“ನಮ್ಮ ಕೃಷಿ ಉತ್ಪನ್ನಗಳ ಬೆಲೆಯನ್ನು ದುಪ್ಪಟ್ಟುಗೊಳಿಸುವುದಾಗಿ ಮೋದಿ ಭರವಸೆ ಕೊಟ್ಟಿದ್ದರು. ನೀರನ್ನು ಪೂರೈಸಲು ನದಿಗಳ ಜೋಡಣೆಯನ್ನು ಕೈಗೊಳ್ಳುವುದಾಗಿಯೂ ಅವರು ಆಶ್ವಾಸನೆ ನೀಡಿದ್ದರು. ಅವರು ಈ ಭರವಸೆಗಳನ್ನು ಈಡೇರಿಸಿಲ್ಲ. ಮೋದಿಗೆ ಮತ ಚಲಾಯಿಸಬೇಡಿ ಎಂದು ನಾವು ವಾರಣಾಸಿಯ ಜನರನ್ನು ಮನವಿ ಮಾಡಿಕೊಳ್ಳುತ್ತೇವೆ, ಹಾಗೆಯೇ ಒಬ್ಬ ರೈತನಿಗೆ ಮತ ಹಾಕಿ ಎಂದೂ ಸಹ ಯಾಚಿಸುತ್ತೇವೆ. ನಾವು ಹಣ ಅಥವಾ ಜಾತಿಬಲದಲ್ಲಿ ವಿಶ್ವಾಸವಿಟ್ಟಿಲ್ಲ. ತಮಿಳುನಾಡಿನ ರೈತರು ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳ ಬಗ್ಗೆ ತಿಳಿಯುವಂತೆ ವಾರಣಾಸಿಯ ಜನರನ್ನು ನಾವು ಕೇಳಿಕೊಳ್ಳುತ್ತೇವೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ರೈತ ಭಿಕ್ಷುಕನಂತಾಗಿ ಆತ್ಮಹತ್ಯೆಗೆ ಶರಣಾಗಬೇಕಿದೆ. ರೈತರು ಭಿಕ್ಷೆ ಬೇಡುವುದನ್ನು ಮತ್ತು ಆತ್ಮಹತ್ಯೆಗೆ ಶರಣಾಗುವುದನ್ನು ತಪ್ಪಿಸಬೇಕೆಂದು ವಾರಣಾಸಿಯ ಮತದಾರರಲ್ಲಿ ವಿನಂತಿಸುತ್ತೇವೆ” – ಇದು ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ವಾರಣಾಸಿ ಕ್ಷೇತ್ರದಲ್ಲಿ ಸ್ಪರ್ಧಿಸಲು ತೀರ್ಮಾನಿಸಿರುವ ತಮಿಳುನಾಡಿನ 111 ರೈತರಲ್ಲಿ ಒಬ್ಬನಾದ ಐಯಕಣ್ಣು ಹೇಳಿದ ಮಾತು.
ಪ್ರಧಾನಿ ನರೇಂದ್ರ ಮೋದಿ ಕಳೆದ ಐದು ವರ್ಷಗಳಲ್ಲಿ ರೈತರಿಗೆ ವಂಚಿಸಿದ್ದಾರೆ, ಮೂಗಿಗೆ ತುಪ್ಪ ಕೆಲಸ ಮಾಡಿರುವುದು ಬಿಟ್ಟರೆ ರೈತರನ್ನು ಸಂಕಷ್ಟದಿಂದ ಪಾರು ಮಾಡುವ ಒಂದೇ ಒಂದು ಕೆಲಸ ಮಾಡಲಿಲ್ಲ, ಹೀಗಾಗಿ ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಲು ತಮಿಳು ನಾಡಿನ ರೈತರ ಗುಂಪೊಂದು ವಾರಣಾಸಿಗೆ ಹೊರಟು ನಿಂತಿದೆ. ಮೋದಿ ವಿರುದ್ಧ ವಾರಣಾಸಿ ಮತಕ್ಷೇತ್ರದಿಂದ 111 ನಾಮಪತ್ರಗಳನ್ನು ಸಲ್ಲಿಸುವ ಚಿಂತನೆ ನಡೆಸಿದೆ.
