ಕಾಂಗ್ರೆಸ್ ಲೋಕಸಭಾ ಕಟ್ಟಾಳುಗಳ ಪಟ್ಟಿ ಬಿಡುಗಡೆಯೊಂದಿಗೆ ಬಹುತೇಕ ಕಣದ ಚಿತ್ರಣ ಒಂದು ಹಂತಕ್ಕೆ ಬಂದಂತಾಗಿದೆ. ತನ್ನ ಪಾಲಿನ 20 ಕ್ಷೇತ್ರಗಳ ಪೈಕಿ, ಧಾರವಾಡ ಮತ್ತು ಬೆಂಗಳೂರು ದಕ್ಷಿಣ ಹೊರತುಪಡಿಸಿ ಉಳಿದ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಶನಿವಾರ ರಾತ್ರಿ ಘೋಷಣೆ ಮಾಡಿದೆ.
ಅದೇ ಹೊತ್ತಿಗೆ, ರಾಜ್ಯ ರಾಜಕಾರಣದ ಎರಡು ಕುತೂಹಲಗಳಿಗೂ ತೆರೆಬಿದ್ದಿದೆ. ಒಂದು; ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಎಲ್ಲಿಂದ ಕಣಕ್ಕಿಳಿಯಲಿದ್ದಾರೆ ಎಂಬುದು; ಮತ್ತೊಂದು ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡುವುದೇ ಅಥವಾ ಇಲ್ಲವೇ ಎಂಬುದು.
ತಮ್ಮ ಸಾಂಪ್ರದಾಯಿಕ ಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟ ಬಳಿಕ, ದೇವೇಗೌಡರು ಬೆಂಗಳೂರು ಉತ್ತರ ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳ ಪೈಕಿ ಎಲ್ಲಿಂದ ಈ ಬಾರಿ ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕಳೆದ ಹತ್ತು ದಿನಗಳಿಂದ ಗಿರಕಿಹೊಡೆಯುತ್ತಲೇ ಇತ್ತು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕಡೆ ಕಾಂಗ್ರೆಸ್, ಎರಡು ಕಡೆ ಜೆಡಿಎಸ್ ಸೇರಿ ಒಟ್ಟು ಏಳು ಕಡೆ ದೋಸ್ತಿಪಕ್ಷಗಳೇ ಗೆದ್ದಿವೆ. ಒಂದು ಕಡೆ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಆ ಹಿನ್ನೆಲೆಯಲ್ಲಿ ಅಲ್ಲಿಂದಲೇ ಗೌಡರು ಕಣಕ್ಕಿಳಿಯಬಹುದು ಎನ್ನಲಾಗಿತ್ತು.
ಆದರೆ, ಮಿತ್ರಪಕ್ಷದ ಭರವಸೆಯ ಮೇಲೆ ಪೂರ್ಣ ನಂಬಿಕೆ ಇಡದ, ಗೌಡರು, ತಮ್ಮ ಪಕ್ಷದ ಶಾಸಕ ಬಲ ಹೆಚ್ಚಿರುವ ತುಮಕೂರನ್ನೇ ಇದೀಗ ಆಯ್ದುಕೊಂಡಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ, ಮೂರು ಕಡೆ ಜೆಡಿಎಸ್ ಶಾಸಕರಿದ್ದರೆ, ಒಂದು ಕಡೆ ಕಾಂಗ್ರೆಸ್ ಶಾಸಕರಿದ್ದಾರೆ. ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹೋಲಿಸಿದರೆ ವಿರೋಧ ಪಕ್ಷದ ಬಲ ತುಮಕೂರು ಕ್ಷೇತ್ರದಲ್ಲಿ ಹೆಚ್ಚಿದ್ದರೂ, ತಮ್ಮದೇ ಶಾಸಕರು ಮೂರು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಮಿತ್ರಪಕ್ಷದವನ್ನು ನಂಬಿ ದುರ್ಬಲ ಪ್ರತಿಸ್ಪರ್ಧಿಯೊಂದಿಗೆ ಸೆಣೆಸುವುದಕ್ಕಿಂತ, ತಮ್ಮವರನ್ನೇ ನೆಚ್ಚಿ ಪ್ರಬಲ ವೈರಿಯೊಂದಿಗೆ ಹೋರಾಡುವುದು ಕ್ಷೇಮ ಎಂಬ ತೀರ್ಮಾನಕ್ಕೆ ಗೌಡರು ಬಂದಿದ್ದಾರೆ.
