ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಶಾಸಕರಾದ ಅನಿತಾ ಕುಮಾರ ಸ್ವಾಮಿ ಭೇಟಿ ನೀಡಿದರು. ಶನಿವಾರ 8.30ರ ಸಮಯಕ್ಕೆ ಭೇಟಿ ನೀಡಿದ ಅವರು ಪುತ್ರ ನಿಖಿಲ್ ಕುಮಾರ ಸ್ವಾಮಿಯ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಭಾಗವಹಿಸುವಂತೆ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದರು.
ಸೋಮವಾರ ನಿಖಿಲ್ ಕುಮಾರ ಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರಾದ ಚಲುವರಾಯಸ್ವಾಮಿ ಮತ್ತು ಬಂಡಿಸಿದ್ದೇಗೌಡರಿಗೆ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಕೆಲಸ ಮಾಡುವಂತೆ ಸೂಚನೆ ನೀಡಿ ಎಂದು ಅನಿತಾ ಕುಮಾರಸ್ವಾಮಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.
‘ಜಿಲ್ಲೆಯ ಕಾಂಗ್ರೆಸ್ ನಾಯಕರ ಸಮಸ್ಯೆ ಬಗೆಹರಿಸುತ್ತೇನೆ. ನಿಖಿಲ್ ಪರವಾಗಿ ಚುನಾವಣಾ ಕೆಲಸ ಮಾಡುವಂತೆ ಸೂಚನೆ ನೀಡುತ್ತೇನೆ’ ಎಂದು ಸಿದ್ದರಾಮಯ್ಯ ಭರವಸೆ ನೀಡಿದರೆನ್ನಲಾಗಿದೆ. ಭೇಟಿಯ ನಂತರದಲ್ಲಿ ಅನಿತಾ ಕುಮಾರಸ್ವಾಮಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಕುಮಾರಸ್ವಾಮಿಯವರು ತಮ್ಮ ಕುರಿತು ಕಟುವಾಗಿ ಮಾತಾಡಿದ್ದಾರೆಂದು ಆರೋಪಿಸಿ, ತಾವು ಚುನಾವಣೆ ಮುಗಿಯುವವರೆಗೂ ಪ್ರಚಾರಕ್ಕೆ ಹೋಗುವುದಿಲ್ಲ ಎಂಬ ನಿಲುವನ್ನು ಮಾಜಿ ಸಚಿವ ಚೆಲುವರಾಯಸ್ವಾಮಿ ಮತ್ತು ಬಂಡಿಸಿದ್ದೇಗೌಡ ತಳೆದಿರುವ ಹಿನ್ನೆಲೆಯಲ್ಲಿ ಅನಿತಾ ಕುಮಾರಸ್ವಾಮಿ ನಡೆಸಿರುವ ಈ ಭೇಟಿ ಮಹತ್ವ ಪಡೆದಿದೆ.