ದೇಶದ 17ನೇ ಲೋಕಸಭೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು ಈ ಬಾರಿಯೂ ನರೇಂದ್ರ ಮೋದಿಯವರು ವಾರಣಾಸಿ ಕ್ಷೇತ್ರದಿಂದ ಸ್ಫರ್ಧಿಸಲಿದ್ದಾರೆ. ಮತದಾನದ ಅಂತಿಮ ಹಂತದಲ್ಲಿ, ಅಂದರೆ ಮೇ 19ರಂದು ವಾರಣಾಸಿಯಲ್ಲಿ ಮತದಾನ ಜರುಗಲಿದ್ದು ಏಪ್ರಿಲ್ 23 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಈ ದಿನಾಂಕದ ಒಳಗಾಗಿ ನಾಮಪತ್ರ ಸಲ್ಲಿಸುವ ಸಲುವಾಗಿಯೇ ತಮಿಳುನಾಡಿನಿಂದ ವಾರಣಾಸಿಗೆ ತೆರಳಲು ಸುಮಾರು 250 ರೈತರು ಈಗಾಗಲೇ ರೈಲು ಟಿಕೇಟ್ ಗಳನ್ನು ಗಂಗಾ-ಕಾವೇರಿ ಎಕ್ಸ್ ಪ್ರೆಸ್ ನಲ್ಲಿ ಮುಂಗಡವಾಗಿ ಕಾಯ್ದಿರಿಸಿಕೊಂಡಿದ್ದಾರೆ ಎಂದು ವಕೀಲರೂ ಆಗಿರುವ ರೈತ ಮುಖಂಡ ಪಿ.ಅಯ್ಯಕಣ್ಣು ತಿಳಿಸಿದ್ದಾರೆ.
2014ರ ಚುನಾವಣಾ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷವು ರೈತರಿಗೆ ಹಲವು ಆಶ್ವಾಸನೆಗಳನ್ನು ನೀಡಿತ್ತು. ಆದರೆ ಈವರೆಗೂ ಅವುಗಳನ್ನು ಸಮರ್ಪಕವಾಗಿ ಈಡೇರಿಸದಿರುವುದರಿಂದ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಇದೀಗ ಈ ಮಾರ್ಗ ಹಿಡಿಯಬೇಕಾಗಿದೆ ಎಂದು ರೈತರು ಹೇಳಿದ್ದಾರೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಹಕ್ಕೊತ್ತಾಯಗಳನ್ನೂ ಸೇರಿಸಲು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಒಪ್ಪಿದ್ದೇ ಆದಲ್ಲಿ ಮೋದಿಯವರ ವಿರುದ್ಧ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿ ಪ್ರತಿಭಟಿಸುವ ತಮ್ಮ ಯೋಜನೆಯನ್ನು ಕೈಬಿಡುವುದಾಗಿಯೂ ಅಯ್ಯಕಣ್ಣು ತಿಳಿಸಿದ್ದಾರೆ.

ಮತ್ತೊಬ್ಬ ರೈತ ಪ್ರೇಮ್ ಕುಮಾರ್. ತಿರುಚಿ ಜಿಲ್ಲೆಯ ಮಣಚನಲ್ಲನೂರು ತಾಲ್ಲೂಕಿನ ತೀರಂಪಾಳಯಂ ಗ್ರಾಮದ ಕೃಷಿಕ. ತನ್ನ ಜಮೀನಿನಲ್ಲಿ ಭತ್ತ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಈ ಹೋರಾಟವು ತನ್ನ ಬದುಕಿನ ಹಕ್ಕುಗಳಿಗಾಗಿ ಎನ್ನುವ ಪ್ರೇಮ್ ಕುಮಾರ್, “ನಾನು ವಾರಣಾಸಿಯಿಂದ ನಾಮಪತ್ರ ಸಲ್ಲಿಸುವೆ. ಕೃಷಿ ಜಮೀನುಗಳಿಗೆ ನೀರು ಒದಗಿಸುವ ಮತ್ತು ಕೃಷಿ ಉತ್ಪನ್ನಗಳಿಗೆ ದುಪ್ಪಟ್ಟು ಬೆಲೆ ನೀಡುವ ಪೊಳ್ಳು ಭರವಸೆ ಕೊಟ್ಟು ನಮ್ಮನ್ನು ವಂಚಿಸಲಾಗಿದೆ ಎಂದು ವಾರಣಾಸಿಯಲ್ಲಿನ ನನ್ನ ರೈತಬಾಂಧವರಿಗೆ ತಿಳಿಸಬೇಕಿದೆ” ಎಂದು ಬ್ಯುಸಿನೆಸ್ ಲೈನ್ ಪತ್ರಿಕೆಗೆ ಹೇಳುತ್ತಾನೆ. ಪ್ರೇಮ್ ಕುಮಾರನ ಕುಟುಂಬದಲ್ಲಿ 6 ಮಂದಿ ಇದ್ದು ಬೇಸಾಯವೇ ಅವರ ಜೀವನಾಧಾರವಾಗಿದೆ. ತನ್ನ 5 ಎಕರೆ ಜಮೀನಿನಲ್ಲಿ ಭತ್ತ ಮತ್ತು ಕಬ್ಬು ಬೆಳೆಯುತ್ತಾನಾದರೂ 6 ಲಕ್ಷ ರೂ.ಗಳ ಸಾಲವನ್ನು ತೀರಿಸಲು ಹೆಣಗುತ್ತಿದ್ದಾನೆ. ಆ ಊರಿನ ಇತರ ಕೃಷಿಕರೂ ಸಹ ಭತ್ತ, ಕಬ್ಬು ಮತ್ತು ಬಾಳೆ ಬೆಳೆಗಳನ್ನು ಬೆಳೆದು ಇದೇ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. 140 ವರ್ಷಗಳ ನಂತರ ತಮಿಳುನಾಡು ಅತ್ಯಂತ ಭೀಕರ ಬರಗಾಲವನ್ನು ಎದುರಿಸಿದೆ ಎಂದು ಹೇಳಲಾಗಿದ್ದು ಅನ್ನದಾತನ ಬವಣೆ ಹೇಳತೀರದು.
ಮೋದಿ ಸರ್ಕಾರವು ಐದು ವರ್ಷ ಕಾಲ ರೈತರಿಗಾಗಿ ಯಾವುದೇ ಉಪಯುಕ್ತ ಯೋಜನೆ ಜಾರಿಗೊಳಿಸದಿದ್ದರೂ ಚುನಾವಣೆಗೆ 6 ತಿಂಗಳು ಮೊದಲು ದಿನಕ್ಕೆ 17 ರೂಪಾಯಿಯಂತೆ 6000 ರೂಪಾಯಿಯನ್ನು ಮೂರು ಕಂತಿನಲ್ಲಿ ಕೊಡುವ ಯೋಜನೆಯೊಂದನ್ನು ಘೋಷಿಸಿದ್ದರು. ಇದರ ವಿರುದ್ಧ ದೇಶವ್ಯಾಪಿ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಿಪಡಿಸಿ ಇದು ರೈತರನ್ನು ವಂಚಿಸುವ ಕಾರ್ಯಕ್ರಮ, ಇದನ್ನು ನಾವು ಬಹಿಷ್ಕರಿಸುತ್ತೇವೆ ಎಂದು ಇತ್ತೀಚೆಗೆ ದೆಹಲಿಯಲ್ಲಿ ಘೋಷಿಸಿದ್ದರು.
ರೈತರ ಪ್ರತಿರೋಧದ ಭಿನ್ನ ಮಾದರಿ
“ಅಧಿಕಾರಸ್ಥ ಪಕ್ಷದ ರಾಜಕೀಯ ಪ್ರಾಬಲ್ಯಕ್ಕೆ ಹಾಗೂ ಪ್ರಧಾನಮಂತ್ರಿಯ ವರ್ಚಸ್ಸಿಗೆ ಸವಾಲೆಸೆಯುವುದು ಅಷ್ಟು ಸುಲಭದ ವಿಚಾರವಲ್ಲ ಎನಿಸಿದರೂ, ಮೋದಿಯವರಿಗೆ ಮತ ಚಲಾಯಿಸುವ ಮುನ್ನ ತಮಿಳುನಾಡಿನ ರೈತರ ಸಂಕಷ್ಟದ ಸಂದೇಶವು ವಾರಣಾಸಿಯ ಮತದಾರರಿಗೆ ತಲುಪಬೇಕು” ಎಂದು ಆಶಿಸುತ್ತಾರೆ.
