ಸರಕು ಮತ್ತು ಸೇವಾ ತೆರಿಗೆ ( GST) ಜಾರಿಗೆ ತಂದಿದ್ದೇ ತಮ್ಮ ಬಹುದೊಡ್ಡ ಸಾಧನೆ ಎಂದು ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೀಗುತ್ತಿದ್ದಾರೆ. ವಾಸ್ತವವಾಗಿ ನರೇಂದ್ರ ಮೋದಿ ಜಾರಿ ಮಾಡಿದ ಅಪನಗದೀಕರಣ ಯೋಜನೆಯಿಂದ ದೇಶದ ಆರ್ಥಿಕತೆಗೆ ಎಷ್ಟು ನಷ್ಟವಾಯಿತೋ ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಜನಸಮಾನ್ಯರಿಗೆ ಅಷ್ಟೇ ತೊಂದರೆಯಾಗಿದೆ. ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರುವಾಗ ಬರೀ ತೆರಿಗೆ ಸಂಗ್ರಹ ಹೆಚ್ಚಿಸಿ ಬೊಕ್ಕಸ ತುಂಬಿಕೊಳ್ಳುವ ಮತ್ತು ಆಯ್ದ ಕಾರ್ಪೊರೆಟ್ ಗಳಿಗೆ ರಿಯಾಯ್ತಿ ನೀಡುವ ಉದ್ದೇಶವೇ ಪ್ರಧಾನವಾಗಿತ್ತು. ಹಾಗಾಗಿಯೇ ತರಾತುರಿಯಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯು ಸುಧಾರಿತ ತೆರಿಗೆ ವ್ಯವಸ್ಥೆ ಆಗುವ ಬದಲಿಗೆ ತೆರಿಗೆದಾರರಿಗೆ ಸಂಕಷ್ಟ ತರುವ ವ್ಯವಸ್ಥೆಯಾಗಿದೆ.
ಈ ಹಿಂದೆ ಯುಪಿಎ ಸರ್ಕಾರ ಜಾರಿಗೆ ತರಲು ಉದ್ದೇಶಿದ್ದ ಸರಕು ಮತ್ತು ಸೇವಾ ತೆರಿಗೆಯ ಮೂಲ ಆಶಯ ಜನಸಾಮಾನ್ಯರಿಗೆ ತೆರಿಗೆ ಹೊರೆ ತಗ್ಗಿಸುವುದಾಗಿತ್ತು. ಆದರೆ, ಮೋದಿ ಸರ್ಕಾರ ಅದನ್ನು ಜಾರಿಗೊಳಿಸುವಾಗ ಮೂಲ ತೆರಿಗೆ ಸ್ವರೂಪವನ್ನು ಬದಲಾಯಿಸಿದೆ. ಮೌಲ್ಯವರ್ಧಿತ ತೆರಿಗೆ ವ್ಯವಸ್ಥೆಯಡಿ (ವ್ಯಾಟ್) ಇದ್ದ ತೆರಿಗೆಗಿಂತಲೂ ಹೆಚ್ಚಿನ ತೆರಿಗೆ ಹೇರಲಾಗುತ್ತಿದೆ. ಅಂದರೆ, ಹಿಂದಿನ ವ್ಯವಸ್ಥೆಯಡಿ ಜನರು ಪಾವತಿಸುತ್ತಿದ್ದ ತೆರಿಗೆ ಪ್ರಮಾಣಕ್ಕಿಂತ ಈಗಿನ ವ್ಯವಸ್ಥೆಯಲ್ಲಿ ಪಾವತಿಸುತ್ತಿರುವ ತೆರಿಗೆ ಪ್ರಮಾಣ ಗಣನೀಯ ಪ್ರಮಾಣವಾಗಿ ಹೆಚ್ಚಳವಾಗಿದೆ.
