭಗತ್ ಸಿಂಗ್
– ಸೂರ್ಯ ಸಾಥಿ
ಡಿಸ್ ಕ್ಲೇಮರ್: ಬರೆಹದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಬರೆಹಗಾರರ ವೈಯಕ್ತಿಕ ನಿಲುವುಗಳನ್ನು ಪ್ರತಿಫಲಿಸುತ್ತವೆ