ಆದರೆ, ಹಳೇ ಮೈಸೂರು ಭಾಗದಲ್ಲೇ ಇದ್ದರೂ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ತೀರಾ ಕಡಿಮೆ. ಲಿಂಗಾಯಿತ ಮತ್ತು ದಲಿತ ಸಮುದಾಯಗಳ ಪ್ರಾಬಲ್ಯದ ಕ್ಷೇತ್ರದಲ್ಲಿ, ಜೆಡಿಎಸ್ ಮತಬ್ಯಾಂಕ್ ಒಕ್ಕಲಿಗರ ಸಂಖ್ಯೆ ನಿರ್ಣಾಯಕ ಪ್ರಮಾಣದಲ್ಲಿ ಇಲ್ಲ. ಹಾಗಾಗಿ ಈವರೆಗೆ ಜೆಡಿಎಸ್ ಒಮ್ಮೆಯೂ ಕ್ಷೇತ್ರದಿಂದ ಗೆದ್ದ ಇತಿಹಾಸವಿಲ್ಲ. 1996ರಲ್ಲಿ ಅಂದಿನ ಅವಿಭಜಿತ ಜನತಾ ದಳ ಅಭ್ಯರ್ಥಿ ಸಿ ಎನ್ ಭಾಸ್ಕರಪ್ಪ ಗೆದ್ದಿದ್ದರು, ಇನ್ನುಳಿದಂತೆ ಹತ್ತು ಬಾರಿ ಕಾಂಗ್ರೆಸ್ ಹಾಗೂ ನಾಲ್ಕು ಬಾರಿ ಬಿಜೆಪಿ ಗೆಲುವು ಪಡೆದ ಪರಂಪರೆ ಕ್ಷೇತ್ರದ್ದು.
ಈ ನಡುವೆ, ಕಾಂಗ್ರೆಸ್ ಹಾಲಿ ಸಂಸದ ಮುದ್ದುಹನುಮೇಗೌಡರು ಕೂಡ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ತಾವೊಬ್ಬ ಹಾಲಿ ಸಂಸದರಾಗಿದ್ದರೂ ತಮಗೆ ಯಾವ ಕಾರಣವಿಲ್ಲದೆ ಟಿಕೆಟ್ ತಪ್ಪಿಸಿ, ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. ಇದು ತಮಗೆ ಬಗೆದ ಅನ್ಯಾಯ. ಹಾಗಾಗಿ ತಾವು ಪಕ್ಷದ ಅಭ್ಯರ್ಥಿಯಾಗಿಯೇ ಸೋಮವಾರ ನಾಮಪತ್ರ ಸಲ್ಲಿಸಲಿದ್ದು, ಬಿ ಫಾರಂ ಸಿಗುವ ವಿಶ್ವಾಸ ಇದೆ ಎಂದು ಅವರು ತಮ್ಮ ಆಪ್ತರ ಸಭೆಯಲ್ಲಿ ಹೇಳಿರುವುದಾಗಿ ವರದಿಯಾಗಿದೆ. ಅಲ್ಲದೆ, ತಮ್ಮ ತವರು ಜಿಲ್ಲೆಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವ ಬಗ್ಗೆ ಕಾಂಗ್ರೆಸ್ ನಾಯಕ, ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರಿಗೂ ತೀವ್ರ ಅಸಮಾಧಾನವಿದ್ದು, ಅವರು ಬಹುತೇಕ ಕಳೆದ ಒಂದು ವಾರದಿಂದ ಪಕ್ಷದ ಬೆಂಗಳೂರು ಸಭೆ-ಸಮಾರಂಭಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರ ಸ್ವಕ್ಷೇತ್ರ ಕೊರಟಗೆರೆಯಲ್ಲಿಯೂ ದೇವೇಗೌಡರು ಮೈತ್ರಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಬಾರಿ ಬಿಜೆಪಿಯಿಂದ ಮಾಜಿ ಸಂಸದ ಜಿ ಎಸ್ ಬಸವರಾಜು ಅವರೇ ಅಭ್ಯರ್ಥಿ ಎಂದು ಅಧಿಕೃತ ಘೋಷಣೆಯಾಗಿದೆ. ಅವರ ಉಮೇದುವಾರಿಕೆಗೆ ಕ್ಷೇತ್ರದ ಬಿಜೆಪಿಯಲ್ಲೇ ಪ್ರಬಲ ವಿರೋಧವಿದ್ದು, ಕೆಲವು ಶಾಸಕರು ಕೂಡ ಅವರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಐದು ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಗೆಲುವು ದಾಖಲಿಸಿದ್ದ ಗೌಡರು, 2004ರಲ್ಲಿ ಹೊಸ ಕ್ಷೇತ್ರ ಕನಕಪುರದಿಂದ ಕಣಕ್ಕಿಳಿದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರತಿಸ್ಫರ್ಧಿಯಾಗಿದ್ದ ತೇಜಸ್ವಿನಿ ರಮೇಶ್ ವಿರುದ್ಧ ಸೋಲು ಕಂಡಿದ್ದರು. ಆದರೆ, ಆ ಬಾರಿ ಅವರು ಹಾಸನದಿಂದಲೂ ಸ್ಪರ್ಧಿಸಿದ್ದರಿಂದ ಅಲ್ಲಿ ಜಯಗಳಿಸುವ ಮೂಲಕ ಸಂಸದ ಸ್ಥಾನವನ್ನು ಉಳಿಸಿಕೊಂಡಿದ್ದರು. ಅದಕ್ಕೂ ಮುನ್ನ 1999ರಲ್ಲಿ ಕಾಂಗ್ರೆಸ್ ನ ಪುಟ್ಟಸ್ವಾಮಿ ಗೌಡ ವಿರುದ್ಧ ಹಾಸನ ಕ್ಷೇತ್ರದಲ್ಲೇ ಸೋಲು ಕಂಡಿದ್ದರು. ಒಟ್ಟಾರೆ 1991ರಿಂದ ಈವರೆಗೆ ಲೋಕಸಭಾ ಚುನಾವಣೆಗಳಲ್ಲಿ ಎರಡು ಬಾರಿ ಸೋಲು ಮತ್ತು ಐದು ಬಾರಿ ಗೆಲುವು ಪಡೆದ ಅನುಭವ ಗೌಡರದ್ದು.
ಇದೀಗ, ಕನಕಪುರದ ಪ್ರಯೋಗದ ಬಳಿಕ ಮತ್ತೊಮ್ಮೆ ತಮ್ಮ ತವರು ಕ್ಷೇತ್ರವನ್ನು ತೊರೆದು ಹೊಸ ಕ್ಷೇತ್ರವೊಂದರಲ್ಲಿ ಅದೃಷ್ಟಪರೀಕ್ಷೆಗೆ ಇಳಿಯುತ್ತಿದ್ದಾರೆ. ಗೌಡರು ಸೋಮವಾರ ನಾಮಪತ್ರ ಸಲ್ಲಿಸಲಿದ್ದು, ಅಂದೇ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಮುದ್ದುಹನುಮೇಗೌಡರೂ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಒಟ್ಟಾರೆ, ತುಮಕೂರು ಕದನಕಣ ಈ ಬಾರಿ ಎಲ್ಲರ ಗಮನ ಸೆಳೆದಿದೆ.