ಜನಸಾಮಾನ್ಯರ ತೆಹರಿಗೆ ಪ್ರಮಾಣ ತಗ್ಗಿಸಿದ್ದೇವೆ ಎಂದು ಮೋದಿ ಸರ್ಕಾರ ಹೇಳುತ್ತಿದೆ. ಅದು ಹಸೀ ಹಸೀ ಸುಳ್ಳು ಎಂಬುದಕ್ಕೆ ಇಲ್ಲೊಂದು ಸ್ಪಷ್ಟ ನಿದರ್ಶನ ಇದೆ, ಗಮನಿಸಿ. ದೇಶದಲ್ಲಿ ಟೆಲಿವಿಷನ್ ನೋಡುವವರ ಸಂಖ್ಯೆ 100 ಕೋಟಿ ದಾಟಿದೆ. ಟೆಲಿವಿಷನ್ ಅನ್ನು ನರೇಂದ್ರ ಮೋದಿ ಕಾರ್ಪೊರೆಟ್ ಗೆಳೆಯರಾದ ಗೌತಮ್ ಅದಾನಿ, ಅನಿಲ್ ಅಂಬಾನಿಯೂ ನೋಡುತ್ತಾರೆ ಹಾಗೆಯೇ ದೂರದ ಹಳ್ಳಿಯ ಜನರು, ಕೊಳಗೇರಿಗಳಲ್ಲಿ ವಾಸಿಸುವವರು ಸಹ ನೋಡುತ್ತಾರೆ. ಅಂದರೆ, ಜನಸಾಮಾನ್ಯರು ನಿತ್ಯ ಬಳಸುವ ಸೇವೆ ಇದು. ಮೋದಿ ಸರ್ಕಾರ ಟೆಲಿವಿಷನ್ ವೀಕ್ಷಣೆಯನ್ನು ಐಷಾರಾಮಿ ಎಂದೇ ಪರಿಗಣಿಸಿದೆ. ಹೀಗಾಗಿ ಶೇ.18ರಷ್ಟು ಸರಕು ಮತ್ತು ಸೇವಾ ತೆರಿಗೆ ವಿಧಿಸುತ್ತಿದೆ. ಇತ್ತೀಚೆಗೆ ಟ್ರಾಯ್ ಹೊಸದಾಗಿ ತಂದಿರುವ ನಿಯಮಗಳಿಂದಾಗಿ ಪ್ರತಿಯೊಬ್ಬ ಗ್ರಾಹಕ ಹಿಂದಿನ ದರಕ್ಕಿಂತ ಹೆಚ್ಚಿನ ದರ ಪಾವತಿ ಮಾಡುವಂತಾಗಿದೆ. ದರ ಕಡಿತ ಮಾಡಿ ಗ್ರಾಹಕರಿಗೆ ಅನುಕೂಲ ಮಾಡುವ ಸಲುವಾಗಿ ಹೊಸ ನಿಯಮ ತರಲಾಗಿದೆ ಎಂದು ಟ್ರಾಯ್ ವಾದಿಸುತ್ತಿದೆ. ಇಲ್ಲಿ ಮತ್ತೊಂದು ಪ್ರಮುಖ ಅಂಶ ಇದೆ. ಒಬ್ಬ ಗ್ರಾಹಕ ಹಿಂದಿನ ವ್ಯವಸ್ಥೆಗಿಂತ ಹೊಸ ವ್ಯವಸ್ಥೆಯಲ್ಲಿ ಹೆಚ್ಚಿನ ದರ ತೆರುವುದು ಅನಿವಾರ್ಯವಾಗಿದೆ. ಇದರ ನೇರ ಲಾಭ ಮೋದಿ ಸರ್ಕಾರಕ್ಕಾಗುತ್ತಿದೆ. ಅಂದರೆ, ಪ್ರತಿಯೊಬ್ಬ ಗ್ರಾಹಕ ನೀಡುವ ಶುಲ್ಕ ಹೆಚ್ಚಿದಷ್ಟೂ ಮೋದಿ ಸರ್ಕಾರದ ಬೊಕ್ಕಸಕ್ಕೆ ಜಿಎಸ್ಟಿ ರೂಪದಲ್ಲಿ ಶೇ.18ರಷ್ಟು ತೆರಿಗೆ ಪಾವತಿಯಾಗುತ್ತದೆ. ಜಿಎಸ್ಟಿ ಜನಸಾಮಾನ್ಯರಿಗೆ ವರವಾಗುವ ಬದಲು ಹೊರೆಯಾಗಿದೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ.
ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಯ ಕುರಿತಾದ ಸಾಫಲ್ಯತೆ ಮತ್ತು ವೈಫಲ್ಯತೆಗಳ ವಿವಿಧ ಚರ್ಚೆ ನಡೆಯುತ್ತಿದೆ. ವಿಶ್ವ ಬ್ಯಾಂಕ್ ಮತ್ತು ಎಚ್ಎಸ್ಬಿಸಿ ಈ ಕುರಿತಂತೆ ವಿಸ್ತೃತವಾಗಿ ಚರ್ಚಿಸಿವೆ. ವಿಶ್ವಬ್ಯಾಂಕ್ ತನ್ನ ‘ಭಾರತ ಅಭಿವೃದ್ಧಿ‘ ಕುರಿತ ಅರ್ಧವಾರ್ಷಿಕ ವರದಿಯಲ್ಲಿ ಜಿಎಸ್ಟಿ ಸಂಕೀರ್ಣತೆ ಕುರಿತು ಪ್ರಸ್ತಾಪಿಸಿದೆ. ಎಚ್ಎಸ್ಬಿಸಿ ತನ್ನ ವರದಿಯಲ್ಲಿ ಒಟ್ಟಾರೆ ಆರ್ಥಿಕತೆಯನ್ನು ಸಂಘಟಿತ ವಲಯಕ್ಕೆ ತರುವಲ್ಲಿ ಜಿಎಸ್ಟಿ ವಿಫಲವಾಗಿದೆ ಎಂದಿದೆ.
ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದಾಗಿಂದಲೂ ನೂತನ ತೆರಿಗೆ ವ್ಯವಸ್ಥೆಯ ಸಂಕೀರ್ಣತೆಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಸರಕು ಮತ್ತು ಸೇವಾ ತೆರಿಗೆಯು ತೆರಿಗೆ ವ್ಯವಸ್ಥೆಯ ಸರಳೀಕರಣವಾಗುವ ಬದಲು ಗೋಜಲನ್ನಾಗಿ ಮಾಡಿದೆ ಎಂಬುದು ಪ್ರಮುಖ ದೂರು. ಅದಕ್ಕೆ ಕಾರಣ ಎಸ್ ಜಿಎಸ್ಟಿ, ಸಿಜಿಎಸ್ಟಿ ಮತ್ತು ಐಜಿಎಸ್ಟಿಗಳಿರುವುದು ಒಂದಾದರೆ, ಒಟ್ಟು ಐದು ಹಂತಗಳಲ್ಲಿ ತೆರಿಗೆ ಇರುವುದು ಮತ್ತೊಂದು ಕಾರಣ. ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಗೆ ತರುವುದೇ ತೆರಿಗೆ ವ್ಯವಸ್ಥೆ ಸರಳೀಕರಣಗೊಳಿಸಲು. ಅತ್ಯಲ್ಪ ಹಂತದ ತೆರಿಗೆಗಳಿದ್ದಷ್ಟೂ ತೆರಿಗೆ ಸಂಗ್ರಹ ಸಲೀಸಾಗುತ್ತದೆ. ಶೂನ್ಯ ತೆರಿಗೆ ಸೇರಿದಂತೆ ಒಟ್ಟು ಆರು ಹಂತದ ತೆರಿಗೆಗಳು ನಮ್ಮ ಜಿಎಸ್ಟಿಯಲ್ಲಿವೆ. ಶೇ.5, 12, 18 ಮತ್ತು 28 ಅಲ್ಲದೇ ಚಿನ್ನಕ್ಕಾಗಿ ಪ್ರತ್ಯೇಕವಾಗಿ ಶೇ.3ರಷ್ಟು ತೆರಿಗೆ ವಿಧಿಸಲಾಗುತ್ತಿದೆ.ವಿಶ್ವ ಬ್ಯಾಂಕ್ ವರದಿಯಲ್ಲಿ ಇದನ್ನೇ ಪ್ರಧಾನವಾಗಿ ಪ್ರಸ್ತಾಪಿಸಲಾಗಿದೆ.