ಎಲ್ಲಾ ಬ್ಯಾಂಕುಗಳು ಸಾಲ ಮನ್ನಾ ಮಾಡಬೇಕು, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಒದಗಿಸಬೇಕು, ನೀರಿನ ಪೂರೈಕೆಗಾಗಿ ನದಿಗಳನ್ನು ಜೋಡಿಸಬೇಕು, 60 ವರ್ಷ ಮೇಲ್ಪಟ್ಟ ರೈತರಿಗೆ 5000 ರೂ.ಗಳ ಪಿಂಚಣಿ ನೀಡಬೇಕು, ಇತ್ಯಾದಿಗಳು ಇವರ ಹಕ್ಕೊತ್ತಾಯಗಳಿವೆ.
ಈ ರೈತರು ಬಹುಪಾಲು ರಾಷ್ಟ್ರೀಯ ದಕ್ಷಿಣ ಭಾರತ ನದಿ ಜೋಡಣೆಗಾಗಿ ರೈತರ ಸಂಘಟನೆಯ ಸದಸ್ಯರಾಗಿದ್ದಾರೆ. ಏಪ್ರಿಲ್ 2017ರಲ್ಲಿ ಬರ ಪರಿಹಾರ ನಿಧಿಯ ಕುರಿತು ಚರ್ಚಿಸಲು ಮೋದಿಯವರೊಡನೆ ಸಭೆಗೆ ಅನುಮತಿ ನಿರಾಕರಿಸಿದಾಗ ಪ್ರಧಾನಿ ಕಾರ್ಯಾಲಯದ ಎದುರು ಅರೆಬೆತ್ತಲಾಗಿ ಪ್ರತಿಭಟಿಸಿದ್ದರು. ಅದಕ್ಕೂ ಮುನ್ನ ತಮ್ಮ ತಲೆಗಳನ್ನು ಬೋಳಿಸಿಕೊಂಡು ಸತ್ತ ಹಾವುಗಳನ್ನು, ಆತ್ಮಹತ್ಯೆಗೆ ಶರಣಾದ ರೈತರ ತಲೆಬುರುಡೆಗಳನ್ನು ಪ್ರದರ್ಶಿಸಿ ನವದೆಹಲಿಯ ಜಂತರ ಮಂತರ್ ನಲ್ಲಿ ದಿನಗಟ್ಟಲೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. 2017ರ ಸೆಪ್ಟೆಂಬರ್ ನಲ್ಲಿ ತಮ್ಮ ಮಲವನ್ನೇ ತಿನ್ನುವ ಮೂಲಕ ರೈತರ ಸಂಕಷ್ಟಗಳತ್ತ ಸರ್ಕಾರದ ಗಮನವನ್ನು ಸೆಳೆಯುವ ಪ್ರಯತ್ನ ಮಾಡಿದ್ದರು.
ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂನಂತಹ ಪಕ್ಷಗಳು 2019ರ ಚುನಾವಣಾ ಪ್ರಣಾಳಿಕೆಗಳಲ್ಲಿ ಸಂಪೂರ್ಣ ಸಾಲ ಮನ್ನಾದ ಭರವಸೆ ನೀಡಿರುವುದಾಗಿ ಅಯ್ಯಕಣ್ಣು ಹೇಳುತ್ತಾರೆ. ಬಿಜೆಪಿ ಈಗ ಅಧಿಕಾರಸ್ಥ ಪಕ್ಷವಾಗಿರುವುದರಿಂದಲೇ ಅದರ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಪ್ರಸ್ತಾಪಿಸಬೇಕೆಂದು ತಾವು ಒತ್ತಾಯಿಸುತ್ತಿರುವುದಾಗಿಯೂ ತಿಳಿಸಿದ್ದಾರೆ. ಮೋದಿಯವರು ತಮಿಳುನಾಡಿನ ರೈತರ ಆಕ್ರೋಶವನ್ನು ನೇರವಾಗಿ ವಾರಣಾಸಿಯ ಚುನಾವಣಾಕಣದಲ್ಲಿ ಎದುರಿಸಲಿದ್ದಾರೆಯೆ? ಕಾದು ನೋಡಬೇಕು.