ಅರುಣಾಚಲ ಪ್ರದೇಶದಲ್ಲಿ ಇನ್ನೇನು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರು ಸಾಮೂಹಿಕ ರಾಜಿನಾಮೆ ಸಲ್ಲಿಸಿ ಅಚ್ಚರಿ ಉಂಟುಮಾಡಿದ್ದಾರೆ.
ಕಳೆದ ಒಂದು ವಾರದಲ್ಲಿ ಗೃಹ ಸಚಿವ ಕುಮಾರ್ ವಾಯಿ ಹಾಗೂ ಪ್ರವಾಸೋದ್ಯಮ ಸಚಿವ ಜರ್ಕರ್ ಗಮ್ಲಿನ್ ಸೇರಿದಂತೆ, ಆರು ಶಾಸಕರು ಸೇರಿದಂತೆ ಒಟ್ಟು 27 ಹಿರಿಯ ಬಿಜೆಪಿ ನಾಯಕರು ಪಕ್ಷವನ್ನು ತ್ಯಜಿಸಿ ಕಾನ್ರಡ್ ಸಂಗ್ಮಾ ಮುಂದಾಳತ್ವವ ನ್ಯಾಷನಲ್ ಪೀಪಲ್ ಪಕ್ಷಕ್ಕೆ(ಎನ್ ಪಿಪಿ) ಸೇರ್ಪಡೆಯಾಗಿದ್ದಾರೆ. ಸಂಗ್ಮಾ ಮೇಘಾಲಯದ ಮುಖ್ಯಮಂತ್ರಿಯಾಗಿದ್ದು ಅವರ ಪಕ್ಷವಾದ ಎನ್ ಪಿಪಿ ಅರುಣಾಚಲ ಪ್ರದೇಶ ಒಳಗೊಂಡಂತೆ ಈಶಾನ್ಯ ಭಾರತದಲ್ಲಿ ಪ್ರಭಾವಿ ರಾಜಕೀಯ ಪಕ್ಷವಾಗಿ ಹೊರಹೊಮ್ಮುತ್ತಿದೆ.
ಹಿಂದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಎನ್ ಪಿಪಿ ಇದೀಗ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ.
ಬಿಜೆಪಿ ತನ್ನ ಸುಳ್ಳು ಭರವಸೆಗಳ ಮೂಲಕ ಹಿಂದೆ ಹೊಂದಿದ್ದ ವರ್ಚಸ್ಸನ್ನು ಕಳೆದುಕೊಂಡಿದೆ. ನಾವು ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ರಾಜ್ಯದಲ್ಲಿ ಎನ್ ಪಿಪಿ ಸರ್ಕಾರವನ್ನು ರಚಿಸಿಯೇ ತೀರುತ್ತೇವೆ ಎಂದು ಗೃಹ ಸಚಿವ ಕುಮಾರ್ ವಾಯಿ ಪಣ ತೊಟ್ಟಿದ್ದಾರೆ.
“ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತದೆ. ಆದರೆ ಅರುಣಾಚಲ ಪ್ರದೇಶಧಲ್ಲಿ ಬಿಜೆಪಿಯ ಮುಖ್ಯಮಂತ್ರಿ ಪ್ರೇಮಾ ಖಾಂಡು ಅವರ ಮೂವರು ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ನೆಟ್ಟಗಿದ್ದರೆ ನಾನಲ್ಲಿ ಕೆಲಸ ಮಾಡುತ್ತಿದ್ದೆ. ಅದು ದೇಶ ಮೊದಲು, ಪಕ್ಷ ನಂತರ ಎನ್ನುತ್ತದೆ ಆದರೆ ಅವರು ಮಾಡುತ್ತಿರುವುದೂ ಕುಟುಂಬ ರಾಜಕಾರಣವೇ” ಎಂದು ಟೀಕಿಸಿರುವ ವಾಯಿ, “ಅರುಣಾಚಲ ಪ್ರದೇಶ ಒಂದು ಜಾತ್ಯತೀತ ರಾಜ್ಯ, ಆದರೆ ಬಿಜೆಪಿ ಧರ್ಮವಿರೋಧಿ ಪಕ್ಷ” ಎಂದು ಹರಿಹಾಯ್ದಿದ್ದಾರೆ.
ಏಪ್ರಿಲ್ 11 ರಂದು ಅರುಣಾಚಲ ಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನ ಸಭೆಯ ಎರಡೂ ಚುನಾವಣೆಗಳು ಒಟ್ಟಿಗೇ ನಡೆಯಲಿವೆ.

“ಎನ್ ಪಿಪಿ 30-40 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ಸರ್ಕಾರ ರಚಿಸಲು ಅಗತ್ಯವಾದಷ್ಟು ಕ್ಷೇತ್ರಗಳಲ್ಲಿ ಗೆದ್ದರೆ ನಮ್ಮದೇ ಸರ್ಕಾರವನ್ನು ರಚಿಸುತ್ತೇವೆ,’’ ಎಂದು ಎನ್ ಪಿಪಿ ನಾಯಕ ಥಾಮಸ್ ಸಂಗ್ಮಾ ತಿಳಿಸಿದ್ದಾರೆ.