ಭಾರತದಲ್ಲಿ ಜಾರಿಗೆ ತಂದಿರುವ ಜಿಎಸ್ಟಿ ವ್ಯವಸ್ಥೆಯು ಅತ್ಯಂತ ಸಂಕೀರ್ಣವಷ್ಟೇ ಅಲ್ಲ, ಅತಿ ಹೆಚ್ಚು ತೆರಿಗೆ ಹಂತಗಳನ್ನು ಹೊಂದಿದೆ ಮತ್ತು ಅತಿ ಗರಿಷ್ಠ ಪ್ರಮಾಣದ ತೆರಿಗೆಯನ್ನೂ ಹೊಂದಿದೆ ಏಷಿಯಾದಲ್ಲೇ ಅತಿ ಹೆಚ್ಚು ತೆರಿಗೆ ಹೇರುತ್ತಿರುವ ರಾಷ್ಟ್ರವಾಗಿದೆ ಭಾರತ. ಚಿಲಿ ಹೊರತು ಪಡಿಸಿದರೆ, ವ್ಯಾಟ್ ವ್ಯವಸ್ಥೆ ಹೊಂದಿರುವ 115 ರಾಷ್ಟ್ರಗಳ ಪೈಕಿ ಹೆಚ್ಚು ತೆರಿಗೆ ಹೇರುವ ಎರಡನೇ ರಾಷ್ಟ್ರವಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಜಿಎಸ್ಟಿ ಜಾರಿಗೆ ತಂದಿರುವ ದೇಶಗಳ ಪೈಕಿ 49 ದೇಶಗಳು ಏಕದರ ತೆರಿಗೆ ವಿಧಿಸುತ್ತಿವೆ. 28 ದೇಶಗಳು ಎರಡು ಹಂತದಲ್ಲಿ ತೆರಿಗೆ ದರ ವಿಧಸುತ್ತಿವೆ. ಭಾರತ ಸೇರಿದಂತೆ ಐದು ರಾಷ್ಟ್ರಗಳು ಮಾತ್ರ ನಾಲ್ಕು ಹಂತದ ತೆರಿಗೆ ದರ ವಿಧಿಸುತ್ತಿವೆ. ಆ ದೇಶಗಳೆಂದರೆ ಇಟಲಿ, ಲಕ್ಸಂಬರ್ಗ್, ಪಾಕಿಸ್ತಾನ ಮತ್ತು ಘಾನ. ಜಿಎಸ್ಟಿ ಜಾರಿಗೆ ತಂದಿರುವ ದೇಶಗಳಿಗೆ ಹೋಲಿಸಿದರೆ ಭಾರತ ಅತಿದೊಡ್ಡ ರಾಷ್ಟ್ರ ಮತ್ತು ತೆರಿಗೆ ವ್ಯವಸ್ಥೆಯನ್ನು ತ್ವರಿತವಾಗಿ ತಂದದ್ದು ವಿಶೇಷ ಎಂದೂ ಹೇಳಿದೆ.
ಸರಕು ಮತ್ತು ಸೇವಾ ತೆರಿಗೆ ಉದ್ದೇಶವೇ ಎಲ್ಲಾ ಸರಕು ಮತ್ತು ಸೇವೆಗಳನ್ನು ಒಂದೇ ತೆರಿಗೆ ವ್ಯವಸ್ಥೆಯಡಿ ತರುವುದಾಗಿದೆ. ಆದರೆ, ಭಾರತವು ಜಿಎಸ್ಟಿ ಜಾರಿಗೆ ತಂದಿದ್ದರೂ ಪೆಟ್ರೋಲಿಯಂ ಉತ್ಪನ್ನಗಳು, ಇಂಧನ ಮತ್ತು ಮದ್ಯವನ್ನು ಜಿಎಸ್ಟಿ ವ್ಯಾಪ್ತಿಗೆ ತಂದಿಲ್ಲ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಜಿಎಸ್ಟಿ ಜಾರಿಗೆ ತಂದಿದೆ. ಅಲ್ಲದೇ ಶೇ.50ಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳೇ ಅಧಿಕಾರದಲ್ಲಿದ್ದರೂ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಲಾಗಿಲ್ಲ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.
