ಬೆಂಗಳೂರು: “ಮಾಧ್ಯಮದಲ್ಲಿರುವ ಮಹಿಳೆಯರು ತಮ್ಮ ವೃತ್ತಿಯ ಜೊತೆಗೆ ತಮ್ಮ ಐಡೆಂಟಿಟಿಯನ್ನೂಬ ತಾವೇ ಸ್ಥಾಪಿಸಿಕೊಳ್ಳಬೇಕಿದೆ ಇಲ್ಲವಾದಲ್ಲಿ ಎಲೆಮರೆಯ ಕಾಯಿಯಂತಾಗುತ್ತಾರೆ” ಎಂದು ಅಂಕಣಕಾರ್ತಿ ಹಾಗೂ ದಿ ಹಿಂದೂ ಪತ್ರಿಕೆಯ ಮಾಜಿ ಸಹ ಸಂಪಾದಕಿ ಕಲ್ಪನಾ ಶರ್ಮಾ ಅಭಿಪ್ರಾಯಪಟ್ಟರು
ಅವರು ಇಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಪತ್ರಕರ್ತೆಯರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
“ಮಾಧ್ಯಮದಲ್ಲಿ ಮಹಿಳೆಯ ಬಗ್ಗೆ ಹೆಚ್ಚು ಕಾಳಜಿ ತೋರಲಾಗುತ್ತಿಲ್ಲ. ಮಹಿಳೆ ಎಂದರೆ ಆಕೆಯ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳು ಮಾತ್ರ ಸುದ್ದಿಯಾಗುವ ಮಟ್ಟಿಗೆ ಪ್ರಾತಿನಿಧ್ಯ ನೀಡಲಾಗಿದೆ” ಎಂದು ಹೇಳಿದ ಅವರು, “ಪತ್ರಿಕಾರಂಗದಲ್ಲಿ ಪುರುಷ, ಮಹಿಳೆಯರ ನಡುವಿನ ತಾರತಮ್ಯ ಹೆಚ್ಚಿದೆ. ಇಲ್ಲಿಯೂ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂದಿನ ಯುವ ಪತ್ರಕರ್ತೆಯರು ಇಂತಹ ಕೃತ್ಯಗಳನ್ನು ದಿಟ್ಟವಾಗಿ ಖಂಡಿಸುತ್ತಿದ್ದಾರೆ, ಅದರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಕರ್ನಾಟಕ ಪತ್ರಕರ್ತೆಯರ ಸಂಘದ ಉದ್ಘಾಟನಾ ಸಮಾರಂಭ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಮೂಲಕ ಕರ್ನಾಟಕ ಮಾಧ್ಯಮ ಲೋಕದ ಐತಿಹಾಸಿಕ ಘಟನೆಯೊಂದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಯಿತು.
ನಂತರ ಮಾತನಾಡಿದ ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧಾಪಕಿ ಪ್ರೊ.ಉಷಾರಾಣಿ ನಾರಾಯಣ್ , “ಪತ್ರಕರ್ತೆಯರ ಧ್ವನಿಯಾಗಿ, ಅವರಿಗೂ ಒಂದು ವೇದಿಕೆಯಾಗಿ ಇಂದು ಈ ಸಂಘ ಉದ್ಘಾಟನೆಯಾಗಿದೆ. ಈ ಸಂಘದ ಮೂಲಕ ಮುಂದಿನ ಪತ್ರಕರ್ತೆಯರಿಗೆ ಮನ್ನಣೆ, ಪ್ರಶಂಸೆ ಸಿಗಲಿದೆ” ಎಂದು ಆಶಿಸಿದರು.
ಮಾಧ್ಯಮಗಳ ಹುಟ್ಟಿನಿಂದಲೂ ಈವರೆಗೂ ಸ್ತ್ರೀ ದೃಷ್ಟಿಕೋನ, ಸ್ತ್ರೀ ಸಂವೇದನೆಯೇ ಇಲ್ಲ. ಬಹುತೇಕ ಮಾಧ್ಯಮಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಂಥ ಹುದ್ದೆಗಳಲ್ಲಿ ಮಹಿಳೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಅವರು ತಿಳಿಸಿದರು.
“ಇಂದು ಮಾಧ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತೆಯರಿದ್ದಾರೆ ಎಂಬುದು ಸಂತದ ವಿಷಯ. ಆದರೂ, ಸುದ್ದಿ ಮನೆಯೊಳಗೆ ಮಹಿಳೆಯರ ಸ್ಥಾನ ಹೇಗಿದೆ ಎಂಬುದು ಮುಖ್ಯವಾಗುತ್ತದೆ. ಮಹಿಳೆಯರಿಗೂ ಸ್ವಾತಂತ್ರ್ಯ ಕೊಡಿ, ಸಂಪಾದಕೀಯ ಸ್ವಾತಂತ್ರ ಕೊಡಬೇಕಿದೆ” ಅವರು ಹೇಳಿದರು.
ನಾಗಮಣಿ ಎಸ್ ರಾವ್ ಮಾತನಾಡಿ, “ಹಿರಿಯ ಪತ್ರಕರ್ತೆಯರು ಮಾಡಿರುವ ಈ ಸಂಘವನ್ನು ಮುನ್ನಡೆಸಿಕೊಂಡು ಹೋಗುವುದು ಮುಂದಿನ ಪೀಳಿಗೆಯ ಪತ್ರಕರ್ತರ ಮೇಲಿದೆ. ಯಾವುದೇ ತೊಡಕುಗಳಿಲ್ಲದೆ ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬೇಕಿದೆ ಎಂದು ಸಲಹೆ ನೀಡಿದರು”
ಹಿರಿಯ ಪತ್ರಕರ್ತೆ ವಿಜಯಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್. ಭೃಂಗೀಶ್, ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಉದ್ಘಟನಾ ಸಮಾರಂಭದಲ್ಲಿ ಹಾಜರಿದ್ದರು.
ಇದೇ ವೇಳೆ ಉಷಾರಾಣಿ ನಾರಾಯಣ್ ಸಂಘದ ಲೋಗೋ ಹಾಗೂ ಫೇಸ್ಬುಕ್ ಪುಟವನ್ನು ಲೋಕಾರ್ಪಣೆ ಮಾಡಿದರು.