ವಿಶ್ವಬ್ಯಾಂಕ್ ವರದಿ ಪ್ರಕಾರ, ಜಿಎಸ್ಟಿ ತೆರಿಗೆ ವ್ಯಾಪ್ತಿಗೆ ತರಲು ಹಣಕಾಸು ವಹಿವಾಟು ಮಾನದಂಡ ಅನುಸರಿಸಲಾಗಿದೆ. ಭಾರತ 1.5 ಕೋಟಿ ರುಪಾಯಿ ಮೀರಿದ ವಹಿವಾಟನ್ನು ಜಿಎಸ್ಟಿ ವ್ಯಾಪ್ತಿಗೆ ತಂದಿದೆ. ಆರಂಭದಲ್ಲಿ ಈ ಮಿತಿ 75 ಲಕ್ಷ ಇತ್ತು. ನಂತರ ಅದನ್ನು 1.5 ಕೋಟಿ ರುಪಾಯಿಗೆ ಏರಿಸಿತು. ಜಿಎಸ್ಟಿ ಜಾರಿ ಮಾಡಿರುವ ದೇಶಗಳಿಗೆಲ್ಲ ಹೋಲಿಸಿದರೆ, ಜಿಎಸ್ಟಿ ವ್ಯಾಪ್ತಿಗೆ ಬರುವ ವಹಿವಾಟು ಮಿತಿ ಗರಿಷ್ಠ ಮಟ್ಟದಲ್ಲಿ ಇದೆ. ಭಾರತ ವಿಧಿಸಿರುವ ಮಿತಿಯು ವಹಿವಾಟು ಮಿತಿ ಆಧರಿಸಿ ತೆರಿಗೆ ವಿಧಿಸುತ್ತಿರುವ 31 ದೇಶಗಳಲ್ಲೇ ಹೆಚ್ಚಿದೆ.
ಜಿಎಸ್ಟಿ ಜಾರಿಗೆ ತರುವ ಹಂತದಲ್ಲಾದ ನಷ್ಟವನ್ನು ಹೊಸ ಪ್ರಕ್ರಿಯೆಯ ಆರಂಭವೆಂದು ಪರಿಗಣಿಸಬೇಕು, ಅದೇ ಅಂತ್ಯವಲ್ಲ ಎಂದು ವಿಶ್ವಬ್ಯಾಂಕ್ ಹೇಳಿದೆ.ತೆರಿಗೆ ಜಾರಿ ವ್ಯವಸ್ಥೆಯಲ್ಲಾಗಿರುವ ಲೋಪಗಳಿಂದಾಗಿ ತೆರಿಗೆ ವಿವರ ಸಲ್ಲಿಕೆ ತೆರಿಗೆ ಪಾವತಿ ಮತ್ತು ಮರುಪಾವತಿ ಮತ್ತಿತರ ಹಂತಗಳಲ್ಲಿ ಅನುಸರಣ ವೆಚ್ಚ ಹೆಚ್ಚಿರುವ ಬಗ್ಗೆಯೂ ವಿಶ್ವಬ್ಯಾಂಕ್ ಪ್ರಸ್ತಾಪಿಸಿದ್ದು, ಈ ಲೋಪಗಳ ನಿವಾರಣೆ ತ್ವರಿತ ಅಗತ್ಯಎಂದಿದೆ. ಜುಲೈ ಬಂದರೆ ಜಿಎಸ್ಟಿ ಜಾರಿಗೆ ಬಂದು ಎರಡು ವರ್ಷ ಪೂರ್ಣವಾಗುತ್ತಿದೆ. ಆದರೆ, ಆರಂಭದಲ್ಲಿದ್ದ ತೊಡಕುಗಳು ನಿವಾರಣೆಯಾಗಿಲ್ಲ. ಬಹುಹಂತದ ತೆರಿಗೆ ಮತ್ತು ಪದೇ ಪದೇ ತೆರಿಗೆ ಪರಿಷ್ಕರಣೆಯು ಮತ್ತಷ್ಟು ಸಂಕೀರ್ಣ ತೆರಿಗೆ ವ್ಯವಸ್ಥೆಯನ್ನಾಗಿ ಮಾಡಿದೆ.